ನವದೆಹಲಿ: ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಸೇರಿದಂತೆ ಮುಂತಾದ ಸಾರ್ವಜನಿಕ ಸ್ಥಳಗಳಿಂದ ಬೀದಿನಾಯಿ ಕಡಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸುಪ್ರೀಂ ಕೋರ್ಟ್, ಅಂಥ ನಾಯಿಗಳನ್ನು ನಿಗದಿಪಡಿಸಿದ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂದು ನಿರ್ದೇಶನ ನೀಡಿದೆ.
ನ್ಯಾ. ವಿಕ್ರಂ ನಾಥ್, ನ್ಯಾ. ಸಂದೀಪ್ ಮೆಹ್ರಾ ಹಾಗೂ ನ್ಯಾ. ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು, ಬೀದಿನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಸೂಚಿಸಿದೆ. ಅಲ್ಲದೇ ಬಿಡಾಡಿ ಜಾನುವಾರುಗಳ ಸಹಿತ ಇತರ ಪ್ರಾಣಿಗಳನ್ನು ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇನಿಂದ ತೆರವುಗೊಳಿಸಿ ನಿಗದಿತ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವಂತೆಯೂ ಆದೇಶಿಸಿದೆ.
ಸ್ಥಳೀಯ ಸರ್ಕಾರ, ಸಂಸ್ಥೆಗಳು ಅಲೆಮಾರಿ ನಾಯಿಗಳನ್ನು ಪತ್ತೆ ಹಚ್ಚಿ, ಲಸಿಕೆ ಹಾಕಿಸಿ, ಸಂತಾನಶಕ್ತಿಹರಣ ಚಿಕಿತ್ಸೆ ನೀಡಿ ನಂತರ ನಿಗದಿತ ನಾಯಿ ಆಶ್ರಯಗಳಿಗೆ ಸ್ಥಳಾಂತರಿಸುವುದು ಅವರ ಜವಾಬ್ದಾರಿ ಎಂದು ನ್ಯಾಯಾಲಯ ತಿಳಿಸಿದೆ.
ಸಾರ್ವಜನಿಕ ಸ್ಥಳಗಳಿಂದ ಹಿಡಿದು ತಂದ ನಾಯಿಗಳನ್ನು ಮರಳಿ ಅದೇ ಸ್ಥಳದಲ್ಲಿ ಬಿಡಬಾರದು ಎಂದೂ ಪೀಠ ತಾಕೀತು ಮಾಡಿದೆ. ಬಿಡಾಡಿ ಪ್ರಾಣಿಗಳು ಹೆಚ್ಚಾಗಿ ಓಡಾಡುವ ಹೆದ್ದಾರಿಗಳನ್ನು ಗುರುತಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಿತ ವಿವಿಧ ಇಲಾಖೆಗಳು ಜಂಟಿಯಾಗಿ ಅಭಿಯಾನ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.
























