ಐವತ್ತು ದಾಟುತ್ತಿದ್ದಂತೆ ದೇಹಶಕ್ತಿ ಕುಂಠಿತಗೊಳ್ಳುವುದು ವಯೋಸಹಜ ನಿಯಮ. ಆದರೆ ದೈಹಿಕ ಅಸಾಮರ್ಥ್ಯ ಮತ್ತು ಸವಾಲುಗಳನ್ನು ಮೆಟ್ಟಿನಿಂತು ರಾಷ್ಟçಜಾಗೃತಿಗಾಗಿ ಮೈಕೊಡವಿ ಎದ್ದುನಿಲ್ಲುವುದು ಭಾರತೀಯರಿಗೆ ಭಗವಂತನಿತ್ತ ಆತ್ಮಶಕ್ತಿಯ ವಿಶೇಷ ವರ. ಮೂಲೆ ಸೇರಿದ ವೃದ್ಧನೂ ನಾಡಿಗೆ ತೊಂದರೆಯಾದಾಗ ಖಡ್ಗ ಹಿಡಿದು ರಣಾಂಗಣಕ್ಕೆ ಧುಮುಕಿ ಹುತಾತ್ಮರಾದ ಕಥೆಗಳು ಒಂದೆರಡಲ್ಲ. ‘ವಯಸ್ಸು ಕೇವಲ ಸಂಖ್ಯೆ ಮಾತ್ರ’ ಎಂಬ ಉಕ್ತಿಯಂತೆ ಅಪಾರ ಹನುಮಶಕ್ತಿಯನ್ನು ಧಾರೆಯೆರೆದ ವೃದ್ಧತಪಸ್ವಿಗಳ ಆಡುಂಬೋಲ ಭರತವರ್ಷದಲ್ಲಿ ದೇಶಭಕ್ತಿಯೆಂಬುದು ಜೀವನದ ಅವಿಭಾಜ್ಯ ಅಂಗವೂ ಹೌದು. ಸನಾತನಧರ್ಮಕ್ಕೆ ಧಕ್ಕೆಯಾದಾಗ ಓಡೋಡಿ ಬರುವ ಹಿಮಾಲಯವಾಸಿ ಸಾಧುಗಳಂತೆ, ರಾಷ್ಟçದ ಅಸ್ಮಿತೆಯ ಮೇಲೆ ಕುಠಾಪ್ರಹಾರವಾದಾಗ ಹೂಂಕರಿಸುವ ಗುಣಕ್ಕೆ ಬಾಲ್ಯ, ತಾರುಣ್ಯ, ವೃದ್ಧಾಪ್ಯವೆಂಬ ಭೇದವಿಲ್ಲ.
‘ದೇಸೀ ಸಂಸ್ಕೃತಿಯ ನಾಶಕ್ಕೆ ಪ್ರಯತ್ನಿಸಿ, ಹಳ್ಳಿಗಾಡಿನ ಸೊಬಗಿಗೆ ಕೊಳ್ಳಿಯಿಟ್ಟು, ಭಾರತೀಯ ಪರಂಪರೆಯ ಮೇಲೆ ನಿತ್ಯವೂ ದಾಳಿ ನಡೆಸುತ್ತಿರುವ ಬ್ರಿಟಿಷರೇ, ನಿಮ್ಮ ಅಂತ್ಯಕಾಲ ಸಮೀಪಿಸಿದೆ. ಎಲ್ಲವೂ ನೀವಂದುಕೊಂಡಂತೆ ನಡೆಯುವುದೆಂಬ ಭ್ರಮೆಯಲ್ಲಿ ನಮ್ಮ ಭೂಮಿಯನ್ನು ಕಸಿದು ಕೃಷಿ ಚಟುವಟಿಕೆಗಳಿಗೆ ತೊಂದರೆಯಿತ್ತು ಆರ್ಥಿಕ ದರೋಡೆ ನಡೆಸುತ್ತಿರುವುದನ್ನು ತಕ್ಷಣ ನಿಲ್ಲಿಸಿ. ನಿಮ್ಮ ದೇಶದ ಮೇಲೆ ವಿದೇಶೀಯರು ಆಕ್ರಮಣಗೈದು ಮೂಲಸಂಸ್ಕೃತಿಯನ್ನು ಬದಲಾಯಿಸಲು ಪ್ರೋತ್ಸಾಹ ನೀಡಿದರೆ ನೀವದನ್ನು ಸಹಿಸುವಿರೇ? ಭಾರತೀಯರು ನಿಮ್ಮ ನಾಡಿನ ಆಡಳಿತದ ಚುಕ್ಕಾಣಿ ಹಿಡಿದು, ನಾಗರಿಕರನ್ನು ಗುಲಾಮರಂತೆ ನಡೆಸಿದರೆ ಅಸ್ತು ಅನ್ನುವಿರೇ. ನಮಗೊಂದು ನ್ಯಾಯ, ನಿಮಗೊಂದು ನ್ಯಾಯ ನೀತಿಯನ್ನು ಕೈಬಿಟ್ಟು ಇಂಗ್ಲೆಂಡ್‌ಗೆ ತೆರಳಿದರೆ ಜೀವ ಉಳಿದೀತು’ ಎಂಬ ಗಂಭೀರ ಎಚ್ಚರಿಕೆಯ ನುಡಿಯಿಂದ ಬ್ರಿಟಿಷ್ ಅಧಿಕಾರಿಗಳಿಗೆ ಸವಾಲೆಸೆದು ಭಯ ಹುಟ್ಟಿಸಿದ ದೇಶಾಭಿಮಾನಿ ಸುರೇಂದ್ರ ಸಾಯ್ ಎಪ್ಪತ್ತೈದರ ಹರೆಯದಲ್ಲೂ ಇಪ್ಪತ್ತರ ತರುಣನಂತೆ ಓಡಾಡಿದ ಕ್ರಾಂತಿವೀರ. ಒರಿಸ್ಸಾದ ಧರ್ಮಸಿಂಗ್-ದೇವಿರಾಣಿ ದಂಪತಿಗಳಿಗೆ ಜನಿಸಿದ ಸುರೇಂದ್ರರ ಬದುಕಿಡೀ ಸಂಘರ್ಷಮಯ. ವಿದೇಶೀಯರ ಅವ್ಯಾಹತ ದಾಳಿ, ಭಾರತೀಯರ ಆಕ್ರಂದನ, ನೋವು, ಅವಮಾನಗಳನ್ನು ನೋಡುತ್ತಲೇ ಬೆಳೆದ ಸಾಯ್ ಮನದಲ್ಲಿ ಬ್ರಿಟಿಷರ ಕುರಿತು ಮೂಡಿದ ಕೋಪ ಏಳು ದಶಕಗಳವರೆಗೆ ಮುಂದುವರಿಯಿತು. ಚಿಗುರು ಮೀಸೆ ಮೂಡುವ ಹೊತ್ತಿಗೆ ಖಡ್ಗ ಹಿಡಿದು ಕತ್ತಿವರಸೆ ಅಭ್ಯಾಸದಲ್ಲಿ ಪ್ರವೀಣರಾದ ಸಾಯ್ ಅಪಾರ ಜನಬೆಂಬಲ ಗಳಿಸಿದರು. ಆಂಗ್ಲರ ಆಳ್ವಿಕೆಯನ್ನು ಒಪ್ಪುವುದೆಂದರೆ ನಮ್ಮ ಬುದ್ಧಿಶಕ್ತಿ, ತೋಳ್ಬಲ, ಸಕಲ ಸಿರಿಸಂಪತ್ತನ್ನು ಅವರ ಪಾದದಡಿ ಅಡವಿಟ್ಟಂತೆ ಎಂದು ಘೋಷಿಸಿ ಜನಸಾಮಾನ್ಯರ ಹೃದಯದಲ್ಲಿ ಹೋರಾಟದ ಆದರ್ಶಗಳನ್ನು ಪ್ರತಿಷ್ಠಾಪಿಸಿದ ಸಾಯ್ ಕ್ರಾಂತಿಕಾರ್ಯ ಸರಕಾರದ ದಿಕ್ಕೆಡಿಸಿತು.
ಒಂದೊಂದೇ ರಾಜ್ಯಗಳನ್ನು ಮೋಸ, ಕೃತ್ರಿಮದ ಆಧಾರದಲ್ಲಿ ನುಂಗಿ ನೀರು ಕುಡಿದು ಬಡಜನರನ್ನು ದೋಚುವುದರಲ್ಲಿ ನಿರತರಾಗಿ ಅರಣ್ಯಸಂಪತ್ತನ್ನು ಲೂಟಿಗೈದ ಕೆಂಪಂಗಿಗಳ ಆರ್ಭಟ ಕಂಡು ಕೆಂಡಾಮಂಡಲರಾದ ಸುರೇಂದ್ರರು ಸರಕಾರದ ವಿರುದ್ಧ ತಿರುಗಿಬಿದ್ದರು. ದೇಶದೆಲ್ಲೆಡೆ ಬೀಸಿದ ೧೮೫೭ರ ಸ್ವಾತಂತ್ರ‍್ಯ ಸಂಗ್ರಾಮದ ಗಾಳಿಯನ್ನು ಒರಿಸ್ಸಾದಲ್ಲೂ ಸ್ವಾಗತಿಸಿದ ಸುರೇಂದ್ರ ಸಾಯ್, ಸಂಸ್ಥಾನಗಳ ಮುಖ್ಯಸ್ಥರುಗಳ ಮನ ಒಲಿಸಿದರಲ್ಲದೆ ದೇಶ ಆಪತ್ತಿನಲ್ಲಿರುವಾಗ ಪರಸ್ಪರ ಅವಿಶ್ವಾಸ ಒಳ್ಳೆಯದಲ್ಲವೆಂದು ಆಗ್ರಹಿಸಿದರು. ಜನಸಾಮಾನ್ಯರ ಕುರಿತು ಅತೀವ ಕಾಳಜಿಯಿದ್ದ ಸಾಯ್, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅನುಭವಿಸಲು ಸಾಧ್ಯವಾಗುವ ಸ್ವಾತಂತ್ರ‍್ಯದ ಕನಸು ತಮ್ಮದೆಂದು ಬಹಿರಂಗವಾಗಿಯೇ ಉದ್ಘೋಷಿಸಿದರು. ಸಮರದ ಕಾವು ಮುಗಿಲು ಮುಟ್ಟುತ್ತಿದ್ದಂತೆ ನೆಲಕಚ್ಚಿ ಹೋರಾಡಿದ ಸಾಯ್ ಪ್ರಯತ್ನ ಸಫಲವಾಯಿತು. ಮೂರು ವರ್ಷಗಳ ಕಾಲ ನಿರಂತರವಾಗಿ ಬ್ರಿಟಿಷರನ್ನು ಕಾಡಿ ಒಂದಿಂಚು ಭೂಮಿಯೂ ಶತ್ರುವಶವಾಗದಂತೆ ಜಾಗರೂಕತೆ ವಹಿಸಿ ವಿಜಯಧ್ವಜ ಹಾರಿಸಿದ ಸುರೇಂದ್ರರ ಸಾಹಸ ಮೆಚ್ಚಿದ ಆಂಗ್ಲ ಅಧಿಕಾರಿ ಎಡ್ವರ್ಡ್ ತನ್ನ ಡೈರಿಯಲ್ಲಿ, ‘ಸುರೇಂದ್ರ ಸಾಯ್ ಬಂಧನ ಕನಸಿನ ಮಾತು. ಅವರನ್ನು ಹಿಡಿಯಲು ಪ್ರಯತ್ನಿಸುವುದು ಸಮಯ ವ್ಯರ್ಥಕ್ಕೆ ಒಂದು ದಾರಿ’ ಎಂದು ಬರೆದು ಹೊಗಳಿದ್ದ. ಅನಿವಾರ್ಯ ಪರಿಸ್ಥಿತಿಯಲ್ಲಿ ಬ್ರಿಟಿಷರಿಗೆ ಸೆರೆಸಿಕ್ಕ ಸಾಯ್, ಹದಿನೇಳು ವರ್ಷಗಳ ಜೈಲುಶಿಕ್ಷೆಗೆ ಗುರಿಯಾದರು. ಬಂಧಿಯಾಗಿದ್ದರೂ ಜೈಲೊಳಗೆ ಕ್ರಾಂತಿಕಾರ್ಯ ಆರಂಭಿಸಿದ ಪುಣ್ಯಾತ್ಮ ಸಾಯ್, ಯುದ್ಧಕೌಶಲಗಳ ಗುಪ್ತ ತರಬೇತಿಯಿತ್ತು ಯುವಕರನ್ನು ಹುರಿದುಂಬಿಸಿದರು. ಬಿಡುಗಡೆಯ ಬಳಿಕ ದೇಹ ಜರ್ಜರಿತವಾಗಿದ್ದರೂ ಮತ್ತೆ ಕ್ರಾಂತಿಕಹಳೆಯೂದಿದ ಸಾಯ್ ಪರಾಕ್ರಮಕ್ಕೆ ಎಲ್ಲೆಯಿಲ್ಲ. ಶಿಕ್ಷೆ ಅನುಭವಿಸಿ ಸುಸ್ತಾಗಿದ್ದ ಶರೀರ ಒಂದು ಹೆಜ್ಜೆಯಿಡಲು ನಿರಾಕರಿಸಿದರೂ, ಮನಸ್ಸು ಸಾವಿರ ಹೆಜ್ಜೆ ಯೋಚಿಸುತ್ತಿತ್ತು. ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾಗಲೇ ಮತ್ತೆ ಬಂಧಿತರಾದ ಸುರೇಂದ್ರರು ಜಟಾಯುವಿನಂತೆ ಹೋರಾಡಿ ಪೋಲೀಸರ ಅಮಾನವೀಯ ಹಿಂಸೆ ತಾಳಲಾರದೆ ಸೆರೆಮನೆಯಲ್ಲೇ ಅಸುನೀಗಿದರು. ಪ್ರತಿಕ್ಷಣವೂ ದೇಶದೇಳಿಗೆಯ ಬಗೆಗೆ ಯೋಚಿಸಿ ಹೌತಾತ್ಮ್ಯದ ಗೌರಿಶಂಕರವೇರಿದ ಸುರೇಂದ್ರ ಸಾಯ್ ತ್ಯಾಗ, ಸಾಹಸ, ಬಲಿದಾನ ಸದಾ ಸ್ಮರಣೀಯ.
`ದೇವರನ್ನು ಅರ್ಚಿಸಿ, ಮಂತ್ರಗಳನ್ನು ಪಠಿಸಿ, ಘಂಟೆ-ಜಾಗಟೆಗಳನ್ನು ಬಾರಿಸಿ ಜನರ ಬಳಿಗೆ ಪರಮಾತ್ಮನನ್ನು ಕೊಂಡೊಯ್ಯುವ ಕಾರ್ಯ ಮಾತ್ರವಲ್ಲ, ರಾಷ್ಟ್ರ ರಕ್ಷಣೆಯ ವಿಚಾರ ಬಂದಾಗ ಹೂವಿನ ಅಲಂಕಾರ ಮಾಡುವ ಪುರೋಹಿತನೂ ಬಂದೂಕನ್ನು ಹಿಡಿದು ದ್ರೋಹಿಗಳ ಶಿರವನ್ನೂ ಚೆಂಡಾಡಬಲ್ಲ. ಯೌವನವಿರುವುದು ಧನಕನಕಗಳ ಸಂಗ್ರಹಕ್ಕಾಗಲೀ, ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವುದಕ್ಕಾಗಲೀ ಅಲ್ಲ. ದೇಶಕ್ಕೆ ಮೀಸಲಾಗದ ಪ್ರಾಣ, ನಾಡಿಗೆ ಅರ್ಪಿತವಾಗದ ಬದುಕು ಇದ್ದರೂ ಹೋದರೂ ಒಂದೇ’ ಎಂದು ಘರ್ಜಿಸಿ ೧೮೫೭ರ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ವೀರಾವೇಶದಿಂದ ಹೋರಾಡಿದ ಚಂದನ್ ಹಜುರಿ, ಕ್ಷಾತ್ರಬ್ರಾಹ್ಮಗಳ ಸಂಗಮ. ಸಂಪ್ರದಾಯಸ್ಥ ಧಾರ್ಮಿಕ ಪರಂಪರೆಯ ಮನೆತನದ ರಘುನಾಥ ಖುಂಟಿಯಾ – ಕಮಲಾವತಿ ದಂಪತಿಗಳಿಗೆ ಜನಿಸಿದ ಚಂದನ್, ಛಾಖಿ ಖುಂಟಿಯಾ ಎಂದೇ ಪ್ರಸಿದ್ಧರು. ಮನೆಯ ಆಧ್ಯಾತ್ಮಿಕ ವಾತಾವರಣ ಬಾಲ್ಯದಲ್ಲೇ ಛಾಖಿಯವರನ್ನು ಮೌಲಿಕವಾದ ಔನ್ನತ್ಯಕ್ಕೇರಲು ಬೇಕಾದ ಶಿಕ್ಷಣ ನೀಡಿತು. ಭಾರತೀಯ ಸಂಪ್ರದಾಯಗಳು, ಐತಿಹಾಸಿಕ ವ್ಯಕ್ತಿಗಳ ಸಾಧನೆಗಳು, ಅಪ್ಪ ಹೇಳುತ್ತಿದ್ದ ರಾಮ? ಕೃಷ್ಣರ ಕಥೆಗಳು ಬಾಲಕನಲ್ಲಿ ಅಧರ್ಮದ ವಿರುದ್ಧ ಸಿಡಿದೇಳುವ ಕೆಚ್ಚು ಮೂಡಿಸಿದರೆ, ಅಮ್ಮ ಹೇಳುತ್ತಿದ್ದ ದೇಶದ ಮತ್ತು ದೇಶೀಯರ ಮೇಲಾಗುತ್ತಿದ್ದ ದೌರ್ಜನ್ಯದ ವಿಚಾರಗಳು ಬ್ರಿಟಿಷರ ವಿರುದ್ಧ ಹೋರಾಡುವ ಪ್ರೇರಣೆ ನೀಡಿತು. ವೇದಶಾಸ್ತ್ರಗಳ ಅಧ್ಯಯನದ ಜೊತೆಜೊತೆಗೆ ಭಾರತೀಯ ಸನಾತನ ಸಂಸ್ಕೃತಿಯ ನಿತ್ಯಾನುಷ್ಠಾನ ಪ್ರತಿಯೊಬ್ಬನ ಹೊಣೆಗಾರಿಕೆಯಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಸಂಕಲ್ಪ ಸ್ವೀಕರಿಸಿದರು. ಸಣ್ಣ ವಯಸ್ಸಿನಲ್ಲೇ ಒರಿಸ್ಸಾದ ಪುರಿ ಜಗನ್ನಾಥ ದೇವಾಲಯದ ಅರ್ಚಕರಾಗಿ ನಿಯುಕ್ತಿಗೊಂಡ ಛಾಖಿ, ಭಕ್ತರ ಮನದಲ್ಲಿ ದೇಶಪ್ರೇಮದ ಜಾಗರಣೆ ಮೂಡಿಸುವ ಕೈಂಕರ್ಯಕ್ಕೆ ಮೊದಲಾದರು. ಸಾಯಂಕಾಲದ ಪೂಜೆ ಹಾಗೂ ಭಜನೆಯ ಹೆಸರಿನಲ್ಲಿ ಜನರನ್ನು ಒಗ್ಗೂಡಿಸಿ ಭಾರತೀಯರ ಮೇಲಾಗುತ್ತಿದ್ದ ಅತ್ಯಾಚಾರ, ಆರ್ಥಿಕ ತೊಂದರೆಗಳ ಬಗ್ಗೆ ವಿವರಿಸಿ ದೇಶದ ಅಲ್ಲಲ್ಲಿ ಕೇಳಿಬರುತ್ತಿದ್ದ ಹೋರಾಟದ ಕಥೆಗಳನ್ನು ಭಕ್ತಜನರಿಗೆ ತಿಳಿಸಿದರು. ತಮ್ಮ ವೃತ್ತಿಜೀವನದ ಜೊತೆಗೆ ಮುಷ್ಟಿಯುದ್ಧ, ಕುಸ್ತಿ, ಸೇನಾ ತರಬೇತಿಯನ್ನೂ ಪಡೆದು ದಕ್ಷ ಯೋಧನಾಗಿಯೂ ರೂಪುಗೊಂಡರು. ಸಮರ್ಥ ಅರ್ಚಕ ರಾಷ್ಟçರಕ್ಷಕನೂ ಆಗಬಹುದೆಂದು ನಿರೂಪಿಸಿದ್ದಷ್ಟೇ ಅಲ್ಲದೆ, ಆಧ್ಯಾತ್ಮದ ತಳಹದಿಯ ಮೇಲೆ ಸಮರ್ಥ ಪ್ರಖರ ರಾಷ್ಟçಜೀವನ ಕಟ್ಟುವ ಸಂಕಲ್ಪಕ್ಕೆ ಇನ್ನಷ್ಟು ಬಲತುಂಬಿದರು. ಸ್ವಾತಂತ್ರ‍್ಯ ಸಂಗ್ರಾಮದ ಕೂಗು ಮುಗಿಲು ಮುಟ್ಟಿದ ಸಂದರ್ಭದಲ್ಲಿ ತಾನು ಮನೆಯೊಳಗಿದ್ದರೆ ಸರಿಯಲ್ಲವೆಂದು ಭಾವಿಸಿ ತನ್ನ ಕಲಿಕೆಯನ್ನು ಬ್ರಿಟಿಷರ ಮೇಲೆ ಪ್ರಯೋಗಿಸಲು ಮುಂದಾದ ವೀರ, ತನ್ನ ಬಳಗವನ್ನು ವಿಸ್ತರಿಸಿ ಪುಟ್ಟದಾದ ಸೈನ್ಯ ಸ್ಥಾಪಿಸಿದರು. ಉತ್ತರದ ಅನೇಕ ಸೇನಾನಾಯಕರ ಸಂಪರ್ಕ ಸಾಧಿಸಿ ಅವರ ಮೂಲಕ ಹೋರಾಟದ ಸಮಗ್ರ ಚಿತ್ರಣ ಪಡೆದು ಖಡ್ಗಧಾರಿಯಾದ ಚಂದನ್ ಹಜುರಿ, ಬ್ರಿಟಿಷರ ವಿರುದ್ಧ ಕೆಂಡಕಾರಿದರು. ‘ನಮ್ಮ ದೇಶದ ಕಾನೂನುಗಳನ್ನು ಮುರಿದು ನಿಮ್ಮ ಲಾಭಕ್ಕೆ ಬೇಕಾದಂತೆ ಬದಲಾಯಿಸುವ ಅಧಿಕಾರ ಕೊಟ್ಟವರಾರು? ಭಾರತದ ಮೇಲಿನ ಸಂಪೂರ್ಣ ಹಿಡಿತ ಭಾರತೀಯರದೇ ಹೊರತು ವಿದೇಶೀ ಪ್ರಜೆಗಳದಲ್ಲ’ ಎಂದು ಘಂಟಾಘೋಷವಾಗಿ ಸಾರಿದ ಹಜುರಿ, ತಾರುಣ್ಯಪುಷ್ಪವನ್ನು ಭಾರತದ ಸೇವೆಗಾಗಿಯೇ ಸಮರ್ಪಿಸಬೇಕೆಂದು ಯುವಕರಿಗೆ ಕರೆಯಿತ್ತರು. ಹೋರಾಟ, ಸ್ಫೂರ್ತಿಕಿಡಿಗಳಿಂದ ವಿಚಲಿತರಾದ ಬ್ರಿಟಿಷರು ಚಂದನರ ಬಂಧನಕ್ಕೆ ನಿರ್ಣಯಿಸಿ ಗಯಾದಲ್ಲಿ ಸೆರೆಹಿಡಿದು ಚಿತ್ರಹಿಂಸೆಯಿತ್ತರು. ಅವರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿ ಯಾವುದೇ ವಿಚಾರಣೆಗೆ ಅವಕಾಶವನ್ನೇ ನೀಡದೆ ರಾಕ್ಷಸೀ ಹಿಂಸೆಯಿಂದ ಜೀವಚ್ಛವವಾಗಿ ಬಿಡುಗಡೆಗೊಂಡ ಚಂದನರು ತಮ್ಮ ಸಂಧ್ಯಾಕಾಲದಲ್ಲಿ ದೇವರ ಸೇವೆ ಹಾಗೂ ಪ್ರೇರಣಾದಾಯಿ ಘಟನೆಗಳನ್ನು ಯುವಕರಿಗೆ ಹೇಳುತ್ತಲೇ ಸ್ಫೂರ್ತಿ ತುಂಬಿದರು. ಶರೀರ ದುರ್ಬಲಗೊಂಡಿದ್ದರೂ ಪ್ರಬಲ ಮನೋಶಕ್ತಿಯಿಂದಲೇ ತರುಣಸಮಾಜಕ್ಕೆ ಕ್ರಾಂತಿದೀಕ್ಷೆಯಿತ್ತು ಭಗವತ್ಪಾದ ಸೇರಿದ ಚಂದನ್ ಹಜುರಿ, ಯುವಸಮಾಜದ ಹೆಮ್ಮೆ.
ನಮ್ಮೆಲ್ಲರ ಇಂದಿನ ಸುಂದರ ಬದುಕಿಗಾಗಿ ತಮ್ಮ ಸರ್ವಸ್ವವನ್ನೂ ಧಾರೆಯೆರೆದು ದೇಶಹಿತದಲ್ಲೇ ಸುಖಕಂಡು ಬದುಕಿನ ಕೊನೆಗಾಲದವರೆಗೂ ಸ್ವಾತಂತ್ರ್ಯಕ್ಕಾಗಿಯೇ ಬಡಿದಾಡಿದ ಸುರೇಂದ್ರ ಸಾಯ್ ಮತ್ತು ಚಂದನ್ ಹಜುರಿ ಅವರ ಜನ್ಮದಿನದ ಆಚರಣೆ, ಪರಾಕ್ರಮ ದಿನಕ್ಕೆ ಕಲಶಪ್ರಾಯ.