ಗೃಹಲಕ್ಷ್ಮಿ: ರಾಜ್ಯದ ಕೋಟ್ಯಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿರುವ ‘ಗೃಹಲಕ್ಷ್ಮಿ’ ಯೋಜನೆಗೆ ಮತ್ತೊಂದು ಬಲ ಬಂದಿದೆ. ಯೋಜನೆಯ ಫಲಾನುಭವಿಗಳಿಗೆ ಕೇವಲ ಮಾಸಿಕ ರೂ.2 ಸಾವಿರ ನೀಡುವುದಷ್ಟೇ ಅಲ್ಲ, ಅವರ ಆರ್ಥಿಕ ಸ್ವಾವಲಂಬನೆಗೆ ನೆರವಾಗಲು ಕಡಿಮೆ ಬಡ್ಡಿ ದರದಲ್ಲಿ ರೂ.3 ಲಕ್ಷದವರೆಗೆ ಸಾಲ ನೀಡುವ ಮಹತ್ವದ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿದ್ದಾರೆ.
ಈ ನೂತನ ಯೋಜನೆಯು “ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ” (ಸೊಸೈಟಿ) ಮೂಲಕ ಕಾರ್ಯರೂಪಕ್ಕೆ ಬರಲಿದ್ದು, ನವೆಂಬರ್ 19 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.
ಕಡಿಮೆ ಬಡ್ಡಿಯಲ್ಲಿ ರೂ.3 ಲಕ್ಷ ಸಾಲ: “ವಿಶ್ವದಲ್ಲೇ ಅತಿದೊಡ್ಡ ಯೋಜನೆಯಾದ ಗೃಹಲಕ್ಷ್ಮಿಯನ್ನು ನಾವು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಈಗ ಅದರ ಫಲಾನುಭವಿಗಳಿಗೆ ಮತ್ತಷ್ಟು ಲಾಭ ತಂದುಕೊಡಲು ಈ ಸಹಕಾರ ಸಂಘವನ್ನು ಆರಂಭಿಸುತ್ತಿದ್ದೇವೆ” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಈ ಸೊಸೈಟಿಯ ಮೂಲಕ ಗೃಹಲಕ್ಷ್ಮಿ ಫಲಾನುಭವಿಗಳು ತಮ್ಮ ಸಣ್ಣಪುಟ್ಟ ವ್ಯಾಪಾರ, ಸ್ವ-ಉದ್ಯೋಗ ಅಥವಾ ತುರ್ತು ಅವಶ್ಯಕತೆಗಳಿಗಾಗಿ ರೂ.3 ಲಕ್ಷದವರೆಗೆ ಸಾಲ ಪಡೆಯಬಹುದು. ಇದು ಮಾರುಕಟ್ಟೆಗಿಂತ ಕಡಿಮೆ ಬಡ್ಡಿ ದರದಲ್ಲಿ ಲಭ್ಯವಿರಲಿದೆ.
ಈಗಾಗಲೇ 2 ಸಾವಿರ ಫಲಾನುಭವಿಗಳಿಂದ ಹಣ ಸಂಗ್ರಹಿಸಲಾಗಿದ್ದು, ಫೋನ್ ಪೇ ಮೂಲಕ ಪಾರದರ್ಶಕವಾಗಿ ಹಣಕಾಸು ವ್ಯವಹಾರ ನಡೆಸಲಾಗುವುದು. ಮುಂದಿನ ಮೂರೇ ತಿಂಗಳಲ್ಲಿ ಈ ಸೊಸೈಟಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಅವರು ವಿವರಿಸಿದರು.
ನವೆಂಬರ್ 19ಕ್ಕೆ ತ್ರಿವಿಧ ಕಾರ್ಯಕ್ರಮ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನವಾದ ನವೆಂಬರ್ 19 ರಂದು ನಡೆಯಲಿರುವ ಈ ಕಾರ್ಯಕ್ರಮ ಕೇವಲ ಸಾಲ ಯೋಜನೆಗೆ ಸೀಮಿತವಾಗಿಲ್ಲ. ಅಂದು ಮೂರು ಪ್ರಮುಖ ಯೋಜನೆಗಳಿಗೆ ಚಾಲನೆ ಸಿಗಲಿದೆ.
ಗೃಹಲಕ್ಷ್ಮಿ ಬ್ಯಾಂಕ್ (ಸೊಸೈಟಿ) ಉದ್ಘಾಟನೆ: ಸಾಲ ಸೌಲಭ್ಯಕ್ಕೆ ಚಾಲನೆ.
ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 40 ಸಾವಿರಕ್ಕೂ ಅಧಿಕ ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ.
ಮಹಿಳೆಯರ ರಕ್ಷಣೆಗಾಗಿ ‘ಅಕ್ಕಾ ಪಡೆ’: ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ‘ಅಕ್ಕಾ ಪಡೆ’ಯನ್ನು ರಾಜ್ಯಾದ್ಯಂತ ಆರಂಭಿಸಲಾಗುತ್ತಿದೆ. ಗೃಹ ರಕ್ಷಕ ದಳ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳನ್ನು ಒಳಗೊಂಡ ಈ ಪಡೆಯು, ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಶಾಲಾ-ಕಾಲೇಜು, ಪಾರ್ಕ್, ಶಾಪಿಂಗ್ ಮಾಲ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಿ ಮಹಿಳೆಯರಿಗೆ ಧೈರ್ಯ ತುಂಬಲಿದೆ. ಇತ್ತೀಚೆಗೆ ಹೆಚ್ಚಾಗುತ್ತಿರುವ ‘ಡೀಪ್ ಫೇಕ್’ ನಂತಹ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ‘ಅಕ್ಕಾ ಪಡೆ’ಯ ಪ್ರಮುಖ ಜವಾಬ್ದಾರಿಯಾಗಿದೆ.

























