ಉಪರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಅಚ್ಚರಿ ಅಭ್ಯರ್ಥಿ ಆಯ್ಕೆ ಹೊಣೆ ಇಬ್ಬರ ಹೆಗಲಿಗೆ

0
105

ನವದೆಹಲಿ: ಜಗದೀಪ್ ಧನಕರ್ ರಾಜೀನಾಮೆ ಬಳಿಕ ಭಾರತದ ಉಪರಾಷ್ಟ್ರಪತಿ ಹುದ್ದೆ ತೆರವಾಗಿದೆ. ಕೇಂದ್ರ ಚುನಾವಣಾ ಆಯೋಗ ನೂತನ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಆಗಸ್ಟ್ 7ರಂದು ಅಧಿಸೂಚನೆ ಪ್ರಕಟವಾಗಿದೆ. ಆದರೆ ಅಭ್ಯರ್ಥಿಗಳು ಯಾರು? ಎಂಬುದು ಇನ್ನೂ ಕುತೂಹಲ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಉಪರಾಷ್ಟ್ರಪತಿ ಚುನಾವಣೆಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಆಗಸ್ಟ್ 21 ಕೊನೆಯ ದಿನ. ಸೆಪ್ಟೆಂಬರ್ 9ರಂದು ಮತದಾನ ನಡೆಯಲಿದ್ದು, ಫಲಿತಾಂಶವೂ ಅಂದೇ ಪ್ರಕಟ.

ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂಬದು ಸತ್ಯ. ಹಲವು ಹೆಸರುಗಳು ಈಗಾಗಲೇ ಈ ಹುದ್ದೆಗೆ ಕೇಳಿ ಬರುತ್ತಿದೆ.

ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಉಪರಾಷ್ಟ್ರಪತಿ ಚುನಾವಣೆಗೆ ಮೈತ್ರಿಕೂಟದ ಅಭ್ಯರ್ಥಿ ಆಯ್ಕೆ ಮಾಡುವ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾಗೆ ನೀಡಲಾಗಿದೆ.

4 ಬಾರಿ ಅವಿರೋಧ ಆಯ್ಕೆ: ಇದುವರೆಗೂ ಭಾರತದ ಉಪರಾಷ್ಟ್ರಪತಿ ಆಯ್ಕೆಗೆ ನಡೆದ ಚುನಾವಣೆಗಳಲ್ಲಿ ಕೇವಲ 4 ಮಾತ್ರ ಅವಿರೋಧ ಆಯ್ಕೆ ನಡೆದಿದೆ. 2007ರಲ್ಲಿ ನಡೆದ ಚುನಾವಣೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿತ್ತು. ಯುಪಿಎ ಅಭ್ಯರ್ಥಿಯಾಗಿ ಎಂ. ಹಮೀದ್ ಅನ್ಸಾರಿ, ಎನ್‌ಡಿಎ ಅಭ್ಯರ್ಥಿಯಾಗಿ ನಜ್ಮಾ ಹೆಪ್ತುಲ್ಲಾ ಮತ್ತು ತೃತೀಯ ರಂಗದ ಅಭ್ಯರ್ಥಿಯಾಗಿ ರಶೀದ್ ಮಸೂದ್ ಕಣದಲ್ಲಿದ್ದರು. ಎಂ. ಹಮೀದ್ ಅನ್ಸಾರಿ ಗೆಲುವು ಸಾಧಿಸಿದ್ದರು.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ, ರಾಜ್ಯಸಭೆಯ ಸದಸ್ಯರು ಮತದಾನ ಮಾಡಲಿದ್ದಾರೆ. 542 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸದಸ್ಯರ ಬೆಂಬಲವನ್ನು ಹೊಂದಿದೆ. ಇಂಡಿಯಾ ಒಕ್ಕೂಟ 234 ಸದಸ್ಯರ ಬಲ ಹೊಂದಿದೆ. ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಯಾರಾದರೂ ಸಹ ಆಯ್ಕೆ ಆಗುವುದು ಅಂಕಿಸಂಖ್ಯೆಗಳ ಲೆಕ್ಕದಲ್ಲಿ ಖಚಿತವಾಗಿದೆ.

ಈ ಬಾರಿಯ ಚುನಾವಣೆಗೆ ಬಿಹಾರದ ಹಾಲಿ ಸಿಎಂ ನಿತೀಶ್ ಕುಮಾರ್, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ ಸೇರಿದಂತೆ ಹಲವು ನಾಯಕರ ಹೆಸರು ಕೇಳಿ ಬರುತ್ತಿದೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಸಹ ವರ್ಷಾಂತ್ಯದಲ್ಲಿ ಇರುವ ಕಾರಣ ಎನ್‌ಡಿಎ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆದಿದೆ.

ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಕೆ ಮಾಡಲು 21 ಆಗಸ್ಟ್ ಕೊನೆಯ ದಿನ. ಎನ್‌ಡಿಎ ಮೈತ್ರಿಕೂಟ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾಗೆ ಸಂಪೂರ್ಣ ಹೊಣೆ ನೀಡಿರುವ ಕಾರಣ ಉಭಯ ನಾಯಕರು ಸೇರಿ ಅಭ್ಯರ್ಥಿ ಅಂತಿಮಗೊಳಿಸಲಿದ್ದಾರೆ.

ಚುನಾವಣೆಗೆ ಎನ್‌ಡಿಎ, ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಆಗಸ್ಟ್ 22ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಯಲಿದೆ. ಆಗಸ್ಟ್ 25 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ. ಮತದಾನ ಅಗತ್ಯವಿದ್ದರೆ ಸೆಪ್ಟೆಂಬರ್ 9ರ ಮಂಗಳವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ನಡೆಯಲಿದೆ. ಅಂದು ಸಂಜೆಯೇ ಫಲಿತಾಂಶ ಘೋಷಣೆಯಾಗಲಿದೆ.

Previous articleಚುನಾವಣಾ ಆಯೋಗ ಬಿಜೆಪಿಯ ಬ್ರ್ಯಾಂಚ್‌ ಆಫೀಸ್‌
Next articleಮತ ಕಳ್ಳತನ: ಅಕ್ರಮ ಬಯಲಿಗೆ ಎಳೆಯಲು ಕರ್ನಾಟಕದಲ್ಲಿ ಮುನ್ನುಡಿ

LEAVE A REPLY

Please enter your comment!
Please enter your name here