ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಜಾದಲ್ಲಿ ತಕ್ಷಣವೇ ದಾಳಿ ನಿಲ್ಲಿಸುವಂತೆ ಆದೇಶ ಹೊರಡಿಸಿದ ನಂತರವೂ, ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಪ್ಯಾಲೆಸ್ತೀನ್ ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ. ದಕ್ಷಿಣ ಗಾಜಾದ ಅಲ್-ಮವಾಸಿಯಲ್ಲಿರುವ ಟೆಂಟ್ ಮೇಲೆ ನಡೆದ ಈ ದಾಳಿಯು, ಯುದ್ಧವನ್ನು ನಿಲ್ಲಿಸುವ ಅಂತರರಾಷ್ಟ್ರೀಯ ಪ್ರಯತ್ನಗಳಿಗೆ ಹಿನ್ನಡೆಯನ್ನುಂಟುಮಾಡಿದೆ.
ಹಮಾಸ್ ತನ್ನ ಕದನ ವಿರಾಮ ಪ್ರಸ್ತಾಪವನ್ನು ಭಾಗಶಃ ಒಪ್ಪಿಕೊಂಡ ಬೆನ್ನಲ್ಲೇ ಈ ಘಟನೆ ನಡೆದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ಅಲ್ ಜಜೀರಾ ವರದಿಗಳ ಪ್ರಕಾರ, ಟ್ರಂಪ್ ಆದೇಶದ ನಂತರ ಗಾಜಾದ ಹಲವು ಪ್ರದೇಶಗಳಲ್ಲಿ ಬಾಂಬ್ ದಾಳಿಗಳು ಕಡಿಮೆಯಾಗಿವೆ. ಹಮಾಸ್, ಟ್ರಂಪ್ ಮಂಡಿಸಿದ ಯೋಜನೆಯ ಕೆಲವು ಭಾಗಗಳನ್ನು ಒಪ್ಪಿಕೊಂಡಿರುವುದಾಗಿ ಘೋಷಿಸಿದೆ.
ಆದರೆ ತಜ್ಞರ ಈ ಪ್ರಸ್ತಾಪವು ಪ್ಯಾಲೆಸ್ತೀನಿಯನ್ನರಿಗೆ ಅಷ್ಟೊಂದು ಅನುಕೂಲಕರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್, ಹಮಾಸ್‌ನ ಪ್ರತಿಕ್ರಿಯೆಯನ್ನು ಸ್ವಾಗತಿಸಿ, ಶಾಂತಿಗೆ ಸಿದ್ಧರಾಗಿರುವುದಾಗಿ ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಹ ಟ್ರಂಪ್ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಸಿದ್ಧವಿರುವುದಾಗಿ ಹೇಳಿದ್ದು, ಇದು ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಹಮಾಸ್‌ನೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸದೆ, ಇಸ್ರೇಲ್ ಈ ಹಿಂದೆ ನಿಗದಿಪಡಿಸಿದ ತತ್ವಗಳ ಆಧಾರದ ಮೇಲೆ ಯುದ್ಧವನ್ನು ಕೊನೆಗೊಳಿಸಲು ಬದ್ಧವಾಗಿದೆ ಎಂದು ಅವರ ಕಚೇರಿ ಹೇಳಿಕೆ ನೀಡಿದೆ.
ಇದು ಪೂರ್ಣ ಪ್ರಮಾಣದ ಕದನ ವಿರಾಮಕ್ಕೆ ಇನ್ನೂ ಹಲವು ಅಡೆತಡೆಗಳಿವೆ ಎಂಬುದನ್ನು ಸೂಚಿಸುತ್ತದೆ. ವಿಶ್ವ ನಾಯಕರು, ಈಜಿಪ್ಟ್ ಮತ್ತು ಕತಾರ್‌ನಂತಹ ಪ್ರಮುಖ ಮಧ್ಯವರ್ತಿಗಳು ಹಮಾಸ್‌ನ ಪ್ರತಿಕ್ರಿಯೆಯನ್ನು ಸ್ವಾಗತಿಸಿದ್ದಾರೆ. ಪ್ಯಾಲೆಸ್ತೀನ್ ಜನರ ಮೇಲಿನ ಇಸ್ರೇಲ್‌ನ ನಿರಂತರ ದಾಳಿಗಳನ್ನು ಕೊನೆಗೊಳಿಸಲು ಇದು ಸಕಾರಾತ್ಮಕ ಹೆಜ್ಜೆ ಎಂದು ಭಾವಿಸಿದ್ದಾರೆ.
ಕತಾರ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಮಜೇದ್ ಅಲ್ ಅನ್ಸಾರಿ ಯೋಜನೆಯ ಕುರಿತು ಚರ್ಚೆಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಗಾಜಾದ ಮೇಲಿನ ಇಸ್ರೇಲ್‌ನ ಈ ಯುದ್ಧವು ಇಲ್ಲಿಯವರೆಗೆ ಕನಿಷ್ಠ 66,288 ಪ್ಯಾಲೆಸ್ತೀನಿಯನ್ನರ ಜೀವ ತೆಗೆದುಕೊಂಡಿದೆ.
ಇವರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳು. ಇಸ್ರೇಲ್ ನೆರವಿನ ಹರಿವನ್ನು ನಿರ್ಬಂಧಿಸುವುದರಿಂದ ಉಂಟಾದ ಹಸಿವಿನಿಂದ ಕನಿಷ್ಠ 440 ಪ್ಯಾಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ. ಅಲ್ಲದೆ 200ಕ್ಕೂ ಹೆಚ್ಚು ಪತ್ರಕರ್ತರು ಮತ್ತು ಕನಿಷ್ಠ 1000 ಆರೋಗ್ಯ ಕಾರ್ಯಕರ್ತರು ಸಹ ಈ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.