ವಿವಾಹಿತ ಮಹಿಳೆಯರು ಕೌಟುಂಬಿಕ ದೌರ್ಜನ್ಯ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಹಾಗೂ ವರದಕ್ಷಿಣೆ ಕಾಯ್ದೆ ದುರ್ಬಳಕೆಯಾಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಬುಧವಾರ ಕಳವಳ ವ್ಯಕ್ತಪಡಿಸಿರುವುದು ಸದ್ಯದ ಸ್ಥಿತಿಯಲ್ಲಿ ಮಹತ್ವದ್ದಾಗಿದೆ. ನಿರ್ದಿಷ್ಟವಾಗಿ ಮಹಿಳೆಯರು ತಮ್ಮ ಪತಿ ಮತ್ತು ಆತನ ಕುಟುಂಬದ ವಿರುದ್ಧ ವೈಯಕ್ತಿಕ ಹಗೆತನಕ್ಕಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ೪೯೮ಎ(ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳದಿಂದ ಮಹಿಳೆಯರ ರಕ್ಷಣೆ) ಅನ್ನು ಸಾಧನವಾಗಿ ಬಳಸಬಾರದು ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಎನ್.ಕೋಟಿಶ್ವರಸಿಂಗ್ ಅವರಿದ್ದ ಪೀಠ ಬುಧವಾರ ವಿಚಾರಣೆ ಹಂತದಲ್ಲಿ ಅಭಿಪ್ರಾಯಪಟ್ಟಿದೆ.
ಬೆಂಗಳೂರಿನ ಸಾಫ್ಟವೇರ್ ಇಂಜಿನಿಯರ್ ಅತುಲ್ ಸುಭಾಷ್ ಎಂಬಾತ ಪತ್ನಿ ಮತ್ತು ಕುಟುಂಬದಿಂದ ಮಾನಸಿಕ ಹಿಂಸೆಗೊಳಗಾಗಿ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ದಿನದಂದೇ ಸುಪ್ರೀಂಕೋರ್ಟಿನ ತೀರ್ಪು ಈ ವರದಕ್ಷಿಣೆ ಕಾಯ್ದೆ ದುರ್ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು, ಈ ಕಾಯ್ದೆ ಮಾರ್ಪಾಡಿಗೆ ಒತ್ತಡ ಹೆಚ್ಚಾದಂತಾಗಿದೆ.
ಅತುಲ್ ಸುಭಾಷ್ ಪ್ರಕರಣ ನೇರವಾಗಿ ಸುಪ್ರೀಂಕೋರ್ಟ್ ಪ್ರಸ್ತಾಪಿಸದಿದ್ದರೂ ತೆಲಂಗಾಣದ ದಾರಾ ಲಕ್ಷ್ಮೀನಾರಾಯಣ ಮತ್ತು ಇತರರು ವರ್ಸಸ್ ತೆಲಂಗಾಣ ಸರ್ಕಾರದ ನಡುವಿನ ಪ್ರಕರಣದಲ್ಲಿ ದಾರಾಲಕ್ಷ್ಮೀನಾರಾಯಣ ಸಲ್ಲಿಸಿದ ಮೇಲ್ಮನವಿ ವಿಚಾರಣೆ ಹಂತದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ವೈವಾಹಿಕ ಭಿನ್ನಾಭಿಪ್ರಾಯದಿಂದ ಕೌಟುಂಬಿಕ ಕಲಹಗಳು ಉಂಟಾದಾಗ ಗಂಡನ ಕುಟುಂಬದ ಎಲ್ಲ ಸದಸ್ಯರನ್ನು ಆರೋಪಿಗಳನ್ನಾಗಿ ಮಾಡುವಂತಹ ಪ್ರವೃತ್ತಿ ಹೆಚ್ಚುತ್ತಿದೆ. ಇದು ನ್ಯಾಯಾಂಗದ ಅನುಭವದಿಂದ ತಿಳಿದ ಸತ್ಯ. ಹಲವು ಮಹಿಳೆಯರು ವರದಕ್ಷಿಣೆ ಕಾಯ್ದೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ಮುಗ್ಧರು, ಅವರ ಕುಟುಂಬದವರು ಸುಲಿಗೆಗೊಳಗಾಗುತ್ತಿದ್ದಾರೆ ಎಂದು ಆತಂಕದಿಂದಲೇ ಈ ಕಾಯ್ದೆ ಬದಲಾವಣೆಗೊಳ್ಳಬೇಕು ಎಂದು ಇಂಗಿತ ವ್ಯಕ್ತಪಡಿಸಿರುವುದು ಸಮಂಜಸವೇ ಆಗಿದೆ.
ನಾಲ್ಕಾರು ದಶಕಗಳ ಹಿಂದೆ ಪುರುಷರಷ್ಟೇ ದುಡಿಯುತ್ತಿದ್ದರು ಮಹಿಳೆ ಮನೆಗೆಲಸದಲ್ಲಿ ತೊಡಗಿರುತ್ತಿದ್ದರು. ವಿವಾಹದ ವೇಳೆ ವರದಕ್ಷಿಣೆ ಹೆಮ್ಮಾರಿಯಾಗಿತ್ತು. ಮಹಿಳೆ ಮತ್ತು ಹೆತ್ತವರು ಸದಾ ದೌರ್ಜನ್ಯ ಹಾಗೂ ಕಣ್ಣೀರಿನಲ್ಲಿಯೇ ಬದುಕಬೇಕಿತ್ತು. ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎಂಬ ಕ್ರೂರ ಮನಸ್ಥಿತಿ ಅಂದಿತ್ತು. ವರದಕ್ಷಿಣೆ ನಿಯಂತ್ರಣಕ್ಕಾಗಿ ದೇಶದಲ್ಲಿ ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳದಿಂದ ಮಹಿಳೆಯರ ರಕ್ಷಣೆ(ವರದಕ್ಷಿಣೆ ಕಾಯ್ದೆ) ಜಾರಿಗೆ ತರಲಾಗಿತ್ತು. ಇದು ವರದಕ್ಷಿಣೆಯ ನಿಯಂತ್ರಿಸುವಲ್ಲಿ ಆಗ ಸಾಕಷ್ಟು ಭಯ ಹುಟ್ಟಿಸಿದ್ದು ನಿಜ. ಆದರೆ, ಮಹಿಳೆಯರಿಗೆ ಶಿಕ್ಷಣ ಸರಿಸಮಾನ ದುಡಿಮೆ ಆಕೆಯ ಸಮಾನ ಹಕ್ಕು ಎಲ್ಲವೂ ಬಂದ ನಂತರ ಈಗ ಅದೇ ಕಾಯ್ದೆ ಪುರುಷರ ಮೇಲೆ ಮಾರಕವಾಗುತ್ತಿರುವ ಪ್ರಕರಣಗಳು ದೇಶಾದ್ಯಂತ ಘಟಿಸುತ್ತಿವೆ. ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಮದುವೆ ಕುಟುಂಬ, ಕೌಟುಂಬಿಕ ಕಲ್ಪನೆ, ಬಾಂಧವ್ಯ ಹಾಗೂ ಹುಟ್ಟಿದ ಮಕ್ಕಳ ಮೇಲೆ ತೀವ್ರ ತರ ಪರಿಣಾಮ ಈಗ ಕಾಣಬಹುದು.
ದೇಶದಲ್ಲಿ ೨೧ ಸಾವಿರಕ್ಕೂ ಹೆಚ್ಚು ಕೌಟುಂಬಿಕ ನ್ಯಾಯಾಲಯಗಳು ಇವೆ. ಇವುಗಳು ಸಾಲದು ಎಂಬ ವಾದವೂ ಇದೆ. ಆದರೆ, ನ್ಯಾಯಾಲಯಗಳನ್ನು ಹೆಚ್ಚಿಸಿದರೂ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು ನ್ಯಾಯಾಲಯದಿಂದ ಕಷ್ಟ.
ವರದಕ್ಷಿಣೆ ಕಾಯ್ದೆಯ ದುರುಪಯೋಗ ಇಂದು ನಿನ್ನೆಯದಂತೂ ಅಲ್ಲ. ಅನೇಕ ವಿವಾಹಿತ ಪುರುಷರು ಮತ್ತು ಅವರ ಕುಟುಂಬ ಜೀವನ ಪರ್ಯಂತ ವಿನಾಃಕಾರಣ ಸಂಕಷ್ಟಕ್ಕೊಳಗಾಗಿ ಮಾನಸಿಕ ವ್ಯವಹಾರಿಕ ಮತ್ತು ಕೌಟುಂಬಿಕ ದುಷ್ಪರಿಣಾಮವನ್ನು ಎದುರಿಸುತ್ತಿರುವುದಿದೆ. ಈಗ ೨೪ ಪುಟಗಳ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಟೆಕಿ ಅತುಲ್ ಸುಭಾಷ್ ತನ್ನ ಪತ್ನಿ ನಿಕಿತಾ ಮತ್ತು ಅವರ ಕುಟುಂಬದ ಸುಲಿಗೆ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವುದು ಇಡೀ ವರದಕ್ಷಿಣೆ ಕಾಯ್ದೆಯ ಕಟು ಚಿತ್ರಣ ತೆರೆದಿಟ್ಟಿದೆ. ಇಂತಹ ಘಟನೆ ಈ ಹಿಂದೆಯೂ ಸಂಭವಿಸಿದ್ದವು. ಪುರುಷರ ವಿರುದ್ಧ ಸುಳ್ಳು ಕೇಸ್ ಹಾಕುವ ಮತ್ತು ಕುಟುಂಬಸ್ಥರಿಗೆ ಹಿಂಸೆ ನೀಡುವವರ ವಿರುದ್ಧ ಪುರುಷ ಸಂಘಟನೆಗಳ ಹುಟ್ಟಿಕೊಂಡಿದ್ದವು. ಆದಾಗಿಯೂ ಕಾಯ್ದೆಯ ಬಲವಿಲ್ಲದೆ ಅಥವಾ ವಾಸ್ತವ ತನಿಖೆ ನಡೆಯದೆ ಮಹಿಳಾಪರ ಧೋರಣೆಗೇ ನ್ಯಾಯಾಲಯ ಮತ್ತು ತನಿಖಾಧಿಕಾರಿಗಳು ಮಹತ್ವ ನೀಡಿದ ಪರಿಣಾಮ ಶೇ. ೯೦ರಷ್ಟು ಪ್ರಕರಣಗಳು ವಾಸ್ತವ ಇದ್ದರೂ, ಪುರುಷ ವಿರುದ್ಧವೇ ತೀರ್ಪು ಬಂದವು. ವಿವಾಹ ವಿಚ್ಛೇದನ ಮತ್ತು ಜೀವನಾಂಶ ಪರಿಹಾರ ಇದು ಇತ್ತೀಚಿಗಂತೂ ಹೈ ಸೊಸೈಟಿಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಅದೇ ತಳಸ್ತರದಲ್ಲೂ ವ್ಯಾಪಿಸಿರುವುದು ಸಹಜ ಹಾಗೂ ವಿಷಾದ.
ವಿದೇಶಗಳಲ್ಲಿ ವೈವಾಹಿಕ ಸಂಬಂಧ, ಕುಟುಂಬ ಪರಿಕಲ್ಪನೆಗೂ ಭಾರತೀಯ ಸಂಸ್ಕೃತಿ, ಸಮಾಜ, ಪರಂಪರೆಗೂ ಬಹಳ ವಿಭಿನ್ನವಿದೆ. ಸಾಮಾಜಿಕ ಸ್ತರ ಮತ್ತು ಭಾವನೆ ಸಮರಸವೇ ಜೀವನ ಎನ್ನುವ ಆದರ್ಶ ನಮ್ಮಲ್ಲಿಯದು. ಎಷ್ಟೇ ಕಷ್ಟ ಬಂದರೂ ಸಂಸಾರದ ಗುಟ್ಟು ಬಹಿರಂಗಗೊಳ್ಳಬಾರದು ಎಂಬ ಸ್ವಯಂಕಟ್ಟಳೆಯನ್ನು ಹಾಕಿಕೊಂಡವರು. ಸರ್ವೋಚ್ಛನ್ಯಾಯಾಲಯ ಅಭಿಪ್ರಾಯ ಪಟ್ಟಂತೆ ವರದಕ್ಷಿಣೆ ಕಾಯ್ದೆಯನ್ನು ಮರುಪರಿಶೀಲಿಸುವ ಸಮಯವೂ ಈಗ ಬಂದಿದೆ.