ಯುದ್ಧ ಗೆಲ್ಲಲು ಕೆಚ್ಚು ಬೇಕು, ಸಂಖ್ಯಾಬಲವಲ್ಲ

0
22

ಶತ್ರುಗಳು ನಮ್ಮನ್ನು ಸುತ್ತುವರೆದು ದಾಳಿಗೆ ಸನ್ನದ್ಧರಾಗಿದ್ದಾರೆ. ಸಾಬ್, ನೀವೂ ಸೇರಿ ನಾವು ನಾಲ್ವರಿದ್ದೇವೆ. ಮುಂದೇನು?' ಎಂಬ ಸಹಯೋಧನ ಆತಂಕದ ಪ್ರಶ್ನೆಗೆ ಕೈಯಲ್ಲಿದ್ದ ಗ್ರೇನೇಡನ್ನು ಶತ್ರುಪಾಳಯಕ್ಕೆಸೆದು,ಅವರೆಷ್ಟೇ ಬರಲಿ, ಅಂತಿಮ ವಿಜಯ ನಮ್ಮದೇ. ಇಲ್ಲಿ ಸತ್ತರೆ ಬದುಕು ಸಾರ್ಥಕ. ಆದರೆ ಒಬ್ಬೊಬ್ಬರೂ ಕನಿಷ್ಠ ನಲ್ವತ್ತು ಹೆಣಗಳನ್ನುರುಳಿಸಿ ಸಾಯಬೇಕೆಂಬ ಗುರಿ ನೆನಪಿರಲಿ’ ಎಂದುತ್ತರಿಸಿ ಮೃತ್ಯುವಿನೊಡನೆ ಗುದ್ದಾಡಿ ಗೆದ್ದ ಧೀರ ಲಾನ್ಸ್ ನಾಯಕ್ ಕರಮ್ ಸಿಂಗ್, ಜೀವಿತ ಕಾಲದಲ್ಲೇ ಪರಮವೀರ ಚಕ್ರ ಪುರಸ್ಕೃತ ಮಹಾಸಾಹಸಿ. ಪಂಜಾಬಿನ ಸೆಹ್ನಾ ಗ್ರಾಮದ ಕೃಷಿಕ ಸರ್ದಾರ್ ಉತ್ತಮ್ ಸಿಂಗ್ ಮಗನಾಗಿ ಜನಿಸಿದ ಕರಮ್ ಸಿಂಗ್, ಶಾಲಾ ಶಿಕ್ಷಣದ ವಿಶೇಷಾಸಕ್ತರಲ್ಲ. ಅನ್ನದಾತನಾಗಬೇಕೆಂಬ ಹೆಬ್ಬಯಕೆಯಿಂದ ಹೊಲಕ್ಕಿಳಿದರೂ, ಮಾಧ್ಯಮಿಕ ವಿದ್ಯಾಭ್ಯಾಸದ ಬಳಿಕ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ ತನ್ನೂರಿನ ಕದನಕಲಿಗಳ ರೋಚಕ ಕಥೆಗಳಿಂದ ಪ್ರೇರಿತನಾಗಿ ಬ್ರಿಟಿಷ್ ಭಾರತೀಯ ಸೈನ್ಯ ಸೇರಿದರು. ದೇಶಸೇವೆಯ ಬಗ್ಗೆ ಬಹು ಆಸಕ್ತರಾಗಿದ್ದ ಸಿಂಗ್, ಪ್ರತಿಹೆಜ್ಜೆಯಲ್ಲೂ ಸ್ವಾತಂತ್ರ‍್ಯದ ಅಪೇಕ್ಷೆಯಿಂದಲೇ ಕಾರ್ಯ ನಿರ್ವಹಿಸಿದರು. ರಾಂಚಿಯಲ್ಲಿ ತರಬೇತಿ ಪಡೆದು ಸಿಖ್ ರೆಜಿಮೆಂಟಿನ ಮೊದಲ ಬೆಟಾಲಿಯನ್ನಿಗೆ ಸೇರ್ಪಡೆಗೊಂಡು ಎರಡನೆ ಮಹಾಯುದ್ಧದಲ್ಲಿ ತೋರಿದ ಸಾಹಸಕ್ಕೆ ಸೇನಾಪದಕ ಪಡೆದ ಕರಮ್ ಸಿಂಗ್, ಸ್ವತಂತ್ರ ಭಾರತದ ಧ್ವಜ ಹಾರಾಡಿಸುವ ಅವಕಾಶ ಪಡೆದ ಐವರು ಭಾಗ್ಯಶಾಲಿ ಯೋಧರಲ್ಲೊಬ್ಬರು. ಸ್ವತಂತ್ರ ಹಿಂದುಸ್ಥಾನದ ಭವಿಷ್ಯ ಅಡಗಿರುವುದು ಸಮರ್ಪಿತ ಧ್ಯೇಯನಿಷ್ಠ ತರುಣರಲ್ಲಿ ಮಾತ್ರ ಎಂದರಿತು ತಮ್ಮ ಸ್ನೇಹಿತರನ್ನೂ ಸೇನೆ ಸೇರಲು ಪ್ರೋತ್ಸಾಹಿಸಿದರು.
ಸೃಷ್ಟಿಯಾದ ಎರಡು ತಿಂಗಳೊಳಗೆ ಕಾಶ್ಮೀರವನ್ನೂ ವಶಪಡಿಸಿಕೊಳ್ಳಲು ಹವಣಿಸಿದ ಪಾಕಿಸ್ತಾನಕ್ಕೆ ಮಹಾರಾಜಾ ಹರಿಸಿಂಗರ ನಿರ್ಧಾರ ಪಥ್ಯವಾಗದೆ ಯುದ್ಧ ಘೋಷಿಸಿತು. ಗುಡ್ಡಗಾಡು ಉಗ್ರಗಾಮಿಗಳ ಸಮೂಹವನ್ನು ಅಟ್ಟಾಡಿಸಿದ ಭಾರತೀಯ ಸೈನಿಕರ ಹೋರಾಟದಿಂದ ಬೆದರಿದ ಪಾಕ್, ಮೋಸದ ದಾರಿ ಹಿಡಿಯಿತು. ರಾತ್ರಿ ಹೊತ್ತಲ್ಲಿ ಭಯಾನಕ ಆಕ್ರಮಣ ನಡೆಸಿ ಅಪಾರ ಸಾವುನೋವಿನ ಕನಸು ಕಂಡಿದ್ದ ಪಾಕ್ ಸೈನಿಕರಿಗೆ ಗೆಲುವು ಗಗನ ಕುಸುಮವಾಯಿತು. ಕುಪ್ವಾರಾ ಪ್ರಾಂತದ ಟಿಥ್ವಾಲಾ ಭಾರತದ ರಕ್ಷಣಾ ದೃಷ್ಟಿಯಿಂದ ಅತ್ಯಂತ ಮಹತ್ವದ ಆಯಕಟ್ಟಿನ ಜಾಗ. ಅದನ್ನು ವಶಪಡಿಸಲು ಹವಣಿಸಿದ ಪಾಕಿಸ್ತಾನ ಬಹಳಷ್ಟು ಬೆಲೆ ತೆತ್ತು ಬರಿಗೈಯಲ್ಲಿ ಮರಳಿತು. ಐದು ತಿಂಗಳವರೆಗೆ ನಡೆದ ಮುಸುಕಿನ ಗುದ್ದಾಟ ೧೯೪೮ರ ಅಕ್ಟೋಬರ್ ಹದಿಮೂರರಂದು ತೀವ್ರಸ್ವರೂಪ ಪಡೆಯಿತು. ರಿಚ್ಮಾರ್ ಗಡಿ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ಕರಮ್ ಸಿಂಗ್, ಒಬ್ಬನಿಗೆ ಹತ್ತರಷ್ಟಿದ್ದ ಪಾಕ್ ಸೈನಿಕರನ್ನು ಬಗ್ಗುಬಡಿಯಲು ನಿರ್ಧರಿಸಿ ಸೈನಿಕರ ಆತ್ಮವಿಶ್ವಾಸಕ್ಕೆ ಒಂದಿನಿತೂ ಘಾಸಿಯಾಗದಂತೆ ವ್ಯವಹರಿಸಿ ಮನೋಬಲ ವೃದ್ಧಿಸಿದರು. ಸಾಹಸ, ಕರ್ತವ್ಯನಿಷ್ಠೆಗೆ ಹೆಸರಾದ ಸಿಂಗ್, ಪಾಕ್ ಸೈನಿಕರ ಗುಂಡಿನ ದಾಳಿಯ ಜೊತೆ ಜೊತೆಗೆ ಶಿಲೆಗಳ ಚೂರಿನಿಂದಾಗುತ್ತಿದ್ದ ಆಘಾತದಿಂದಲೂ ತಮ್ಮ ತುಕಡಿಯನ್ನು ರಕ್ಷಿಸಬೇಕಾಗಿತ್ತು. ತಾವೇ ಹೆಬ್ಬಂಡೆಯಂತೆ ನಿಂತು ನೈತಿಕ ಧೈರ್ಯತುಂಬಿ, ಅತ್ತಿಂದಿತ್ತ ಓಡಾಡಿ ಗ್ರೆನೇಡ್ ದಾಳಿ ನಡೆಸಿದ ಸಿಂಗ್ ಕೈಗಳು ಗಾಯಗೊಂಡವು. ಆದರೂ ಕದನಭೂಮಿ ಬಿಟ್ಟು ತೆರಳದೆ, ಐದನೇ ಸುತ್ತಿನ ಭೀಕರ ಹೋರಾಟದಲ್ಲೂ ಪಾಲ್ಗೊಂಡರು. ಗೆದ್ದು ಸಾಯಬೇಕೆಂದು ಆದೇಶಿಸಿ, ಅತಿ ಸಮೀಪದಲ್ಲೇ ಬೀಡುಬಿಟ್ಟಿದ್ದ ವೈರಿಗಳನ್ನು ಹಿಮ್ಮೆಟ್ಟಿಸಿ, ಗಡಿಯಿಂದಲೇ ಹೊರಗಟ್ಟಿ ಸಾಹಸ ಮೆರೆದು ದೇಶದ ಗೆಲುವಿಗೆ ಶ್ರಮ ವಹಿಸಿದರು. ಇಪ್ಪತ್ತೇಳು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಸೈನ್ಯ ಸೇರಲಿಚ್ಛಿಸುವ ಯುವಕರಿಗೆ ತರಬೇತಿ ನೀಡಿ ಭಾರತಸೇವೆಯಲ್ಲೇ ನಿರತರಾದರು. ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಡಿ ದೈನಂದಿನ ಬದುಕಿನಲ್ಲೂ ದೇಶಪ್ರೇಮವನ್ನೇ ಉಸಿರಾಗಿಸಿ, ನ್ಯಾಯಕ್ಕಾಗಿ ಸದಾಕಾಲ ಧ್ವನಿಯೆತ್ತುವಂತೆ ತರುಣವರ್ಗವನ್ನು ಪ್ರೋತ್ಸಾಹಿಸಿದರು. ಒಂದರ್ಥದಲ್ಲಿ ಐದು ದಶಕಗಳ ಭಾರತೀಯ ಸೈನ್ಯಚರಿತ್ರೆಯ ಅಧಿಕೃತ ವಕ್ತಾರರೇ ಆಗಿದ್ದ ಲಾನ್ಸ್ ನಾಯಕ್ ಕರಮ್ ಸಿಂಗ್, ಕೊನೆಯುಸಿರೆಳೆಯುವವರೆಗೂ ನೂರಾರು ಅರ್ಜುನರನ್ನು ಸೃಷ್ಟಿಸಿ ಸೈನ್ಯ ವ್ಯವಸ್ಥೆಗೆ ಶಕ್ತಿಯಿತ್ತ ಮಹಾನುಭಾವ.
ಯುದ್ಧ ಗೆಲ್ಲಲು ಬೇಕಿರುವುದು ಸಂಖ್ಯಾಬಲವಲ್ಲ, ಮನೋಬಲ. ನಿಖರ ಯೋಜನೆ, ಸ್ಪಷ್ಟ ಗುರಿಯಿಟ್ಟು ಶತ್ರುಗಳನ್ನೆದುರಿಸಿ ಲಾಹೋರಿನಲ್ಲಿ ತ್ರಿವರ್ಣಧ್ವಜ ಹಾರಿಸಿ ಮರಳೋಣ. ಸಾವು ಅಥವಾ ಸೋಲಿನ ಬಗ್ಗೆ ಕಿಂಚಿತ್ತೂ ಯೋಚಿಸದೆ ಮುನ್ನುಗ್ಗುವುದೇ ನಮ್ಮ ಧ್ಯೇಯ' ಎಂಬ ಚೇತೋಹಾರಿ ಮಾತುಗಳಿಂದ ಸಹಯೋಧರ ಮನದಲ್ಲಿ ಅಮಿತ ಧೈರ್ಯೋತ್ಸಾಹಗಳನ್ನು ತುಂಬಿ ಹುತಾತ್ಮರಾದ ಜದುನಾಥ್ ಸಿಂಗ್, ಪರಮವೀರಚಕ್ರ ಪುರಸ್ಕೃತ ಧೀರಯೋಧ. ಉತ್ತರಪ್ರದೇಶದ ಖಜೂರಿಯ ಬಡ ರೈತಕುಟುಂಬದ ಯಜಮಾನ ಬೀರಬಲ್ ಸಿಂಗ್ ರಾಥೋಡ್ - ಜಮುನಾ ದಂಪತಿಗಳಿಗೆ ಜನಿಸಿದ ಜದುನಾಥ್, ಆರ್ಥಿಕ ದುಸ್ಥಿತಿಯ ಕಾರಣದಿಂದ ನಾಲ್ಕನೆಯ ತರಗತಿ ಮುಗಿಸಿ ಶಾಲಾಶಿಕ್ಷಣಕ್ಕೆ ನಮಸ್ಕಾರ ಹೇಳಿದರು. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ ಅನ್ನದಾತನಾಗಿ ರೂಪುಗೊಂಡ ಜದುನಾಥರ ಕಟ್ಟುಮಸ್ತಿನ ಶರೀರ ಅವರನ್ನು ಒಳ್ಳೆಯ ಕುಸ್ತಿಪಟುವನ್ನಾಗಿ ರೂಪಿಸಿತು. ಹಳ್ಳಿಹೈದರ ಮನಗೆದ್ದು ಸ್ನೇಹಿತರ ವಲಯದಲ್ಲಿ ಹನುಮಾನ್ ಭಗತ್ ಬಾಲ ಬ್ರಹ್ಮಚಾರಿ ಎಂದೇ ಖ್ಯಾತರಾದ ಜದು, ಶಿಸ್ತಿನ ಸಿಪಾಯಿ. ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿದ್ದ ಜದುನಾಥ್,ಹುಟ್ಟುಸಾವಿನ ನಡುವಿನ ಜೀವನದಲ್ಲಿ ಏನೇನೂ ಸಾಧಿಸದಿದ್ದರೆ ಬದುಕಿಗೆ ಸಾರ್ಥಕತೆಯೆಂತು? ನಿಶ್ಚಿತ ಮರಣ ದೇಶಕ್ಕಾಗಿ ಮೀಸಲಿರಲಿ’ ಎಂದು ಕುಸ್ತಿಯ ಮೈದಾನದಲ್ಲಿ ಗುನುಗುತ್ತಿದ್ದರಂತೆ. ಈ ಮಾತು ಮುಂದೊಮ್ಮೆ ನಿಜವಾಗುತ್ತದೆಯೆಂಬುದನ್ನು ಯೋಚಿಸಿಯೇ ಹೀಗೆ ಹೇಳಿದ್ದಿರಬಹುದು.
೧೯೪೧ರಲ್ಲಿ ಬ್ರಿಟಿಷ್ ಭಾರತೀಯ ಸೇನೆಯ ರಜಪೂತ ರೆಜಿಮೆಂಟಿಗೆ ನಿಯುಕ್ತರಾದ ಜದುನಾಥ್ ಸಿಂಗ್, ದ್ವಿತೀಯ ಮಹಾಯುದ್ಧದಲ್ಲಿ ತೋರಿದ ನಾಯಕತ್ವ ಗುಣ ಮತ್ತು ಧೈರ್ಯ ಸರ್ವಪ್ರಶಂಸೆಗೆ ಪಾತ್ರವಾಯಿತು. ಬರ್ಮಾದಲ್ಲಿ ಕರ್ತವ್ಯ ನಿರ್ವಹಿಸಿ ತೋರಿದ ಅಸೀಮ ಪರಾಕ್ರಮ ಬ್ರಿಟಿಷ್ ಸೇನೆಯಲ್ಲಿ ಹೆಸರು ಮತ್ತು ಕೀರ್ತಿಯಿತ್ತಿತು. ಸ್ವಾತಂತ್ರ‍್ಯದ ತರುವಾಯ ಭಾರತೀಯ ಸೈನ್ಯವನ್ನು ಬಲಗೊಳಿಸುವ ಪ್ರಯತ್ನ ನಡೆಯುತ್ತಿರುವಾಗಲೇ ಕಾಶ್ಮೀರವನ್ನು ವಶಪಡಿಸಲು ಯತ್ನಿಸಿದ ಪಾಕಿಸ್ತಾನದ ಧೂರ್ತತೆಗೆ ತಕ್ಕ ಪ್ರತ್ಯುತ್ತರ ನೀಡಬೇಕಾದ ಅನಿವಾರ್ಯತೆ ಸೈನ್ಯದೆದುರಿತ್ತು. ದೊಡ್ಡ ಸಂಖ್ಯೆಯ ಬಂಡುಕೋರ ಉಗ್ರ ಸೈನಿಕರ ಏಕಾಏಕಿ ದಾಳಿ ಎದುರಿಸಿದ ಭಾರತೀಯ ಸೈನಿಕರು ಪ್ರತಿಕೂಲ ಪರಿಸ್ಥಿತಿಯಲ್ಲೂ ತೋರಿದ ಸಾಹಸ ಇತಿಹಾಸದ ಪುಟಗಳಲ್ಲಿ ಸದಾ ಅಮರ. ೧೯೪೮ರ ಫೆಬ್ರವರಿ ಆರರಂದು ನೌಶೇರಾದ ತೆಂಧಾರ್ ವ್ಯಾಪ್ತಿಯಲ್ಲಿ ಮಂಜು ಮುಸುಕಿದ ವಾತಾವರಣದ ನಡುವೆ ನಡೆದ ಅನಿರೀಕ್ಷಿತ ಗುಂಡಿನ ದಾಳಿಯಿಂದ ಗಲಿಬಿಲಿಗೊಳಗಾಗದ ನಮ್ಮ ಸೈನಿಕರು ನಡೆಸಿದ ಗ್ರೆನೇಡ್ ದಾಳಿ ಕಿಂಚಿತ್ತೂ ಪರಿಣಾಮ ಬೀರಲಿಲ್ಲ. ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಲು ಮೂರು ಬಾರಿ ಪ್ರಯತ್ನಿಸಿದ ಜದುನಾಥ್, ಒಂಭತ್ತು ಜನ ಯೋಧರ ಸಣ್ಣ ಗುಂಪಿನ ನೇತೃತ್ವ ವಹಿಸಿದರು. ಕೇವಲ ಮನೋಬಲದಿಂದಲೇ ಪಾಕಿಸ್ತಾನವನ್ನು ಮರ್ದಿಸುವಂತೆ ತನ್ನ ಗುಂಪನ್ನು ಪ್ರೇರೇಪಿಸಿದ ಅವರ ಮೊದಲೆರಡು ಹೋರಾಟ ವಿರೋಧಿ ಪಡೆಯ ಮೇಲೆ ಅಷ್ಟು ಪರಿಣಾಮ ಬೀರದಿದ್ದರೂ ತೀವ್ರವಾದ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಗಾಯಗೊಂಡರು. ಅದೆಷ್ಟೇ ಕಷ್ಟವಾದರೂ ಭಾರತದ ಒಂದಿಂಚು ಭೂಮಿಯೂ ಶತ್ರುವಶವಾಗಲಿಲ್ಲವೆಂಬುದು ಅಭಿಮಾನದ ಸಂಗತಿ. ತೃತೀಯ ಯತ್ನದಲ್ಲಿ ವೀರೋಚಿತ ದಾಳಿ ನಡೆಸಿ, ತಮ್ಮ ಬಲತೋಳಿಂದ ಧಾರಾಕಾರ ರಕ್ತ ಹರಿಯುತ್ತಿದ್ದರೂ ಒಂಟಿ ಕೈಯಲ್ಲೇ ಯುದ್ಧ ಮುಂದುವರಿಸಿದ ಜದುನಾಥ್, ಪಾಕ್ ಸೈನ್ಯದ ಯೋಜಿತ ದಾಳಿಯನ್ನು ವಿಫಲಗೊಳಿಸಿದರು. ಕೊಂಚ ಮೈಮರೆತರೂ ಕಾಶ್ಮೀರದ ಜೊತೆ ಜೊತೆಗೆ ಭಾರತವನ್ನೂ ಕಳೆದುಕೊಳ್ಳುವ ಭೀತಿ ಒಂದೆಡೆಯಾದರೆ, ದೇಶವುಳಿಸಿ ಶತ್ರುಗಳನ್ನು ಕೊಂದ ನಂತರವೇ ವಿರಮಿಸುವ ಅನಿವಾರ್ಯತೆ ಇನ್ನೊಂದೆಡೆ. ಈ ಅಪಸವ್ಯಗಳನ್ನು ಗೆದ್ದ ಜದುನಾಥ್ ಸಿಂಗ್ ತಂಡ ಗಡಿರಕ್ಷಣೆಯಲ್ಲಿ ಸಫಲವಾಯಿತು. ನಿಲ್ಲಲು, ನಡೆದಾಡಲು, ಉಸಿರಾಡಲು ಸಂಕಷ್ಟ ಅನುಭವಿಸುತ್ತಿದ್ದ ಹೊತ್ತಲ್ಲೂ ಬಂದೂಕಿನ ದಾಳಿ ನಡೆಸಿ ತನ್ನ ಭೂಭಾಗದೊಳಗೆ ಅರಿಪ್ರವೇಶಕ್ಕೆ ಅವಕಾಶ ಕೊಡದ ಜದುನಾಥ್ ಸಿಂಗ್ ದುರ್ದೈವವಶಾತ್ ಸಮರಭೂಮಿಯಲ್ಲೇ ಕೊನೆಯುಸಿರೆಳೆದರು. ಗಾಯಗಳನ್ನು ಲೆಕ್ಕಿಸದೆ, ಸೌಲಭ್ಯಗಳ ಕೊರತೆಯನ್ನು ದೂಷಿಸದೆ ಸ್ವದೇಶದ ವಿಜಯವೊಂದನ್ನೇ ಯೋಚಿಸಿ ಅಮರನಾದ ಮಹಾಪರಾಕ್ರಮಿಯ ಬಲಿದಾನ ಸದಾ ಪ್ರೇರಣೆ. ಅತ್ಯುತ್ಕೃಷ್ಟ ನಾಯಕತ್ವದಡಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಿ ಸರ್ಜಿಕಲ್ ಸ್ಟ್ರೈಕ್ – ಏರ್ ಸ್ಟ್ರೈಕ್ ನಡೆಸಿ ಪರಾಕ್ರಮ ಮೆರೆದ ನಮ್ಮ ಯೋಧರಿಗೆ ಎಪ್ಪತ್ತೈದು ವರ್ಷಗಳ ಹಿಂದಿನ ಪಾಕ್ ವಿರುದ್ಧದ ಯುದ್ಧ ಸ್ಫೂರ್ತಿಚಿಲುಮೆ. ಸದಾ ದೇಶದೇಳಿಗೆಯ ಬಗೆಗೆ ಯೋಚಿಸಿ, ನಿವೃತ್ತಿಯ ಬಳಿಕವೂ ರಾಷ್ಟ್ರಹಿತ ಕಾರ್ಯರತರಾದ ಕರಮ್ ಸಿಂಗ್ ಜನ್ಮೋತ್ಸವ ಹಾಗೂ ನೌಶೇರಾ ನಾಯಕ ಜದುನಾಥ್ ಸಿಂಗ್ ಸ್ಮೃತಿದಿನ ನಮ್ಮಲ್ಲೂ ದೇಸೀಪ್ರಜ್ಞೆ ಮೂಡಿಸಲಿ.

Previous articleಉಚಿತ ವಿದ್ಯುತ್ ಇದ್ದರೂ ಇಳಿಮುಖ ಕಾಣುತ್ತಿರುವ ಮಗ್ಗಗಳು..
Next articleಅಕ್ರಮ ವಲಸಿಗರ ಗಡಿಪಾರು ಜೇನುಗೂಡಿಗೆ ಕಲ್ಲು