Bihar: ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ, ಅಂತೆಯೇ ಅಧಿಕಾರದಿಂದ ಸಿಗುವ ಸವಲತ್ತುಗಳೂ ಶಾಶ್ವತವಲ್ಲ ಎಂಬ ಮಾತು ಬಿಹಾರದಲ್ಲಿ ಸತ್ಯವಾಗಿದೆ. ಬಿಹಾರದ ರಾಜಕೀಯದ ಕೇಂದ್ರಬಿಂದುವಾಗಿದ್ದ, ಕಳೆದ ಎರಡು ದಶಕಗಳಿಂದ ಲಾಲು ಪ್ರಸಾದ್ ಯಾದವ್ ಕುಟುಂಬದ ವಿಳಾಸವಾಗಿದ್ದ ಆ ಐತಿಹಾಸಿಕ ಬಂಗಲೆ ಈಗ ಅವರ ಕೈಜಾರಿದೆ.
ಹೌದು, ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವು ಲಾಲು ಕುಟುಂಬಕ್ಕೆ ಶಾಕ್ ನೀಡಿದ್ದು, ತಕ್ಷಣವೇ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ವಿಧಾನ ಪರಿಷತ್ ವಿಪಕ್ಷ ನಾಯಕಿ ರಾಬ್ರಿ ದೇವಿ ಅವರಿಗೆ ಸರ್ಕಾರ ಹೊಸ ಮನೆಯನ್ನು ಮಂಜೂರು ಮಾಡಿದೆ.
ಪಾಟ್ನಾದ ಪ್ರತಿಷ್ಠಿತ ’10 ಸರ್ಕ್ಯುಲರ್ ರೋಡ್’ನಲ್ಲಿದ್ದ ಐಷಾರಾಮಿ ಬಂಗಲೆಯನ್ನು ಬಿಟ್ಟು, ಹಾರ್ಡಿಂಗ್ ರಸ್ತೆಯಲ್ಲಿರುವ ನಂಬರ್ 39ರ ನಿವಾಸಕ್ಕೆ ಸ್ಥಳಾಂತರಗೊಳ್ಳುವಂತೆ ಕಟ್ಟಡ ನಿರ್ಮಾಣ ಇಲಾಖೆ ಆದೇಶ ಹೊರಡಿಸಿದೆ. ಕಳೆದ 20 ವರ್ಷಗಳಿಂದ ಲಾಲು ಕುಟುಂಬ ಈ ಮನೆಯಲ್ಲಿ ವಾಸವಿತ್ತು.
ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಮಹತ್ವದ ನಿರ್ಧಾರಗಳು ಇದೇ ಮನೆಯ ನಾಲ್ಕು ಗೋಡೆಗಳ ಮಧ್ಯೆ ನಡೆದಿದ್ದವು. ಆದರೆ, ಈ ಬಾರಿ ಬಿಹಾರದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದು ಪ್ರಬಲವಾಗಿರುವುದರಿಂದ, ನಿತೀಶ್ ಕುಮಾರ್ ಸರ್ಕಾರದ ಈ ನಡೆ ರಾಜಕೀಯ ದ್ವೇಷದ ಕ್ರಮ ಎಂದೇ ವಿಶ್ಲೇಷಿಸಲಾಗುತ್ತಿದೆ.
ಜನರ ಮನಸ್ಸಿನಿಂದ ಹೇಗೆ ತೆಗೆಯುತ್ತೀರಿ?: ಸರ್ಕಾರದ ಈ ಆದೇಶಕ್ಕೆ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿರುವ ಅವರು, “ನೀವು ನಮ್ಮನ್ನು ಸರ್ಕಾರಿ ಬಂಗಲೆಯಿಂದ ಹೊರಹಾಕಬಹುದು. ಆದರೆ, ಬಿಹಾರದ ಕೋಟ್ಯಂತರ ಜನರ ಹೃದಯದಲ್ಲಿ ಅಚ್ಚೊತ್ತಿರುವ ಲಾಲು ಪ್ರಸಾದ್ ಯಾದವ್ ಹೆಸರನ್ನು ಅಳಿಸಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ. ಇದು ಕೇವಲ ಮನೆ ಬದಲಾವಣೆಯಲ್ಲ, ಬದಲಾಗಿ ಲಾಲು ಕುಟುಂಬವನ್ನು ಅವಮಾನಿಸುವ ತಂತ್ರ ಎಂಬುದು ಆರ್‌ಜೆಡಿ ಬೆಂಬಲಿಗರ ಆರೋಪ.
ಇದೇನು ಮೊದಲಲ್ಲ!: ಲಾಲು ಕುಟುಂಬಕ್ಕೆ ಬಂಗಲೆ ಸಂಕಷ್ಟ ಎದುರಾಗುತ್ತಿರುವುದು ಇದೇ ಮೊದಲೇನಲ್ಲ. 2015ರಲ್ಲಿ ಮಹಾಘಟಬಂಧನ್ ಸರ್ಕಾರವಿದ್ದಾಗ ತೇಜಸ್ವಿ ಯಾದವ್ ಅವರಿಗೆ ‘ದೇಶರತ್ನ ಮಾರ್ಗ’ದ ಬಂಗಲೆ ನೀಡಲಾಗಿತ್ತು. ಅದನ್ನು ಕೋಟಿಗಟ್ಟಲೆ ಖರ್ಚು ಮಾಡಿ ನವೀಕರಿಸಲಾಗಿತ್ತು.
ಆದರೆ, 2017ರಲ್ಲಿ ನಿತೀಶ್ ಕುಮಾರ್ ಬಿಜೆಪಿ ಜೊತೆ ಕೈಜೋಡಿಸಿದಾಗ, ಆ ಬಂಗಲೆಯನ್ನು ಖಾಲಿ ಮಾಡಿಸಲಾಗಿತ್ತು. ಅಂದು ಸುಶೀಲ್ ಕುಮಾರ್ ಮೋದಿ ಅವರಿಗೆ ಆ ಮನೆ ನೀಡಲಾಗಿತ್ತು. ತೇಜಸ್ವಿ ಕೋರ್ಟ್ ಮೆಟ್ಟಿಲೇರಿದರೂ ಫಲ ಸಿಕ್ಕಿರಲಿಲ್ಲ. ಇದೀಗ ಸ್ವತಃ ಲಾಲು ಅವರೇ ದಶಕಗಳಿಂದ ವಾಸವಿದ್ದ ಮನೆಯನ್ನು ಬಿಡುವ ಪರಿಸ್ಥಿತಿ ಬಂದೊದಗಿದೆ.
ಬಿಹಾರದ ರಾಜಕೀಯ ಪಡಸಾಲೆಯಲ್ಲಿ ಅಧಿಕಾರ ಬದಲಾದಂತೆ ವಿಳಾಸಗಳೂ ಬದಲಾಗುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಿತೀಶ್ ಮತ್ತು ಬಿಜೆಪಿ ಮೈತ್ರಿಕೂಟವು ಆರ್‌ಜೆಡಿ ಕುಟುಂಬಕ್ಕೆ ನೀಡಿದ ಈ ಏಟು ಮುಂದಿನ ದಿನಗಳಲ್ಲಿ ಯಾವ ರೀತಿ ತಿರುಗೇಟಾಗಿ ಬದಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.























