ಭಾರತೀಯತೆ ನಮ್ಮ ಹೆಗ್ಗುರುತು

0
21

ಹಾವೇರಿ(ರಾಣೇಬೆನ್ನೂರು): ಐದು ಸಾವಿರ ವರ್ಷಗಳ ಪುರಾತನವಾದ ನಮ್ಮ ದೇಶದ ಸಂಸ್ಕೃತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದದ್ದು, ಭಾರತೀಯತೆ ನಮ್ಮ ಹೆಗ್ಗುರುತು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ರಾಜ ರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಸ್ಥಳೀಯ ಪರಿವರ್ತನ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಕರ್ನಾಟಕ ವೈಭವ ಸಮಾರಂಭವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಹಿತಕ್ಕಿಂತ ಬೇರೊಂದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆ ವಿಶ್ವದ ಐದನೇ ಶಕ್ತಿಯಾಗಿ ಹೊರಹೊಮ್ಮಿದೆ. ನಮ್ಮನ್ನಾಳಿದವರಿಗಿಂತಲೂ ಮುಂದೆ ಸಾಗಿದ್ದು ಮುಂದಿನ ದಿನಗಳಲ್ಲಿ ಮೂರನೇ ಸ್ಥಾನ ತಲುಪಲಿದ್ದೇವೆ. ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವದ ಯಾವುದೇ ದೇಶ ಇಂತಹ ಸಾಧನೆ ಮಾಡಿಲ್ಲ ಎಂದು ಪ್ರಶಂಸಿಸಿದರು.
ಕಾಶ್ಮೀರದಲ್ಲಿ ಇದೀಗ ಶಾಂತಿ ನೆಲೆಸಿದ್ದು ಕಳೆದ ವರ್ಷ ೨ ಕೋಟಿ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಿದ್ದಾರೆ. ಇದಕ್ಕೆ ಅಲ್ಲಿ ಈ ಮೊದಲು ಇದ್ದ ೩೭೭ನೇ ವಿಧಿ ರದ್ದುಪಡಿಸಿರುವುದು, ಮಹಿಳಾ ಸಶಕ್ತೀಕರಣ ಕಾರಣ. ಏಕತೆ, ರಾಷ್ಟ್ರೀಯ ಭಾವನೆ, ರಾಷ್ಟ್ರೀಯ ಚೇತನವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಾಗಿದೆ ಎಂದರು.
೧೪೨ ಕೋಟಿ ಜನಸಂಖ್ಯೆ ಹೊಂದಿದ್ದರೂ ಭಾರತ ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯವಾಗಿದೆ ಎಂದು ಇಡೀ ವಿಶ್ವ ನಿಬ್ಬೆರಗಾಗಿದೆ. ದೇಶದ ಮನೆ ಮನೆಗಳಲ್ಲಿ ಶೌಚಾಲಯ, ಅಡುಗೆ ಮನೆಯಲ್ಲಿ ಗ್ಯಾಸ್, ಸಮರ್ಪಕ ವಿದ್ಯುತ್, ಉತ್ತಮ ರಸ್ತೆಗಳನ್ನು ಕಾಣಬಹುದಾಗಿದೆ. ಪಾರದರ್ಶಕತೆ, ಉತ್ತರದಾಯಿತ್ವ, ಸರಳತೆ ಇದಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಿಗರು ನಮ್ಮ ದೇಶದ ಮಾದರಿ ಅನುಸರಿಸಲು ಚಿಂತನೆ ಮಾಡುತ್ತಿದ್ದಾರೆ ಎಂದರು.

Previous articleಕರ್ನಾಟಕ-ಲಿವರ್ ಪೂಲ್ ವಿ.ವಿ. ಒಡಂಬಡಿಕೆಗೆ ಅಂಕಿತ
Next articleಮಹಾರಾಷ್ಟ್ರ ಚುನಾವಣೆಯಲ್ಲಿ ಹಲವು ಅಕ್ರಮ: ಐದು ತಿಂಗಳಲ್ಲಿ 39 ಲಕ್ಷ ಮತದಾರರು ಸೇರ್ಪಡೆ