ಉಪ ರಾಷ್ಟ್ರಪತಿ ಚುನಾವಣೆ: ಬಿ. ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

0
70

ನವ ದೆಹಲಿ: ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಅವರು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಉಪ ರಾಷ್ಟ್ರಪತಿ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಿದರು.

ಇಂಡಿಯಾ ಬಣದ ಅಭ್ಯರ್ಥಿಯಾಗಿ ಬಿ. ಸುದರ್ಶನ್ ರೆಡ್ಡಿ: ವಿರೋಧ ಪಕ್ಷದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿ. ಸುದರ್ಶನ್ ರೆಡ್ಡಿ ಅವರು ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಿನ್ನೆ ಬುಧವಾರ ದೆಹಲಿಯಲ್ಲಿ ಸಂಸತ್ ಸದಸ್ಯರೊಂದಿಗೆ ಸಭೆ ನಡೆಸಿದರು. ಸಂವಿಧಾನ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಈ ಸಭೆ ನಡೆದಿದ್ದು, ಇದರಲ್ಲಿ ಇಂಡಿಯಾ ಬ್ಲಾಕ್ ಮತ್ತು ಆಮ್ ಆದ್ಮಿ ಪಕ್ಷದ ಸಂಸದರು ಸೇರಿದ್ದರು. ವಿರೋಧ ಪಕ್ಷದ ಮೈತ್ರಿಕೂಟದ ಸಭೆಯ ನಂತರ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನ್ಯಾಯಮೂರ್ತಿ ರೆಡ್ಡಿ ಅವರ ಉಮೇದುವಾರಿಕೆಯನ್ನು ಘೋಷಿಸಿದ್ದರು.

ಬಿ. ಸುದರ್ಶನ್ ರೆಡ್ಡಿ ಪರಿಚಯ: ಬಿ. ಸುದರ್ಶನ್ ರೆಡ್ಡಿ ಅವರು ಆಂಧ್ರ ಪ್ರದೇಶದಲ್ಲಿ ಜುಲೈ 8ರಂದು 1946ರಲ್ಲಿ ಜನಿಸಿದರು. ಕಾನೂನು ಅಧ್ಯಯನ ಮಾಡಿರುವ ಇವರು 1971 ರಲ್ಲಿ ಆಂಧ್ರಪ್ರದೇಶದ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ಸೇರಿಕೊಂಡು ನಂತರ ಸರ್ಕಾರಿ ವಕೀಲರಾಗಿ ಮತ್ತು ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ಕೌನ್ಸಿಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಉಸ್ಮಾನಿಯಾ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರ ಮತ್ತು ಸ್ಥಾಯಿ ಕೌನ್ಸಿಲ್ ಆಗಿ ಕೆಲಸ ಮಾಡಿರುವ ಸುದರ್ಶನ್ ರೆಡ್ಡಿಯವರು ಗೋವಾದ ಲೋಕಾಯುಕ್ತರಾಗಿದ್ದರು. ಆಂಧ್ರಪ್ರದೇಶ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ಹಾಗೂ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಇವರು 2007ರಂದು ಭಾರತದ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆದು 2011ರಂದು ನಿವೃತ್ತರಾದರು.

ಎನ್‌ಡಿಎ ಮೈತ್ರಿಕೂಟದಿಂದ ಸಿ.ಪಿ. ರಾಧಾಕೃಷ್ಣನ್: ಎನ್‌ಡಿಎ ಮೈತ್ರಿಕೂಟದಿಂದ ಸಿ.ಪಿ. ರಾಧಾಕೃಷ್ಣನ್ ಅವರು ಬುಧವಾರ ಎನ್‌ಡಿಎ ಮೈತ್ರಿಕೂಟ ಅಭ್ಯರ್ಥಿಯಾಗಿ ಸಿ.ಪಿ.ರಾಧಾಕೃಷ್ಣನ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಉಭಯ ಸದನಗಳಲ್ಲಿ 781 ಸದಸ್ಯರ ಬಲ ಹೊಂದಿದ್ದು, ಬಹುಮತ ಪಡೆಯಲು 391 ಸದಸ್ಯರ ಬೆಂಬಲ ಅಗತ್ಯ. ಆಡಳಿತರೂಢ ಎನ್‌ಡಿಎ ಮೈತ್ರಿಕೂಟವು 422 ಸದಸ್ಯರ ಬಲ ಹೊಂದಿದೆ. ವೈಎಸ್‌ಆರ್‌ಸಿಪಿ ಪಕ್ಷವು ಕೂಡ ಈಗಾಗಲೇ ರಾಧಾಕೃಷ್ಣನ್ ಅವರಿಗೆ ಬೆಂಬಲ ಘೋಷಿಸಿದೆ.

ಉಪ ರಾಷ್ಟ್ರಪತಿ ಚುನಾವಣೆ: ಜಗದೀಪ್ ಧನಕರ್ ರಾಜೀನಾಮೆಯ ನಂತರ ಭಾರತದ ಉಪ ರಾಷ್ಟ್ರಪತಿ ಹುದ್ದೆ ಖಾಲಿಯಾಗಿದ್ದು. ಕೇಂದ್ರ ಚುನಾವಣಾ ಆಯೋಗ ಚುನಾವಣೆ ಘೋಷಣೆ ನಂತರ ಎನ್‌ಡಿಎ ಹಾಗೂ ಇಂಡಿಯಾ ಬಣದಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಉಪ ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು, ರಾಜ್ಯಸಭೆಯ ನಾಮ ನಿರ್ದೇಶಿತ ಸದಸ್ಯರು ಮತ ಚಲಾಯಿಸಬಹುದಾಗಿದೆ. ಚುನಾವಣಾ ಪ್ರಕ್ರಿಯೆಯನ್ನು ರಹಸ್ಯ ಮತದಾನದ ಮೂಲಕ ಮಾಡಲಾಗುತ್ತದೆ. ಸೆಪ್ಟೆಂಬರ್ 9ರಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು. ಅಂದೇ ಪಲಿತಾಂಶ ಬರಲಿದೆ.

Previous articleಬಂಡೀಪುರ: ಸಂಜೆ 6 ಗಂಟೆ ನಂತರ ಲಾರಿ ಸಂಚಾರ ನಿಷೇಧಕ್ಕೆ ಚಿಂತನೆ
Next articleಬೆಂಗಳೂರು: ಗುಡ್ ನ್ಯೂಸ್, ಮತ್ತೆ ಬೈಕ್ ಟ್ಯಾಕ್ಸಿ ಆರಂಭ

LEAVE A REPLY

Please enter your comment!
Please enter your name here