ಖಾಲಿ ಕುರ್ಚಿಗಳ ಮುಂದೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಭಾಷಣ!

0
51

ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭಾಷಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶುಕ್ರವಾರ ನಡೆದ ಅಧಿವೇಶನದಲ್ಲಿ ನೆತನ್ಯಾಹು, ಗಾಜಾ ವಿರುದ್ಧದ ಯುದ್ಧವನ್ನು ನಿಲ್ಲಿಸುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಸ್ರೇಲಿ ಒತ್ತೆಯಾಳುಗಳ ಸುರಕ್ಷತೆಯು ತಮ್ಮ ಆದ್ಯತೆ ಎಂದು ಘೋಷಿಸಿದರು. ಅವರ ಈ ಉದ್ಧಟತನದ ಭಾಷಣದಿಂದ ಬೇಸತ್ತ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು ಸಭೆಯಿಂದ ಹೊರನಡೆದರು. ಇದರಿಂದ ನೆತನ್ಯಾಹುಗೆ ಮುಖಭಂಗವಾಯಿತು.

ಮುಖ್ಯವಾಗಿ ಇಸ್ಲಾಮಿಕ್ ಮತ್ತು ಆಫ್ರಿಕನ್ ರಾಷ್ಟ್ರಗಳ ಪ್ರತಿನಿಧಿಗಳು ಸಭೆಯನ್ನು ತ್ಯಜಿಸುವ ಮೂಲಕ, ಗಾಜಾ ಪಟ್ಟಿಯ ಮೇಲಿನ ಅಮಾನವೀಯ ದಾಳಿಗಳನ್ನು ನಿಲ್ಲಿಸುವಂತೆ ಪರೋಕ್ಷ ಸಂದೇಶ ರವಾನಿಸಿದರು. ಈ ಹಿಂದೆ ಇಸ್ರೇಲ್ ಪರ ನಿಂತಿದ್ದ ಜರ್ಮನಿ, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಈಗ ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡುವುದನ್ನು ಬೆಂಬಲಿಸುತ್ತಿರುವುದು ಗಮನಾರ್ಹ.

ನೆತನ್ಯಾಹು ಭಾಷಣ ಮಾಡುವಾಗ, ಇಸ್ರೇಲ್ ಮತ್ತು ಗಾಜಾ ಗಡಿ ಪ್ರದೇಶದಲ್ಲಿ ವಿಶೇಷ ತಂತ್ರಜ್ಞಾನವನ್ನು ಬಳಸಲಾಗಿತ್ತು. ದೊಡ್ಡ ಸ್ಪೀಕರ್‌ಗಳ ಮೂಲಕ ಒತ್ತೆಯಾಳುಗಳಿಗೆ ಮತ್ತು ಹಮಾಸ್ ಉಗ್ರರಿಗೆ ಸಂದೇಶ ರವಾನಿಸಲಾಯಿತು. ಅಲ್ಲದೆ, ಇಸ್ರೇಲಿ ಸೇನೆಯು ಗಾಜಾದ ನಿವಾಸಿಗಳು ಮತ್ತು ಹಮಾಸ್ ಕಾರ್ಯಕರ್ತರ ಫೋನ್‌ಗಳನ್ನು ಹ್ಯಾಕ್ ಮಾಡಿ, ನೆತನ್ಯಾಹು ಅವರ ಭಾಷಣವನ್ನು ನೇರಪ್ರಸಾರ ಮಾಡಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಭಾಷಣದಲ್ಲಿ ನೆತನ್ಯಾಹು, ಹಮಾಸ್ ವಿರುದ್ಧದ ಕಾರ್ಯಾಚರಣೆಯನ್ನು ಸಂಪೂರ್ಣಗೊಳಿಸುವುದು ಅಗತ್ಯ ಎಂದು ಹೇಳಿದರು. ಇರಾನ್‌ನ ಬೆಂಬಲಿತ ಪಡೆಗಳಾದ ಹೌತಿಗಳು, ಹಮಾಸ್ ಉಗ್ರರು, ಹಿಜ್ಬೊಲ್ಲಾಗಳನ್ನು ಹತ್ತಿಕ್ಕಿರುವುದಾಗಿ ಮತ್ತು ಅವರ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿರುವುದಾಗಿ ತಿಳಿಸಿದರು. ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆಗೆ ಇರಾನ್ ಕಾರಣ ಎಂದು ಆರೋಪಿಸಿದರು.

ಇದೇ ವೇಳೆ, ವಿಶ್ವಸಂಸ್ಥೆಯಿಂದ ಕೆಲವು ಬ್ಲಾಕ್‌ಗಳ ದೂರದಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನಾಕಾರರು ಜಮಾಯಿಸಿದ್ದರು. ಪ್ಯಾಲೆಸ್ಟೀನ್ ಯೂತ್ ಮೂವ್‌ಮೆಂಟ್‌ನ ಸಂಘಟಕ ನಿಡಾ ಲಾಫಿ, “ಇಸ್ರೇಲ್ ಜಗತ್ತಿನ ಪ್ರತಿಯೊಬ್ಬ ಮಾನವನ ಆತ್ಮಸಾಕ್ಷಿಯ ವಿರುದ್ಧವಾಗಿ ಗಾಜಾ ವಿರುದ್ಧ ಯುದ್ಧ ಮಾಡಲು ಆರಿಸಿಕೊಂಡಿದೆ” ಎಂದು ಹೇಳಿದ್ದಾರೆ.

ಇಸ್ರೇಲಿ ಒತ್ತೆಯಾಳುಗಳಿಗೆ ಸಂದೇಶ ನೀಡಿದ ನೆತನ್ಯಾಹು, “ನಾವು ನಿಮ್ಮನ್ನು ಒಂದು ಕ್ಷಣವೂ ಮರೆತಿಲ್ಲ. ಇಸ್ರೇಲ್ ಜನರು ನಿಮ್ಮೊಂದಿಗಿದ್ದಾರೆ” ಎಂದು ಭರವಸೆ ನೀಡಿದರು. ಹಮಾಸ್‌ಗೆ ಎಚ್ಚರಿಕೆ ನೀಡಿದ ಅವರು, ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ತಮ್ಮ ಜನರನ್ನು ಬಿಡುಗಡೆ ಮಾಡಿದರೆ ಬದುಕಬಹುದು, ಇಲ್ಲದಿದ್ದರೆ ಇಸ್ರೇಲ್ ಅವರನ್ನು ಬೇಟೆಯಾಡದೆ ಬಿಡಲ್ಲ ಎಂದರು. ಆದರೆ, ಅಮೆರಿಕ ಸಹ ಗಾಜಾ ಪಟ್ಟಿಯನ್ನು ವಶಪಡಿಸಿಕೊಳ್ಳುವ ಇಸ್ರೇಲ್ ಪ್ರಯತ್ನವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿರುವುದು ನೆತನ್ಯಾಹು ಆಡಳಿತಕ್ಕೆ ಹಿನ್ನಡೆಯಾಗಿದೆ.

Previous articleತುಮಕೂರು: ಅಪಘಾತಕ್ಕೆ ಆಹ್ವಾನ ನೀಡುವ ತಿಪಟೂರು-ಹುಳಿಯಾರು ರಸ್ತೆ
Next articleಜಾತಿಗಣತಿ ಮಾಹಿತಿ ಹಂಚಿಕೆ, ಜನರಿಗೆ ಮಹತ್ವದ ಸೂಚನೆ ಕೊಟ್ಟ ಆಯೋಗ

LEAVE A REPLY

Please enter your comment!
Please enter your name here