ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ನಿನ್ನೆ ರಾತ್ರಿ ಬಂಧಿಸಿದ್ದಾರೆ.
ಆರೋಪಿಯನ್ನು ಶೇಕ್ ನಸ್ರು (30) ಎಂದು ಗುರ್ತಿಸಲಾಗಿದೆ. ಈತ ಬಿಹಾರ ರಾಜ್ಯದ ಚಂಪಾರನ್ ಜಿಲ್ಲೆ ಮೂಲದವನು ಎನ್ನಲಾಗಿದೆ, ಆರೋಪಿ ಪ್ಲಾಸ್ಟಿಕ್ ಹಾಗೂ ಬಟ್ಟೆ ಹೊಲೆಯುವ ಅಂಗಡಿಯಲ್ಲಿ ಸಹಾಯಕನಾಗಿ ಈತ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಯನ್ನು ಜನವರಿ 24ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಈ ಘಟನೆ ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ವಿನಾಯಕನಗರದಲ್ಲಿ ನಡೆದಿತ್ತು. ಹಸುಗಳ ಮಾಲೀಕ ಕರ್ಣ ಅವರು ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ರಮೇಶ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹಸುಗಳು ಕ್ಷೇಮವಾಗಿವೆ. ಆದರೆ, ಇನ್ನೂ ಎರಡು ವಾರ ಗಾಯ ಮಾಸಲು ಸಮಯಬೇಕಿದೆ ಎಂದು ತಿಳಿದುಬಂದಿದೆ.