ಪ್ರವಾಸಿಗರೇ ಗಮನಿಸಿ: ಬನ್ನೇರುಘಟ್ಟ ಉದ್ಯಾನವನ ಪ್ರವೇಶ ಶುಲ್ಕ ಏರಿಕೆ

0
80

ಬೆಂಗಳೂರು: ಬೆಂಗಳೂರು ನಗರದ ಸಮೀಪದಲ್ಲಿರುವ, ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸ್ಥಳ ಬನ್ನೇರುಘಟ್ಟ ಜೈವಿಕ ಉದ್ಯಾನವನ. ಆದರೆ ಇನ್ನು ಮುಂದೆ ಇಲ್ಲಿಗೆ ಭೇಟಿ ನೀಡುವಾಗ ಜೇಬು ಮುಟ್ಟಿ ನೋಡಿಕೊಳ್ಳಿ. ಉದ್ಯಾನವನದ ಪ್ರವೇಶ ಶುಲ್ಕವನ್ನು ಏರಿಕೆ ಮಾಡಲಾಗಿದೆ.

ಬನ್ನೇರುಘಟ್ಟ ಉದ್ಯಾನದ ಪ್ರವೇಶ ಶುಲ್ಕವನ್ನು ಶೇ 20ರಷ್ಟು ಏರಿಕೆ ಮಾಡಲಾಗಿದೆ. ಹೊಸ ಶುಲ್ಕ ಆಗಸ್ಟ್ 1, 2025ರಿಂದ ಜಾರಿಗೆ ಬರಲಿದೆ. ಅಗತ್ಯ ವಸ್ತುಗಳ ದರ ಏರಿಕೆ ಬಳಿಕ ಈಗ ಪ್ರವಾಸ ಹೋದರೆ ಸಹ ದರ ಹೆಚ್ಚಳದ ಬಿಸಿ ಜನರಿಗೆ ತಟ್ಟಲಿದೆ.

ಪ್ರವೇಶ ಶುಲ್ಕ ಹೆಚ್ಚಳಕ್ಕೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ನೀಡಿದೆ. ದರ ಹೆಚ್ಚಳದ ಕುರಿತು ಅಧಿಕೃತ ಆದೇಶ ಇನ್ನಷ್ಟು ಪ್ರಕಟವಾಗಬೇಕಿದೆ. ಪ್ರಾಣಿಗಳನ್ನು ನೋಡಲು ಕುಟುಂಬ ಸಮೇತ ಬನ್ನೇರುಘಟ್ಟಕ್ಕೆ ತೆರಳುವ ಪ್ರವಾಸಿಗರು ಹೊಸ ಶುಲ್ಕದ ಕುರಿತು ಮಾಹಿತಿ ತಿಳಿದಿರುವುದು ಉತ್ತಮ.

ಹೊಸ ದರ ಪಟ್ಟಿ: ಸದ್ಯ ಬನ್ನೇರುಘಟ್ಟದಲ್ಲಿ ವಯಸ್ಕರಿಗೆ ಪ್ರವೇಶ ಶುಲ್ಕ 100 ರೂ. ಇದೆ. ಈ ಶುಲ್ಕ 120 ರೂ.ಗೆ ಹೆಚ್ಚಳವಾಗಲಿದೆ. ಮಕ್ಕಳಿಗೆ 50 ರೂ.ದರವಿದೆ. ಇದು 60 ರೂ.ಗಳಿಗೆ ಏರಿಕೆಯಾಗಲಿದೆ. ಹಿರಿಯ ನಾಗರಿಕರಿಗೆ ಪ್ರವೇಶ ಶುಲ್ಕ 60 ರೂ. ಇದ್ದು, ಇದು 70 ರೂ.ಗಳಿಗೆ ಏರಿಕೆಯಾಗಲಿದೆ.

ವಾರದ ದಿನಗಳಲ್ಲಿ ಸಫಾರಿ ಕಾಂಬೋ ಪ್ಯಾಕ್ ದರ ಹೆಚ್ಚಳವಾಗಿದೆ. ವಾರದ ದಿನದಲ್ಲಿ 350 ರೂ. ಇರುವ ದರ 370 ರೂ. ಆಗಿದೆ. ವಾರಾಂತ್ಯದಲ್ಲಿ 400 ರೂ. ಇರುವ ದರ ಈಗ 420 ರೂ.ಗಳಿಗೆ ಹೆಚ್ಚಳವಾಗಲಿದೆ.

ಬನ್ನೇರುಘಟ್ಟ ಉದ್ಯಾನವನಕ್ಕೆ ಪ್ರವಾಸಿಗರ ಟಿಕೆಟ್‌ ಆದಾಯದ ಪ್ರಮುಖ ಮೂಲವಾಗಿದೆ. ಪ್ರಾಣಿಗಳ ಆಹಾರ ವೆಚ್ಚ, ಸಿಬ್ಬಂದಿ ವೇತನ ಎಲ್ಲವೂ ಏರಿಕೆಯಾಗಿದೆ. ಅಲ್ಲದೇ 5 ವರ್ಷಗಳಿಂದ ಪ್ರವೇಶ ಶುಲ್ಕ ಏರಿಕೆ ಮಾಡಿಲ್ಲ. ಆದ್ದರಿಂದ ಈಗ ಪ್ರವೇಶ ಶುಲ್ಕ ಏರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಪ್ರವಾಸಿಗರು ಪ್ರವೇಶ ಶುಲ್ಕ ಏರಿಕೆ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಉದ್ಯಾನದ ಅಭಿವೃದ್ಧಿಗೆ ಸರ್ಕಾರದ ನೆರವು ಪಡೆಯಬೇಕು ಅದನ್ನು ಬಿಟ್ಟು ಪ್ರವಾಸಿಗರ ಜೇಬಿಗೆ ಕತ್ತರಿ ಹಾಕುವುದು ಸರಿಯಲ್ಲ ಎಂದು ಜನರು ಹೇಳಿದ್ದಾರೆ.

ಬನ್ನೇರುಘಟ್ಟ ಉದ್ಯಾನವನ ಸುಮಾರು 260.51 ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದೆ. ಸಿಂಹ, ಹುಲಿ ಮತ್ತು ಚಿರತೆ ಸಫಾರಿ ಇಲ್ಲಿ ಲಭ್ಯವಿದೆ. ಹುಲಿ, ಸಿಂಹ ಸಫಾರಿ ವೀಕ್ಷಣೆಗೆ ಅತ್ಯಧಿಕ ಜನರು ಆಗಮಿಸುತ್ತಾರೆ. ಸಫಾರಿ ಮಾತ್ರವಲ್ಲ ಇಲ್ಲಿನ ಪ್ರಕೃತಿ ಸೌಂದರ್ಯವನ್ ಸವಿಯಲು ನೂರಾರು ಜನರು ಬರುತ್ತಾರೆ.

ಬನ್ನೇರುಘಟ್ಟದಲ್ಲಿ ಹಾವು ಉದ್ಯಾನವನ, ಚಿಟ್ಟೆ ಉದ್ಯಾನವನ, ಮೃಗಾಲಯ ಮತ್ತು ಮಕ್ಕಳಿಗಾಗಿ ಪ್ರಕೃತಿ ಶಿಬಿರವಿದೆ. ಉದ್ಯಾನವನದ ಪಕ್ಕದಲ್ಲಿ ಬನ್ನೇರುಘಟ್ಟ ನೇಚರ್ ಕ್ಯಾಂಪ್ ಇದೆ, ಇದು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳ ಆಡಳಿತಕ್ಕೆ ಒಳಪಟ್ಟಿದೆ .

Previous articleಸಿಗಂದೂರು ಬಿಡ್ಜ್ ಉದ್ಘಾಟನೆ…ಬಿಜೆಪಿ V/S ಕಾಂಗ್ರೆಸ್‌ ರಾಜಕೀಯ
Next articleಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ ಸರೋಜಾದೇವಿ ನಡೆದುಬಂದ ದಾರಿ