ಅಮೆರಿಕದಲ್ಲಿ ಭಾರತೀಯ ಟೆಕ್ಕಿಯ ಸಾವು: ಕುಟುಂಬದಿಂದ ನ್ಯಾಯಕ್ಕಾಗಿ ಆಗ್ರಹ

0
21

ಕ್ಯಾಲಿಫೋರ್ನಿಯಾದಲ್ಲಿ ನಡೆದ ದುರದೃಷ್ಟಕರ ಘಟನೆಯೊಂದರಲ್ಲಿ, ತೆಲಂಗಾಣ ಮೂಲದ ಮೊಹಮ್ಮದ್ ನಿಜಾಮುದ್ದೀನ್ (30) ಎಂಬ ಭಾರತೀಯ ಟೆಕ್ಕಿ ಅಮೆರಿಕ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ತಮ್ಮ ರೂಮ್‌ಮೇಟ್‌ಗೆ ಚಾಕುವಿನಿಂದ ಇರಿದ ಆರೋಪದ ಮೇಲೆ ಪೊಲೀಸರು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ.

ಸೆಪ್ಟೆಂಬರ್ 3 ರಂದು ಸಂತಾ ಕ್ಲಾರಾ ಜಿಲ್ಲೆಯ ವಸತಿ ಗೃಹದಲ್ಲಿ ನಿಜಾಮುದ್ದೀನ್ ಮತ್ತು ಅವರ ರೂಮ್‌ಮೇಟ್ ನಡುವೆ ಜಗಳ ಪ್ರಾರಂಭವಾಯಿತು. ಇದು ಉಲ್ಬಣಗೊಂಡು ನಿಜಾಮುದ್ದೀನ್ ಚಾಕುವಿನಿಂದ ರೂಮ್‌ಮೇಟ್‌ಗೆ ಇರಿದಿದ್ದಾರೆ. ಗಾಯಗೊಂಡ ರೂಮ್‌ಮೇಟ್ ತಕ್ಷಣ  ಪೊಲೀಸಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ನಿಜಾಮುದ್ದೀನ್‌ಗೆ ಗುಂಡು ಹಾರಿಸಿದ್ದಾರೆ.

ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿದ್ದು, ನಿಜಾಮುದ್ದೀನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಗಾಯಗೊಂಡ ರೂಮ್‌ಮೇಟ್‌ಗೆ ಚಿಕಿತ್ಸೆ ಮುಂದುವರಿದಿದೆ. ಈ ಘಟನೆ ಕುರಿತು ಸಂತಾ ಕ್ಲಾರಾ ಜಿಲ್ಲಾ ಅಟಾರ್ನಿ ಕಚೇರಿ ಮತ್ತು ಪೊಲೀಸರು ಜಂಟಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವರದಿ ಇನ್ನೂ ಪ್ರಕಟವಾಗಿಲ್ಲ.

ತೆಲಂಗಾಣದಲ್ಲಿರುವ ನಿಜಾಮುದ್ದೀನ್ ಅವರ ಪೋಷಕರು ಈ ಸಾವಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ನಿಜಾಮುದ್ದೀನ್ ಮೇಲೆ ಹಲ್ಲೆ ನಡೆದಿತ್ತು ಮತ್ತು ಅವನೇ ಪೊಲೀಸರಿಗೆ ಕರೆ ಮಾಡಿದ್ದ ಅಮೆರಿಕದಲ್ಲಿ ವ್ಯಾಪಕವಾಗಿರುವ ವರ್ಣಭೇದ ನೀತಿಯಿಂದಾಗಿ ತಮ್ಮ ಮಗನನ್ನು ಪೊಲೀಸರು ಕೊಂದಿದ್ದಾರೆ ಎಂದು  ಆರೋಪಿಸಿದ್ದಾರೆ.

ನಿಜಾಮುದ್ದೀನ್ ಫ್ಲೋರಿಡಾದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು ಮತ್ತು ಸಂತಾ ಕ್ಲಾರಾದ ಟೆಕ್ಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಧಾರ್ಮಿಕ ಮತ್ತು ತಮ್ಮ ಪಾಡಿಗೆ ತಾವಿರುವ ವ್ಯಕ್ತಿಯಾಗಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ನಿಜಾಮುದ್ದೀನ್ ವರ್ಣಭೇದ ದೌರ್ಜನ್ಯವನ್ನು ಅನುಭವಿಸುತ್ತಿರುವುದಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ್ದಕ್ಕಾಗಿ ಅವರನ್ನು ಕೆಲಸದಿಂದಲೂ ತೆಗೆದುಹಾಕಲಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.

ನಿಜಾಮುದ್ದೀನ್ ತಮ್ಮ ಲಿಂಕ್‌ಡಿನ್ ಪೋಸ್ಟ್‌ನಲ್ಲಿ “ವರ್ಣಭೇದ, ವರ್ಣ ತಾರತಮ್ಯ, ದೌರ್ಜನ್ಯ, ಹಿಂಸೆ, ವೇತನ ವಂಚನೆ, ಅನ್ಯಾಯವಾಗಿ ನೌಕರಿಯಿಂದ ತೆಗೆಯಲಾಗಿದೆ ಮತ್ತು ನ್ಯಾಯದಾನದಲ್ಲೂ ವಂಚನೆಗೊಳಗಾದೆ. ಇವೆಲ್ಲವೂ ಅತಿಯಾಯಿತು. ಬಿಳಿಯರ ಶ್ರೇಷ್ಠತೆ, ವರ್ಣಭೇದ ಮಾಡುವ ಅಮೆರಿಕದವರ ಮನಸ್ಥಿತಿ ಕೊನೆಯಾಗಬೇಕು” ಎಂದು ಬರೆದಿದ್ದರು.

ನಿಜಾಮುದ್ದೀನ್ ಕುಟುಂಬವು ಈ ಘಟನೆ ಕುರಿತು ಸಮರ್ಪಕ ತನಿಖೆ ನಡೆಸುವಂತೆ ಆಗ್ರಹಿಸಿದೆ ಮತ್ತು ಅವರ ಮೃತದೇಹವನ್ನು ಭಾರತಕ್ಕೆ ತರಲು ನೆರವಾಗುವಂತೆ ಭಾರತೀಯ ವಿದೇಶಾಂಗ ಇಲಾಖೆಯನ್ನು ಕೋರಿದ್ದಾರೆ.

Previous article“ಬೆಂಗಳೂರು ಬಿಟ್ಟು ಹೋಗುವುದಿಲ್ಲ”: ಬ್ಲ್ಯಾಕ್‌ಬಕ್ ಕಂಪನಿ ಸ್ಪಷ್ಟನೆ
Next articleಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ಹೊಂದಾಣಿಕೆ: ಶಿಕ್ಷಣ, ಆರೋಗ್ಯಕ್ಕೆ ಕುತ್ತು?

LEAVE A REPLY

Please enter your comment!
Please enter your name here