ಮೈಸೂರ: ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಗಲಭೆ ವಿರೋಧಿಸಿ ಇಂದು ಮೈಸೂರಿನ ಗನ್ ಹೌಸ್‌ನಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಮೈಸೂರು ಚಲೋ ನಡೆಲು ಅನುಮತಿ ನಿರಾಕರಿಸಿರುವ ಸ್ಥಳೀಯ ಆಡಳಿತದ ಕ್ರಮ ವಿರೋಧಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ನೀಡಿದೆ.
ಮಧ್ಯಾಹ್ನ 3.30 ಕ್ಕೆ ಶಾಂತಿಯುತವಾಗಿ, ಸೀಮಿತ ಅವಧಿ (ಒಂದೂವರೆ ತಾಸಿನಲ್ಲಿ ಸಭೆ ಮುಗಿಯಬೇಕು) ಮೈಸೂರಿನ ಪುಟ್ಬಾಲ್ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅರ್ಜಿದಾರ ಸಂಘಟನೆಗೆ ಅನುಮತಿ ನೀಡಲು ಮೈಸೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ. ಇನ್ನು ಪ್ರತಿಭಟನೆ ನಡೆಯುವ ಜಾಗಕ್ಕೆ ಸೀಮಿತವಾಗಿ 144 ಸೆಕ್ಷನ್ ತೆರವುಗೊಳಿಸಬೇಕು ಎಂದೂ ಆಯುಕ್ತರಿಗೆ ಪೀಠ ಸೂಚಿಸಿದೆ. ಫುಟ್‌ಬಾಲ್ ಮೈದಾನದಲ್ಲಿ ಸಮಾವೇಶ ನಡೆಸಲು ಅರ್ಜಿದಾರರಿಗೆ ಅನುಮತಿಸಿದ ನ್ಯಾಯಾಲಯ. ಯಾವುದೇ ತೆರನಾದ ಪ್ರಚೋದನಾಕಾರಿ ಭಾಷಣ ಮಾಡುವಂತಿಲ್ಲ, ಅರ್ಜಿದಾರರು 1 ಲಕ್ಷ ರೂ. ಮೊತ್ತದ ಬಾಂಡ್ ಸಲ್ಲಿಸಬೇಕು. ಅನಗತ್ಯ ಘಟನೆಗಳು ನಡೆದರೆ ಅರ್ಜಿದಾರರು ಹೊಣೆಗಾರರಾಗುತ್ತಾರೆ. ಅಹಿತಕರ ಘಟನೆ ನಡೆದರೆ ಅರ್ಜಿದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು, ಇಡೀ ಪ್ರತಿಭಟನೆಯನ್ನು ಅರ್ಜಿದಾರರು, ಪೊಲೀಸರು ಇಬ್ಬರೂ ವಿಡಿಯೋ ರೆಕಾರ್ಡಿಂಗ್ ಮಾಡಬೇಕು ಎಂದು ಹೈಕೋರ್ಟ್ ಹೇಳಿದೆ.