ರೈತರು ಉತ್ತುವುದು, ಬಿತ್ತುವುದು ನಿಲ್ಲಿಸಿದರೆ ಯಾರೂ ಬದುಕಲ್ಲ

0
6

ಧಾರವಾಡ: ರೈತರು ಉತ್ತುವುದು, ಬಿತ್ತುವುದನ್ನು ನಿಲ್ಲಿಸಿದರೆ ಯಾರೂ ಕೂಡ ಬದುಕಲು ಸಾಧ್ಯವಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಲೋಕಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.
ಅವರು ಸಮಾಜವಿಜ್ಞಾನಿ ಡಾ. ಪ್ರಕಾಶ ಭಟ್ ಅವರ “ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಹರವಾಸಿಗಳು ತಾವು ಮಾಡುವ ಕೆಲಸ ನಿಲ್ಲಿಸಿದರೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ಆದರೆ ಹಳ್ಳಿಗಳಲ್ಲಿನ ಕೃಷಿಕರು ಕೃಷಿ ಮಾಡುವುದನ್ನು ಬಿಟ್ಟರೆ ಯಾರೂ ಬದುಕಿ ಉಳಿಯುವುದಿಲ್ಲ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ರೈತರನ್ನು ಕಡೆಗಣಿಸುತ್ತಿವೆ. ಹಳ್ಳಿಗಳನ್ನು ನಿರ್ಲಕ್ಷಿಸುತ್ತಿವೆ ಎಂದರು.
ಹಳ್ಳಿಗಳ ಜನರು ಪ್ರಗತಿ ಹೊಂದುವುದನ್ನು ತಡೆಯುವ ಷಡ್ಯಂತ್ರ ನಡೆದಿದೆ. ರೈತರು ಸ್ವಾವಲಂಬಿಗಳಾದರೆ ತಮ್ಮ ಕುರ್ಚಿಗೆ ಧಕ್ಕೆಯಾಗುವುದೆಂಬ ಆತಂಕ ರಾಜಕಾರಣಿಗಳಿಗಿದೆ. ರೈತರ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಲು ಸಾಧ್ಯವಾಗದಿರುವುದು ನೋವಿನ ಸಂಗತಿ. ಇದು ಅನುಷ್ಠಾನಗೊಂಡರೆ ನಮ್ಮ ಸ್ಥಿತಿ, ದೇಶದ ಸ್ಥಿತಿ ಸುಧಾರಿಸುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಡಿ.ಆರ್. ಪಾಟೀಲ ಅವರಿಗೆ “ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಕೃತಿ ನೀಡಿ ಗೌರವಿಸಲಾಯಿತು.

Previous articleಸಿಡಿಲು ಬಡಿದು ರೈತ ಸಾವು
Next articleಅಹಿತಕರ ಘಟನೆಗಳಿಗೆ ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವೇ ಕಾರಣ