ವಕ್ಫ್ ತಿದ್ದುಪಡಿಗೆ ವಿರೋಧ ಅಗತ್ಯವಿದೆಯೇ?

0
32

೨೦೨೫ರ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷಗಳು ಈ ಕಾನೂನು ಸಂವಿಧಾನ ವಿರೋಧಿ ಎಂದು ಆಕ್ಷೇಪಣೆ ಎತ್ತಿವೆ ಮತ್ತು ಸರ್ಕಾರಕ್ಕೆ ಧರ್ಮದ ವಿಷಯದಲ್ಲಿ ಮೂಗು ತೂರಿಸುವ ಅಧಿಕಾರವಿಲ್ಲ ಎಂದು ಹೇಳಿವೆ. ಈ ತಿದ್ದುಪಡಿ ಆಳುವ ಪಕ್ಷದ ಇನ್ನೊಂದು ಸಂವಿಧಾನ ವಿರೋಧಿ ಮನೋಭಾವಕ್ಕೆ ಉದಾಹರಣೆ ಎಂದೂ ವಾಗ್ದಾಳಿ ನಡೆಸಿವೆ. ಆಳುವ ಪಕ್ಷ ಈ ರೀತಿಯ ತಿದ್ದುಪಡಿ ಈಗಿನ ಕಾಲಕ್ಕೆ ಸಮರ್ಥನೀಯ ಮತ್ತು ಅತ್ಯಂತ ಅವಶ್ಯಕ ಎಂದು ಹೇಳಿಕೊಂಡಿದೆ. ಈ ಎರಡು ವಿರೋಧಿ ನೆಲೆಗಳಲ್ಲಿ ನಾವು ಸತ್ಯವನ್ನು ಅರಸಬೇಕು.
ಎಲ್ಲಕ್ಕಿಂತ ಮೊದಲಿಗೆ ಧರ್ಮದ ವಿಷಯ ಎಂದರೆ ಯಾವುದು ಮತ್ತು ಆಸ್ತಿ ವ್ಯವಹಾರ ಮತ್ತು ಇನ್ನಿತರೆ ಧರ್ಮಸಂಬಂಧಿ ಅಲ್ಲದ ವಿಷಯಗಳು ಯಾವುವು ಎಂದು ವಿವೇಚಿಸಬೇಕಾಗಿದೆ.
ಸಂವಿಧಾನದ ಅನುಚ್ಛೇದ ೨೬ರಂತೆ ಎಲ್ಲಾ ಧರ್ಮದವರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದೆ. ಎಲ್ಲ ಮತಕ್ಕೆ ಸೇರಿದ ಜನರಿಗೂ ತಮ್ಮದೇ ಆದ ಆಸ್ತಿಯನ್ನು ಹೊಂದಿರುವ ಮತ್ತು ತಮ್ಮ ಮತಾಚರಣೆ ಮಾಡುವ ರೀತಿ ನೀತಿಗಳನ್ನು ನಿರ್ಧರಿಸುವ ಸ್ವಾತಂತ್ರ್ಯ ಇದೆ. ಅನುಚ್ಛೇದ ೨೫ರ ಪ್ರಕಾರ ಪ್ರತಿಯೊಬ್ಬರಿಗೂ ತಮ್ಮದೇ ಆದ ರೀತಿಯಲ್ಲಿ ಧಾರ್ಮಿಕ ಆಚರಣೆ ಮಾಡುವ ಸ್ವಾತಂತ್ರ್ಯ ಇದೆ. ಆದರೆ ಇದು ಅನಿಯಂತ್ರಿತ ಮತ್ತು ಅಬಾಧಿತ ಸ್ವಾತಂತ್ರ್ಯವಲ್ಲ. ಇದೇ ಅನುಚ್ಛೇದದಲ್ಲಿ ಧಾರ್ಮಿಕ ಆಚರಣೆಯ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಇನ್ನಿತರ ಧರ್ಮದ ಆಚರಣೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಕಾನೂನು ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡಲಾಗಿದೆ. ಉದಾಹರಣೆಗೆ ತಮಿಳುನಾಡಿನ ಚಿದಂಬರಂ ದೇವಸ್ಥಾನಕ್ಕೆ ಆಡಳಿತ ಅಧಿಕಾರಿಯನ್ನು ನೇಮಿಸಿದಾಗ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಆ ಸಂದರ್ಭದಲ್ಲಿ ಆಡಳಿತ ಅಧಿಕಾರಿಯನ್ನು ನೇಮಿಸುವುದು ಸಂವಿಧಾನ ವಿರೋಧಿ ಎಂದು ವಾದ ಮಂಡಿಸಲಾಗಿತ್ತು. ೨೦೦೯ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಈ ವಾದವನ್ನು ತಳ್ಳಿ ಹಾಕಿ ಸರ್ಕಾರಕ್ಕೆ ಈ ರೀತಿಯಾಗಿ ಧಾರ್ಮಿಕ ಆಚರಣೆಗೆ ಸಂಬಂಧಪಡದ ವ್ಯವಹಾರಗಳನ್ನು ನಿಯಂತ್ರಿಸುವ ಅಧಿಕಾರವಿದೆ ಎಂದು ಹೇಳಲಾಯಿತು. ಈ ಹಿನ್ನೆಲೆಯಲ್ಲಿ ನಾವು ವಕ್ಫ್ ತಿದ್ದುಪಡಿ ಕಾನೂನಿನ ಸಂವಿಧಾನಬದ್ಧತೆಯನ್ನು ವಿಮರ್ಶಿಸಬೇಕಾಗುತ್ತದೆ. ವಕ್ಫ್ ಸೃಷ್ಟಿ ಮಾಡುವಾತ ವಾಕಿಫ್. ವಾಕಿಫ್‌ನ ಉದ್ದೇಶ ಧಾರ್ಮಿಕವಾದದ್ದು. ಇದೇ ವಕ್ಫ್ ಮತ್ತು ಟ್ರಸ್ಟ್‌ಗೆ ಇರುವ ಭಿನ್ನತೆ. ಆಸ್ತಿಯನ್ನು ಭಗವಂತನಿಗೆ ಶಾಶ್ವತವಾಗಿ ಸಮರ್ಪಣೆ ಮಾಡುವುದು ವಕ್ಫ್ ಆಸ್ತಿ ಎಂದು ಅನಿಸಿಕೊಳ್ಳುತ್ತದೆ ಈ ಸಮರ್ಪಣೆ ಶಾಶ್ವತವಾದದ್ದು ಮತ್ತು ಒಮ್ಮೆ ಸಮರ್ಪಣೆ ಆದರೆ ಹಿಂದೆ ಹೋಗುವ ಮಾತಿಲ್ಲ. ಈ ಆಸ್ತಿಯನ್ನು ಮೇಲ್ವಿಚಾರಣೆ ಮಾಡುವಾತ ಮುತವಲ್ಲಿ. ಒಟ್ಟಿನಲ್ಲಿ ಈ ವಕ್ಫ್ ಆಸ್ತಿಯ ಸಮರ್ಥ ನಿರ್ವಹಣೆಯ ಉದ್ದೇಶ ಮಾತ್ರ ವಕ್ಫ್ ಕಾನೂನಿಗೆ ಸಂಬಂಧಪಡುತ್ತದೆ. ಹಾಗಿದ್ದಲ್ಲಿ ವಕ್ಫ್ ಆಸ್ತಿಯ ನಿರ್ವಹಣೆಯಲ್ಲಿ ಧಾರ್ಮಿಕ ಆಚರಣೆಯ ವಿಷಯ ಎಲ್ಲಿ ಬಂತು? ಧಾರ್ಮಿಕ ಆಚರಣೆಯ ವಿಷಯ ವಕ್ಫ್ ತಿದ್ದುಪಡಿ ಕಾನೂನಿನ ಒಳಗೆ ಬರದಿದ್ದಲ್ಲಿ ಸಂವಿಧಾನವಿರೋಧಿ ಹೇಗಾಗುತ್ತದೆ ಎನ್ನುವ ಪ್ರಶ್ನೆಗೆ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಮಂಡಿಸಿರುವ ವಾದದಲ್ಲಿ ಯಾವ ರೀತಿಯ ಸಮರ್ಥನೆ ಕಾಣುವುದಿಲ್ಲ.

ರಾಜಕೀಯ ಕಾರಣಕ್ಕೆ ವಿರೋಧ
ವಕ್ಫ ತಿದ್ದುಪಡಿ ಕಾನೂನಿನಲ್ಲಿರುವ ಅಂಶಗಳನ್ನು ಪರಿಶೀಲಿಸಿದಾಗ ವಿರೋಧ ಪಕ್ಷಗಳು ಕೇವಲ ರಾಜಕೀಯ ಕಾರಣಕ್ಕೋಸ್ಕರವೇ ವಿರೋಧ ಮಾಡುತ್ತಿರುವಂತೆ ಕಾಣುತ್ತದೆ. ಈ ತಿದ್ದುಪಡಿ ಕಾನೂನಿನಲ್ಲಿ ಸಮರ್ಥನೆ ಮಾಡಬಹುದಾದ ಒಂದು ವಿಷಯವೂ ಇಲ್ಲವೇ? ಎಲ್ಲಾ ಅಂಶಗಳಿಗೂ ವಿರೋಧವೇ ಕಾಣುತ್ತದೆಯೇ? ಕೆಲವು ಅಂಶಗಳನ್ನು ಗಮನಿಸಿದಾಗ ವಿರೋಧ ಮಾಡುವ ಕಾರಣ ಹೊಳೆಯುವುದಿಲ್ಲ.
ಉದಾಹರಣೆಗೆ ವಕ್ಫ್ ಟ್ರಿಬ್ಯುನಲ್‌ನ ಆದೇಶದ ಮೇಲೆ ಹಿಂದೆ ಅಪೀಲ್ ಹೋಗುವ ಅವಕಾಶ ಇರಲಿಲ್ಲ. ಈಗ ಆ ಅವಕಾಶ ಮಾಡಿಕೊಡಲಾಗಿದೆ. ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಂ ಸಮುದಾಯದ ವಿಭಿನ್ನ ವರ್ಗಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮುಸ್ಲಿಂ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಈ ಎಲ್ಲಾ ಅಂಶಗಳನ್ನು ವಿರೋಧಿಸುವ ಅವಶ್ಯಕತೆ ಏನಿದೆ?
ಸಂವಿಧಾನ ವಿರೋಧಿ ಅಂಶ ಏನಿದೆ?
ಈ ಕಾನೂನಿನಲ್ಲಿ ಸಂವಿಧಾನ ವಿರೋಧಿ ಅಂಶಗಳು ಕಂಡುಬರುತ್ತವೆಯೇ ಎಂದು ಗಮನಿಸಿದರೆ, ಕಾಣುವ ಒಂದು ಅಂಶವೆಂದರೆ ಇಸ್ಲಾಂ ಸಮುದಾಯಕ್ಕೆ ಸೇರಿದ ವ್ಯಕ್ತಿ ವಕ್ಫ್ ರಚನೆ ಮಾಡಬೇಕಾದರೆ ಆತ ಐದು ವರ್ಷ ಇಸ್ಲಾಂ ಧರ್ಮವನ್ನು ಅನುಸರಿಸಲೇಬೇಕು ಎನ್ನುವ ಅನುಚ್ಛೇದ. ಇದು ಮುಂದಿನ ದಿನಗಳಲ್ಲಿ ನ್ಯಾಯಾಲಯಗಳಲ್ಲಿ ಪ್ರಶ್ನೆಗೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಒಬ್ಬ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ ಐದು ವರ್ಷ ವಕ್ಫ್ ಆಸ್ತಿ ಘೋಷಣೆ ಮಾಡುವ ಹಾಗಿಲ್ಲ ಎಂದಾಗುತ್ತದೆ. ಈ ಅನುಚ್ಛೇದವನ್ನು ಉಲ್ಲೇಖಿಸಿ ಧರ್ಮದ ವಿಷಯಕ್ಕೆ ಸಂಬಂಧಪಟ್ಟಂತೆ ಸರ್ಕಾರದ ನಿಯಂತ್ರಣ ಎನ್ನುವ ವಾದ ಮಂಡಿಸುವ ಸಾಧ್ಯತೆ ಇದೆ. ಇದಲ್ಲದೆ ತಿದ್ದುಪಡಿ ಕಾನೂನಿನ ಬೇರೆ ವಿಷಯಗಳಲ್ಲಿ ವಿರೋಧ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಮಂಡಿಸುತ್ತಿರುವ ವಾದದಲ್ಲಿ ಹೆಚ್ಚಿನ ಸತ್ವ ಕಂಡುಬರುವುದಿಲ್ಲ.
ಕೆಲವು ರಾಜಕೀಯ ಪಕ್ಷಗಳು ಮತಬ್ಯಾಂಕಿನ ರಕ್ಷಣೆಗೋಸ್ಕರ ಈ ನಿಲುವು ತೆಗೆದುಕೊಂಡಂತೆ ಕಾಣುತ್ತಿದೆ. ಈ ಕಾನೂನಿನ ಸಮಗ್ರ ವಿಶ್ಲೇಷಣೆಯನ್ನು ಮಾಡಿದಾಗ ಇದು ಕೇವಲ ಒಂದು ಸಮುದಾಯದ ಆಸ್ತಿಯ ನಿರ್ವಹಣೆಗೆ ಸಂಬಂಧಪಟ್ಟ ಕಾನೂನು ಮಾತ್ರ. ಈ ಕಾನೂನಿಗಿಂತ ಇನ್ನೂ ಹೆಚ್ಚು ಸರ್ಕಾರದ ನಿಯಂತ್ರಣ ಇರುವುದು ಹಿಂದೂ ಸಮುದಾಯಗಳಿಗೆ ಸಂಬಂಧಪಟ್ಟ ಧಾರ್ಮಿಕ ಸಂಸ್ಥೆಗಳಲ್ಲಿ.

ಬಹುಸಂಖ್ಯಾತರೇ ನತದೃಷ್ಟರು!
ಜಗನ್ನಾಥ ಪುರಿ ದೇವಸ್ಥಾನದಲ್ಲಿ ಪ್ರಸಾದವನ್ನು ನಿರ್ವಹಣೆ ಮಾಡುವ ವಿಷಯವನ್ನು ಸಹ ಸರ್ಕಾರ ನಿಯಂತ್ರಣ ಮಾಡಬಹುದು ಎಂದು ನ್ಯಾಯಾಲಯದ ತೀರ್ಪಿದೆ. ಸಂವಿಧಾನ ರಚನೆಯ ಸಂದರ್ಭದಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡದ ರೀತಿಯಲ್ಲಿ ರಕ್ಷಣೆ ಕೊಡುವ ಅವಶ್ಯಕತೆ ಕಂಡುಬಂದ ಕಾರಣ ಈ ರೀತಿಯಾದ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ.
ಆದರೆ ಈಗಿನ ದಿನಗಳಲ್ಲಿ ಬಹುಸಂಖ್ಯಾತರಿಗೆ ಇರದ ಸವಲತ್ತುಗಳನ್ನು ಅಲ್ಪಸಂಖ್ಯಾತರಿಗೆ ಒದಗಿಸಲಾಗಿದೆ. ಅಲ್ಪಸಂಖ್ಯಾತರು ಬಹುಸಂಖ್ಯಾತರ ಮೇಲೆ ಸವಾರಿ ಮಾಡುವ ಸಂದರ್ಭದಲ್ಲಿ ಬಹುಸಂಖ್ಯಾತರ ರಕ್ಷಣೆಗೆ ಪರಿಹಾರ ಮಾರ್ಗವೇನು ಎಂಬುದು ಪ್ರಶ್ನಾರ್ಥಕ.

ವಕ್ಫ್ ತಿದ್ದುಪಡಿ ಕಾನೂನಿನ ಪ್ರಮುಖ ಅಂಶಗಳು ಹೀಗಿವೆ
ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿಯಾಗಿ ಮಾಡುವ ವ್ಯಕ್ತಿಯು ಇಸ್ಲಾಂ ಧರ್ಮಕ್ಕೆ ಸೇರಿದವನಾಗಿರಬೇಕು ಮತ್ತು ೫ ವರ್ಷಕ್ಕೆ ಕಡಿಮೆ ಇಲ್ಲದೆ ಆತ ಇಸ್ಲಾಂ ಧರ್ಮವನ್ನು ಅನುಸರಿಸುವಂತಹ ವ್ಯಕ್ತಿ ಆಗಿರಬೇಕು.
ವಕ್ಫ್ ಆಸ್ತಿಗಳ ಮಾಲೀಕತ್ವವನ್ನು ನಿರ್ಧರಿಸುವ ಅಧಿಕಾರ ಜಿಲ್ಲಾಧಿಕಾರಿಗಳ ಹುದ್ದೆಗಿಂತ ಮೇಲಿರುವ ಒಬ್ಬ `ನಿಯುಕ್ತಿಗೊಂಡ ಅಧಿಕಾರಿ’ಗೆ ಇದೆ.
ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿಯಾಗಿ ಮಾಡಬೇಕಾದರೆ ಆ ವ್ಯಕ್ತಿಗೆ ಆ ಆಸ್ತಿಯ ಮೇಲೆ ಮಾಲೀಕತ್ವ ಇರಬೇಕು.
ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಣೆ ಮಾಡುವಂತಿಲ್ಲ. ಅಂತಹ ಸಂದರ್ಭದಲ್ಲಿ ಈ ವಿಷಯದ ತೀರ್ಮಾನ ಮಾಡುವ ಅಧಿಕಾರ ನಿಯುಕ್ತಿಗೊಂಡ ಅಧಿಕಾರಿಯ ವ್ಯಾಪ್ತಿಯಲ್ಲಿ ಬರುತ್ತದೆ.
ವಕ್ಫ್ ಆಸ್ತಿಗಳನ್ನು ಸರ್ವೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.
ಕೇಂದ್ರ ಕೌನ್ಸಿಲ್‌ನಲ್ಲಿ ನಿವೃತ್ತಿ ಹೊಂದಿದ ಇಬ್ಬರು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಿಸುವ ಅವಕಾಶ ಇದೆ ಮತ್ತು ಪ್ರಖ್ಯಾತಿ ಹೊಂದಿದ ಒಬ್ಬ ವಕೀಲರನ್ನು ನೇಮಿಸುವ ಅವಕಾಶವಿದೆ.
ವಕ್ಫ್ ಬೋರ್ಡ್ನಲ್ಲಿ ವ್ಯಾಪಾರಿ ಕ್ಷೇತ್ರ, ಸಾಮಾಜಿಕ ಕ್ಷೇತ್ರ, ಆರ್ಥಿಕ ಕ್ಷೇತ್ರ, ಕೃಷಿ ಕ್ಷೇತ್ರ ಇದರಲ್ಲಿ ಸಾಧನೆ ಮಾಡಿದ ಇಬ್ಬರು ವ್ಯಕ್ತಿಗಳನ್ನು ನೇಮಿಸುವ ಅವಕಾಶ ಇದೆ.
ಮುಸ್ಲಿಂ ಅನುಯಾಯಿಗಳನ್ನು ವಕ್ಫ್ ಬೋರ್ಡ್‌ಗೆ ನೇಮಿಸುವಾಗ ಕನಿಷ್ಠ ಪಕ್ಷ ಇಬ್ಬರು ವ್ಯಕ್ತಿಗಳು ಮಹಿಳೆಯಾಗಿರಬೇಕು.
ವಕ್ಫ್ ಬೋರ್ಡ್‌ನಲ್ಲಿ ಕನಿಷ್ಠ ಒಬ್ಬಾತ ಶಿಯಾ, ಸುನ್ನಿ ಮತ್ತು ಇನ್ನಿತರ ಹಿಂದುಳಿದ ವರ್ಗಗಳಿಗೆ ಸೇರಿದ ಮುಸ್ಲಿಂ ಸಮುದಾಯದ ವ್ಯಕ್ತಿ ಇರಬೇಕು.
ಈ ತಿದ್ದುಪಡಿ ಕಾನೂನು ಜಾರಿಗೆ ಬಂದ ನಂತರ ಯಾವುದೇ ವಕ್ಫ್ ರಚನೆಯಾಗಬೇಕಾದರೆ ಬರವಣಿಗೆಯ ದಾಖಲೆಯಿಂದಲೇ ರಚನೆಯಾಗಬೇಕು.

Previous articleಅತೀ ಶ್ರೀಮಂತರ ಸಂಖ್ಯೆ ಏರಿಕೆ ಶುಭ ಸೂಚನೆ ಅಲ್ಲ
Next articleಗ್ಯಾರಂಟಿ ಯೋಜನೆ-ಪರಿಷ್ಕರಣೆಗೆ ಇದು ಸಕಾಲ