
ಬೆಂಗಳೂರು: ಇಂದ್ರಿಯ ಅತೀತವಾದ ಸ್ತರದಲ್ಲಿ ಮಾನವ ತನ್ನ ಸಮಗ್ರ ವಿಕಾಸ ಸಾಧಿಸಲು ಸಂಗೀತ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಶ್ರೀ ಶಾರದಾ ಸಂಗೀತ ಸಭಾದ 21ನೇ ವಾರ್ಷಿಕೋತ್ಸವ ಅಂಗವಾಗಿ ಹನುಮಂತನಗರದ ಸ್ವಾಮಿ ವಿವೇಕಾನಂದ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 3 ದಿನಗಳ ಸಂಗೀತ ಉತ್ಸವ ಮತ್ತು ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ಕ್ರಾಂತಿ ನಂತರ ಸಂಗೀತ ತನ್ನ ಅಧ್ಯಾತ್ಮಿಕ ಸ್ತರದಿಂದ ಕೆಳಗೆ ಜಾರಿತು. ಅದು ಇಂದ್ರಿಯ ಲೋಲುಪತೆಗೆ ಪ್ರಚೋದಿಸುವ ಮಾಧ್ಯಮವಾಗಿದ್ದು ವಿಷಾದ. ಇಂದ್ರಿಯ ಅತೀತವಾದ ಸ್ತರದಲ್ಲಿ ಮಾನವ ತನ್ನ ಸಮಗ್ರ ವಿಕಾಸ ಸಾಧಿಸಲು ಸಂಗೀತವನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಇದೆ ಎಂದರು. ಶ್ರೀ ಶಾರದಾ ಸಂಗೀತ ಸಭಾದ ಸೇವೆಯನ್ನು ಅವರು ಕೊಂಡಾಡಿದರು.
ಸಂಗೀತ ಸಭಾ ಅಧ್ಯಕ್ಷ ವಿದ್ವಾನ್ ಟಿ.ಎನ್. ಶಶಿಕುಮಾರ್, ಸಭಾ ಕಾರ್ಯದರ್ಶಿ ವಿದ್ವಾನ್ ಎಸ್. ಪ್ರಶಾಂತ್ ಇತರರು ಇದ್ದರು. ಶಾಸಕ ರವಿ ಸುಬ್ರಹ್ಮಣ್ಯ, ವೇದ ವಿದ್ವಾಂಸ ಮೀಗಿನಕಲ್ಲು ವಿಶ್ವೇಶ್ವಭಟ್ ಇದ್ದರು.
ಸನ್ಮಾನ:
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಮತ್ತು ಅನುಗ್ರಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್, ಹಿರಿಯ ತಬಲಾ ಕಲಾವಿದ ಗುಂಡಾಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ನಂತರ ವಿದುಷಿ ರಮಾಮಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು.

























