ಪದಚ್ಯುತಿ ಮಸೂದೆ.. ಏನು? ಎತ್ತ?: ಇಲ್ಲಿದೆ ಮಾಹಿತಿ…

0
57

ಯಾವುದಾದರೂ ಆರೋಪದ ಮೇಲೆ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಬಂಧನಕ್ಕೊಳಗಾದರೆ ಮತ್ತು 30 ದಿನದಲ್ಲಿ ಹೊರಗೆ ಬರದಿದ್ದರೆ ಅವರನ್ನು ಹುದ್ದೆಯಿಂದ ಪದಚ್ಯುತಗೊಳಿಸುವ ಮಹತ್ವದ ಮಸೂದೆಗಳನ್ನು ಬುಧವಾರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ವಿರೋಧ ಪಕ್ಷಗಳಿಂದ ಭಾರಿ ಆಕ್ಷೇಪ ವ್ಯಕ್ತವಾದ ಕಾರಣ ಪರಿಶೀಲನಾ ಸಮಿತಿಗೆ ಅವನ್ನು ಕಳಿಸಲಾಗಿದೆ. ಹಾಗಾದರೆ ಏನು ಈ ಮಸೂದೆಗಳು? ಇಲ್ಲಿದೆ ಮಾಹಿತಿ..

ಮೂರು ಮಸೂದೆಗಳ ಒಳಹೊರಗು: ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧ ಎಸಗಿದ ಆರೋಪದ ಮೇಲೆ ಪ್ರಧಾನಿ, ಮುಖ್ಯಮಂತ್ರಿಗಳು, ರಾಜ್ಯ ಹಾಗೂ ಕೇಂದ್ರ ಸಚಿವರುಗಳನ್ನು ಸತತ 30 ದಿನಗಳ ಕಾಲ ಬಂಧಿಸಿ ಬಂಧನದಲ್ಲಿರಿಸಿದರೆ, ಅವರನ್ನು 31ನೇ ದಿನದೊಳಗೆ ಕಚೇರಿಯಿಂದ ತೆಗೆದುಹಾಕಲಾಗುತ್ತದೆ. ಅಂದರೆ, ಅವರು ಹಿಡಿದುಕೊಂಡಿರುವ ಸಾಂವಿಧಾನಿಕ ಹುದ್ದೆಯಿಂದ ಅವರನ್ನು ವಜಾ ಮಾಡಲಾಗುತ್ತದೆ. ಜೈಲಿನಿಂದ ಬಿಡುಗಡೆಯಾದ ನಂತರ ಬೇಕಾದರೆ ಅವರು ತಮ್ಮ ಹುದ್ದೆಗಳನ್ನು ಮರಳಿ ಪಡೆಯಬಹುದು. ಈ ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದರು.

ಈ ಮಸೂದೆಗಳಿಂದ ಏನು ಪ್ರಯೋಜನ?: ಸಾಂವಿಧಾನಿಕ ಹುದ್ದೆಯಲ್ಲಿರುವ ಮತ್ತು ಆಡಳಿತದ ಪ್ರಮುಖ ಭಾಗವಾಗಿರುವ ಪ್ರಧಾನಿ, ಮಂತ್ರಿಗಳು ಹಾಗೂ ಸಿಎಂಗಳು ಜೈಲು ಪಾಲಾದರೆ ಹಾಗೂ ತಮ್ಮ ಹುದ್ದೆಗೆ ರಾಜೀನಾಮೆ ನೀಡದಿದ್ದರೆ ಅದರ ನೇರ ಪರಿಣಾಮ ಬೀರುವುದು ರಾಜ್ಯ ಅಥವಾ ದೇಶದ ಆಡಳಿತದ ಮೇಲೆ, ಸರ್ಕಾರದ ಮೇಲೆ. ಅದರಿಂದ ಅವರ ಇಲಾಖೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ, ಅನೇಕ ಜನೋಪಯೋಗಿ ಕೆಲಸಗಳು ಸ್ಥಗಿತವಾಗಬಹುದು ಅಥವಾ ಅಡೆತಡೆಯನ್ನು ಎದುರಿಸಬಹುದು. ಇದು ಜನರ ಜೀವನದ ಮೇಲೆ ಪರಿಣಾಮ ಉಂಟು ಮಾಡಬಹುದು. ಹಾಗಾಗಿ ಜೈಲುಪಾಲಾದ ನಾಯಕರು ತಮ್ಮ ಸ್ಥಾನವನ್ನು ತ್ಯಜಿಸಬೇಕು ಎಂಬ ಮಾತು ಹಿಂದಿನಿಂದಲೂ ಇದೆ. ಕೆಲವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ ಉದಾಹರಣೆಗಳೂ ಇವೆ. ಈಗ ಈ ಮಸೂದೆ ಸೆರೆವಾಸದಲ್ಲಿರುವ ನಾಯಕರು ರಾಜೀನಾಮೆ ಕೊಡದಿದ್ದರೆ ಅವರನ್ನು ಪದಚ್ಯುತಗೊಳಿಸುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಇದು ಆಡಳಿತ ದೃಷ್ಟಿಯಿಂದ ಹಾಗೂ ಜನರ ಹಿತದೃಷ್ಟಿಯಿಂದ ಒಳ್ಳೆಯ ಮಸೂದೆ ಎನ್ನುತ್ತಾರೆ ಅನೇಕ ಕಾನೂನು ತಜ್ಞರು.

ವಿರೋಧ ಪಕ್ಷಗಳ ವಿರೋಧ ಏಕೆ?: ಅಮಿತ್ ಶಾ ಈ ಮಸೂದೆಯನ್ನು ಮಂಡಿಸುತ್ತಿದ್ದಂತೆ ಲೋಕಸಭೆಯಲ್ಲಿ ವಿಪಕ್ಷಗಳು ಭಾರಿ ಆಕ್ರೋಶ ಹೊರಹಾಕಿ ಗದ್ದಲವೆಬ್ಬಿಸಿದವು. ಇದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನಬಾಹಿರ ಎಂದು ವಿರೋಧ ಪಕ್ಷಗಳು ದೂರಿದವು. ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳ ಸಚಿವರು, ಮುಖ್ಯಮಂತ್ರಿಗಳನ್ನು ಜೈಲಿಗಟ್ಟಿ, ಅವರನ್ನು ಹುದ್ದೆಯಿಂದ ವಜಾಗೊಳಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಕೇಂದ್ರ ಸರ್ಕಾರ ಈ ಮಸೂದೆ ತಂದಿದೆ ಎಂದು ಇಂಡಿಯಾ ಕೂಟದ ಪಕ್ಷಗಳು ಆರೋಪಿಸಿವೆ. ಈ ರೀತಿಯ ದುರುಪಯೋಗಕ್ಕೆ ಅವಕಾಶ ಇಲ್ಲವೆಂದಲ್ಲ, ಆದರೆ ಪ್ರಜಾಪ್ರಭುತ್ವದಲ್ಲಿ ಈ ಥರದ ಎಲ್ಲ ಧನಾತ್ಮಕ ಬೆಳವಣಿಗೆಗಳನ್ನು ಪೂರ್ವಗ್ರಹದಿಂದಲೇ ನೋಡಲು ಶುರು ಮಾಡಿದರೆ, ಅದರಿಂದ ದೇಶಕ್ಕೇ ನಷ್ಟ ಎಂಬುದೂ ಸತ್ಯ.

ಇಲ್ಲಿಯವರೆಗೆ ಇರಲಿಲ್ಲ ಅವಕಾಶ: ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಯಾವುದಾದರೂ ಆರೋಪದ ಮೇಲೆ ಜೈಲಿಗೆ ಹೋದರೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು. ಆದರೆ ಜೈಲಿಗೆ ಹೋದ ಮಾತ್ರಕ್ಕೆ ತಮ್ಮ ಹುದ್ದೆ ತ್ಯಜಿಸುವ ಯಾವುದೇ ಕಾಯಿದೆ, ಕಾನೂನು, ನಿಯಮಗಳು ಇರಲಿಲ್ಲ. ಈ ಅವಕಾಶದ ದುರುಪಯೋಗಪಡಿಸಿಕೊಂಡು ಹಲವಾರು ಜನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರಲಿಲ್ಲ. ಇದು ನೈತಿಕವಾಗಿಯೂ, ಆಡಳಿತದ ದೃಷ್ಟಿಯಿಂದಲೂ ಸರಿಯಲ್ಲ ಎಂಬುದು ಅನೇಕರ ವಾದವಾಗಿತ್ತು.

ಅರವಿಂದ್ ಕೇಜ್ರಿವಾಲ್‌ಗಿಂತ ದೊಡ್ಡ ಉದಾಹರಣೆ ಬೇಕೇ?: ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅಬಕಾರಿ ನೀತಿ ಹಗರಣದ ಆರೋಪದ ಮೇಲೆ ಜೈಲುಪಾಲಾಗಿ 5 ತಿಂಗಳು ಕಾಲ ಸೆರೆವಾದಲ್ಲಿದ್ದರು ಮತ್ತು ಅಷ್ಟೂ ದಿನ ಅವರು ದೆಹಲಿ ಮುಖ್ಯಮಂತ್ರಿಯಾಗಿಯೇ ಇದ್ದರು ಎಂಬುದು ಗಮನಾರ್ಹ. ಆಡಳಿತಾತ್ಮಕವಾಗಿ ಯಾವುದೇ ರೀತಿಯ ನಿರ್ಧಾರ ಕೈಗೊಳ್ಳುವ ಅಧಿಕಾರ ಅವರಿಗಿರಲಿಲ್ಲವಾದರೂ ಕೇಜ್ರಿವಾಲ್ ಹುದ್ದೆಗೆ ರಾಜೀನಾಮೆ ಕೊಟ್ಟಿರಲಿಲ್ಲ. ಇದು ದೆಹಲಿಯ ಅಭಿವೃದ್ಧಿಗೆ ಅತಿದೊಡ್ಡ ಕಂಟಕವಾಗಿ ಪರಿಣಮಿಸಿತು ಎನ್ನುತ್ತಾರೆ ದೆಹಲಿ ವಾಸಿಗಳು.

Previous articleವಿಶ್ವನಾಥ ದೇವಾಲಯದ ಶಿಖರದ ಮೇಲೆ ಬಿಳಿ ಗೂಬೆ
Next articleಭಾರತಕ್ಕೆ ಶೇ. 5ರ ರಿಯಾಯಿತಿ ಅಡಿ ತೈಲ: ರಷ್ಯಾ ಘೋಷಣೆ

LEAVE A REPLY

Please enter your comment!
Please enter your name here