ಬೆಂಗಳೂರು: ‘ಶಕ್ತಿ’ ಗ್ಯಾರಂಟಿ ಯೋಜನೆ ಮೂಲಕ ಮಹಿಳೆಯರಿಗೆ ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ನೀಡಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹೊಸ ಘೋಷಣೆಯೊಂದನ್ನು ಮಾಡಿದೆ. ಇದು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಕೈಗೊಂಡಿರುವ ಯೋಜನೆಯಾಗಿದೆ.
ಈ ಕುರಿತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ಉಜ್ವಲಕ್ಕೆ ಸರ್ಕಾರ ಬದ್ಧ’ ಎಂದು ಹೇಳಿದ್ದಾರೆ.
ಡಿ. ಕೆ. ಶಿವಕುಮಾರ್, ‘ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ’ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿಗಳು ಡಿಸೈನ್ ಒಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಕೆಪಿಎಸ್ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಉಚಿತ ಸಾರಿಗೆ ಭಾಗ್ಯ ಎಂದು ಮಾಹಿತಿ ನೀಡಲಾಗಿದೆ.
- ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ, ಗುಣಮಟ್ಟ ಹೆಚ್ಚಿಸಲು ಸರ್ಕಾರದಿಂದ ಮಹತ್ವ ನಿರ್ಧಾರ
- ಕೆಪಿಎಸ್ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅನುಕೂಲ ಕಲ್ಪಿಸಲು ಉಚಿತ ಬಸ್ ವ್ಯವಸ್ಥೆ
- ಎಲ್‌ಕೆಜಿಯಿಂದ ಪಿಯುಸಿ ತನಕ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆಯ ಸದುಪಯೋಗ
- ಬಡವರ ಮಕ್ಕಳಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಲ ನೀಡಲು ಸರ್ಕಾರದಿಂದ ಮಹತ್ವದ ಚಿಂತನೆ
- ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರದ ದಿಟ್ಟ ಹೆಜ್ಜೆ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಮಹಿಳೆಯರ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆ ಕುರಿತು ವಿರೋಧ ಪಕ್ಷಗಳು ಹಲವು ಆರೋಪಗಳನ್ನು ಮಾಡುತ್ತಿವೆ. ಯೋಜನೆಯಿಂದ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂದು ದೂರಿವೆ. ಶಕ್ತಿ ಯೋಜನೆಯಡಿ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಸೌಲಭ್ಯವಿದೆ.
ಈ ಯೋಜನೆಯನ್ನು ಯಾವ ಮಾದರಿಯಲ್ಲಿ ಜಾರಿಗೊಳಿಸಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಆದೇಶವನ್ನು ಹೊರಡಿಸಿಲ್ಲ. ಕೆಪಿಸಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆಯೇ? ಅಥವ ಐಡಿ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣ ಮಾಡಲು ಅನುಮತಿ ನೀಡಲಾಗುತ್ತದೆಯೇ? ಎಂಬ ಕುರಿತು ಸರ್ಕಾರ ವಿವರವನ್ನು ಪ್ರಕಟಿಸಬೇಕಿದೆ.
ಕರ್ನಾಟಕ ಕಾಂಗ್ರೆಸ್ ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಗಳಲ್ಲಿ ‘ಶಕ್ತಿ’ ಯೋಜನೆ ಒಂದು. ಶೂನ್ಯ ದರದ ಟಿಕೆಟ್ ಪಡೆದು ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡುವ ಯೋಜನೆ ಇದಾಗಿದೆ. ಇದರಿಂದಾಗಿ ಸಾರಿಗೆ ನಿಗಮಗಳಿಗೆ ಆದಾಯ ಹರಿದುಬರುತ್ತಿದೆ, ಸರ್ಕಾರಿ ಬಸ್‌ಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗುತ್ತಿದೆ.
ಸ್ಕೂಲ್ ರೌಂಡ್ ಕಡ್ಡಾಯ: ‘ಶಕ್ತಿ’ ಯೋಜನೆ ಜಾರಿ ಬಳಿಕ ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ತೆರಳುವ ಬೆಳಗ್ಗೆಯ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿತ್ತು. ಆದ್ದರಿಂದ ಗ್ರಾಮೀಣ ಸಾರಿಗೆ ವ್ಯವಸ್ಥೆ ಮೇಲೆ ಒತ್ತಡ ಉಂಟಾಗುವುದನ್ನು ಗಮನಿಸಿ ‘ಸ್ಕೂಲ್ ರೌಂಡ್’ ಕಡ್ಡಾಯಗೊಳಿಸಲಾಗಿತ್ತು.
‘ಶಕ್ತಿ’ ಯೋಜನೆಯನ್ನು ಕರ್ನಾಟಕ ಸರ್ಕಾರ ದುಡಿಯುವ ಬಡವರ್ಗದ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಲು ಜಾರಿಗೊಳಿಸಿದೆ. ಯೋಜನೆಯು ದುಡಿಯುವ ಮಹಿಳೆಯರಿಗೆ ಇನ್ನಷ್ಟು ಶಕ್ತಿಯನ್ನು ತುಂಬುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ನಗರಕ್ಕೆ ಉದ್ಯೋಗಕ್ಕಾಗಿ ಹೋಗುವ ಸಂದರ್ಭದಲ್ಲಿ ಅವರ ಸಾರಿಗೆ ವ್ಯವಸ್ಥೆಯ ಹೊರೆಯನ್ನು ಯೋಜನೆ ಕಡಿಮೆ ಮಾಡಿದೆ.