ಮರುಜೀವ ಪಡೆಯುವ ಬಾಣಂತಿಯರ ಆರೈಕೆ…

ಒಂದು ಹೆಣ್ಣಿನ ಜೀವನದಲ್ಲಿ ಅತಿ ಸಂತಸದ ಮತ್ತು ಮರುಜನ್ಮ ಪಡೆಯುವ ಸಮಯ ಹೆರಿಗೆ ಮತ್ತು ಬಾಣಂತನ ಎಂದರೆ ತಪ್ಪಾಗಲಾರದು. ಹಿಂದಿನ ಕಾಲದಲ್ಲಿ ಬಾಣಂತನವನ್ನು ಅಷ್ಟು ಕಟ್ಟುನಿಟ್ಟಾಗಿ ಮಾಡುತ್ತಿದ್ದರು. ಆದರೀಗ ಅಷ್ಟೇ ಸುಲಭದಲ್ಲಿ ಯಾವುದೇ ಪಥ್ಯವಿಲ್ಲದೆ ಸುಲಭವಾಗಿ ಮುಗಿಸುವುದನ್ನು ಕಾಣಬಹುದಾಗಿದೆ.
ಇಲ್ಲಿ ಉಪಯೋಗಿಸುವ ಆಹಾರದಲ್ಲಿ ಪಥ್ಯ ಎಂಬುವುದು ಬಾಣಂತಿಯರಿಗೆ ಅತಿ ಮುಖ್ಯವಾದದ್ದು, ಪಥ್ಯ ಎಂದ ಕೂಡಲೇ ಎಲ್ಲರೂ ಬರೀ ಗಂಜಿ ಸೇವನೆ ಎಂದು ತಿಳಿದುಕೊಳ್ಳುವುದಾದರೆ ತಪ್ಪು. ಅದು ಕೆಲವೊಂದು ಸೂಕ್ತ ಆಹಾರ ಪದಾರ್ಥಗಳನ್ನು ಹಿತಮಿತವಾಗಿ ಸೇವಿಸುವ ರೀತಿಯಷ್ಟೇ. ಬಾಣಂತಿ ಆಹಾರ ಸೇವಿಸುವಾಗ ಕೇವಲ ತನ್ನ ಬಗ್ಗೆ ಯೋಚಿಸದೇ ಆಗ ತಾನೇ ಹುಟ್ಟಿದ ಮಗುವಿನ ಬಗ್ಗೆಯೂ ಕಾಳಜಿ ವಹಿಸುವುದು ಅತಿ ಮುಖ್ಯ, ತಾನು ಸೇವಿಸಿದ ಆಹಾರ ಎದೆ ಹಾಲಿನ ಮೂಲಕ ಮಗುವಿಗೂ ಹೋಗುವ ಕಾರಣ ಅದು ಮಗುವಿಗೆ ಹೊಂದಿಕೆ ಆಗುತ್ತದೆಯೋ ಎಂದು ತಿಳಿದುಕೊಂಡು ಆಹಾರ ಸೇವಿಸುವುದು ಒಳಿತು. ಎಲ್ಲವನ್ನು ಸಮತೋಲನದಲ್ಲಿ ತೆಗೆದುಕೊಳ್ಳಬೇಕು. ಜೊತೆಗೆ ನಿದ್ರಾ ಚಟುವಟಿಕೆಗಳಲ್ಲಿ ಕಟ್ಟುನಿಟ್ಟು ಶಿಸ್ತು ಬಾಣಂತಿಗೆ ಮುಖ್ಯ. ಬಾಣಂತಿಯರಿಗೆ ಆ ಸಮಯದಲ್ಲಿ ದೇಹವು ಸಂಪೂರ್ಣವಾಗಿ ಅಸಮತೋಲನ ಆಗಿರುವುದರಿಂದ ದೇಹದಲ್ಲಿ ಹೆಚ್ಚಾಗಿ ಸುಸ್ತು ಇರುತ್ತದೆ. ಆದ್ದರಿಂದ ತೆಂಗಿನ ಎಣ್ಣೆ/ಬಾದಾಮಿ ಎಣ್ಣೆ ಅಥವಾ ಹರಳೆಣ್ಣೆ ಹಚ್ಚಿ ದೇಹಕ್ಕೆ ಬಿಸಿ ಶಾಖ ನೀಡಿ, ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಶ್ರಮ ನಿವಾರಕ ಜೊತೆಗೆ ನೋವು ನಿವಾರಕವಾಗುತ್ತದೆ. ಅಲ್ಲದೆ ಜಠಾರಾಗ್ನಿಯು ಚುರುಕುಗೊಂಡು ಹಸಿವು ಹೆಚ್ಚಾಗುತ್ತದೆ. ಸ್ನಾನದ ಆಯಾಸ ತೀರಿದ ಮೇಲೆ ಧೂಪವನ್ನು ಕೊಡುತ್ತಾರೆ.
ಹೊಗೆಯನ್ನು ಕೊಡುವುದರಿಂದ ನಮ್ಮ ದೇಹದೊಳಗೆ ನಂಜು ಹಾಗೂ ಗಾಯಗಳು ಕಡಿಮೆಯಾಗುತ್ತವೆ.
ಗರ್ಭಾಶಯದ ಶುದ್ಧಿಗೆ ಮೇಲ್ಮುಖವಾಗಿ ಮಲಗಿಸಿ ದಪ್ಪವಾದ ಸ್ವಚ್ಛ ಹತ್ತಿ ಅಥವಾ ಸೆಣಬಿನ ಪಟ್ಟಿಯನ್ನು ಹೊಟ್ಟೆಗೆ ಬಿಗಿಯಾಗಿಯೂ ಉಸಿರಾಡಲು ಸರಾಗ ವಾಗುವಂತೆಯೂ ಸುತ್ತಬೇಕು. ಕೆಳಹೊಟ್ಟೆಯಿಂದ ಮೇಲಿನ ಹೊಟ್ಟೆಯವರೆಗೆ ಸುತ್ತುವುದರಿಂದ ಕರುಳು ಮತ್ತು ಗರ್ಭಾಶಯವು ಸ್ವಸ್ಥಾನದಲ್ಲಿಯೇ ಇರುವಂತಾಗುತ್ತದೆ. ಗರ್ಭವು ಪ್ರಸವಿಸಿದ ನಂತರದ ಖಾಲಿ ಜಾಗದಲ್ಲಿ ವಾಯು ಸೇರದಂತೆ ಗರ್ಭಾಶಯ ಮತ್ತು ಕರುಳನ್ನು ಒತ್ತಿ ದೃಢವಾಗಿ ಹಿಡಿದಿಡುತ್ತದೆ, ಹೀಗೆ ಮಾಡದಿದ್ದಲ್ಲಿ ಗರ್ಭಾಶಯವು ಜಾರಬಹುದು, ಮುಂದೆ ಡೊಳ್ಳು ಹೊಟ್ಟೆ, ಶೀತ ಬೊಜ್ಜು ಬರಬಹುದಾದ ಸಾಧ್ಯತೆಯಿರುತ್ತದೆ. ಅನಿಯಮಿತ ರಕ್ತಸ್ರಾವವಾಗುವ ಸಂಭವವಿರುತ್ತದೆ.
ಈ ರೀತಿಯ ಆರೈಕೆಗಳು ಸುಮಾರು ೪೫ ದಿನಗಳವರೆಗೂ ಅಗತ್ಯವಿರುತ್ತದೆ. ಮೆದುವಾದ ಶರೀರವು ದೃಢವಾಗಿ ಒಣಗಿದ ನಂತರ ಉದರದಲ್ಲಿ ಹಸಿವು ಚುರುಕುಗೊಳ್ಳುತ್ತದೆ. ಆಗ ಹಸಿವಿಗೆ ತಕ್ಕಷ್ಟು ಮೊದಲ ಮೂರರಿಂದ ಐದು ದಿನಗಳವರೆಗೆ ಜಿಡ್ಡು (ತುಪ್ಪ)ಪದಾರ್ಥ ಆಹಾರವನ್ನು ನೀಡಲಾಗುತ್ತದೆ. ಎಷ್ಟು ಹೇಗೆ ರಕ್ತಸ್ರಾವವಾಗಿ ಗರ್ಭಾಶಯವು ಶುದ್ಧವಾಗಿದೆ ಎಂಬುದರ ಮೇಲೆ ಆಹಾರ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಹುರಿದ ರವೆ ಗಂಜಿ, ಅಕ್ಕಿ ನುಚ್ಚಿನ ಗಂಜಿ, ರಾಗಿ ಅಥವಾ ಜೋಳ ಮೊದಲಾದ ಧಾನ್ಯಗಳನ್ನು ಒಳಗೊಂಡ ತಿಳಿ ಗಂಜಿಯನ್ನು ತುಪ್ಪದೊಂದಿಗೆ ಕುಡಿಯಲು ಕೊಡುವುದು ತುಂಬಾ ಉತ್ತಮ. ಇದರಿಂದ ದೇಹಕ್ಕೆ ಶಕ್ತಿ ತುಂಬುವುದು. ರಕ್ತಸ್ರಾವ ನಿಲ್ಲುವವರೆಗೂ ಸಾಮಾನ್ಯವಾಗಿ ದ್ವಿದಳ ತರಕಾರಿ, ಮಾಂಸಾಹಾರಿಗಳಂತಹ ಜಡವಾಗುವ ಆಹಾರಗಳ ಸೇವನೆ ದೇಹಕ್ಕೆ ತೊಂದರೆಯನ್ನು ನೀಡಬಹುದು. ಹಾಗಾಗಿ ನಿಧಾನವಾಗಿ ಧಾನ್ಯಗಳ ಅನ್ನದೊಂದಿಗೆ ಮಾಂಸ, ದ್ವಿದಳ ತರಕಾರಿಗಳು, ಬೇಯಿಸಿದ ಅಡುಗೆಗಳನ್ನು ನೀಡಲಾಗುತ್ತದೆ. ಎಲ್ಲವನ್ನು ತುಪ್ಪ, ಎಣ್ಣೆಗಳಿಂದ ಸಂಸ್ಕರಿಸಬೇಕು.
ಪ್ರತಿ ಸಲ ಬಿಸಿಬಿಸಿ ಆಹಾರ ಸೇವಿಸಬೇಕು. ದಂಟು, ಅರಿವೆ, ಪಾಲಕ್ಕು, ಹೊನಗೊನೆ ಸಬ್ಸಿಗೆ, ಅಗಸೆ, ಬೆಳ್ಳುಳ್ಳಿ, ಈರುಳ್ಳಿಗಳನ್ನು ಸೇವಿಸಬೇಕು. ಪಪ್ಪಾಯ, ನೆಲ್ಲಿಕಾಯಿ, ಕ್ಯಾರೆಟ್ ಆಹಾರದಲ್ಲಿ ಇರಬೇಕು. ಹೆಸರುಬೇಳೆ ಪಾಯಸ ಹಾಲಿನಿಂದ ತಯಾರಿಸಿದ ಕೀರು ಉತ್ತಮ. ಎದೆ ಹಾಲಿನ ಪ್ರಮಾಣ ಕಡಿಮೆಯಾಗಿದ್ದಲ್ಲಿ ತಾಜಾ ದಂಟಿನ ಸೊಪ್ಪಿನ ರಸವನ್ನು ಜೇನುತುಪ್ಪ ಮತ್ತು ಏಲಕ್ಕಿ ಪುಡಿಯೊಂದಿಗೆ ಬೆರೆಸಿ ಕುಡಿಯಬೇಕು. ನುಗ್ಗೆಸೊಪ್ಪನ್ನು ಬೇಯಿಸಿ ರಸ ತೆಗೆದು ಕುಡಿಯಬೇಕು. ಸಬ್ಸಿಗೆ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ಉಪುö್ಪ ಮತ್ತು ಕಾಳುಮೆಣಸಿನ ಪುಡಿ ಬೆರೆಸಿ ಚಪಾತಿಯೊಂದಿಗೆ ಸೇವಿಸಬೇಕು. ಬಾಳೆ ಹೂವಿನ ಚಟ್ನಿ ತುಂಬಾ ಉತ್ತಮ. ಕಪ್ಪು ಎಳ್ಳು, ಓಂ ಅಕ್ಕಿ, ಕರಿ ಮೆಣಸು, ಜೀರಿಗೆ, ಕೊತ್ತಂಬರಿ, ಈರುಳ್ಳಿ, ಬೆಳ್ಳುಳ್ಳಿ, ಬೆಲ್ಲ, ತುಪ್ಪ, ತೆಂಗಿನ ಹಾಲು, ಕೊಬ್ಬರಿಗಳನ್ನು ಸೇರಿಸಿ ಆಯಾಯ ಪ್ರದೇಶಕ್ಕನುಗುಣವಾಗಿ ತಯಾರಿಸುವ ಎಳ್ಳಡಿಗೆ, ಮೆಂತೆ ಹುಡಿ ಮದ್ದು, ಮೆಂತೆ ಗಂಜಿ, ಅಂಟುಂಡೆ ಎಂದು ಕರೆಯಲ್ಪಡುವ ಆಹಾರವನ್ನು ನಿಯಮಿತವಾಗಿ ಬಳಸುತ್ತಾ ಬಂದಲ್ಲಿ ದೇಹವು ಉತ್ತಮ ದೃಢತೆ ಸಾಮರ್ಥ್ಯವನ್ನು ಪಡೆಯುವುದರೊಂದಿಗೆ ಮಗುವಿಗೆ ಬೇಕಾದ ಹಾಲು ಉತ್ಪತ್ತಿಗೊಳ್ಳುತ್ತದೆ. ಜೊತೆಗೆ ಲಘು ವ್ಯಾಯಾಮ ಮಾಡುವುದು ಸೂಕ್ತ ಬಾಣಂತಿಯರಿಗೆ ಜ್ವರ ಕಾಣಿಸಿಕೊಂಡರೆ ಶೀಘ್ರವಾಗಿ ವೈದ್ಯರ ಸಲಹೆ ತೆಗೆದುಕೊಳ್ಳುವುದು. ತಾಯಿಗೆ ಜ್ವರ ಶೀತ ಬಂದರೆ ಮಗುವಿಗೆ ಹಾಲಿನ ಮೂಲಕ ಆರೋಗ್ಯ ಏರುಪೇರಾಗಬಹುದು. ಒಟ್ಟಿನಲ್ಲಿ ಬಾಣಂತಿಯರಿಗೆ ಉತ್ತಮ ಪೌಷ್ಟಿಕಾಂಶ ಆಹಾರ ಜೊತೆಗೆ ವಿಶ್ರಾಂತಿ, ತುಂಬು ನಿದ್ರೆ ತುಂಬಾನೇ ಮುಖ್ಯ.