ರೈತರಿಗೆ ಪರಿಹಾರ ವಿಳಂಬ: ಸಣ್ಣ ನೀರಾವರಿ ಕಚೇರಿ ವಸ್ತುಗಳ ಜಪ್ತಿ

0
31

ಧಾರವಾಡ: ಕಾಲುವೆ ನಿರ್ಮಾಣ ಕಾಮಗಾರಿಗಾಗಿ ೨೦೦೨ರಲ್ಲಿಯೇ ರೈತರ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಂಡು ಹೆಚ್ಚಿನ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಪ್ರಕಾರ ಮಂಗಳವಾರ ಇಲ್ಲಿಯ ಸಣ್ಣ ನೀರಾವರಿ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಲಾಯಿತು.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಯಳವಟ್ಟಿ ಗ್ರಾಮದ ರೈತರ ಜಮೀನುಗಳನ್ನು ಕಳೆದ ೨೦೦೨ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ, ಹೆಚ್ಚಿನ ಪರಿಹಾರ ಕೋರಿ ರೈತರು ಹಾನಗಲ್‌ನ ಸಿವಿಲ್ ಜಡ್ಜ್, ಸೀನಿಯರ್ ಡಿವಿಜನ್ ಮೊರೆ ಹೋಗಿದ್ದರು. ಕಳೆದ ೨೦೧೭ರಲ್ಲಿ ನ್ಯಾಯಾಲಯ ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸೂಚಿಸಿದರೂ ಪರಿಹಾರ ನೀಡಿದ್ದಿಲ್ಲ.
ಈ ಹಿನ್ನೆಲೆಯಲ್ಲಿ ಮಂಗಳವಾರ ಸಣ್ಣ ನೀರಾವರಿ ಇಲಾಖೆಯ ಮೂರು ತಿಜೋರಿ, ೧ ಝರಾಕ್ಸ್ ಕಮ್ ಪ್ರಿಂಟರ್, ೨ ಕಲರ್ ಪ್ರಿಂಟರ್, ೪ ಕಂಪ್ಯೂಟರ್, ಒಂದು ಕುರ್ಚಿ ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಯಿತು.
ಏನಿದು ಪ್ರಕರಣ…?
ಶಿಗ್ಗಾವಿ ತಾಲೂಕಿನ ಬತ್ತಿಕೇರಿಯಿಂದ ಹಾನಗಲ್ ತಾಲೂಕಿನ ಬೆಳಗಾಲಪೇಟೆ ಕೆರೆಯ ವರೆಗೆ ಪೂರಕ ಕಾಲುವೆ ನಿರ್ಮಾಣ ಮಾಡಲು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಯಳವಟ್ಟಿ ಗ್ರಾಮದ ರೈತರಾದ ಶಿವಪ್ಪ ಧಣ್ಯಪ್ಪ ಬೆನಕಪ್ಪನವರ(೧೮ ಗುಂಟೆ), ಕಮಲವ್ವ ಫಕ್ಕೀರಪ್ಪ ತಳವಾರ ಮತ್ತು ಶರಣಪ್ಪ ಮಂಜಪ್ಪ ತಳವಾರ(೧೦ ಗುಂಟೆ) ಜಮೀನುಗಳನ್ನು ಕಳೆದ ೨೦೦೨ರಲ್ಲಿಯೇ ಜಪ್ತಿ ಮಾಡಲಾಗಿತ್ತು.
ಭೂಸ್ವಾಧೀನ ಮಾಡಿಕೊಂಡ ಜಮೀನುಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ಹಾನಗಲ್‌ನ ಸಿವಿಲ್ ಜಡ್ಜ್, ಸೀನಿಯರ್ ಡಿವಿಜನ್ ಮೆಟ್ಟಿಲೇರಿದ್ದರು. ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯ ನೊಂದ ರೈತರಿಗೆ ಪ್ರತಿ ಗುಂಟೆ ಜಮೀನಿಗೆ ೧೦ ಸಾವಿರ ರೂ. ಪರಿಹಾರ ನೀಡುವಂತೆ ೨೦೧೭ರಲ್ಲಿಯೇ ಆದೇಶ ಮಾಡಿತ್ತು. ಆದರೆ, ಪರಿಹಾರ ಒದಗಿಸುವಲ್ಲಿ ಸಣ್ಣ ನೀರಾವರಿ ಇಲಾಖೆ ವಿಫಲವಾಗಿತ್ತು.
ಈಗಾಗಲೇ ಎರಡು ಬಾರಿ ಕಚೇರಿ ಜಪ್ತಿಗೆ ನ್ಯಾಯಾಲಯ ಆದೇಶಿದ್ದರೂ ಒಂದು ವಾರ-೧೫ ದಿನಗಳ ಒಳಗಾಗಿ ಪರಿಹಾರ ಒದಗಿಸುವುದಾಗಿ ಹೇಳಿ ಮಾತಿಗೆ ತಪ್ಪಿತ್ತು. ಇದರಿಂದ ಬೇಸತ್ತು ಮಂಗಳವಾರ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಭೂಮಾಲೀಕರ ಪರ ವಕೀಲ ಎಂ.ಎನ್. ಕ್ಯಾಲಕೊಂಡ `ಸಂಯುಕ್ತ ಕರ್ನಾಟಕ’ಕ್ಕೆ ತಿಳಿಸಿದರು.

Previous articleಜೆಬಿಎಸ್‌ಗೆ ಮೊದಲ ಬಲಿ
Next articleಜಾತಿ ಗಣತಿ ವರದಿ ಅನುಷ್ಠಾನ ಶತಸಿದ್ಧ