ಸರ್ಕಾರದ ಹಿಡಿತಕ್ಕೆ ವಿವಿ ಸ್ವಾತಂತ್ರ್ಯಕ್ಕೆ ಧಕ್ಕೆ ಬೇಡ

0
18

ಕರ್ನಾಟಕ ಸರ್ಕಾರ ಈಗ ಎಲ್ಲ ವಿವಿಗಳ ಆಡಳಿತವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಿ ಅದಕ್ಕಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವಿವಿಯನ್ನು ರಾಜ್ಯಪಾಲರ ಹಿಡಿತದಿಂದ ಬಿಡಿಸಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇದಕ್ಕೆ ಕೊಟ್ಟಿರುವ ಸಮಜಾಯಷಿ ಎಂದರೆ ಗುಜರಾತ್ ಸರ್ಕಾರ ಮಾಡಿದೆ. ಈಗ ಎಲ್ಲ ರಾಜ್ಯಗಳಲ್ಲಿ ವಿವಿ ಆಡಳಿತವನ್ನು ರಾಜ್ಯಪಾಲರಿಂದ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಇದು ಕಾಲಧರ್ಮ.
ನಮ್ಮ ರಾಜ್ಯದಲ್ಲಿ ವಿವಿಗಳಿಗೆ ದೊಡ್ಡ ಇತಿಹಾಸವಿದೆ. ಮೈಸೂರಿನ ಮಹಾರಾಜ ಕಾಲೇಜು ಸ್ವಾತಂತ್ರಪೂರ್ವದಲ್ಲಿ ಆರಂಭವಾಗಿದ್ದು, ಮೈಸೂರು ವಿವಿ ನಂತರ ತಲೆಎತ್ತಿತು. ಅಂದಿನಿಂದಲೂ ನಾವು ವಿವಿ ಘನತೆಯನ್ನು ಉಳಿಸಿಕೊಂಡು ಬಂದಿದ್ದೇವೆ. ಸ್ವಾತಂತ್ರ್ಯ ಬಂದ ಮೇಲೂ ವಿವಿಗಳನ್ನು ನೋಡುವ ರೀತಿ ಬದಲಾಗಲಿಲ್ಲ. ಉದ್ದೇಶಪೂರ್ವಕವಾಗಿಯೇ ವಿವಿಗಳನ್ನು ರಾಜಕಾರಣದಿಂದ ದೂರ ಇಡಲಾಗಿತ್ತು. ಹೀಗಾಗಿ ರಾಜ್ಯಪಾಲರು ಅದನ್ನು ನೋಡಿಕೊಳ್ಳುತ್ತಿದ್ದರು. ವಿವಿ ಕ್ಯಾಂಪಸ್‌ಗಳಿಗೆ ಪೊಲೀಸರು ಪ್ರವೇಶಿಸಬೇಕಾದರೆ ಕುಲಪತಿಗಳ ಅನುಮತಿ ಬೇಕಿತ್ತು. ಈಗ ಕ್ಯಾಂಪಸ್‌ಗಳಲ್ಲೇ ಪೊಲೀಸ್ ಠಾಣೆ ತೆರೆಯಲಾಗಿದೆ. ಹಿಂದೆ ರಾಜ್ಯಪಾಲರ ನೇಮಕದಲ್ಲಿ ಕೇಂದ್ರ ಸರ್ಕಾರ ರಾಜಕೀಯರಹಿತವಾಗಿ ಚಿಂತನೆ ನಡೆಸುತ್ತಿತ್ತು. ರಾಜಕಾರಣಿಗಳು ರಾಜ್ಯಪಾಲ ಹುದ್ದೆಗೆ ಬಂದ ಮೇಲೆ ವಿವಿ ಆಡಳಿತವೂ ತನ್ನ ದಾರಿ ತಪ್ಪುವ ಹಂತ ತಲುಪಿದ್ದು ಉತ್ಪೇಕ್ಷೆ ಏನಲ್ಲ. ರಾಜ್ಯಪಾಲರು ಕುಲಪತಿಗಳ ನೇಮಕದಿಂದ ಹಿಡಿದು ಎಲ್ಲದರಲ್ಲೂ ಅಧಿಕಾರ ದುರುಪಯೋಗ ಮಾಡಿಕೊಂಡರು. ಹೀಗಾಗಿ ರಾಜ್ಯಪಾಲರ ಹಿಡಿತ ತಪ್ಪಿಸಿ ಸರ್ಕಾರವೇ ನಿರ್ವಹಿಸಬೇಕೆಂದು ಶಾಸಕರು, ಸಂಸದರು ಅಭಿಪ್ರಾಯಪಟ್ಟಿದ್ದು ಸಹಜ. ಅಲ್ಲದೆ ಸರ್ಕಾರ ತನ್ನ ಹಣವನ್ನು ವಿವಿಗಳಲ್ಲಿ ತೊಡಗಿಸುವಾಗ ಅದಕ್ಕೆ ತಕ್ಕ ಫಲಿತಾಂಶ ನಿರೀಕ್ಷಿಸುವುದು ತಪ್ಪೇನಲ್ಲ. ಈಗ ಎಲ್ಲ ರಾಜ್ಯಗಳಲ್ಲಿ ವಿವಿಗಳು ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತಿವೆ. ಗುಜರಾತ್, ತಮಿಳುನಾಡು ಮತ್ತು ಆಂಧ್ರದಲ್ಲಿ ವಿವಿಗಳು ಸರ್ಕಾರದ ಹಿಡಿತಕ್ಕೆ ಬಂದಿವೆ. ರಾಜ್ಯಪಾಲರು ಘಟಿಕೋತ್ಸವ ಸಮಾರಂಭದಲ್ಲಿ ಮಾತ್ರ ಭಾಗವಹಿಸುತ್ತಾರೆ. ನಮ್ಮ ರಾಜ್ಯದಲ್ಲಿ ಒಟ್ಟು ೫೯ ವಿವಿಗಳಿವೆ. ಇದರಲ್ಲಿ ತಾಂತ್ರಿಕ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಕಾನೂನು ವಿವಿಗಳೂ ಸೇರಿವೆ. ಇವುಗಳೆಲ್ಲ ಇನ್ನುಮುಂದೆ ಸರ್ಕಾರ ಹೇಳಿದಂತೆ ಕೇಳಬೇಕು. ಅಲ್ಲಿಯ ಎಲ್ಲ ನೇಮಕಗಳು ಸರ್ಕಾರವೇ ಕೈಗೊಳ್ಳಬೇಕು. ಕುಲಪತಿಗಳನ್ನು ಇದುವರೆಗೆ ರಾಜ್ಯಪಾಲರು ನೇಮಕ ಮಾಡುತ್ತಿದ್ದರು. ಈಗ ಮುಖ್ಯಮಂತ್ರಿಯ ತೀರ್ಮಾನವೇ ಅಂತಿಮ. ನಮ್ಮ ವಿವಿಗಳು ಯುಜಿಸಿ ನಿಯಮದಂತೆ ಇದುವರೆಗೆ ನಡೆದುಕೊಂಡು ಬಂದಿದ್ದವು. ಈಗ ಕೇಂದ್ರ ಸರ್ಕಾರವೇ ಮುಕ್ತ ವಿವಿ, ಖಾಸಗಿ ವಿವಿಗಳಿಗೆ ಅವಕಾಶ ಕೊಡಲು ಆರಂಭಿಸಿದೆ. ಇದರ ಮೂಲ ಉದ್ದೇಶ ವಿವಿ ಶಿಕ್ಷಣ ಮುಕ್ತವಾಗಿರಬೇಕು. ಜ್ಞಾನ ಎಲ್ಲಿಂದಲಾದರೂ ಬರಲಿ ನಮ್ಮ ಮನೆ ಮನಗಳ ಕಿಟಕಿಗಳನ್ನು ತೆರೆದಿರೋಣ ಎಂಬುದೇ ನಾವು ಅನುಸರಿಸಿಕೊಂಡು ಬಂದಿರುವ ಧ್ಯೇಯವಾಕ್ಯ. ಅದರಿಂದ ಜ್ಞಾನವನ್ನು ಮುಕ್ತಗೊಳಿಸಿ ಆಡಳಿತವನ್ನು ಮಾತ್ರ ಸರ್ಕಾರ ನೋಡಿಕೊಳ್ಳುವುದು ಸೂಕ್ತ.
ಈಗ ಸರ್ಕಾರದ ಹಿಡಿತಕ್ಕೆ ವಿವಿಗಳು ಬಂದಲ್ಲಿ ಆಡಳಿತ ನಿರ್ವಹಣೆಯನ್ನು ಉನ್ನತ ಶಿಕ್ಷಣ ಸಚಿವಾಲಯ ನೋಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಇಲಾಖೆಯನ್ನು ಅಭಿವೃದ್ಧಿಪಡಿಸಬೇಕು. ಅದರಲ್ಲೂ ಎಲ್ಲ ಸ್ನಾತಕೋತ್ತರ ಕೇಂದ್ರಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯಬೇಕು. ಅದಕ್ಕೆ ತಕ್ಕಂತೆ ಸಂಶೋಧನೆ, ಬೋಧನೆಯ ಮಟ್ಟ ಇರಬೇಕು. ನಮ್ಮ ವಿವಿಗಳಿಂದ ಹೊರ ಬರುವ ಪದವೀಧರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ಎದುರಿಸುವ ಸಾಮರ್ಥ್ಯ ಪಡೆಯಬೇಕು. ಈ ಉನ್ನತ ಆದರ್ಶದೊಂದಿಗೆ ತಮ್ಮ ವಿವಿಗಳಿಗೆ ಮರುಜೀವ ನೀಡುವುದು ಸೂಕ್ತ,. ಸ್ವಾಯತ್ತ ಮತ್ತು ಖಾಸಗಿ ವಿವಿಗಳು ಬಹಳ ವೇಗದಲ್ಲಿ ಬದಲಾವಣೆಗೆ ತೆರೆದುಕೊಳ್ಳುತ್ತಿವೆ. ಅವುಗಳಿಗೆ ಸರಿಸಮಾನವಾಗಿ ಸರ್ಕಾರಿ ಹಿಡಿತದ ವಿವಿಗಳು ಶೈಕ್ಷಣಿಕವಾಗಿ ಬೆಳೆಯಬೇಕು. ಇವುಗಳು ನಗರಗಳಿಗೆ ಸೀಮಿತಗೊಳ್ಳಬಾರದು. ವಿದೇಶಗಳಲ್ಲಿ ಹಳ್ಳಿಗಳಲ್ಲೂ ವಿವಿಗಳಿವೆ. ಉನ್ನತ ಜ್ಞಾನ ಕೆಲವೇ ವಿವಿಗಳಿಗೆ ಸೀಮಿತಗೊಳ್ಳಬಾರದು. ಸರ್ಕಾರ ವಿವಿಗಳಿಗೆ ಬೇಕಾದ ಆರ್ಥಿಕ ನೆರವನ್ನು ಉದಾರವಾಗಿ ನೀಡಿ ಶೈಕ್ಷಣಿಕ ಮಟ್ಟ ಕಾಯ್ದುಕೊಳ್ಳಲು ಶಿಕ್ಷಣತಜ್ಞರಿಗೆ ಬಿಟ್ಟರೆ ಸಮಸ್ಯೆ ಇರುವುದಿಲ್ಲ. ನಮ್ಮ ವಿವಿ ಕಾಯ್ದೆಗೆ ತಿದ್ದುಪಡಿ ತರುವಾಗ ವಿವಿಗಳ ಶೈಕ್ಷಣಿಕ ಸ್ವಾಯತ್ತೆಗೆ ಧಕ್ಕೆ ತರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಶೈಕ್ಷಣಿಕ ಸ್ವಾತಂತ್ರ್ಯದ ಮೇಲೆ ಇಡೀ ವಿವಿ ಘನತೆ-ಗೌರವ ನಿಂತಿರುತ್ತದೆ ಎಂಬುದನ್ನು ಮರೆಯಬಾರದು.
ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ೧೯೦೯ ರಲ್ಲಿ ಜೇಮ್‌ಸೇಟ್‌ಜಿ ಟಾಟಾ ಮತ್ತು ಮೈಸೂರು ಮಹಾರಾಜರ ನೆರವಿನಿಂದ ತಲೆಎತ್ತಿದ್ದು. ಜಾಗತಿಕವಾಗಿ ಮನ್ನಣೆ ಪಡೆದಿದೆ. ಇದಕ್ಕೆ ಖಾಸಗಿ ವ್ಯಕ್ತಿಗಳು ೪೨೫ ಕೋಟಿ ರೂ. ದೇಣಿಗೆ ನೀಡಿ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ನಡೆಯಬೇಕೆಂದು ಬಯಸಿದ್ದಾರೆ. ಇಂಥ ಸಂಸ್ಥೆ ನಮ್ಮ ರಾಜ್ಯದಲ್ಲಿದೆ ಎಂಬುದೇ ಹೆಮ್ಮೆಯ ಸಂಗತಿ. ವಿವಿಗಳು ಮೊದಲು ನಮ್ಮ ಸಮಾಜದ ಮನ್ನಣೆ ಪಡೆಯಬೇಕು. ಎಲ್ಲ ದೇಶಗಳ ಜನರಿಗೆ ಕಲಿಯುವುದಕ್ಕೆ ಮುಕ್ತ ಅವಕಾಶ ನೀಡುವ ಕೇಂದ್ರಗಳಾಗಬೇಕು. ಹಿಂದೆ ತಕ್ಷಶಿಲಾ ವಿವಿ ಈ ರೀತಿ ನಡೆಯುತ್ತಿತ್ತು ಎಂಬುದನ್ನು ನೆನಪಿಸಿಕೊಳ್ಳುವುದು ಸೂಕ್ತ.

Previous articleಬಾಣಂತಿಯರ ಸಾವಿನ ಸಂಖ್ಯೆ ಆರಕ್ಕೇರಿಕೆ
Next articleಡಾಕ್ಟರ್ ಮಾತ್ರೆ ಸೈಡ್ ಎಫೆಕ್ಟ್