ಮೆಕ್ಕಾ, ಮದೀನಾ ಮಾರ್ಗದ ಮುಫ್ರಿಹತ್ ಪ್ರದೇಶದ ಬಳಿ ಉಮ್ರಾ ಯಾತ್ರಿಕರನ್ನು ಸಾಗಿಸುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿಯಾಗಿ ಸಂಭವಿಸಿದ ಭೀಕರ ದುರಂತದಲ್ಲಿ 42 ಮಂದಿ ಭಾರತೀಯ ಯಾತ್ರಿಕರು ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಭಾರತೀಯ ಕಾಲಮಾನಕ್ಕೆ ಅನುಸಾರವಾಗಿ ಇಂದು ಬೆಳಗಿನ 1.30ರ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಮೃತ ಭಾರತೀಯರ ಪೈಕಿ ಬಹುತೇಕರು ಹೈದರಾಬಾದ್ ಮೂಲದವರು ಎಂದು ತಿಳಿದು ಬಂದಿದೆ. ದುರಂತ ಬಲಿಯಾದವರಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಇದ್ದಾರೆ ಎನ್ನಲಾಗಿದೆ.
ಬಸ್‌ನಲ್ಲಿ ಒಟ್ಟು: 20 ಮಹಿಳೆಯರು, 11 ಮಕ್ಕಳು ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ನಿದ್ರೆಯಲ್ಲಿದ್ದ ವೇಳೆ ದುರಂತ: ಮೆಕ್ಕಾದಲ್ಲಿ ಉಮ್ರಾ ವಿಧಿಗಳು ಮುಗಿಸಿಕೊಂಡು ಮದೀನಾಕ್ಕೆ ಹೊರಟಿದ್ದ ಯಾತ್ರಿಕರಲ್ಲಿ ಹಲವರು ಡಿಕ್ಕಿ ಸಂಭವಿಸಿದ ಸಂದರ್ಭ ನಿದ್ರೆಯಲ್ಲಿದ್ದರು ಎಂದು ವರದಿ ಬಂದಿದೆ. ಭೀಕರ ಡಿಕ್ಕಿಯ ಬಳಿಕ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವರು ಹೊರಬರಲಾಗದೇ ದುರಂತಕ್ಕೆ ಒಳಗಾಗಿದ್ದಾರೆ ಎಂಬ ಶಂಕೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ: ಸ್ಥಳಕ್ಕೆ ತಕ್ಷಣ ರಕ್ಷಣಾ ಸಿಬ್ಬಂದಿ ಸೇರಿ ಕಾರ್ಯಾಚರಣೆ ಆರಂಭಿಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಮೃತದೇಹಗಳನ್ನು ಗುರುತಿಸಲು ಕಾರ್ಯಾಚರಣೆ ನಡೆದಿದೆ. ಆದರೆ, ಸೌದಿ ಸರ್ಕಾರದಿಂದ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ. ತನಿಖೆ ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ.

























