ಹಿರಿಯರ ಹೊಣೆಹೊರಲು ಏಕಗವಾಕ್ಷಿ ಇಲಾಖೆ ಅಗತ್ಯ

ಈಗ ಸಮಾಜದಲ್ಲಿ ಹಿರಿಯರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಸಮಾಜದ ಸ್ವಾತ್ತ್ಯ ಉತ್ತಮಗೊಂಡಂತೆ ಜೀವಿಸುವವರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಕರ್ನಾಟಕದಲ್ಲಿ ಪುರುಷರು ಸರಾಸರಿ ೬೯ ವರ್ಷ ಬದುಕುತ್ತಾರೆ. ಮಹಿಳೆಯರು ೭೩ ವರ್ಷ ಬದುಕುವುದು ಸಾಮಾನ್ಯ ಸಂಗತಿಯಾಗಿದೆ. ಕೇರಳದಲ್ಲಿ ಪುರುಷರು ೭೩ ವರ್ಷ, ಮಹಿಳೆಯರು ೭೯ ವರ್ಷ ಬದುಕುತ್ತಾರೆ. ಇವರನ್ನು ನೋಡಿಕೊಳ್ಳುವುದು ಅವರ ಮಕ್ಕಳ ಕರ್ತವ್ಯ ಎಂದರೂ ರಾಜ್ಯ ಸರ್ಕಾರ ಹೊಣೆ ಹೊರಬೇಕಾಗಿರುವುದು ಅನಿವಾರ್ಯ. ಈಗ ಕೇಂದ್ರ ಸರ್ಕಾರ ಹಿರಿಯರ ರಕ್ಷಣೆಗೆ ಕಾನೂನು ರಚಿಸಿದೆ. ಸುಪ್ರೀಂ ಕೋರ್ಟ್ ಕೂಡ ಹಿರಿಯರ ಆಸ್ತಿ ವರ್ಗಾವಣೆ ಮಾಡಿಕೊಂಡ ಮೇಲೆ ಅವರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದರೆ ಹಿಂದಕ್ಕೆ ಪಡೆಯುವ ಹಕ್ಕು ಹಿರಿಯರಿಗೆ ಇದೆ ಎಂದು ಹೇಳಿದೆ. ಇದನ್ನೇ ಕಂದಾಯ ಸಚಿವರು ಮೇಲ್ಮನೆಯಲ್ಲಿ ಪುನರುಚ್ಚರಿಸಿದ್ದಾರೆ. ಅಲ್ಲದೆ ಹಿರಿಯರ ಪಾಲನೆ ಸರಿಯಾಗಿಲ್ಲ ಎಂದರೆ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ ಎಂದು ಹೇಳಿದ್ದಾರೆ. ಆದರೆ ನಮ್ಮ ವ್ಯವಸ್ಥೆ ಹಿರಿಯರಿಗೆ ಸಹಕರಿಸುವ ಮಟ್ಟದಲ್ಲಿಲ್ಲ. ಹಿರಿಯರಿಗೆ ಬ್ಯಾಂಕ್‌ಗಳಲ್ಲಿ ಸ್ವತಂತ್ರವಾಗಿ ವ್ಯವಹಾರ ನಡೆಸಲು ಅನುವು ಮಾಡಿಕೊಡುವುದಿಲ್ಲ. ನಾಮಿನಿ ಮಾಡಿ ಎಂದು ಹೇಳಿ ಪವರ್ ಆಫ್ ಅಟಾರ್ನಿ ಮಾಡುವಂತೆ ಪರೋಕ್ಷವಾಗಿ ಒತ್ತಾಯ ಮಾಡುತ್ತಾರೆ. ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಹಿರಿಯರಿಗೆ ಪ್ರತ್ಯೇಕ ಕೌಂಟರ್ ಇರುವುದಿಲ್ಲ. ಅದರಲ್ಲೂ ಏಕಾಂಗಿಯಾಗಿರುವ ವೃದ್ಧರು ಪ್ರತಿಯೊಂದಕ್ಕೂ ಬೇರೆಯವರನ್ನು ಆಶ್ರಯಿಸಬೇಕು. ಅವರು ಇವರಿಂದ ಹಣ ಕೀಳುತ್ತಾರೆಯೇ ಹೊರತು ಉಪಕಾರವನ್ನೇನೂ ಮಾಡುವುದಿಲ್ಲ. ಹಣ ಇಲ್ಲದ ವೃದ್ಧರು ಕಸಕ್ಕೆ ಸಮಾನ. ನಿವೃತ್ತರಾದ ಮೇಲೆ ಕೆಲವರಿಗೆ ಉದ್ಯೋಗ ಅನಿವಾರ್ಯ ಇರುತ್ತದೆ. ಅವರಿಗೆ ಕಡಿಮೆ ಸಂಬಳ ನೀಡಿ ದುಡಿಸಿಕೊಳ್ಳುವವರೇ ಹೆಚ್ಚು. ಈಗ ಬಹುತೇಕ ಆಡಳಿತ ಮಂಡಳಿಗಳು ಯುವಕರನ್ನು ನೇಮಕಮಾಡಿಕೊಳ್ಳಲು ಬಯಸುವುದರಿಂದ ಹಿರಿಯರ ಅನುಭವಕ್ಕೆ ಬೆಲೆ ಇಲ್ಲದಂತಾಗಿದೆ.
ರಾಜ್ಯ ಸರ್ಕಾರ ಪ್ರತಿ ತಿಂಗಳು ೧೨೦೦ ರೂ. ವೃದ್ಧಾಪ್ಯ ವೇತನವನ್ನು ೬೫ ವರ್ಷ ಮೇಲ್ಪಟ್ಟ ೨೭.೮೭ ಲಕ್ಷ ಜನರಿಗೆ ನೀಡುತ್ತಿದೆ. ಇದನ್ನು ಪಡೆಯಲು ಅಂಚೆಕಚೇರಿಯ ಬಳಿ ವೃದ್ಧರು ಜಾತಕಪಕ್ಷಿಯಂತೆ ಕಾಯಬೇಕು. ಅಂಚೆಕಚೇರಿ ಸಿಬ್ಬಂದಿಯಂತೂ ಇವರನ್ನು ಮನುಷ್ಯರು ಎಂದು ಪರಿಗಣಿಸುವುದೇ ಇಲ್ಲ. ಈಗ ಬಹುತೇಕ ವೃದ್ಧರಿಗೆ ಬಿಪಿ, ಶುಗರ್ ಸಾಮಾನ್ಯ. ಅದಕ್ಕೆ ಔಷಧ ತೆಗೆದುಕೊಳ್ಳಲೇಬೇಕು. ಅದಕ್ಕೆ ಪ್ರತಿತಿಂಗಳೂ ಹಣ ಬೇಕು. ಜನೌಷಧಿಯಲ್ಲಿ ಕಡಿಮೆ ದರದಲ್ಲಿ ಇದು ಲಭ್ಯ. ಆದರೆ ಎಲ್ಲ ಕಡೆ ಇದು ಇರುವುದಿಲ್ಲ.
ಮೊದಲ ಬಾರಿ ಮೋದಿ ಪ್ರಧಾನಿಯಾದಾಗ ಬ್ಯಾಂಕ್ ಠೇವಣಿಯ ಮೇಲಿದ್ದ ಬಡ್ಡಿದರವನ್ನು ಇದ್ದಕ್ಕಿದ್ದಂತೆ ಕಡಿಮೆ ಮಾಡಿದರು. ಇದರಿಂದ ಬಹುತೇಕ ವೃದ್ಧರಿಗೆ ಬಹಳ ಕಷ್ಟವಾಯಿತು. ಅವರು ಬ್ಯಾಂಕ್‌ನಲ್ಲಿಟ್ಟಿದ್ದ ಠೇವಣಿ ಮೇಲಿನ ಮಾಸಿಕ ೨ ಸಾವಿರ ರೂ. ಕಡಿಮೆಯಾಯಿತು. ಅದನ್ನು ಸರಿತೂಗಿಸುವುದು ಕಷ್ಟವಾಯಿತು. ಈಗ ಅದೇ ಮೋದಿ ೭೦ ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಕಾರ್ಡ್ ನೀಡಿದ್ದಾರೆ. ೫ ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ದೊರಕುವಂತೆ ಮಾಡಿದ್ದಾರೆ. ಖಾಸಗಿ ಆರೋಗ್ಯ ವಿಮಾ ಕಂಪನಿಗಳು ಹಿರಿಯ ನಾಗರಿಕರಿಗೆ ಪ್ರೀಮಿಯಂ ಹಣವನ್ನು ಹೆಚ್ಚಿಸಿದೆ. ರೋಗಕ್ಕಿಂತ ಪ್ರೀಮಿಯಂ ದೊಡ್ಡ ತಲೆನೋವು. ಅಲ್ಲದೆ ಇವುಗಳಿಗೆ ಆದಾಯ ವಿನಾಯಿತಿ ಇಲ್ಲ. ಕುಟುಂಬದ ಆರೋಗ್ಯ ವಿಮೆ ಎಂದರೆ ಹಿರಿಯ ತಂದೆತಾಯಿಗಳು ಸೇರ್ಪಡೆಗೊಳ್ಳುವುದಿಲ್ಲ. ಖಾಸಗಿ ವಿಮಾ ಕಂಪನಿಗಳಿಗೆ ಹಿರಿಯ ಪ್ರೀಮಿಯಂ ವ್ಯಾಪಾರ ವಸ್ತು ಅಷ್ಟೆ. ಅವರಿಗೆ ಸಾಮಾಜಿಕ ಹೊಣೆ ಏನೂ ಅಲ್ಲ.
ಹಿರಿಯರು ಏಕಾಂಗಿಯಾದರಂತೂ ಅವರ ಬಾಳು ನರಕವಾಗಿ ಹೋಗುತ್ತದೆ. ಕಂದಾಯದಿಂದ ಹಿಡಿದು ಸಮಾಜ ಕಲ್ಯಾಣದವರೆಗೆ ಎಲ್ಲ ಇಲಾಖೆಗಳಿಗೆ ಅಲೆಯಬೇಕು. ಒಟ್ಟು ೧೯ ಇಲಾಖೆಗಳು ಹಿರಿಯರ ಯೋಗಕ್ಷೇಮ ನೋಡಿಕೊಳ್ಳಬೇಕು. ಅವುಗಳೊಂದಿಗೆ ಸಮನ್ವಯ ಸಾಧಿಸುವ ಒಂದು ಇಲಾಖೆ ಏಕಗವಾಕ್ಷಿಯ ರೀತಿಯಲ್ಲಿ ಕೆಲಸ ಮಾಡುವುದು ಅಗತ್ಯ. ಇಲ್ಲಿ ಸೇವಾ ಮನೋಭಾವ ಇರುವವರನ್ನೇ ನೇಮಕ ಮಾಡಬೇಕು. ಅಂಥವರೂ ಸಮಾಜದಲ್ಲಿರುತ್ತಾರೆ. ಕ್ಯಾನ್ಸರ್ ರೋಗಿಗಳನ್ನು ನೋಡಿಕೊಳ್ಳುವ `ಕರುಣಾಶ್ರಯ’ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲರೂ ಸ್ವಯಂ ಪ್ರೇರಣೆಯಿಂದ ದುಡಿಯುತ್ತಾರೆ. ಅವರ ಜೀವನೋಪಾಯಕ್ಕೆ ಬೇರೆ ವೃತ್ತಿ ಇದೆ. ಇಲ್ಲಿ ಬರುವುದು ಸಮಾಜ ಸೇವೆ ಮಾಡುವುದಕ್ಕೆ. ನಿಜವಾದ ಮಾನವೀಯತೆ ಎಂದರೆ ಇದು. ಇಂಥವರಿಗೆ ಸರ್ಕಾರ ಉತ್ತೇಜನ ನೀಡಿದರೆ ವಯೋವೃದ್ಧರು ಸಮಾಜಕ್ಕೆ ಹೊರೆಯಾಗುವುದಿಲ್ಲ. ವೃದ್ಧರು ದೈಹಿಕವಾಗಿ ಕುಗ್ಗಿರುತ್ತಾರೆ. ಮಾನಸಿಕವಾಗಿ ಅವರಿಗೆ ಮುಪ್ಪು ಬಂದಿರುವುದಿಲ್ಲ. ಅಲ್ಲದೆ ಅವರ ಹಿಂದೆ ಅನುಭವದ ಮೂಟೆ ಇರುತ್ತದೆ. ಅದನ್ನು ಬಳಸಿಕೊಳ್ಳುವುದು ಸರ್ಕಾರ ಮತ್ತು ಸಮಾಜದ ಕರ್ತವ್ಯ. ಪಿಂಚಿಣಿ ಕೊಡುವುದಷ್ಟೇ ಸರ್ಕಾರದ ಕರ್ತವ್ಯವಲ್ಲ. ಎಲ್ಲಿಯವರಿಗೆ ಸಮಾಜದಲ್ಲಿ ಕುಟುಂಬದ ಕಲ್ಪನೆ ಇರುತ್ತದೋ ಅಲ್ಲಿಯವರೆಗೆ ಹಿರಿಯ ಹೊಣೆ ಹೊಸ ಪೀಳಿಗೆಯದು. ವೃದ್ಧಾಶ್ರಮ ಕುಟುಂಬಕ್ಕೆ ಪರ್ಯಾಯ ಅಲ್ಲ. ಈಗ ಕುಟುಂಬದ ಕಲ್ಪನೆ ಮಾಯವಾಗುತ್ತಿದೆ. ವೃದ್ಧಾಶ್ರಮದ ಸಂಖ್ಯೆ ಅಧಿಕಗೊಳ್ಳುತ್ತಿದೆ. ಅಜ್ಜಿ-ತಾತ ತಮ್ಮ ಮೊಮ್ಮಕ್ಕಳಿಗೆ ಕತೆಹೇಳಿ ರಾತ್ರ ಮಲಗಿಸುವ ಪದ್ಧತಿಯೇ ಇಲ್ಲ.