ಬಿಹಾರ ರಾಜಕೀಯ: ಲಾಲೂ ಕುಟುಂಬದಲ್ಲಿ ಬಿರುಕು, ಚುನಾವಣಾ ಕಣದಲ್ಲಿ ಹೊಸ ಲೆಕ್ಕಾಚಾರ

0
41

ಬಿಹಾರದಲ್ಲಿ 2025ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಈ ಬಾರಿ ಅಧಿಕಾರ ಹಿಡಿಯುವ ಭರವಸೆಯಲ್ಲಿದ್ದಾರೆ. ಆದರೆ, ಚುನಾವಣಾ ರಣಾಂಗಣಕ್ಕೆ ಇಳಿಯುವ ಮುನ್ನವೇ ಲಾಲೂ ಮೂರು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಅವರ ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳು ದೊಡ್ಡ ಸುದ್ದಿಯಾಗುತ್ತಿವೆ.

ಲಾಲೂ ಪುತ್ರಿ ರೋಹಿಣಿ ಆಚಾರ್ಯ ತಮ್ಮ ಸಹೋದರರಾದ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಮತ್ತು ಸಹೋದರಿ, ಹಾಲಿ ಲೋಕಸಭಾ ಸದಸ್ಯೆ ಮೀಸಾ ಭಾರ್ತಿ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಅನ್‌ಫಾಲೋ ಮಾಡುವ ಮೂಲಕ ಕುಟುಂಬದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ರೋಹಿಣಿ ಈ ನಡೆಗೆ ತೇಜಸ್ವಿ ಅವರ ಆಪ್ತ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಯಾದವ್ ಕಾರಣ ಎನ್ನಲಾಗಿದೆ.

ಸೆಪ್ಟೆಂಬರ್‌ನಲ್ಲಿ ನಡೆದ ಪಕ್ಷದ ರ್ಯಾಲಿಯೊಂದರಲ್ಲಿ, ತೇಜಸ್ವಿ ಅವರು ತಮ್ಮ ತಂದೆ ಲಾಲೂ ಪ್ರಸಾದ್ ಬದಲಿಗೆ ಸಂಜಯ್ ಯಾದವ್ ಅವರನ್ನು ರಥದಲ್ಲಿ ಮುಂದಿನ ಆಸನದಲ್ಲಿ ಕೂರಿಸಿಕೊಂಡಿದ್ದಕ್ಕೆ ರೋಹಿಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಘಟನೆ ಅವರ ರಾಜಕೀಯ ಆಕಾಂಕ್ಷೆಗಳಿಗೆ ಹಿನ್ನಡೆಯಾಗಲು ಕಾರಣವಾಯಿತು ಎನ್ನಲಾಗಿದೆ.

ರೋಹಿಣಿ ಆಚಾರ್ಯ ಯಾರು?: ಎಂಬಿಬಿಎಸ್ ಪದವೀಧರೆಯಾಗಿರುವ ರೋಹಿಣಿ ಆಚಾರ್ಯ ಸದ್ಯ ಸಿಂಗಾಪುರದಲ್ಲಿ ಗೃಹಿಣಿಯಾಗಿ ನೆಲೆಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಸರನ್ ಕ್ಷೇತ್ರದಿಂದ ಸ್ಪರ್ಧಿಸಿ ಗಮನ ಸೆಳೆದಿದ್ದರು. ಲಾಲೂ ಪ್ರಸಾದ್ ಯಾದವ್ ನಾಲ್ಕು ಬಾರಿ ಪ್ರತಿನಿಧಿಸಿದ್ದ ಈ ಕ್ಷೇತ್ರದಲ್ಲಿ ರೋಹಿಣಿ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ವಿರುದ್ಧ ಸೋತಿದ್ದರು. ರಾಜಕೀಯದಿಂದ ಸ್ವಲ್ಪ ದೂರವಿದ್ದರು ಇತ್ತೀಚೆಗೆ ರಾಹುಲ್ ಗಾಂಧಿ ‘ಮತದಾರರ ಅಧಿಕಾರ ಯಾತ್ರೆ’ಯಲ್ಲಿ ಕಾಣಿಸಿಕೊಂಡಿದ್ದು, ರಾಜಕೀಯ ಮಹತ್ವಾಕಾಂಕ್ಷೆಗಳ ಬಗ್ಗೆ ಮತ್ತೆ ಊಹಾಪೋಹಗಳಿಗೆ ಕಾರಣವಾಗಿತ್ತು.

ತ್ಯಾಗ ಮತ್ತು ಸ್ವಾಭಿಮಾನ: ಲಾಲೂ ಪ್ರಸಾದ್ ಯಾದವ್ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾಗ, 2022ರಲ್ಲಿ ರೋಹಿಣಿ ತಮ್ಮ ಒಂದು ಮೂತ್ರಪಿಂಡವನ್ನು ದಾನ ಮಾಡುವ ಮೂಲಕ ತಂದೆಗೆ ಮರುಜನ್ಮ ನೀಡಿದ್ದರು. ಇದು ಕುಟುಂಬದ ಬಾಂಧವ್ಯಕ್ಕೆ ಸಾಕ್ಷಿಯಾಗಿತ್ತು. ಆದರೆ, ಇತ್ತೀಚಿನ ಕೌಟುಂಬಿಕ ವಿವಾದಗಳ ನಂತರ, ರೋಹಿಣಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

“ನನಗಾಗಿ ಅಥವಾ ಮತ್ತಾರಿಗಾದರೂ ನಾನು ನೆರವು ಕೇಳಿದ್ದರೆ ಅಥವಾ ನನ್ನ ತಂದೆಗೆ ನಾನು ಮೂತ್ರಪಿಂಡ ದಾನ ಮಾಡಿರುವುದೇ ಸುಳ್ಳು ಎಂದು ಸಾಬೀತುಪಡಿಸಿದರೆ ರಾಜಕೀಯವಾಗಿ ಮತ್ತು ಸಾರ್ವಜನಿಕ ಬದುಕಿನಿಂದಲೇ ನಿವೃತ್ತಿ ಘೋಷಿಸುತ್ತೇನೆ” ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, “ನನಗೆ ಯಾವುದೇ ಅಧಿಕಾರದ ದಾಹ ಇಲ್ಲ. ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಯೂ ಇಲ್ಲ. ನನಗೆ ನನ್ನ ಸ್ವಾಭಿಮಾನ ಅತ್ಯಂತ ಮುಖ್ಯವಾದದ್ದು” ಎಂದು ಸ್ಪಷ್ಟಪಡಿಸಿದ್ದಾರೆ.

ಲಾಲೂ ಎದುರಿಸುತ್ತಿರುವ ಇತರ ಸವಾಲುಗಳು: ಕುಟುಂಬದ ಕಲಹದ ಜೊತೆಗೆ, ಲಾಲೂ ಅವರು IRCTC ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪನ್ನು ಎದುರು ನೋಡುತ್ತಿದ್ದಾರೆ, ಇದು ಅಕ್ಟೋಬರ್‌ನಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ. ಅಲ್ಲದೆ, ತಮ್ಮ ಪುತ್ರ ತೇಜಸ್ವಿ ಯಾದವ್ರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸುವ ಗುರಿಯೊಂದಿಗೆ ಎನ್‌ಡಿಎ ವಿರುದ್ಧದ ರಾಜಕೀಯ ಸಮರದಲ್ಲಿ ಭಾಗಿಯಾಗಿದ್ದಾರೆ. ಈ ಮೂರು ಸವಾಲುಗಳನ್ನು ಲಾಲೂ ಪ್ರಸಾದ್ ಯಾದವ್ ಹೇಗೆ ನಿಭಾಯಿಸುತ್ತಾರೆ ಮತ್ತು ಇದು ಬಿಹಾರದ ರಾಜಕೀಯದಲ್ಲಿ ಯಾವ ಬದಲಾವಣೆಗಳನ್ನು ತರುತ್ತದೆ ಎಂಬುದನ್ನು ಕಾದು ನೋಡಬೇಕು.

Previous articleಮಂಗಳೂರು: GST ಏರಿಸಿದ್ದೂ ಅವರೇ ಇಳಿಸಿದ್ದೂ ಅವರೇ ಸಂಭ್ರಮ ಪಡುವಂತದ್ದೇನಿದೆ? – ಮಂಜುನಾಥ ಭಂಡಾರಿ
Next articleಕಿಚ್ಚ ಸುದೀಪ್: ಆಪ್ತರಿಗೆ ಮತ್ತೊಂದು ಕಾರು ಉಡುಗೊರೆ – ಈ ಬಾರಿ ಮ್ಯಾಕ್ಸ್ ನಿರ್ದೇಶಕ ವಿಜಯ್ ಕಾರ್ತಿಕೇಯಗೆ

LEAVE A REPLY

Please enter your comment!
Please enter your name here