ನವದೆಹಲಿ: ಲೋಕಸಭೆ ಅಧಿವೇಶನದಲ್ಲಿ ಆಪರೇಷನ್ ಸಿಂಧೂರ್ ಬಗೆಗಿನ ಚರ್ಚೆ ವೇಳೆ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರ ಹಾಶಿಮ್ ಮೂಸಾ ಸೇರಿ ಮೂವರು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಆಪರೇಷನ್ ಸಿಂಧೂರ್ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಸಂಜೆ 6 ಗಂಟೆಗೆ ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದಕ್ಕೂ ಮೊದಲು ಆಪರೇಷನ್ ಸಿಂಧೂರದ ಕುರಿತಾದ ವಿಪಕ್ಷಗಳ ಟೀಕೆಗೆ ಲೋಕಸಭಾ ಕಲಾಪದಲ್ಲಿ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ಹೇಳಿದ್ದೇನು?; ಚರ್ಚೆಯನ್ನು ಮುಂದುವರಿಸಿರುವ ಅಮಿತ್ ಶಾ, “ಆಪರೇಷನ್ ಮಹದೇವ್ ಕಾರ್ಯಾಚರಣೆ ವೇಳೆ ಶ್ರೀನಗರದ ಡಚಿಗಮ್ ಎನ್‌ಕೌಂಟರ್‌ನಲ್ಲಿ ಉಗ್ರ ಹಾಶಿಮ್ ಮೂಸಾ ಮತ್ತು ಇತರ ಇಬ್ಬರು ಉಗ್ರರನ್ನ ಕೊಲ್ಲಲಾಗಿದೆ. ಉಳಿದಿಬ್ಬರು ಕಳೆದ ವರ್ಷ ಸೋನಾಮಾರ್ಗ್ ಸುರಂಗ ದಾಳಿಯಲ್ಲಿ ಭಾಗಿಯಾಗಿದ್ದ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂದು ಗುರುತಿಸಲಾಗಿದೆ” ಎಂದರು.
“ಸೋಮವಾರ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಸುಲೇಮಾನ್ ಲಷ್ಕರ್‌ನ ಉನ್ನತ ಕಮಾಂಡರ್ ಆಗಿದ್ದ. 26 ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯಲ್ಲಿ ಮೂವರು ಭಾಗಿಯಾಗಿದ್ದರು” ಎಂದು ಅಮಿತ್ ಶಾ ಹೇಳಿದರು.
ಇನ್ನು ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದ ಉಗ್ರರು ಪಾಕಿಸ್ತಾನದವರು ಎಂಬುದಕ್ಕೆ ನಿಮ್ಮ ಬಳಿ ಪುರಾವೆ ಏನಿದೆ? ಎಂಬ ವಿಪಕ್ಷಗಳ ಪ್ರಶ್ನೆಗೆ ಸಾಕ್ಷಿ ಸಮೇತ ಉತ್ತರಿಸಿದ ಶಾ ಪಹಲ್ಗಾಮ್‌ನಲ್ಲಿ ಬಳಸಿದ್ದ ರೈಫಲ್‌ಗಳು, ಹತ್ಯೆಯಾದ ಉಗ್ರನ ಬಳಿ ಸಿಕ್ಕಿದ್ದ ರೈಫಲ್ ಒಂದೇ ಅಂತ ಖಚಿತಪಡಿಸಿದ್ದೇವೆ. ನಿನ್ನೆಯೇ ಚಂಡೀಗಢಕ್ಕೆ ವಿಮಾನದಲ್ಲಿ ರೈಫಲ್ ಕಳಿಸಿ ದೃಢಪಡಿಸಿದ್ದೇವೆ. ಪಹಲ್ಗಾಮ್ ದಾಳಿಯಲ್ಲಿ ಸಿಕ್ಕಿದ ಗುಂಡು ಮತ್ತು ನಿನ್ನೆ ಚಂಡೀಗಢ ಎಫ್‌ಎಸ್‌ಎಲ್‌ನಲ್ಲಿ ರೈಫಲ್ ಬಳಸಿ ಅದರಿಂದಲೂ ಗುಂಡು ಹಾರಿಸಿ ಖಚಿತಪಡಿಸಿದ್ದೇವೆ. ಈ ಮೂರೂ ರೈಫಲ್‌ಗಳನ್ನ ಬಳಸಿಯೇ ಪಹಲ್ಗಾಮ್‌ನಲ್ಲಿ ದಾಳಿ ಮಾಡಿರೋದು ಖಚಿತವಾಗಿದೆ. ಸತ್ತ ಇಬ್ಬರು ಉಗ್ರರ ಬಳಿ ಪಾಕಿಸ್ತಾನದ ವೋಟರ್ ಐಡಿ ಇತ್ತು. ಅಲ್ಲದೇ ಸ್ಥಳದಲ್ಲಿ ಸಿಕ್ಕಿದ ಚಾಕ್ಲೆಟ್ ಪಾಕಿಸ್ತಾನದ್ದೇ ಎಂದಿದ್ದಾರೆ
“ಮಾಜಿ ಸಚಿವ ಪಿ.ಚಿದಂಬರಂ ಪ್ರಶ್ನೆಗಳಿಂದ ನೋವಾಗುತ್ತಿದೆ. ಇಡೀ ಪ್ರಪಂಚದ ಮುಂದೆ ಈ ದೇಶದ ಮಾಜಿ ಗೃಹ ಸಚಿವರು ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡುತ್ತಿದ್ದಾರೆ” ಎಂದು ಅಮಿತ್ ಶಾ ಹೇಳಿದರು.
“ಉಗ್ರರು ಪಾಕಿಸ್ತಾನಕ್ಕೆ ವಾಪಸ್ ಆಗಲು ನಾವು ಅವಕಾಶ ಕೊಡಲಿಲ್ಲ. ಪಾತಕಿಗಳನ್ನು ಇಲ್ಲಿಯೇ ಕೊಲ್ಲಲಾಗಿದೆ. ಭಾರತವು ಆಪರೇಷನ್ ಸಿಂಧೂರ್ ಮೂಲಕ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ನಿಖರವಾದ ದಾಳಿಗಳನ್ನು ನಡೆಸಿ, ಹಲವಾರು ಭಯೋತ್ಪಾದಕರನ್ನು ಕೊಂದಿದ್ದು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಯಶಸ್ವಿಯಾಗಿ ನಾಶಪಡಿಸಿದೆ” ಎಂದು ವಿವರಿಸಿದರು.