ರೆವಿನ್ಯೂ ಬಡಾವಣೆ ನಿರ್ಮಾಣಕ್ಕೆ ಬ್ರೇಕ್

ರೆವಿನ್ಯೂ ಬಡಾವಣೆ ಇನ್ನು ಮುಂದೆ ತಲೆಎತ್ತದಂತೆ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದು ಜಾರಿಗೆ ಬರಬೇಕು ಎಂದರೆ ಕಟ್ಟುನಿಟ್ಟಿನ ಕ್ರಮ ಅಗತ್ಯ. ರಾಜಕಾರಣಿಗಳು ಮತ್ತು ಅಧಿಕಾರಿಗಳು ದೃಢ ಸಂಕಲ್ಪ ಮಾಡಿದರೆ ನಿಲ್ಲಿಸಬಹುದು. ಎಲ್ಲ ಸರ್ಕಾರಗಳ ಕಾಲದಲ್ಲೂ ರೆವಿನ್ಯೂ ಬಡಾವಣೆ ನಿರ್ಮಾಣ ಮತ್ತು ಅದನ್ನು ಸಕ್ರಮಗೊಳಿಸುವುದು ಅಗಾಗ್ಗೆ ನಡೆಯುತ್ತ ಬಂದಿದೆ. ಎಲ್ಲ ಸರ್ಕಾರಗಳೂ ರೆವಿನ್ಯೂ ಬಡಾವಣೆಗಳ ನಿರ್ಮಾಣಕ್ಕೆ ಬ್ರೇಕ್ ಹಾಕುವುದಾಗಿ ಹೇಳುತ್ತ ಬಂದಿದೆ. ಆದರೂ ಸಂಪೂರ್ಣವಾಗಿ ಇದನ್ನು ನಿಲ್ಲಿಸಲು ಬರುವುದಿಲ್ಲ. ರಾಜ್ಯದಲ್ಲಿ ಒಟ್ಟು ೫೪.೦೧ ಲಕ್ಷ ಆಸ್ತಿ ಇವೆ. ಇದರಲ್ಲಿ ೩೪.೩೫ ಲಕ್ಷ ಆಸ್ತಿ ಅನಧಿಕೃತ. ಇವುಗಳಿಗೆ ಬಿ ಖಾತಾ ನೀಡಲು ಈಗ ಸರ್ಕಾರ ತೀರ್ಮಾನಿಸಿದೆ. ಸಚಿವ ಸಂಪುಟದ ಉಪ ಸಮಿತಿ ಈಗ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಕೈಗೊಂಡ ತೀರ್ಮಾನಗಳಿಗೆ ಸಚಿವ ಸಂಪುಟದ ಅನುಮೋದನೆ ದೊರಕಿದೆ. ಇದರಿಂದ ಸ್ಥಳೀಯ ಸಂಸ್ಥೆಗಳ ಆದಾಯ ಅಧಿಕಗೊಳ್ಳಲಿದೆ. ಬೆಂಗಳೂರು ನಗರದ ಸುತ್ತ ತಲೆಎತ್ತಿರುವ ಅನಧಿಕೃತ ಕಟ್ಟಡಗಳಿಗೆ ಸರ್ಕಾರ ಪ್ರತ್ಯೇಕ ನಿಯಮಗಳನ್ನು ಜಾರಿಗೆ ತಂದಿದೆ.
ನಿಯಮಗಳು ಕಟ್ಟುನಿಟ್ಟಾಗಿದ್ದರೂ ಸ್ಥಳೀಯ ರಾಜಕಾರಣ ಪ್ರಮುಖ ಪಾತ್ರವಹಿಸುತ್ತದೆ. ಈ ಸಮಸ್ಯೆಯ ಮೂಲ ಇರುವುದು ಜಿಲ್ಲಾಧಿಕಾರಿ ಕಚೇರಿಯಲ್ಲೇ. ಅಲ್ಲಿಂದಲೇ ಎಲ್ಲ ಸಮಸ್ಯೆ ಆರಂಭ. ಯಾರೇ ರೆವಿನ್ಯೂ ಬಡಾವಣೆ ಮಾಡಬೇಕು ಎಂದರೆ ಮೊದಲು ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಒಪ್ಪಿಗೆ ಪಡೆಯಬೇಕು. ಇದನ್ನು ಜಿಲ್ಲಾಧಿಕಾರಿಗಳೇ ನೀಡಬೇಕು. ಅವರಿಗೆ ತಿಳಿಯದೇ ಅನಧಿಕೃತ ನಿವೇಶನಗಳು ತಲೆಎತ್ತಲು ಸಾಧ್ಯವಿಲ್ಲ. ಕೃಷಿಯೇತರ ಬಳಕೆಗೆ ಅನುಮತಿ ಸಿಕ್ಕ ಮೇಲೆ ನಗರ ಯೋಜನಾ ಪ್ರಾಧಿಕಾರದ ಒಪ್ಪಿಗೆ ಪಡೆಯಬೇಕು. ಆಗ ಸಂಪೂರ್ಣ ಲೇಔಟ್ ನೀಲನಕ್ಷೆಯನ್ನು ಸಲ್ಲಿಸಬೇಕು. ಅದರಲ್ಲಿ ಮನೆಗಳು, ರಸ್ತೆಗಳು, ಉದ್ಯಾನವನ, ಸಾರ್ವಜನಿಕ ಉಪಯೋಗಕ್ಕೆ ನಿವೇಶನಗಳನ್ನು ನಿಗದಿಪಡಿಸಬೇಕು. ಇಷ್ಟೆಲ್ಲ ಪ್ರಕ್ರಿಯೆ ಅನಧಿಕೃತವಾಗಿ ನಡೆಯಲು ಬರುವುದಿಲ್ಲ. ಎಲ್ಲೋ ಒಂದು ಕಡೆ ವ್ಯವಸ್ಥಿತ ಜಾಲ ಇದರ ಹಿಂದೆ ಕೆಲಸ ಮಾಡುತ್ತಿರುವುದು ಸ್ಪಷ್ಟ. ಕೆಲವೇ ಜನರು ಈ ಕೆಲಸ ಮಾಡಲು ಬರುವುದಿಲ್ಲ. ಹಳ್ಳಿಯಿಂದ ನಗರದವರೆಗೆ ಎಲ್ಲ ಕಡೆ ಜನಸಂಖ್ಯೆ ಅಧಿಕಗೊಂಡಂತೆ ಮನೆಗಳ ನಿರ್ಮಾಣ ಕಾರ್ಯವೂ ಮುಂದುವರಿಯುವುದು ಅಗತ್ಯ. ಹಿಂದೆ ನಗರಯೋಜನಾ ಪ್ರಾಧಿಕಾರ ಮುಂದಿನ ೨೦ ವರ್ಷಗಳ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿ ಪ್ರದೇಶದ ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸುತ್ತದೆ. ಆದರೆ ಈ ನೀಲನಕ್ಷೆಯಂತೆ ಕೆಲಸಗಳು ನಡೆಯುವುದೇ ಇಲ್ಲ. ಪ್ರತಿಯೊಂದು ನಗರದಲ್ಲೂ ಬಿಡಿಎ ಮಾದರಿಯಲ್ಲಿ ಲೇಔಟ್ ನಿರ್ಮಿಸುವ ಪ್ರಾಧಿಕಾರಗಳು ಅಸ್ತಿತ್ವದಲ್ಲಿವೆ. ಆದರೆ ಇವುಗಳು ತಮ್ಮ ಮಹತ್ವವನ್ನು ಕಳೆದುಕೊಂಡಿದೆ. ಬೆಂಗಳೂರು ನಗರ ಸೇರಿದಂತೆ ಎಲ್ಲ ನಗರಗಳಲ್ಲಿ, ಪಟ್ಟಣಗಳಲ್ಲಿ ಖಾಸಗಿ ಲೇಔಟ್‌ಗಳ ನಿರ್ಮಾಣ ಕಾರ್ಯ ಶರವೇಗದಲ್ಲಿ ಸಾಗುತ್ತಿದೆ. ಇದರಿಂದ ಯಾವುದೇ ನಗರವನ್ನು ನೋಡಿದರೂ ಪೂರ್ವ ನಿಯೋಜತ ಬೆಳವಣಿಗೆ ಕಂಡು ಬರುತ್ತಿಲ್ಲ. ರಾಜ್ಯದ ಎಲ್ಲ ನಗರಗಳಿಗೆ ಅಂದಾಜು ನಿರೀಕ್ಷೆಯೂ ಮೀರಿ ಮನೆಗಳ ನಿರ್ಮಾಣ ಹಗಲು ಇರುಳು ನಡೆಯುತ್ತಿದೆ. ಹೀಗಾಗಿ ಬೆಳವಣಿಗೆಯನ್ನು ಗುರುತಿಸುವುದು ಕಷ್ಟವಾಗಿದೆ.
ಸರ್ಕಾರ ಈಗ ಕಂದಾಯ ಭೂಮಿಯಲ್ಲಿ ಕಟ್ಟಿದ ಎರಡನೇ ದರ್ಜೆಯ ನಗರಗಳ ಮನೆಗಳಿಗೆ ಬಿ ಖಾತೆ ನೀಡಿ ಮನೆಕಂದಾಯದ ವ್ಯಾಪ್ತಿಗೆ ತರಲು ತೀರ್ಮಾನಿಸಿದೆ. ಇದರೊಂದಿಗೆ ಇ_ಖಾತಾ ವಿತರಣೆಯೂ ಮುಂದುವರಿಯಬೇಕು. ಆಗ ಎ-ಖಾತೆಯವರೂ ಇ-ಖಾತೆ ಮೂಲಕ ಹೆಚ್ಚಿನ ಮನೆಕಂದಾಯ ನೀಡಿ ದಾಖಲೆಗಳನ್ನು ಪಡೆಯುವರು. ಅಮೇಲೆ ಪೋಡಿ, ಸಮೀಕ್ಷೆ ಮುಂದಾದ ಕೆಲಸಗಳಿಗೆ ಗಮನಹರಿಸಬೇಕು. ಸ್ಥಳೀಯ ಸಂಸ್ಥೆಗಳ ಆದಾಯ ಅಧಿಕಗೊಳ್ಳದಿರುವುದಕ್ಕೆ ಕಂದಾಯ ನಿವೇಶನಗಳೂ ಕಾರಣ. ಬೆಂಗಳೂರು ನಗರ ಸೇರಿದಂತೆ ಪ್ರಮುಖ ನಗರಗಳಲ್ಲಿ ಅನಧಿಕೃತಗಳ ಸಂಖ್ಯೆ ಹೆಚ್ಚಾಗಿದೆ. ಅನಧಿಕೃತ ಮನೆಗಳಿಗೆ ಖಾತೆ ಮಾಡಿಕೊಟ್ಟು ಮಹಾನಗರಪಾಲಿಕೆಗೆ ಹೆಚ್ಚು ವರಮಾನ ಬರುವಂತೆ ಮಾಡಬಹುದು. ಈಗ ಎಲ್ಲ ಬಡಾವಣೆಗಳಿಗೆ ರಸ್ತೆ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಒದಗಿಸುವುದು ಸ್ಥಳೀಯ ಸಂಸ್ಥೆಯ ಕರ್ತವ್ಯ. ವ್ಯಾಪಾರ-ವ್ಯವಹಾರ ನಗರಗಳಲ್ಲಿ ಕೇಂದ್ರೀಕೃತಗೊಳ್ಳುತ್ತಿರುವುದರಿಂದ ಮನೆಗಳ ನಿರ್ಮಾಣ ಕೂಡ ಅಧಿಕಗೊಳ್ಳುತ್ತಿದೆ. ಹೀಗಾಗಿ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಅಧಿಕಗೊಳ್ಳುತ್ತಿದೆ.
ರೆವಿನ್ಯೂ ನಿವೇಶನದ ಮೂಲಕ ಬಡಾವಣೆಗಳು ತಲೆಎತ್ತಿದರೆ ಅದಕ್ಕೆ ರಾಜಕಾರಣಿ ಮತ್ತು ಅಧಿಕಾರಿಗಳ ಕೈವಾಡ ಕಾರಣ ಎಂದು ಹೇಳುವ ಅಗತ್ಯವಿಲ್ಲ.
ಈಗ ಬಿಡಿಎ ರೀತಿ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಕೆಲಸ ನಡೆಯಬೇಕಿದೆ. ರಾಜ್ಯದ ಬೃಹತ್ ನಗರಗಳಲ್ಲಿ ಕಟ್ಟಡ ನಿರ್ಮಾಣ ಸ್ಥಳೀಯ ಸಂಸ್ಥೆಗಳ ಹತೋಟಿಯಲ್ಲಿಲ್ಲ. ಜನ ಯಾವುದೇ ಲೈಸನ್ಸ್ ಪಡೆಯದೇ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವುದು ದೊಡ್ಡ ತಲೆನೋವಾಗಿದೆ. ಯಾವುದೇ ಅನುಮೋದನೆ ಪಡೆಯದೆ ನಿರ್ಮಿಸಿದ ಕಟ್ಟಡ ಕುಸಿದು ಅಮಾಯಕರು ಸತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಮುಜುಗರಕ್ಕೆ ಒಳಗಾಗುವುದು ಸಹಜ. ಬೃಹತ್ ನಗರಗಳು ಬೆಳೆದಂತೆ ಕನಿಷ್ಠ ಮೂಲಭೂತ ಸವಲತ್ತು ಕಲ್ಪಿಸಿಕೊಡುವುದೂ ಕಷ್ಟವಾಗಲಿದೆ. ಅನಧಿಕೃತವೋ, ಅಧಿಕೃತವೋ ನಿಗದಿಪಡಿಸುವುದು ಕಷ್ಟ.