ದೇಶಾದ್ಯಂತ ಸಂಭ್ರಮದ ಸಂವಿಧಾನ ದಿನ ಆಚರಣೆ

0
45
ನವೆಂಬರ್ 26ರಂದು ಸಂಯಕ್ತ ಕರ್ನಾಟಕ ದಿನಪತ್ರಿಕೆಯ ಶಿಕ್ಷಣ ಪುರವಣಿ ಜಾಣರಗುರು ಪತ್ರಿಕೆಯಲ್ಲಿ ದೇಶಾದ್ಯಂತ ಸಂಭ್ರಮದ ಸಂವಿಧಾನ ದಿನ ಆಚರಣೆ ಇರುವ ಹಿನ್ನೆಲೆಯಲ್ಲಿ ಪ್ರಕಟವಾದ ಲೇಖನ

ಶಾಲೆ, ಕಾಲೇಜು, ಕಚೇರಿಗಳಲ್ಲಿ ವಿಶೇಷ ಕಾರ್ಯಕ್ರಮ | `ಸಂವಿಧಾನ @75’ ವಿಶೇಷ ಘೋಷವಾಕ್ಯ

ಬೆಂಗಳೂರು: ಭಾರತೀಯ ಸಂವಿಧಾನವು ಜಾರಿಗೆ ಬಂದು 75 ವರ್ಷ ಪೂರ್ಣಗೊಂಡಿದೆ. ನವೆಂಬರ್ 26ರಂದು ಸಂವಿಧಾನ ದಿನವಾಗಿರುವುದರಿಂದ ರಾಜ್ಯ ಸರ್ಕಾರವು ಸಂವಿಧಾನ ದಿನವನ್ನು ರಾಜ್ಯಾದ್ಯಂತ ಇಂದು ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ಮತ್ತು ಸಾವಿರಾರು ಗ್ರಾಮ ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಂವಿಧಾನದ ಮೌಲ್ಯಗಳನ್ನು ಎಲ್ಲರಿಗೂ ಮುಟ್ಟಿಸುವ ಮತ್ತು ಯುವ ಪೀಳಿಗೆಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಜಾಗೃತಿ ಮೂಡಿಸುವ ಈ ಆಚರಣೆಯು ರಾಜ್ಯದಲ್ಲಿ ಎಲ್ಲಾ ಕಡೆ ನಡೆಯಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ಈ ದಿನವು ಮತ್ತೊಂದು ಮೈಲುಗಲ್ಲಾಗಲಿದೆ.

ಬೆಳಗ್ಗೆ 11 ಗಂಟೆಗೆ ಎಲ್ಲ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆ ಓದುವಿಕೆ ಕಡ್ಡಾಯವಾಗಿದ್ದು, ಶಿಕ್ಷಣ ಇಲಾಖೆ ಶಾಲೆಗಳು ಮತ್ತು ಕಾಲೇಜುಗಳಲ್ಲಿ “ಸಂವಿಧಾನ ಜಾಗೃತಿ ಜಾಥಾ” ಜೊತೆಗೆ ಭಾಷಣ, ಚರ್ಚೆ ಮತ್ತು ಪ್ರಶೋತ್ತರ ಸ್ಪರ್ಧೆಗಳನ್ನು ರೂಪಿಸಿದೆ. ಯುವ ಪೀಳಿಗೆಗೆ ಸಂವಿಧಾನದ ಮಹತ್ವವನ್ನು ಪರಿಚಯಿಸುವುದು ಈ ವರ್ಷದ ವಿಶೇಷ ಗುರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಪೀಠಿಕೆ ಓದಲು ಚಾಲನೆ ನೀಡಲಿದ್ದಾರೆ. ಸಂವಿಧಾನ ರಚನೆಗೆ ಕಾರಣರಾದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಈ ದಿನ, ರಾಜ್ಯದ ಶಾಲೆ-ಕಾಲೇಜುಗಳಿಂದ ಗ್ರಾಮ ಪಂಚಾಯಿತಿ ಮಟ್ಟದವರೆಗೂ ಸಾವಿರಾರು ಕಾರ್ಯಕ್ರಮಗಳ ಮೂಲಕ ಸಂವಿಧಾನ ಮೌಲ್ಯಗಳ ಪ್ರಸಾರ ನಡೆಯಲಿದೆ.

ಸಂವಿಧಾನ ದಿನದ ಮಹತ್ವ: 1949ರ ನವೆಂಬರ್ 26ರಂದು ಸಂವಿಧಾನ ಸಭೆಯು ಡಾ. ಬಿ.ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನವನ್ನು ಅಂಗೀಕರಿಸಿತ್ತು. 2 ವರ್ಷ, 11 ತಿಂಗಳು, 18 ದಿನಗಳ ಕಾಲ ನಡೆದ ಚರ್ಚೆಯ ನಂತರ ರೂಪಿತವಾದ ಈ ಸಂವಿಧಾನವು ಜಗತ್ತಿನ ಅತಿ ಉದ್ದದ ಬರೆಯಲಾದ ಸಂವಿಧಾನವಾಗಿದೆ. ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಸಾಮಾಜಿಕ ನ್ಯಾಯದ ಮೂಲಭೂತ ತತ್ವಗಳನ್ನು ಒಳಗೊಂಡಿರುವ ಈ ದಾಖಲೆಯು `ಭಾರತದ ಆತ್ಮ’ ಎಂದೇ ಬಿಂಬಿತವಾಗಿದೆ.

ಸಂವಿಧಾನ @75 : ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. 1949ರ ನವೆಂಬರ್ 26ರಂದು ಸಂವಿಧಾನ ಸಭೆಯು ಭಾರತೀಯ ಸಂವಿಧಾನವನ್ನು ಅಂಗೀಕರಿಸಿತ್ತು ಮತ್ತು 1950ರ ಜನವರಿ 26ರಂದು ಅದು ಜಾರಿಗೆ ಬಂದಿತ್ತು. ಈ ಬಾರಿ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು “ಸಂವಿಧಾನ @75” ಎಂಬ ವಿಶೇಷ ಘೋಷವಾಕ್ಯದೊಂದಿಗೆ ದೇಶಾದ್ಯಂತ ವ್ಯಾಪಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಹೀಗಾಗಿ ರಾಜ್ಯದಲ್ಲೂ ಅತ್ಯಂತ ಮಹತ್ವವಾಗಿ ಆಚರಣೆ ಮಾಡಲು ಸರ್ಕಾರ ಆದೇಶ ನೀಡಿದೆ.

ರಾಜ್ಯದಲ್ಲಿ ಇಂದು ನಡೆಯುವ ಕಾರ್ಯಕ್ರಮಗಳು
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 11 ಗಂಟೆಗೆ ಸಂವಿಧಾನದ ಪೀಠಿಕೆಯನ್ನು ಓದುವುದು ಕಡ್ಡಾಯ
ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪ್ರತಿಗಳನ್ನು ಹಿಡಿದುಕೊಂಡು “ಸಂವಿಧಾನ ಜಾಗೃತಿ ಜಾಥಾ” ನಡೆಸುವುದು.
ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂವಿಧಾನದ ಮೌಲ್ಯಗಳ ಕುರಿತು ಭಾಷಣ, ಚರ್ಚೆ, ಪ್ರಶ್ನೋತ್ತರ ಸ್ಪರ್ಧೆಗಳು
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮ
ತಾಲ್ಲೂಕು ಕೇಂದ್ರಗಳಲ್ಲಿ ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಸಾಮೂಹಿಕ ಸಂವಿಧಾನ ಪಠಣ ಕಾರ್ಯಕ್ರಮ
ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ

ಹೇಗಿತ್ತು ಸಂವಿಧಾನದ ರಚನೆಯ ಹಾದಿ?:

1946ರ ಡಿಸೆಂಬರ್ 6ರಂದು ಸಂವಿಧಾನ ಸಭೆಯ ರಚನೆ.
1946 ಡಿಸೆಂಬರ್ 9ರಂದು ಮೊದಲ ಸಭೆ ಸಂವಿಧಾನ ಸಭಾಂಗಣದಲ್ಲಿ ಜರುಗಿತು.
ಭಾಷಣ ಮಾಡಿದ ಮೊದಲ ವ್ಯಕ್ತಿ ಜೆ. ಬಿ. ಕೃಪಲಾನಿ. ಸಚ್ಚಿದಾನಂದ ಸಿನ್ಹಾ ತಾತ್ಕಾಲಿಕ ಅಧ್ಯಕ್ಷರಾದರು.
ಪ್ರತ್ಯೇಕ ರಾಜ್ಯವನ್ನು ಒತ್ತಾಯಿಸಿ, ಮುಸ್ಲಿಂ ಲೀಗ್ ಸಭೆಯನ್ನು ಬಹಿಷ್ಕರಿಸಿತು.
1946ರ ಡಿಸೆಂಬರ್ 11ರಂದು ಅಸೆಂಬ್ಲಿ ರಾಜೇಂದ್ರ ಪ್ರಸಾದ್ ಅವರನ್ನು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ, ಎಚ್. ಸಿ. ಮುಖರ್ಜಿ ಅವರನ್ನು ಉಪಾಧ್ಯಕ್ಷರಾಗಿ ಮತ್ತು ಬಿ. ಎನ್. ರಾವ್ ಅವರನ್ನು ಸಾಂವಿಧಾನಿಕ ಕಾನೂನು ಸಲಹೆಗಾರರಾಗಿ ನೇಮಿಸಿತು.
ಆರಂಭದಲ್ಲಿ ಒಟ್ಟು 389 ಸದಸ್ಯರು ಇದ್ದರು, ಅದು ವಿಭಜನೆಯ ನಂತರ 299ಕ್ಕೆ ಇಳಿದಿದೆ. 389 ಸದಸ್ಯರಲ್ಲಿ 292 ಸರ್ಕಾರಿ ಪ್ರಾಂತ್ಯಗಳಿಂದ, ನಾಲ್ಕು ಮುಖ್ಯ ಆಯುಕ್ತ ಪ್ರಾಂತ್ಯಗಳಿಂದ ಮತ್ತು 93 ರಾಜಪ್ರಭುತ್ವ ರಾಜ್ಯಗಳಿಂದ ಬಂದವರಾಗಿದ್ದರು.
1946ರ ಡಿಸೆಂಬರ್ 13ರಂದು ಜವಾಹರಲಾಲ ನೆಹರೂ ಅವರು `ಆಬ್ಜೆಕ್ಟಿವ್ ರೆಸಲ್ಯೂಶನ್’ ಅನ್ನು ಮಂಡಿಸಿದರು. ಸಂವಿಧಾನದ ಆಧಾರವಾಗಿರುವ ತತ್ವಗಳನ್ನು ತಿಳಿಸಿದರು. ಇದು ನಂತರ ಸಂವಿಧಾನದ ಮುನ್ನುಡಿಯಾಯಿತು.
1947 ಜನವರಿ 22ರಂದು ವಸ್ತುನಿಷ್ಠ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
1947ರ ಜುಲೈ 22ರಂದು ರಾಷ್ಟಿçÃಯ ಧ್ವಜವನ್ನು ಅಳವಡಿಸಲಾಯಿತು.
1947ರ ಆಗಸ್ಟ್ 15ರಂದು ಸ್ವಾತಂತ್ರö್ಯ ದೊರೆಯಿತು.
1947 ಆಗಸ್ಟ್ 29ರಂದು ಬಿ. ಆರ್. ಅಂಬೇಡ್ಕರ್ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಸಮಿತಿಯ ಇತರ 6 ಸದಸ್ಯರು ಮುನ್ಶಿ, ಮುಹಮ್ಮದ್ ಸಾದುಲ್ಲಾ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್. ಗೋಪಾಲಸ್ವಾಮಿ ಅಯ್ಯಂಗಾರ್, ಖೈತಾನ್ ಮತ್ತು ಮಿಟ್ಟರ್.
1948ರ ಜುಲೈ 16ರಂದು ಹರೇಂದ್ರ ಕೂಮರ್ ಮುಖರ್ಜಿ ಅವರೊಂದಿಗೆ ವಿ.ಟಿ.ಕೃಷ್ಣಮಾಚಾರಿ ಅವರು ಸಂವಿಧಾನ ಸಭೆಯ ಎರಡನೇ ಉಪಾಧ್ಯಕ್ಷರಾಗಿ ಆಯ್ಕೆಯಾದರು.
1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ವಿಧಾನಸಭೆ ಅಂಗೀಕರಿಸಿತು.
1950ರ ಜನವರಿ 24ರಂದು ಸಂವಿಧಾನ ಸಭೆಯ ಕೊನೆಯ ಸಭೆ. ಸಂವಿಧಾನಕ್ಕೆ ಸಹಿ ಹಾಕಲಾಯಿತು ಮತ್ತು ಅಂಗೀಕರಿಸಲಾಯಿತು. (395 ವಿಧಿಗಳು, 8 ಅನುಸೂಚಿಗಳು, 22 ಭಾಗಗಳೊಂದಿಗೆ)
1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದಿತು. (ಪ್ರಕ್ರಿಯೆಯು 2 ವರ್ಷಗಳು, 11 ತಿಂಗಳುಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು)

ಶಾಲಾ ಕಾಲೇಜುಗಳಿಗೆ ಮಹತ್ವದ ಸೂಚನೆ: ಶಿಕ್ಷಣ ಇಲಾಖೆಯು ಪ್ರತಿ ಶಾಲೆಕಾಲೇಜುಗಳಲ್ಲಿ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸುವಂತೆ ಮತ್ತು ವಿದ್ಯಾರ್ಥಿಗಳಿಗೆ ಅದರ ಮಹತ್ವವನ್ನು ವಿವರಿಸುವಂತೆ ಸೂಚಿಸಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸಿನ ಸಂವಿಧಾನವನ್ನು ಯುವ ಪೀಳಿಗೆಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪ್ರತಿಗಳನ್ನು ಹಿಡಿದುಕೊಂಡು ಸಂವಿಧಾನ ಜಾಗೃತಿ ಜಾಥಾ ನಡೆಸಬೇಕು ಎಂದು ತಾಕೀತು ಮಾಡಲಾಗಿದೆ.

Previous articleಧ್ವಜದಲ್ಲಿದೆ ಸೂರ್ಯ, ಓಂ, ಕೋವಿದಾರ ವೃಕ್ಷ

LEAVE A REPLY

Please enter your comment!
Please enter your name here