ಬೆಂಗಳೂರು: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಆಸ್ತಿಗಳ ನೋಂದಣಿ ಕುರಿತು ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆದಿದೆ. ರಾಯಭಾಗ ಶಾಸಕ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಈ ಕುರಿತು ಪ್ರಶ್ನೆ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಉತ್ತರ ನೀಡಿದ್ದಾರೆ.
ಶಾಸಕರು ರಾಯಭಾಗ ವಿಧಾನಸಭಾ ಕ್ಷೇತ್ರದ ರಾಯಭಾಗ ಹಾಗೂ ಚಿಕ್ಕೋಡಿ ತಾಲ್ಲೂಕು ಸೇರಿದಂತೆ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ 11ಬಿ ಆಸ್ತಿಗಳು ನೋಂದಣಿ ಆಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?, ಹಾಗಿದ್ದಲ್ಲಿ ಸರ್ಕಾರ ಕೈಗೊಂಡ ಕ್ರಮಗಳೇನು? ಎಂದು ಪ್ರಶ್ನೆ ಮಾಡಿದ್ದಾರೆ.
ಸಚಿವರ ಉತ್ತರ: ಗ್ರಾಮೀಣ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಕಮಬದ್ಧವಲ್ಲದ ನಿವೇಶನಗಳು ಮತ್ತು ಕಟ್ಟಡಗಳನ್ನು (ಸರ್ಕಾರಿ/ ಸ್ಥಳೀಯ ಸಂಸ್ಥೆ /ಶಾಸನಬದ್ಧ ಸಂಸ್ಥೆ/ ಅರಣ್ಯ ಭೂಮಿಯನ್ನು ಹೊರತುಪಡಿಸಿ) ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಪ್ರತ್ಯೇಕ ವಹಿಯಲ್ಲಿ ದಾಖಲಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ಕ್ಕೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 ರನ್ವಯ ಪ್ರಕರಣ 199 ಬಿ ಮತ್ತು 199 ಸಿ ಹೊಸ ಪ್ರಕರಣಗಳನ್ನು ಸೇರ್ಪಡೆ ಮಾಡಿ ದಿನಾಂಕ 07-04-2025ರಂದು ಅಧಿಸೂಚನೆ ಹೊರಡಿಸಲಾಗಿದೆ.
ಈ ಅಧಿನಿಯಮ, ಪ್ರಾರಂಭದ ದಿನಾಂಕದ ತರುವಾಯ ಪ್ರಕರಣ ಸಿ ರಂತೆ ರಿಜಿಸ್ಟರ್‌ನಲ್ಲಿ ಯಾವುದೇ ಹೊಸ ಸ್ವತ್ತನ್ನು ನಮೂದಿಸತಕ್ಕದ್ದಲ್ಲ ಎಂದು ತಿಳಿಸಲಾಗಿರುವುದರಿಂದ ಮುಂದಿನ ಆದೇಶದವರೆಗೆ ಇ-ಸ್ವತ್ತು ತಂತ್ರಾಂಶದಡಿ ನಮೂನೆ-11ಬಿ ರಡಿ ಆಸ್ತಿಗಳ ಸೃಜನೆಯನ್ನು ಮತ್ತು ಮ್ಯಾನುಯಲ್ ಸಮೀಕ್ಷೆ ನಡೆದ ನಂತರ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಬಿಟ್ಟು ಹೋದ ಮತ್ತು ಹೊಸದಾಗಿ ಗುರುತಿಸಲಾದ ಆಸ್ತಿಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಸೇರ್ಪಡೆ ಮಾಡುತ್ತಿರುವ ಆಯ್ಕೆಯನ್ನು ಸ್ಥಗಿತಗೊಳಿಸಲಾಗಿದೆ.
ಅಧಿನಿಯಮಕ್ಕೆ ತಿದ್ದುಪಡಿ ತರಲಾಗಿರುವುದರಿಂದ ಸರ್ಕಾರದ ಅಧಿಸೂಚನೆ ಸಂಖ್ಯೆ RDPR 422 GPA 2025, ದಿನಾಂಕ:04-07-2025ರಂದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2025ರ ಕರಡನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿ ಬಾಧಿತರಾಗುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿದ್ದು, ಈ ಸಂಬಂಧ ಸ್ವೀಕೃತವಾಗಿರುವ ಆಕ್ಷೇಪಣೆಗಳು ಮತ್ತು ಸಲಹೆಗಳು ಸರ್ಕಾರದ ಪರಿಶೀಲನೆಯಲ್ಲಿದ್ದು, ನಿಯಮಗಳನ್ನು ಅಂತಿಮಗೊಳಿಸಿದ ನಂತರ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-11ಬಿ ಖಾತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರ ನೀಡಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ ಗುರುತಿಸಲ್ಪಟ್ಟ ಗ್ರಾಮಠಾಣಾ ವ್ಯಾಪ್ತಿಯು ಗ್ರಾಮಗಳ ಬೆಳವಣಿಗೆಯಿಂದ ವಿಸ್ತಾರವಾಗಿದ್ದು, ಗ್ರಾಮಠಾಣಾದಿಂದ ಹೊರಗುಳಿದ ಪ್ರದೇಶವನ್ನು ಗುರುತಿಸಲು ಮಾಡಲಾಗಿರುವ ಆದೇಶಗಳಂತೆ ಹೊಸ ಗ್ರಾಮಠಾಣಾವನ್ನು ನಿಗದಿಪಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಎಂದು ಶಾಸಕರು ಪ್ರಶ್ನೆ ಮಾಡಿದ್ದರು.
ಸಚಿವರು ತಮ್ಮ ಉತ್ತರದಲ್ಲಿ ಗ್ರಾಮ ಠಾಣಾದಲ್ಲಿ ತೆರಿಗೆ ನಿರ್ಧರಣೆ ಪಟ್ಟಿಗೆ ಒಳಪಟ್ಟಿರುವ ಮತ್ತು ತೆರಿಗೆ ನಿರ್ಧರಣೆ ಪಟ್ಟಿಯನ್ನು ಕೋರಿ ಬರುವ ಅರ್ಜಿಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಅಳತೆ ಮಾಡಿ ನಕ್ಷೆ ತಯಾರಿಸಲು ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿ ಸುತ್ತೋಲೆ ಸಂಖ್ಯೆ:ಆರ್‌ಡಿ 430 ಎಲ್‌ಜಿಪಿ 2013, ದಿನಾಂಕ:25-08-2014 ರಲ್ಲಿ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಜಂಟಿ ಸುತ್ತೋಲೆ ಸಂಖ್ಯೆ: ಗ್ರಾಅಪ 441 ಗ್ರಾಪಂಅ 2016, (ಭಾಗ-3), ದಿನಾಂಕ:28-10-2016ರಲ್ಲಿ ಗ್ರಾಮಗಳ ಗ್ರಾಮ ಠಾಣಾ ಗಡಿಯನ್ನು ಪ್ರಸ್ತುತ ವಿಸ್ತರಣೆಯಾಗಿರುವ ಪ್ರದೇಶವನ್ನು ಒಳಗೊಂಡಂತೆ ಹೊಸದಾಗಿ ಸರ್ವೆ ಮಾಡಿಸಿ, ಗ್ರಾಮ ಠಾಣಾವನ್ನು ಪುನರ್ ನಿಗದಿಪಡಿಸುವ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಗ್ರಾಮ ಠಾಣಾ ಗಡಿಯನ್ನು ವಿಸ್ತರಿಸುವ ಬಗ್ಗೆ ದಿನಾಂಕ: 06-11-2024 ರಂದು ಮಾನ್ಯ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಪೌರಾಡಳಿತ ಸಚಿವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸರ್ವೆ ಇಲಾಖೆಯಲ್ಲಿ service based mode ನಲ್ಲಿ ಕಾರ್ಯನಿರ್ವಹಿಸುತ್ತಿರುವ ಲೈಸೆನ್ಸ್‌ಡ್ ಸರ್ವೆಯರ್‌ಗಳ ಸೇವೆಯನ್ನು ಪಡೆದು ಗ್ರಾಮದ ಕಟ್ಟಡ ಮತ್ತು ನಿವೇಶನಗಳ ಮೋಜಣಿ ನಡೆಸಿ ದಾಖಲೆಗಳನ್ನು ಹಾಗೂ ನಕ್ಷೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅನುಸರಿಸುತ್ತಿರುವ ವಿಧಿ ವಿಧಾನದ ಮಾದರಿಯಲ್ಲಿ ಸಿದ್ಧಪಡಿಸುವಂತೆ ಸಲಹೆ ನೀಡಲಾಗಿದೆ ಎಂದು ಸಚಿವರು ವಿವರ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಪಂಚಾಯತ್ ಇಲಾಖೆಯಿಂದ ನಿರ್ವಹಿಸುತ್ತಿರುವ ಇ-ಸ್ವತ್ತು ತಂತ್ರಾಂಶಕ್ಕೆ ಕಾನೂನು ಮಾನ್ಯತೆ ಇದೆಯೇ?, (ನಿಯಮಗಳ ದಾಖಲಾತಿಗಳೊಂದಿಗೆ ವಿವರ ನೀಡುವುದು) ಎಂದು ಪ್ರಶ್ನೆ ಮಾಡಲಾಗಿತ್ತು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಇ-ಸ್ವತ್ತು ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು. ಕಾನೂನು 2006ರ ನಿಯಮ 28 ಮತ್ತು 30ರಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕ್ರಮಬದ್ಧ ಆಸ್ತಿಗಳಿಗೆ ನಿಗಧಿತ ನಮೂನೆ 9 ಹಾಗೂ 11 ಎ ಗಳನ್ನು ಹಾಗೂ ಕ್ರಮಬದ್ಧವಲ್ಲದ ಆಸ್ತಿಗಳಿಗೆ ನಮೂನೆ-11ಬಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಡಿಜಿಟಲ್ ಸಹಿಯ ಮೂಲಕ ವಿತರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.