ಮೌನ ಮುರಿದು ಚುನಾವಣೆಯತ್ತ ನೋಟ ನೆಟ್ಟ ಮೋದಿ ಮಾತು…

0
13
ಸಂಪಾದಕೀಯ

ಮಾತಿನ ಕೊನೆಯಲ್ಲಿ, `ನಿಮ್ಮ ನಡುವಿನಿಂದ ಬಂದ ನನಗೆ ನೀವೇ ಬದುಕು… ನಿಮಗಾಗಿ ಬದುಕುವೆ. ನನ್ನ ಬೆವರು ನಿಮಗಾಗಿ. ಕನಸುಗಳೂ ನಿಮಗಾಗಿ. ಏಕೆಂದರೆ ನೀವು ನನ್ನ ಪರಿವಾರ’ ಎಂದು ಭಾವನಾತ್ಮಕ ತಂತುಗಳನ್ನು ಮಿಡಿದದ್ದು ವಾಗ್ಮಿಯ ಜಾಣ್ಮೆಯೇ ಸರಿ.

ಕೆಂಪು ಕೋಟೆಯ ಮೇಲೆ ನಿಂತು ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆ ಖಚಿತ ಎಂದು ಸಾರುತ್ತಲೇ ಹಿಂಸಾಚಾರದ ಕುರಿತ ಇದುವರೆಗಿನ ಮೌನವನ್ನು ಪ್ರಧಾನಿ ನರೇಂದ್ರ ಮೋದಿ ಮುರಿದದ್ದು ಸ್ವಾಗತಾರ್ಹ. ಆದರೆ ಈ ರಾಷ್ಟ್ರೀಯ ಕಾರ್ಯಕ್ರಮದ ಭಾಷಣದಲ್ಲಿ ರಾಜಕೀಯ ಇಣುಕಿದ್ದು ಅನಪೇಕ್ಷಿತ ಮತ್ತು ನಕಾರಾತ್ಮಕ. ಭಾರತವನ್ನು ವಿಶ್ವದ ಮೂರನೇ ಆರ್ಥಿಕ ಶಕ್ತಿಯನ್ನಾಗಿಸುವ ಗ್ಯಾರಂಟಿ' ಘೋಷಣೆಯನ್ನು ಮೋದಿ ಇದೇ ವೇಳೆ ಮಾಡಿದ್ದು ಹಾಗೂ ತಾವೇ ಮುಂದಿನ ಪ್ರಧಾನಿ ಎಂಬುದನ್ನು ಹೇಳುತ್ತ ಲೋಕಸಭಾ ಚುನಾವಣೆಯ ಕಹಳೆ ಮೊಳಗಿಸಿದ್ದು ಎದ್ದು ಕಂಡ ಸಂಗತಿ. ಕೆಂಪುಕೋಟೆಯಿಂದ ಮಾತನಾಡುವಾಗ ಇದೇ ಮೊದಲ ಬಾರಿಗೆಮೇರೆ ಪ್ಯಾರೇ ದೇಶ್‌ವಾಸಿಯೋ’ ಎಂಬ ಸಂಬೋಧನೆಯ ಬದಲಾಗಿ, ಮೇರೆ ಪ್ಯಾರೇ ಪರಿವಾರ್ ಜನೋ' ಎಂದು ಮೋದಿ ಮಾತನಾಡಿದ್ದು ಇನ್ನೊಂದು ಗಮನಾರ್ಹ ಸಂಗತಿ. ದೇಶದ ಪ್ರಗತಿ ವಿವರಿಸುತ್ತಲೇ ವಿಪಕ್ಷಗಳನ್ನು ಕೆಣಕುವಂತೆ ರಾಜಕೀಯ ಭಾಷಣವನ್ನು ಮಾಡಿದ್ದು ಈ ವರ್ಷದ ಸ್ವಾತಂತ್ರ್ಯೋತ್ಸವನ್ನು ಬಹುಕಾಲ ನೆನಪಿನಲ್ಲಿ ಉಳಿಸಲಿದೆ. ತಮ್ಮ ಹತ್ತನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ರಾಜಕೀಯವಾದ ಅಂಶಗಳನ್ನು ದಟ್ಟವಾಗಿ ಮುನ್ನೆಲೆಗೆ ತಂದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಮುಖ್ಯ ಕಾರ್ಯಕ್ರಮದಲ್ಲಿ ಇಷ್ಟು ಪ್ರಚ್ಛನ್ನವಾಗಿ ರಾಜಕೀಯ ಅಂಶಗಳು ಇದುವರೆಗೆ ಕಂಡುಬಂದಿರಲಿಲ್ಲ. ಮಳೆ ನಿಂತರೂ ಮರದ ಹನಿ ನಿಲ್ಲದು ಎನ್ನುವ ಹಾಗೆ ಮೋದಿ ಭಾಷಣ ಬರುವ ದಿನಗಳಲ್ಲಿ ವಿರೋಧ ಪಕ್ಷಗಳಿಗೆ ಆಹಾರ-ಅಸ್ತ್ರಗಳಾಗಲಿವೆ. ನಮ್ಮ ಸರ್ಕಾರ ಶಿಲಾನ್ಯಾಸ ಮಾಡಿದ ಕಾಮಗಾರಿಗಳನ್ನು ಉದ್ಘಾಟನೆ ಮಾಡುವುದು ನನ್ನ ಅದೃಷ್ಟದಲ್ಲೇ ಬರೆದಿದೆ… ಮುಂದಿನ ಆಗಸ್ಟ್ ೧೫ರಂದು ಇದೇ ಕೆಂಪುಕೋಟೆಯ ಮೇಲೆ ನಿಂತು ಪುನಃ ನಿಮಗೆ ದೇಶ ಸಾಗುತ್ತಿರುವ ಪ್ರಗತಿಯ ಜಾಡುಗಳನ್ನು ತಿಳಿಸುವೆ’ ಎಂಬ ಅವರ ಮಾತುಗಳು ಪ್ರತಿಪಕ್ಷಕ್ಕೆ ಸವಾಲಿನಂತಿದ್ದವು.
೨೦೨೪ರ ಲೋಕಸಭೆ ಸಮರಕ್ಕೆ ಎಂಟು ತಿಂಗಳಷ್ಟೇ ಬಾಕಿ ಇರುವಾಗ ವಿಪಕ್ಷದ ಮೇಲೆ ಮೋದಿ ಮಾಡಿದ ಪರೋಕ್ಷ ಪ್ರಹಾರ ನಿಸ್ಸಂಶಯವಾಗಿ ಚುನಾವಣಾ ಪ್ರಚಾರದಂತಿತ್ತು. ಇದನ್ನು ಅಭಿವೃದ್ಧಿ ಆಯಾಮ ಹಾಗೂ ವಿಕಸಿತ ಭಾರತದ ತರ್ಕದಲ್ಲಿ ಮೋದಿ ಜಾಣ್ಮೆಯಿಂದ ಸುತ್ತಿದ್ದು ಮುಂದಿನ ದಿನಗಳ ಚುನಾವಣೆ ಕಸರತ್ತುಗಳಿಗೆ ಸ್ಪಷ್ಟ ದಿಕ್ಸೂಚಿ.
೨೦೧೪ರಲ್ಲಿದ್ದ ಭಾರತದ ಆರ್ಥಿಕ-ಸಾಮಾಜಿಕ ಸ್ಥಿತಿಗತಿ, ಅಂದಿನ ಭ್ರಷ್ಟಾಚಾರ ಮತ್ತು ಕಳೆದ ಒಂಬತ್ತು ವರ್ಷಗಳಲ್ಲಿ ಭಾರತ ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಿರುವುದನ್ನು ಅವರು ಬಿಚ್ಚಿಟ್ಟ ರೀತಿ ಮಾತ್ರ ಖಂಡಿತ ಸಮರ್ಥನೀಯ.
ಕಳೆದ ಒಂಬತ್ತು ವರ್ಷಗಳಲ್ಲಿ ದೇಶ ಮಾಡಿರುವ ಪ್ರಗತಿಯ ಕಾರ್ಡ್ ನೀಡುವ ಮೂಲಕ ಪ್ರಧಾನಿ ಚುನಾವಣೆಗೆ ಶಂಖನಾದ ಮಾಡಿದ್ದಾರೆ. ಜೊತೆಗೆ ೨೦೨೪ರಲ್ಲಿ ಆಯ್ಕೆಯಾದ ನಂತರ ಭಾರತವನ್ನು ಆರ್ಥಿಕವಾಗಿ ಮೂರನೇ ಜಾಗತಿಕ ಶಕ್ತಿಯನ್ನಾಗಿ ಮಾಡುವೆ ಎಂದಿದ್ದಾರೆ. ಭವಿಷ್ಯದ ಉಜ್ವಲ ಭಾರತಕ್ಕೆ ಪರಿವಾರವಾದಿಗಳನ್ನು ತಿರಸ್ಕರಿಸಿ. ಕೆಲವೊಮ್ಮೆ ಕಣ್ಣುಮುಚ್ಚಿ ಕೂರುವ ತಪ್ಪನ್ನು ಭಾರತೀಯರು ಮಾಡುತ್ತಾರೆ; ಮುಂಬರುವ ವರ್ಷ ಹೀಗೆ ಮಾಡಬೇಡಿ ಎಂದು ನೇರ ಕರೆ ನೀಡುವ ಮೂಲಕ ಪ್ರತಿಪಕ್ಷವನ್ನು ಕುಟುಕಿದ್ದಾರೆ. ೨೦೨೪ರ ಏಪ್ರಿಲ್- ಮೇ ತಿಂಗಳಲ್ಲಿ ನಡೆಯಬೇಕಾದ ಚುನಾವಣೆ, ಅವಧಿಗೆ ಮುನ್ನವೇ ಬರಬಹುದೇ ಎನ್ನುವ ಅನುಮಾನವಂತೂ ಪ್ರಧಾನಿ ಭಾಷಣದ ಓಘವನ್ನು ಗಮನಿಸಿದಾಗ ಮೂಡುವಂತಾಗಿದೆ. ಕುಟುಂಬ ರಾಜಕೀಯವನ್ನು ಜರಿಯುತ್ತ, ತುಷ್ಟೀಕರಣ ರಾಜಕಾರಣವನ್ನು ಅವರು ಒರೆಗೆ ಹಚ್ಚಿದ್ದು ಪ್ರತಿಪಕ್ಷಕ್ಕೆ ನೀಡಿದ ತಿವಿತ ಎಂಬುದು ಸ್ಪಷ್ಟ. ದಟ್ಟ ರಾಜಕೀಯ ಛಾಯೆಯ ಭಾಷಣದ ನಡುವೆಯೇ ದೇಶ ಕಳೆದೊಂದು ದಶಕದಲ್ಲಿ ಮಾಡಿರುವ ಸಾಧನೆಗಳು ಮತ್ತು ಮುಂದಿನ ದಿನಗಳ ಯೋಜನೆಗಳನ್ನು ವಿವರಿಸಿದ ರೀತಿ ಮೋದಿ ವಿಶೇಷತೆ'ಯಾಗಿತ್ತು. ಹಿಂದುಳಿದವರು, ಮಹಿಳೆಯರು, ಯುವ ಜನತೆ ಹಾಗೂ ಕೃಷಿಕರಿಗಾಗಿ ಜಾರಿಗೊಳ್ಳಲಿರುವ ಯೋಜನೆಗಳು; ಮಧ್ಯಮ ವರ್ಗದವರ ಸೂರಿನ ಕನಸಿಗೆ ಹೆಚ್ಚು ಅನುದಾನದ ಮೂಲಕ ನೀರೆರೆಯುವ ಭರವಸೆ; ದ್ವಿತೀಯ ಮತ್ತು ತೃತೀಯ ಶ್ರೇಣಿ ನಗರಗಳನ್ನು ಸಂಪದ್ಭರಿತವಾಗಿಸಲು ತೆಗೆದುಕೊಳ್ಳಲಿರುವ ಕ್ರಮಗಳ ಕುರಿತು ಪ್ರಧಾನಿ ಎಳೆ ಎಳೆಯಾಗಿ ಮಾತನಾಡಿದರು. ಹೀಗಾಗಿ ರಾಜಕೀಯ ಪ್ರೇಷಿತ ಭಾಷಣವಾಗಿದ್ದರೂ ಜನಸಾಮಾನ್ಯರಿಂದ ಟೀಕೆಗೆ ಒಳಗಾಗುವ ಸಂಭವ ಕಡಿಮೆ. ಮಾತಿನ ಕೊನೆಯಲ್ಲಿ,ನಿಮ್ಮ ನಡುವಿನಿಂದ ಬಂದ ನನಗೆ ನೀವೇ ಬದುಕು… ನಿಮಗಾಗಿ ಬದುಕುವೆ. ನನ್ನ ಬೆವರು ನಿಮಗಾಗಿ. ಕನಸುಗಳೂ ನಿಮಗಾಗಿ. ಏಕೆಂದರೆ ನೀವು ನನ್ನ ಪರಿವಾರ’ ಎಂದು ಭಾವನಾತ್ಮಕ ತಂತುಗಳನ್ನು ಮಿಡಿದದ್ದು ವಾಗ್ಮಿಯ ಜಾಣ್ಮೆಯೇ ಸರಿ. ಇದೇ ಮೊದಲ ಬಾರಿಗೆ ದೇಶದ ಗಡಿಯ ೬೦೦ ಗ್ರಾಮ ಪಂಚಾಯ್ತಿಗಳ ಪ್ರಧಾನರು ಸೇರಿ, ಅತೀ ಶ್ರೀಸಾಮಾನ್ಯ ಸ್ತರದ ೧೮೦೦ ಜನ ಸ್ವಾತಂತ್ರ್ಯೋತ್ಸವಕ್ಕೆ ವಿಶೇಷ ಆಹ್ವಾನಿತರಾಗಿದ್ದು ಒಳ್ಳೆಯ ವಿದ್ಯಮಾನ.

Previous articleಬೆಳಗಾವಿಯಲ್ಲಿ ಎರಡು ಶವ ಪತ್ತೆ
Next articleಭಕ್ತಾಪರಾಧ ಸಹಿಷ್ಣು ಭಗವಂತ