ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ ದುರಂತ: ಮೃತರ ಸಂಖ್ಯೆ 39ಕ್ಕೆ ಏರಿಕೆ

0
52

ಚೆನ್ನೈ: ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ಶನಿವಾರ ಸಂಜೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಹಾಗೂ ನಟ-ರಾಜಕಾರಣಿ ವಿಜಯ್ ಅವರ ರ‍್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಮೃತರಲ್ಲಿ 10 ಮಕ್ಕಳು, 17 ಮಹಿಳೆಯರು ಸೇರಿದ್ದಾರೆ.

ಅಧಿಕಾರಿಗಳ ಪ್ರಕಾರ, 46ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದು, ಹಲವರಿಗೆ ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ.

ಅಪಾರ ಜನಸಮೂಹವೇ ದುರಂತಕ್ಕೆ ಕಾರಣ: ಪೊಲೀಸ್ ಮೂಲಗಳ ಪ್ರಕಾರ, ವಿಜಯ್ ಅವರ ರಾಜಕೀಯ ಭಾಷಣಕ್ಕಾಗಿ ಆಯೋಜಿಸಲಾದ ಈ ರ‍್ಯಾಲಿಗೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ನಿಗದಿತ ಸ್ಥಳಕ್ಕಿಂತ ಹೆಚ್ಚಿನ ಜನರ ಹಾಜರಾತಿಯಿಂದ ಒತ್ತಡ ಉಂಟಾಗಿ ಕಾಲ್ತುಳಿತ ಸಂಭವಿಸಿದೆ.

ವಿಜಯ್ ಅವರ ಭಾವುಕ ಪ್ರತಿಕ್ರಿಯೆ: ಘಟನೆಯ ನಂತರ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್, ತೀವ್ರ ದುಃಖ ವ್ಯಕ್ತಪಡಿಸಿದರು. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂದೇಶದಲ್ಲಿ, “ನನ್ನ ಹೃದಯ ಒಡೆದು ಹೋಗಿದೆ. ಪದಗಳಲ್ಲಿ ಹೇಳಲಾಗದ ನೋವು ಮತ್ತು ದುಃಖದಲ್ಲಿ ನಾನು ನರಳುತ್ತಿದ್ದೇನೆ. ಕರೂರಿನಲ್ಲಿ ಪ್ರಾಣ ಕಳೆದುಕೊಂಡ ನನ್ನ ಪ್ರೀತಿಯ ಸಹೋದರ-ಸಹೋದರಿಯರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ತಿಳಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬರೆದಿದ್ದಾರೆ.

ರಾಜಕೀಯ ಹೇಳಿಕೆ ನೀಡುವುದಿಲ್ಲ : ಕರೂರಿನಲ್ಲಿ ಟಿವಿಕೆ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ಯಾವುದೇ ರಾಜಕೀಯ ಹೇಳಿಕೆ ನೀಡುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿದ ಅವರು, “ತನಿಖಾ ಆಯೋಗದ ವರದಿಯ ಆಧಾರದ ಮೇಲೆ ಮಾತ್ರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದರು.

ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅರುಣಾ ಜಗದೀಶನ್ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ರಚಿಸಲಾಗಿದೆ. ಅವರು ಮೊದಲು ಸಾತಂಕುಲಂ ಕಸ್ಟಡಿ ಸಾವಿನ ತನಿಖೆ ನಡೆಸಿದ್ದರು. ಸ್ಟಾಲಿನ್ ಆಸ್ಪತ್ರೆಗಳಿಗೆ ಭೇಟಿ ನೀಡಿ, 51 ಮಂದಿ ಗಾಯಾಳುಗಳು ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ. ಸರ್ಕಾರವು ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಮತ್ತು ಗಾಯಾಳುಗಳಿಗೆ ತಲಾ ₹1 ಲಕ್ಷ ಪರಿಹಾರ ಘೋಷಿಸಿದೆ.

Previous articleಉತ್ತರ ಕನ್ನಡ ಜಿಲ್ಲೆಗೆ ಅಘನಾಶಿನಿ – ವೇದಾವತಿ ನದಿ ತಿರುವು ಯೋಜನೆ – ಪೂರ್ವ ಸಾಧ್ಯತಾ ವರದಿಯ ಮಾಹಿತಿ ಬಹಿರಂಗ
Next articleದಾವಣಗೆರೆ: ಸಮೀಕ್ಷೆಗೆ ಗೈರು – ಶಿಕ್ಷಕರು ಸೇರಿದಂತೆ ಮೂವರು ಸಿಬ್ಬಂದಿಗಳ ಅಮಾನತು

LEAVE A REPLY

Please enter your comment!
Please enter your name here