ರಾಜ್ಯ ಬಜೆಟ್ 2024 ನೇರಪ್ರಸಾರ

0
15

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡನೆ ಮಾಡುತ್ತಿರುವ 15ನೇ ಬಜೆಟ್ ಇದಾಗಿದೆ. 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಲಿದ್ದಾರೆ.

ಬಜೆಟ್​​ ಪ್ರತಿಗಳನ್ನು ಪಡೆದ ಸಿಎಂ ಸಿದ್ದರಾಮಯ್ಯ

ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಎಂಎಲ್‌ಸಿ ಗೋವಿಂದರಾಜು, ಸಚಿವರಾದ ಸಂತೋಷ್‌ ಲಾಡ್‌, ಜಮೀರ್‌ ಅಹಮದ್‌ ಖಾನ್‌ ಮತ್ತಿತರರು ಆಗಮಿಸಿದ್ದರು. ಆರ್ಥಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾಗಿರುವ ಎಲ್‌.ಕೆ. ಅತೀಕ್‌ ಅವರು ಮುಖ್ಯಮಂತ್ರಿಗಳ ಕಚೇರಿಗೆ ಬಂದು ಬಜೆಟ್‌ ಪ್ರತಿಗಳನ್ನು ನೀಡಿದರು.

ಬದಲಾದ ಬ್ಯಾಗ್‌: ಸೂಟ್‌ಕೇಸ್‌ ಬಿಟ್ಟು ಲಿಡ್ಕರ್ ಸಂಸ್ಥೆಯ ಲೆದರ್‌ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಲಿಡ್ಕರ್ ಸಂಸ್ಥೆಗೆ ಹೆಚ್ಚಿನ ಪ್ರಧಾನ್ಯತೆ ನೀಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಲಿಡ್ಕರ್ ಸಂಸ್ಥೆಯ ಲೆದರ್ ಬ್ಯಾಗ್ ಬಳಕೆ ಮಾಡುತ್ತಿದ್ದು, ಬಜೆಟ್ ಪ್ರತಿಗಳನ್ನು ಹಿಡಿದುಕೊಂಡು ಬಂದಿದ್ದಾರೆ.

ಡಾ. ರಾಜಕುಮಾರ್‌ ಅವರನ್ನು ನೆನೆದ ಸಿದ್ದರಾಮಯ್ಯ: ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂಬ ಡಾ.ರಾಜ್ ಕುಮಾರ್ ಹಾಡಿನ ಸಾಲು ಉಲ್ಲೇಖಿಸಿ ದೇಶ ಗಣರಾಜ್ಯವಾಗಿ 75ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸುಸಂದರ್ಭದಲ್ಲಿ ನನ್ನ 15ನೇ ಆಯವ್ಯಯ ಮಂಡನೆ ಮಾಡುತ್ತಿದ್ದೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಾಮಾಜಿಕ ಸಮಾನತೆಯ ಉದ್ದೇಶದೊಂದಿಗೆ ಈ ಬಜೆಟ್ ಮಂಡನೆ ಮಾಡುತ್ತಿದ್ದೇನೆ ಎಂದು ಆರಂಬಿಸಿದರು.

ಸಿಎಂ ಬಜೆಟ್ ಮಂಡನೆ: ಪ್ರತಿಪಕ್ಷಗಳಿಂದ ಗದ್ದಲ: ಬಜೆಟ್ ಮಂಡನೆ ವೇಳೆ ಪ್ರತಿಪಕ್ಷಗಳಿಂದ ಗದ್ದಲದ ವಾತಾವಾರಣ ಸೃಷ್ಟಿಯಾಗಿದೆ.
ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದರು ಎಂದು ಪ್ರತಿಪಕ್ಷಗಳಿಂದ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಬಜೆಟ್​ ಅನ್ನು ಕೇಂದ್ರದ ವಿರುದ್ಧ ಟೀಕೆಗೆ ಬಳಸಿಕೊಳ್ಳುತ್ತೀರಾ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದ್ದಾರೆ. ಈ ವೇಳೆ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸ್ಪೀಕರ್ ಯುಟಿ ಖಾದರ್ ಪರಿಪರಿಯಾಗಿ ಬೇಡಿಕೊಂಡರೂ ಪ್ರತಿಪಕ್ಷ ನಾಯಕರು ಆಕ್ರೋಶದ ಮಾತುಗಳನ್ನು ಕಡಿಮೆ ಮಾಡಲಿಲ್ಲ ಈ ಮದ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್‌ ಮಂಡನೆ ಅಡೆತಡೆ ಇಲ್ಲದೆ ನಿರಂತರವಾಗಿ ಸಾಗಿದೆ.

ಸಿಎಂ ಭಾಷಣಕ್ಕೆ ವಿಪಕ್ಷಗಳಿಂದ ಅಡ್ಡಿ: ಏನಿಲ್ಲ ಏನಿಲ್ಲ ಬಜೆಟ್​​ನಲ್ಲಿ ಏನಿಲ್ಲ’ ಘೋಷಣೆ: ಬಜೆಟ್​ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರದಿಂದ ಅನ್ಯಾವಾಗಿದೆ ಎಂದು ಹೇಳಿದ್ದು, ಇದರ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿ ಬಜೆಟ್ ಭಾಷಣಕ್ಕೆ ಅಡ್ಡಿಪಡಿಸಿದರು. ಬಜೆಟ್​ ಅನ್ನು ಕೇಂದ್ರದ ವಿರುದ್ಧ ಟೀಕೆಗೆ ಬಳಸಿಕೊಳ್ಳುತ್ತೀರಾ ಎಂದು ಪ್ರತಿಪಕ್ಷದವರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ‘ಏನಿಲ್ಲ ಏನಿಲ್ಲ ಬಜೆಟ್ ನ ಲ್ಲಿ ಏನಿಲ್ಲ’ ಘೋಷಣೆ ಕೂಗಿದ ಬಿಜೆಪಿ ನಾಯಕರು, ನಾವು ಸುಮ್ಮನೆ ಕೂತ್ತಿದ್ದರು ಕೇಂದ್ರದ ವಿರುದ್ದ ಟಿಕೆ ಮಾಡೋಕ್ಕೆ ಬಜೆಟ್ ತಂದಿದ್ದೀರಾ ಎಂದು ಅಶೋಕ್ ಅಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷ ಬಿಜೆಪಿ ನಾಯಕರು ಬಜೆಟ್​ಗೆ ಬಹಿಷ್ಕಾರ ಹಾಕಿ ಸಭಾತ್ಯಾಗ ಮಾಡಿದರು. ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಬಿಜೆಪಿ ಶಾಸಕರು ಪೋಸ್ಟರ್ ಅಂಟಿಸಿದರು.

ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದರು-

ಮೀನುಗಾರರಿಗೆ ಅತ್ಯಾಧುನಿಕ ಸಮುದ್ರ ಆ್ಯಂಬುಲೆನ್ಸ್!: ಮೀನುಗಾರಿಕಾ ಕ್ಷೇತ್ರಕ್ಕಾಗಿ ಸಿಎಂ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌​ನಲ್ಲಿ 3 ಸಾವಿರ ಕೋಟಿ ರೂಪಾಯಿಯ ಭರ್ಜರಿಯಾದ ಯೋಜನೆ ಘೋಷಿಸಿದ್ದಾರೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರನ್ನು ತುರ್ತು ಸಂದರ್ಭದಲ್ಲಿ ರಕ್ಷಣೆ ಮಾಡಲು ಅತ್ಯಾಧುನಿಕ ಸಮುದ್ರ ಆ್ಯಂಬುಲೆನ್ಸ್ ಖರೀದಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಹೊನ್ನಾವರ ಅಥವಾ ಕಾಸರಗೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಭದ್ರಾವತಿಯಲ್ಲಿ ಹೈಟೆಕ್​ ಮೀನು ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

APMCಗಳಲ್ಲಿ ವಿದ್ಯುತ್​ಚಾಲಿತ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ಸ್ಥಾಪನೆ: 76 ಗೋದಾಮುಗಳ ನಿರ್ಮಾಣಕ್ಕೆ 376 ಕೋಟಿಗಳ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಲಾಗಿದೆ. APMCಗಳಲ್ಲಿ ವಿದ್ಯುತ್​ಚಾಲಿತ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆಯೂ ಘೋಷಣೆ ಮಾಡಲಾಗಿದೆ. ಪೆಟ್ರೋಲ್​ ಬಂಕ್​ಗಳ ಮಾದರಿಯಲ್ಲಿ ಇವುಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

Previous articleಗ್ಯಾರಂಟಿ ಯೋಜನೆಯಿಂದ ಜೀವನ ಮಟ್ಟ ಸುಧಾರಣೆ
Next articleಸಿಎಂ ಬಜೆಟ್ ಮಂಡನೆ: ಪ್ರತಿಪಕ್ಷಗಳಿಂದ ಗದ್ದಲ