ಸಮಸ್ಯೆ ವೈವಿಧ್ಯತೆಯಲ್ಲಿ; ಪರಿಹಾರ ಏಕತೆಯಲ್ಲಿ

ಮನಸ್ಸು-ದೇಹದ ವಿಚಾರದಲ್ಲಿ ಋಷಿಗಳು ಸರಳ ಹಾಗೂ ಸ್ಪಷ್ಟವಾದ ನಿಲುವನ್ನು ಹೊಂದಿದ್ದರು. ಎಲ್ಲವೂ ಮನಸ್ಸಿನಿಂದಲೇ ಉದ್ಭವಿಸುತ್ತವೆ ಎಂಬುದು ಅವರ ನಿಲುವು. ನಿಖರವಾಗಿ ಚಲನಚಿತ್ರವನ್ನು ತೋರಿಸುವ ಪ್ರೊಜೆಕ್ಟರ್‌ನಂತೆ ಮನಸ್ಸು ನಮಗೆ ಜಗತ್ತನ್ನು ತೋರಿಸುತ್ತದೆ. ನಮ್ಮ ದೇಹವು ಚಲನಚಿತ್ರದ ಭಾಗವಾಗಿದ್ದು ದೇಹಕ್ಕೆ ಆಗುವ ಎಲ್ಲವೂ ಅದೇ ಚಲನಚಿತ್ರದಲ್ಲಿನ ದೃಶ್ಯಗಳಂತೆ ಭಾಸವಾಗುತ್ತದೆ. ನಮ್ಮನ್ನು ನಾವು ಅನಾರೋಗ್ಯಕ್ಕೆ ಒಳಗಾಗಿಸಬಹುದು ಅಥವಾ ನಿರೋಗಿಯಾಗಿಸಬಹುದು; ಆದರೆ ನಾವು ಆ ರೀತಿ ಮಾಡುವುದನ್ನು ಗಮನಿಸದಿರುವುದು ನಾವು ಮಾಡುವ ತಪ್ಪು. ನಾವು ಮೌನವಾಗಿ ಇದನ್ನು ವೀಕ್ಷಿಸಲು ಸಾಧ್ಯವಾದರೆ ಅದಕ್ಕಿಂತ ಹೆಚ್ಚಿನದನ್ನು ನೋಡಲು ನಾವು ಸಮರ್ಥರಾಗುತ್ತೇವೆ. ಆಕಾಶ, ಸಾಗರ, ಪರ್ವತಗಳು, ನಕ್ಷತ್ರಗಳು-ಇವೆಲ್ಲವೂ ನಮ್ಮ ಮೆದುಳಿನಿಂದ ಹೊರಸೂಸಲ್ಪಡುವ ಚಲನಚಿತ್ರದ ದೃಶ್ಯಗಳು. ಇವೆಲ್ಲಾ “ನಮ್ಮ ಭ್ರಮೆ ಅಥವಾ ಮಾಯೆ” ಎಂಬ ಋಷಿಗಳ ಅಭಿಪ್ರಾಯ ಸರಿಯಾಗಿದೆಯೆಂದರೆ ವಸ್ತು ಆಧಾರಿತ ವಾಸ್ತವದಲ್ಲಿ ನಾವು ಇಡುವ ದೃಢವಾದ ನಂಬಿಕೆ ತಪ್ಪು ಮತ್ತು ನಮ್ಮ ವಸ್ತುನಿಷ್ಠ ಉಲ್ಲೇಖದ ಚೌಕಟ್ಟನ್ನು ನಾವು ಕಾಣುತ್ತಿಲ್ಲ ಎಂದರ್ಥ. ಆಕಾಶ ಮತ್ತು ನಕ್ಷತ್ರಗಳು ನಮ್ಮ ಇಂದ್ರಿಯಗಳಿಗೆ ಕಾಣುವಂತೆ ಹೊರಗೆ ಮತ್ತು ಅಷ್ಟು ದೂರದಲ್ಲಿ' ಅಸ್ತಿತ್ವದಲ್ಲಿವೆ ಹಾಗೂ ನಮ್ಮಿಂದ ಸಂಪೂರ್ಣ ಸ್ವತಂತ್ರವಾಗಿವೆ. ಹಾಗಾದರೆ ನಾವು ನಮ್ಮದೇ ಸಿನಿಮಾ ನೋಡಿ ಮರುಳಾಗುತ್ತಿದ್ದೇವೆಯೇ? ಋಷಿಗಳ ನಿಲುವನ್ನು ಅರ್ಥೈಸಿಕೊಳ್ಳಬೇಕಾದರೆ ನಾವು ಅವರ ದೃಷ್ಟಿಕೋನದಲ್ಲಿ ಯೋಚಿಸಬೇಕಾಗುತ್ತದೆ. ಅಂದರೆ; ನಾವು ನಮ್ಮ ಸಾಮಾನ್ಯ ಎಚ್ಚರಸ್ಥಿತಿಯ ವಾಸ್ತವದಿಂದ ಹೊರಗೆ ಬರಬೇಕಾಗುತ್ತದೆ. ಹೀಗೆ ಹೊರಬರಲು ಸಾಧ್ಯವಾದರೆಮನಸ್ಸು ನಿಜವಾಗಿಯೂ ಶಕ್ತಿಯುತ ಸೃಷ್ಟಿಕರ್ತ’ ಎಂಬುದನ್ನು ಪ್ರಶಂಸಿಸಲು ಪ್ರಾರಂಭಿಸುತ್ತೀರಿ. ಋಷಿಗಳ ದೃಷ್ಟಿಯಲ್ಲಿ ಇಡೀ ಬ್ರಹ್ಮಾಂಡವೆಂಬುದು ಅಮೂರ್ತತೆಯಿಂದ (ಶೂನ್ಯದಿಂದ) ಪದರ ಪದರವಾಗಿ ನಿರ್ಮಿಸಲ್ಪಟ್ಟ ಒಂದು ಸೃಷ್ಟಿ. ಇದನ್ನೇ ಆಯುರ್ವೇದವು ಹೀಗೆ ಹೇಳುತ್ತದೆ: ಮಾನವದೇಹ ಹೇಗೋ ಹಾಗೆಯೇ ಬ್ರಹ್ಮಾಂಡ; ಮಾನವ ಮನಸ್ಸು ಹೇಗೋ ಹಾಗೆಯೇ ಬ್ರಹ್ಮಾಂಡ ಮನಸ್ಸು; ಪಿಂಡಾಂಡ ಹೇಗೆಯೋ ಹಾಗೆಯೇ ಬ್ರಹ್ಮಾಂಡ. ಆಯುರ್ವೇದದಲ್ಲಿ ಧ್ಯಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಲು ಕಾರಣವೆಂದರೆ; ಅದು ರೋಗಿಯ ಮನಸ್ಸನ್ನು ಆತನ ರೋಗವನ್ನು ಸ್ಪರ್ಶಿಸದೆಯೇ ಆತನನ್ನು ಒಂದು ಪ್ರಶಾಂತ ಮನಃಸ್ಥಿತಿಗೆ ಕೊಂಡೊಯ್ಯುತ್ತದೆ. ಅಂತಹ ಒಂದು ಪ್ರಶಾಂತಸ್ಥಿತಿ ಪಡೆಯಲು ಸಾಧ್ಯವಿದೆ ಎಂಬುದು ಮನಸ್ಸಿನಿಂದ ಒಂದುಬಾರಿ ಸ್ವೀಕೃತವಾಗುವವರೆಗೂ ಅನಾರೋಗ್ಯದಿಂದ ಬಿಡುಗಡೆ ಸಾಧ್ಯವಿಲ್ಲ' ಎಂಬ ಭ್ರಮೆ ರೋಗಿಯಲ್ಲಿ ಆವರಿಸಿಕೊಂಡಿರುತ್ತದೆ. ರೋಗಗಳು ವಸ್ತುಗಳಿಂದ ಉಂಟಾಗುತ್ತದೆ ಎಂಬುದು ಆಧುನಿಕ ವೈದ್ಯವಿಜ್ಞಾನದ ಅಭಿಪ್ರಾಯ. ಆದರೆ ಇದು ಭಾಗಶಃ ಮಾತ್ರವೇ ಸರಿ. ಸ್ವೀಕರಿಸುವ ಆತಿಥೇಯರಿಲ್ಲದೆ ರೋಗವು ದೇಹದ ಮೇಲೆ ಹಿಡಿತ ಸಾಧಿಸಲಾಗುವುದಿಲ್ಲ. ಪ್ರಸ್ತುತ ಜಗತ್ತಿನಲ್ಲಿ ಹತ್ತಾರು ಬಗೆಯ ಔಷಧ ಪದ್ಧತಿಗಳಿವೆ ಮತ್ತು ಅವುಗಳಲ್ಲಿ ಪರಸ್ಪರರ ವಿರುದ್ಧ ಆಳವಾದ ಅಭಿಪ್ರಾಯಗಳನ್ನು ಹೊಂದಿವೆ. ರೋಗಿಯು ತನ್ನ ಕಾಯಿಲೆಯ ಸಂದರ್ಭದಲ್ಲಿ ಕ್ಷಣಕ್ಷಣಕ್ಕೂ ಬದುಕಲು ಸಹಾಯಮಾಡುವ ಮೂಲಕ ಎಲ್ಲಾ ಬಗೆಯ ಔಷಧಗಳು ಕಾರ್ಯನಿರ್ವಹಿಸುತ್ತವೆ. ಪ್ರಾಚೀನ ಋಷಿಮುನಿಗಳ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಅನಂತಜೀವಿಯಾಗಿದ್ದು, ಸಮಯ ಮತ್ತು ಸ್ಥಳದಿಂದ ಅನಿಯಮಿತವಾಗಿದೆ. ಭೌತಿಕದೇಹವನ್ನು ಮೀರಿದ ಸ್ಥಿತಿಯನ್ನು ತಲುಪಲು ನಾವು ಪ್ರಜ್ಞಾವಂತಿಕೆಯ ಪ್ರಭಾವವನ್ನು ವಿಸ್ತರಿಸುತ್ತೇವೆ. ಕುರ್ಚಿಯಲ್ಲಿ ಆರಾಮವಾಗಿ ಕುಳಿತಿದ್ದರೂ ಯೋಚಿಸುತ್ತಿರುವ ಪ್ರತಿಯೊಂದು ಆಲೋಚನೆಯೂ ಏಕೀಕೃತ ಕ್ಷೇತ್ರದಲ್ಲಿ ಅಲೆಯನ್ನು ಸೃಷ್ಟಿಸುತ್ತದೆ. ಇದು ಬುದ್ಧಿ, ಅಹಂಕಾರ, ಮನಸ್ಸು, ಇಂದ್ರಿಯಗಳು ಮತ್ತು ವಸ್ತುಗಳ ಎಲ್ಲಾ ಪದರಗಳ ಮೂಲಕ ಅಲೆಯುತ್ತದೆ ಮತ್ತು ವಿಶಾಲ ವಲಯಗಳಲ್ಲಿ ಹರಡುತ್ತದೆ. ಹೀಗೆ ಹೊರಸೂಸಲ್ಪಟ್ಟಾಗ ಆಲೋಚನೆಗಳು ಪ್ರಕೃತಿಯಲ್ಲಿರುವ ಎಲ್ಲದರ ಮೇಲೆಯೂ ಪರಿಣಾಮ ಬೀರುತ್ತದೆ. ಯಾವುದೇ ಬೆಳಕು, ನಕ್ಷತ್ರ ಅಥವಾ ಉರಿಯುತ್ತಿರುವ ದೀಪದಿಂದ ಹೊರಸೂಸಲ್ಪಟ್ಟ ಅಲೆಗಳು ವಿದ್ಯುತ್ಕಾಂತೀಯ ಕ್ಷೇತ್ರದಲ್ಲಿ ಎಲ್ಲಾ ದಿಕ್ಕುಗಳಲ್ಲಿಯೂ ಅನಂತವಾಗಿ ಕಳುಹಿಸಲ್ಪಡುತ್ತಿರುತ್ತವೆ ಎಂಬುದನ್ನು ಭೌತಶಾಸ್ತ್ರವು ಸಿದ್ಧಪಡಿಸಿದೆ. ಋಷಿಗಳು ಈ ಸತ್ಯವನ್ನು ಅರಿತಿದ್ದರು. ನಮಗೆ ನೇರವಾಗಿ ಬೆಳಕು ಕಂಡಂತೆಯೇ ಋಷಿಮುನಿಗಳ ನರಮಂಡಲಗಳು ಆಲೋಚನೆಯು ವಾಸ್ತವದಲ್ಲಿ ಉಂಟುಮಾಡುವ ಅನತಿ ದೂರದ ಪರಿಣಾಮವನ್ನು ದಾಖಲಿಸಲು ಶಕ್ತವಾಗಿದ್ದವು. ನಾವು ನಮ್ಮ ಎಚ್ಚರದ ಸ್ಥಿತಿಗೆ ಸೀಮಿತವಾಗಿರುವುದರಿಂದ ನಾವು ಎಲ್ಲೆಡೆ ಉತ್ಪಾದಿಸುತ್ತಿರುವ ಸೂಕ್ಷ್ಮ ಬದಲಾವಣೆಗಳನ್ನು ನಮ್ಮ ಮನಸ್ಸು ಗ್ರಹಿಸದಂತೆ ತಡೆಯುತ್ತದೆ. ಆದರೂ ಈ ಬದಲಾವಣೆಗಳು ಸಹಸ್ರಾರು ವರ್ಷಗಳಿಂದ ನಿರಂತರವಾಗಿ ಸಂಭವಿಸುತ್ತಲೇ ಇದ್ದು ಮಾನವ ಇದೇ ಬ್ರಹ್ಮಾಂಡದ ದೇಹದಲ್ಲಿ ವಾಸಿಸುತ್ತಾನೆ, ಉಸಿರಾಡುತ್ತಾನೆ ಮತ್ತು ಚಲಿಸುತ್ತಾನೆ ಎಂಬುದನ್ನು ಋಷಿಗಳು ತಿಳಿಸಿದ್ದಾರೆ. ಹಾಗಾಗಿ ಪ್ರಕೃತಿಯೂ ನಮ್ಮಂತೆಯೇ ಜೀವಂತವಾಗಿರುತ್ತದೆ; ಮೂಲವ್ಯತ್ಯಾಸವಿರುವುದು ನಮ್ಮ ಕಣ್ಣಳತೆಯಹತ್ತಿರದ ಇಲ್ಲಿನ’ ಮತ್ತು `ಅನಂತ ದೂರದ ಅಲ್ಲಿನ’ ಪರಿಸ್ಥಿತಿಗಳ ಗ್ರಹಿಕೆಯಲ್ಲಿ. ಸೂಕ್ಷ್ಮ ದರ್ಶಕದಲ್ಲಿ ಅಣುವಾಗಿರುವುದು ಅಗಾಧವಾಗಿಯೂ; ದೂರದರ್ಶಕದಲ್ಲಿ ಅಗಾಧವಾಗಿರುವುದು ಅಣುವಾಗಿಯೂ ಕಾಣಿಸುತ್ತದಲ್ಲ; ಹಾಗೆ. ಈ ವ್ಯತ್ಯಾಸವನ್ನು ಅರಿತಿದ್ದ ಋಷಿಗಳು ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಾದರು.
ವಸ್ತುವಿಗಿಂತ ಮನಸ್ಸಿನ ಹೆಚ್ಚುಗಾರಿಕೆಯ ಮೇಲೆ ಒಲವುತೋರುವುದು ಅತೀಂದ್ರಿಯ ಕಲ್ಪನೆಯಲ್ಲ. ನೀವೊಂದು ಗಗನಚುಂಬಿ ಕಟ್ಟಡವನ್ನು ನಿರ್ಮಿಸಲು ಬಯಸಿದರೆ ಕಾಂಕ್ರೀಟ್ ಮತ್ತು ಉಕ್ಕನ್ನು ರಾಶಿಹಾಕುವ ಮೊದಲು ಸಂಪರ್ಕಿಸಬೇಕಾದುದು ವಾಸ್ತುಶಿಲ್ಪಿಯನ್ನು. ನಿಜವಾದ ಕಟ್ಟಡದ ವಸ್ತುತಃ ಅಸ್ತಿತ್ವ ಮೊತ್ತಮೊದಲು ವಾಸ್ತುಶಿಲ್ಪಿಯ ಯೋಚನೆ ಮತ್ತು ಯೋಜನೆಯಲ್ಲಿ ಪ್ರಕಟವಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯು ಅನಂತಜೀವಿಯಾಗಿರುವ ಸಾಧ್ಯತೆಯು ಈಗೀಗ ಹೆಚ್ಚು ಹೆಚ್ಚು ನೈಜವಾಗುತ್ತಿದೆ. ನಮ್ಮ ನರಮಂಡಲಕ್ಕಿರುವ ಅದಮ್ಯಶಕ್ತಿಯ ಮುಖೇನ ನಾವು ಗಡಿಗಳನ್ನು ನಿರ್ಮಿಸಬಹುದು ಅಥವಾ ಅವುಗಳನ್ನು ಕೆಡವಲೂ ಬಹುದು. ಪ್ರತಿಯೊಬ್ಬ ವ್ಯಕ್ತಿಯೂ ನಿರಂತರವಾಗಿ ಆಲೋಚನೆಗಳು, ನೆನಪುಗಳು, ಬಯಕೆಗಳು, ವಸ್ತುಗಳು ಇತ್ಯಾದಿಗಳ ಅನಂತಶ್ರೇಣಿಯನ್ನು ಸೃಷ್ಟಿಸುತ್ತಿರುತ್ತಾನೆ. ಈ ಪ್ರಚೋದನೆಗಳು ಪ್ರಜ್ಞೆಯ ಸಾಗರದ ಮೂಲಕ ಅಲೆಯುತ್ತವೆ ಮತ್ತು ಕ್ರಮೇಣ ಅವೇ ವಾಸ್ತವವಾಗುತ್ತವೆ.
ಅಸ್ತಿತ್ವದ ಅತ್ಯುನ್ನತ ಗುರಿಯೆಂದರೆ; ಜೀವನಸಾಧ್ಯತೆಯ ಇನ್ನೂರು ಪ್ರತಿಶತವನ್ನು ಸಾಧಿಸುವುದು. ಮಾನವ ನರಮಂಡಲಕ್ಕೆ ಇದನ್ನು ಸಾಧಿಸುವ ಸಾಮರ್ಥ್ಯವಿದ್ದೇ ಇದೆ. ಏಕೆಂದರೆ; ಇದು ಅನಂತ ಸಾಧ್ಯತೆಯ ಆದರೆ ಗಡಿಗಳಿಂದ ಬಂಧಿಯಾದ ಹಾಗೆಯೇ ಏಕೀಕೃತವಾದ ಆದರೆ ಅನಂತ ಹಾಗೂ ಅಪರಿಮಿತವಾದ ವೈವಿಧ್ಯಮಯ ಜೀವನಕ್ಕೆ ಹೊಂದಿಕೊಳ್ಳಲು ಶಕ್ತವಾಗಿದೆ. ತಾರ್ಕಿಕವಾಗಿ ನೋಡುವುದಾದಲ್ಲಿ ಇದಕ್ಕಿಂತ ಹೊರತಾದ ಬೇರೆ ಯಾವುದೇ ಸಾಧ್ಯತೆಗಳು ಅಸ್ತಿತ್ವದಲ್ಲಿಲ್ಲ. ವಾಸ್ತವದಲ್ಲಿ ಜೀವನವು ಅನಿಯಮಿತ ಸಾಧ್ಯತೆಗಳ ಕ್ಷೇತ್ರವಾಗಿದ್ದು, ನರಮಂಡಲದ ಪೂರ್ಣಸಾಮರ್ಥ್ಯವನ್ನು ಬಳಸುವುದರಲ್ಲಿ ಮಾತ್ರವೇ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಿರುವುದು. ಇದು ಬಹುಮುಖ್ಯವಾಗಿ ಗಮನಿಸಬೇಕಾದ ಪ್ರತಿಪಾದನೆ. ಪ್ರಕೃತಿಯು ಈಗಾಗಲೇ ನಮ್ಮಲ್ಲಿ ಪ್ರಜ್ಞೆಯನ್ನು ಇರಿಸಿದ್ದು ಇದರ ಮೂಲಕ ನಮ್ಮ ಸೀಮಿತ ಆಯ್ಕೆಗಳನ್ನು ಬದಿಗೆ ಸರಿಸಿ ಯಾವುದೇ ಒಂದು ಸಮಸ್ಯೆಯ ಪರಿಹಾರಕ್ಕೆ ನೇರವಾಗಿ ಹೋಗಲು ನಮಗೆ ಸಾಧ್ಯ. ಸಮಸ್ಯೆಗಳು ವೈವಿಧ್ಯತೆಯಲ್ಲಿದ್ದರೆ ಪರಿಹಾರಗಳು ಏಕತೆಯಲ್ಲಿವೆ. ಮನಸ್ಸು-ದೇಹಗಳ ಸಂಯೋಜಿತ ಪ್ರಯತ್ನ ಪರಿಹಾರ ಸಾಧ್ಯತೆಗಳ ಮೂಲವಾಗಿದ್ದು ಇದುವೇ ಋಷಿಮುನಿಗಳ ನೇರದಾರಿಯಾಗಿತ್ತು.