ಕೆಳಮಂಗಲಂ (ತಮಿಳುನಾಡು): ಕರ್ನಾಟಕದ ಗಡಿ ಆನೇಕಲ್‌ಗೆ ಸಮೀಪವಿರುವ ತಮಿಳುನಾಡಿನ ಕೆಳಮಂಗಲಂ ಬಳಿಯ ಚಿನ್ನಟ್ಟಿಯಲ್ಲಿ ಎದೆನಡುಗಿಸುವ ಘಟನೆಯೊಂದು ನಡೆದಿದೆ. ಮೂವರು ಮಕ್ಕಳ ತಾಯಿಯೊಬ್ಬಳು ತನ್ನ ಸಲಿಂಗ ಸಂಗಾತಿಯೊಂದಿಗಿನ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂಬ ಕಾರಣಕ್ಕೆ ಐದು ತಿಂಗಳ ಹಸುಗೂಸನ್ನು ಕೊಂದಿದ್ದಾಳೆ.
ಈ ಸಂಬಂಧ, ಮಗುವಿನ ತಾಯಿ ಭಾರತಿ (26) ಮತ್ತು ಆಕೆಯ ಸಂಗಾತಿ ಸುಮಿತ್ರಾ (22) ಎಂಬುವವರನ್ನು ಕೆಳಮಂಗಲಂ ಪೊಲೀಸರು ಬಂಧಿಸಿದ್ದಾರೆ.
ನಾಲ್ಕು ವರ್ಷಗಳ ರಹಸ್ಯ ಸಂಬಂಧ: ಚಿನ್ನಟ್ಟಿ ಗ್ರಾಮದ ಸುರೇಶ್ ಎಂಬುವವರ ಪತ್ನಿ ಭಾರತಿ. ಈ ದಂಪತಿಗೆ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಹೆಣ್ಣುಮಕ್ಕಳು ಹಾಗೂ ಐದು ತಿಂಗಳ ಗಂಡು ಮಗುವಿತ್ತು.
ಇದೇ ಗ್ರಾಮದ ಸುಮಿತ್ರಾ ಎಂಬ ಯುವತಿಯೊಂದಿಗೆ ಭಾರತಿಗೆ ಕಳೆದ ನಾಲ್ಕು ವರ್ಷಗಳಿಂದ ಸ್ನೇಹವಿತ್ತು. ಈ ಸ್ನೇಹವು ಸಲಿಂಗಕಾಮಕ್ಕೆ ತಿರುಗಿ, ಪತಿ ಮನೆಯಲ್ಲಿ ಇಲ್ಲದಿದ್ದಾಗ ಇಬ್ಬರೂ ರಹಸ್ಯವಾಗಿ ಸೇರುತ್ತಿದ್ದರು.
ಈ ಇಬ್ಬರೂ ತಮ್ಮ ಸಂಬಂಧವನ್ನು ಅತ್ಯಂತ ಗೌಪ್ಯವಾಗಿಟ್ಟಿದ್ದರು. ಇದಕ್ಕಾಗಿಯೇ ಪ್ರತ್ಯೇಕ ಮೊಬೈಲ್ ಫೋನ್ ಬಳಸುತ್ತಿದ್ದರು. ಇದರಲ್ಲಿ ತಮ್ಮ ಖಾಸಗಿ ಫೋಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು.
ಅಷ್ಟೇ ಅಲ್ಲದೆ, ಭಾರತಿ ತನ್ನ ಎದೆಯ ಮೇಲೆ ಸಂಗಾತಿಯ ನೆನಪಿಗಾಗಿ “ಸುಮಿ” ಎಂದು ಹಚ್ಚೆ ಹಾಕಿಸಿಕೊಂಡಿದ್ದಳು. ಇಬ್ಬರೂ ಒಟ್ಟಿಗೆ ಫೋಟೋಗಳನ್ನು ಬಳಸಿ ರೀಲ್ಸ್ ಕೂಡ ಮಾಡುತ್ತಿದ್ದರು.
ಮಗುವಿನ ಜನನದಿಂದ ಸಂಬಂಧದಲ್ಲಿ ಬಿರುಕು: ಐದು ತಿಂಗಳ ಹಿಂದೆ ಭಾರತಿಗೆ ಗಂಡು ಮಗು ಜನಿಸಿದ ನಂತರ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ. ಮಗು ಆದಾಗಿನಿಂದ ಭಾರತಿ ತನ್ನನ್ನು ದೂರ ಮಾಡುತ್ತಿದ್ದಾಳೆ ಎಂದು ಸುಮಿತ್ರಾ ಭಾವಿಸಿದ್ದಳು.
ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ತಮ್ಮ ನಡುವಿನ ಜಗಳಕ್ಕೆ ಮಗುವೇ ಕಾರಣ ಎಂದು ಭಾವಿಸಿದ ಸುಮಿತ್ರಾ, ಮಗುವನ್ನು ಕೊಲೆ ಮಾಡುವಂತೆ ಭಾರತಿಗೆ ಪ್ರಚೋದನೆ ನೀಡಿದ್ದಳು.
ಕೊಲೆ ಮತ್ತು ನಾಟಕ: ಸಂಗಾತಿಯ ಮಾತಿಗೆ ಮರುಳಾದ ಭಾರತಿ, ಯಾರೂ ಇಲ್ಲದ ವೇಳೆ ತನ್ನ ಐದು ತಿಂಗಳ ಕಂದಮ್ಮನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ನಂತರ, ಮಗು ಹಾಲು ಕುಡಿಯುವಾಗ ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದೆ ಎಂದು ಕುಟುಂಬದವರನ್ನು ನಂಬಿಸಿದ್ದಳು. ಇದನ್ನು ನಿಜವೆಂದು ನಂಬಿದ ಕುಟುಂಬಸ್ಥರು ಮಗುವಿನ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದರು.
ಮೊಬೈಲ್ ಫೋನ್ ಬಯಲು ಮಾಡಿದ ಸತ್ಯ: ಘಟನೆಯ ನಂತರ, ಭಾರತಿ ಮತ್ತು ಸುಮಿತ್ರಾ ಬಳಸುತ್ತಿದ್ದ ರಹಸ್ಯ ಮೊಬೈಲ್ ಆಕೆಯ ಪತಿ ಸುರೇಶ್‌ಗೆ ಆಕಸ್ಮಿಕವಾಗಿ ಸಿಕ್ಕಿದೆ. ಆ ಮೊಬೈಲ್‌ನಲ್ಲಿದ್ದ ಫೋಟೋ, ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಿದಾಗ, ಇಬ್ಬರ ಸಲಿಂಗಕಾಮ ಮತ್ತು ಮಗುವಿನ ಕೊಲೆಯ ಸಂಚು ಬಯಲಾಗಿದೆ. ತಕ್ಷಣವೇ ಸುರೇಶ್, ಪತ್ನಿ ಮತ್ತು ಆಕೆಯ ಸಂಗಾತಿಯನ್ನು ಪ್ರಶ್ನಿಸಿದ್ದು, ಈ ವೇಳೆ ಭಾರತಿ ತಾನೇ ಮಗುವನ್ನು ಕೊಂದಿರುವುದಾಗಿ ಫೋನ್‌ನಲ್ಲಿ ತಪ್ಪೊಪ್ಪಿಕೊಂಡಿದ್ದಾಳೆ.
ಈ ಎಲ್ಲಾ ಸಾಕ್ಷ್ಯಗಳೊಂದಿಗೆ ಸುರೇಶ್ ಕೆಳಮಂಗಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಹಶೀಲ್ದಾರ್ ಸಮ್ಮುಖದಲ್ಲಿ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸದ್ಯ, ಆರೋಪಿಗಳಾದ ಭಾರತಿ ಮತ್ತು ಸುಮಿತ್ರಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.























