ರಾಜ್ಯದಲ್ಲಿ ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ

0
24

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಮೊದಲ ವಾರ್ಷಿಕ ಪರೀಕ್ಷೆ ಮಾರ್ಚ್ ೨೧ರಂದು(ಇಂದಿನಿಂದ) ರಾಜ್ಯದ ೨೮೧೮ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧತೆ ಪೂರ್ಣಗೊಳಿಸಿದೆ.
ಪರೀಕ್ಷೆಗೆ ಒಟ್ಟು ೮,೯೬,೪೪೭ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ೮,೪೨,೮೧೭ ಲಕ್ಷ ವಿದ್ಯಾರ್ಥಿಗಳು ಹೊಸಬರು, ೩೮೦೯೧ ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ೧೫,೫೩೯ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
ಕೇಂದ್ರಗಳಲ್ಲಿ ನಕಲು ಹಾಗೂ ಅಕ್ರಮ ತಡೆಯಲು ಎಲ್ಲ ರೀತಿಯ ಕ್ರಮವಹಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಈ ವ್ಯವಸ್ಥೆ ಮೂಲಕ ಕೊಠಡಿಗಳಲ್ಲಿ ನಡೆಯುವ ಅಕ್ರಮ ಹಾಗೂ ನಕಲು ತಡೆಯಬಹುದು ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ಬಸವ ರಾಜೇಂದ್ರ ತಿಳಿಸಿದ್ದಾರೆ.
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು ೧೫,೮೮೧ ಕಾಲೇಜುಗಳು ನೋಂದಾಯಿಸಿಕೊಂಡಿವೆ. ೨,೮೧೮ ಸ್ಥಾನಿಕ ಜಾಗೃತ ದಳದ ಸಿಬ್ಬಂದಿ ನೇಮಿಸಲಾಗಿದೆ. ಜಿಲ್ಲಾ ಹಂತದಲ್ಲಿ ೪೧೦ ಹಾಗೂ ತಾಲೂಕು ಹಂತದಲ್ಲಿ ೧,೬೬೨ ವಿಚಕ್ಷಣ ಜಾಗೃತ ದಳ ಸಿಬ್ಬಂದಿ ನೇಮಿಸಲಾಗಿದೆ. ೨,೯೧೮ ಮಂದಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷರನ್ನು ನಿಯೋಜಿಸಲಾಗುವುದು. ೯೫೮ ಜಂಟಿ ಅಧೀಕ್ಷರನ್ನು ನೇಮಕ ಮಾಡಲಾಗುವುದು ೨,೮೧೮ ಮಂದಿ ಪ್ರಶ್ನೆ ಪತ್ರಿಕೆಗಳ ಪಾಲಕರನ್ನು ನೇಮಕ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಐವರು ತೃತೀಯ ಲಿಂಗಿಗಳು
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೫ ಮಂದಿ ತೃತೀಯ ಲಿಂಗಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ೩,೩೫,೪೬೮ ಬಾಲಕರು, ೩,೭೮,೩೮೯ ಬಾಲಕಿಯರು ಪರೀಕ್ಷೆ ಎದುರಿಸುತ್ತಿದ್ದಾರೆ.

ಉತ್ತೀರ್ಣಕ್ಕೆ ಕನಿಷ್ಠ ೩೫ ಅಂಕ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಉತ್ತೀರ್ಣವಾಗಲು ಕನಿಷ್ಠ ಶೇ.೩೫ ಅಂಕ ಪಡೆಯಬೇಕು ಎಂಬ ನಿಯಮ ನಿಗದಿಯಾಗಿದೆ. ಕಳೆದ ವರ್ಷ ಮೊದಲ ಬಾರಿಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರಿಂದ ಫಲಿತಾಂಶ ಕುಸಿತವಾದ ಹಿನ್ನೆಲೆಯಲ್ಲಿ ಕನಿಷ್ಠ ಉತ್ತೀರ್ಣ ಅಂಕಗಳನ್ನು ಶೇ.೩೫ರಿಂದ ಶೇ.೨೫ಕ್ಕೆ ಇಳಿಸಲಾಗಿತ್ತು. ಈ ವರ್ಷ ಹಿಂದಿನ ನಿಯಮಗಳಂತೆ ಶೇ. ೩೫ಕ್ಕೆ ನಿಗದಿ ಮಾಡಲಾಗಿದೆ.

ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆ ರವಾನೆ
ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲು ಮಂಡಳಿ ೧,೧೧೭ ಮಾರ್ಗಗಳನ್ನು ನಿಗದಿಪಡಿಸಿದೆ. ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ವಾಹನಗಳು ನಿಗದಿತ ಮಾರ್ಗದಲ್ಲೇ ಸಂಚರಿಸಬೇಕು. ವಾಹನಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.

Previous articleತ್ರಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ತಾತಾ, ಮೊಮ್ಮಗ ಸಾವು
Next articleಆಗ ನಕಲಿ ಛಾಪಾ ಕಾಗದ ಈಗ ನಕಲಿ ಅಂಕಪಟ್ಟಿಗಳು