ಕಲಬುರಗಿ: ರೈಲಿನಿಂದ ಇಳಿದ ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ಒಬ್ಬರು ತಮ್ಮ ವಾಹನ ಹತ್ತುವಾಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಎರಡು ಕೋಟಿ ರೂ. ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಕಲಬುರಗಿ ರೈಲ್ವೆ ನಿಲ್ದಾಣ ಬಳಿ ಶನಿವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಹಣ ಯಾತಕ್ಕಾಗಿ ಸಾಗಾಟ ಮಾಡಲಾಗಿದೆ ಎಂಬ ವಿಚಾರಣೆ ನಡೆದಿದೆ. ಎಲ್ಲಿಂದ ಎಲ್ಲಿಗೆ ಹಣ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಲಬುರಗಿ ಮಾಜಿ ಮೇಯರ್ ಅವರ ಮಗಳ ಹೆಸರಿನಲ್ಲಿ ಕಾರ್ ಇದೆ. ಕಾರ್ ಮತ್ತು ಎರಡು ಕೋಟಿ ರೂ. ವಶಕ್ಕೆ ಪಡೆದಿರುವ ಆದಾಯ ಇಲಾಖೆ ಅಧಿಕಾರಿಗಳು ಎಲ್ಲ ಆಯಾಮಗಳಿಂದಲೂ ತನಿಖೆ ಚುರುಕುಗೊಳಿಸಿದ್ದಾರೆ. ಈಗ ಕಲಬುರಗಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಕಲಬುರಗಿ ನಗರದಲ್ಲಿ ಐಟಿ ಅಧಿಕಾರಿಗಳ ಮೊದಲ ಭರ್ಜರಿ ಕಾರ್ಯಾಚರಣೆ ಇದಾಗಿದೆ.
























