ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ಕೊಲೆ ನಡೆದು ೨೪ ಗಂಟೆಯೊಳಗೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದ ಮಹಮದ್ ನಿಹಾಲ್, ರೋಷನ್ ಖಾನ್, ಮಹಮದ್ ಅಬು ತಲಹಾ ಬಂಧಿತ ಆರೋಪಿಗಳು. ಇನ್ನೊಬ್ಬ ಆರೋಪಿ ಮಹಮದ್ ಸಮೀರ್ ತಲೆಮರಿಸಿಕೊಂಡಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಹಳೆಯ ದ್ವೇಷದ ಹಿನ್ನೆಲೆ ಹಾಗೂ ಎ೧ ಆರೋಪಿ ಮಹಮದ್ ನಿಹಾಲ್ ಸಹೋದರಿಯನ್ನು ಚುಡಾಯಿಸಿದ್ದ ಎಂಬ ಕಾರಣಕ್ಕೆ ಏ.೧ರಂದು ರಾತ್ರಿ ನಲ್ಲೂರಿನ ಸಂತೆ ಬೀದಿಯಲ್ಲಿ ಮಹಮದ್ ಜಾವೀದ್‌ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿತ್ತು.
ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ್, ಮಂಜುನಾಥ್, ಚನ್ನಗಿರಿ ಉಪ ವಿಭಾಗದ ಎಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಚನ್ನಗಿರಿ ಠಾಣೆ ಸಿಪಿಐ ರವೀಶ್ ನೇತೃತ್ವದಲ್ಲಿ ಠಾಣಾಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು.
ಏ.೨ರಂದು ಬೆಳಗಿನ ಜಾವ ಸಂತೇಬೆನ್ನೂರು ಬಸ್ ನಿಲ್ದಾಣದಲ್ಲಿ ಎ೧ ಆರೋಪಿ ಮಹಮದ್ ನಿಹಾಲ್, ಎ೨ ಆರೋಪಿ ರೋಷನ್ ಖಾನ್ ಬಂಧಿಸಿದ್ದು, ಏ.೫ರಂದು ಎ೩ ಆರೋಪಿ ಮಹಮದ್ ಅಬು ತಲಹಾನನ್ನು ಬಂಧಿಸಿದ್ದಾರೆ.