ಸಿಎಂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ತೊಡಗಿದೆ

0
9

ದಾವಣಗೆರೆ: ಸರ್ಕಾರದ ಖಜಾನೆಯಿಂದಲೇ ಹಣ ಬಿಡುಗಡೆಯಾಗಿರುವುದರಿಂದ ಮೂಡಾ ಮತ್ತು ವಾಲ್ಮೀಕಿ ನಿಗಮ ಹಗರಣದಲ್ಲಿ ಭಾಗಿಯಾಗಿರುವವರನ್ನು ರಕ್ಷಿಸಲು ಸಿಎಂ ಸಿದ್ಧರಾಮಯ್ಯಗೆ ಯಾವುದೇ ನೈತಿಕತೆ ಇಲ್ಲ. ಹಗರಣದಲ್ಲಿ ಭಾಗಿಯಾಗಿರುವವರು ಸೇರಿ ಮುಖ್ಯಮಂತ್ರಿಗಳು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಾ ಮತ್ತು ವಾಲ್ಮೀಕಿ ನಿಗಮದ ಹಗರಣದಲ್ಲಿ ಭಾಗಿಯಾದವರು ತಾವು ಸಾಚಾಗಳೆಂದು ಸಾಬೀತು ಪಡಿಸಲು ಕಾಲಾವಕಾಶ ಕೇಳಿದ್ದಾರೆ. ಆದರೆ, ಹಗರಣ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಕೂಡಲೇ ರಾಜೀನಾಮೆ ನೀಡಬೇಕೆಂದು ಅವರು ಹೇಳಿದರು.

ಕಾಂಗ್ರೆಸ್ ಸರ್ಕಾರ ಎಂದರೆ ಹಗರಣಗಳ ಸರಮಾಲೆಯಾಗಿದ್ದು, ಸ್ವಾತಂತ್ರ್ಯ ನಂತರ ಆಡಳಿತ ಮಾಡಿದ ಕಾಂಗ್ರೆಸ್ ಸರ್ಕಾರದ ಹಾಲಿ, ಮಾಜಿ ಸಚಿವರು, ಶಾಸಕರುಗಳು ಸುಮಾರು 60 ಲಕ್ಷ ಕೋಟಿಗಿಂತ ಅಧಿಕ ಹಗರಣ ಮಾಡಿ ಜೈಲು ಸೇರಿದ್ದಾರೆ. ಕೆಲವರು ಜಾಮೀನು ಮೇಲೆ ಹೊರಗೆ ಇದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಸಿದ್ದು ನೇತೃತ್ವದ ರಾಜ್ಯ ಸರ್ಕಾರ ಬಂದು ಒಂದು ವರ್ಷ ಎರಡು ತಿಂಗಳು ಕಳಿಯಿತು. ಸಿದ್ದು ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಭ್ರಷ್ಟಾಚಾರದಲ್ಲಿ ಮತ್ತು ಸ್ವಜನಪಕ್ಷಪಾತದಲ್ಲಿ ತೊಡಗಿದೆ. ಸಾಚಾ ಎಂದು ಹೇಳಿಕೊಳ್ಳುತಿದ್ದವರು ಇಂದು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ಸರ್ಕಾರದಿಂದಲೇ ಬ್ಯಾಂಕ್ ದರೋಡೆಯಾಗಿದ್ದು ಕರ್ನಾಟಕ ಇತಿಹಾಸದಲ್ಲಿ ಈ ಹಿಂದೆ ಆಗಿರಲಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಇರೋದ್ರಿಂದ ಇಡಿಯವರು ತನಿಖೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬರುತ್ತಿರುವವರನ್ನು ಬಂಧನ ಮಾಡಲಾಗಿದೆ. ಬ್ಯಾಂಕ್ ದರೋಡೆಯಲ್ಲಿ ಸರ್ಕಾರದ ಸಚಿವರೆ ಭಾಗಿಯಾಗಿದ್ದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

Previous articleಉಪಚುನಾವಣೆ: ಇಂಡಿಯಾ ಒಕ್ಕೂಟಕ್ಕೆ ಮೇಲುಗೈ, ಬಿಜೆಪಿಗೆ ಶಾಕ್
Next articleಪ್ರತಿಯೊಂದು ಮನೆಯ ಮಗುವೂ ನಮ್ಮ ಪರಂಪರೆಯ ಪ್ರತೀಕವಾಗಬೇಕು