ದೇಶದಲ್ಲಿರುವ ಬಡವರ ಸಂಖ್ಯೆ ಎಷ್ಟು? ವಿಶ್ವಬ್ಯಾಂಕ್ ವರದಿ ಒಂದು ಹೇಳಿದರೆ, ನೀತಿ ಆಯೋಗದ ವರದಿ ಮತ್ತೊಂದು ಹೇಳುತ್ತಿದೆ. ಎರಡೂ ವರದಿಗಳಿಗೆ ಬಳಸಿರುವ ಮಾನದಂಡಗಳಲ್ಲಿ ವ್ಯತ್ಯಾಸ ಇರುವುದೇ ಕಾರಣ.
ಭಾರತದಲ್ಲಿ ಎಷ್ಟು ಜನ ಬಡವರು ಇದ್ದಾರೆ ಎಂದು ಸ್ಪಷ್ಟವಾಗಿ ಹೇಳುವುದೇ ಕಷ್ಟ. ವಿಶ್ವಬ್ಯಾಂಕ್ ತನ್ನದೇ ಆದ ಮಾನದಂಡವನ್ನು ಬಳಸಿ ಕಳೆದ ೧೫ ವರ್ಷಗಳಲ್ಲಿ ೪೧.೫ ಕೋಟಿ ಜನ ಕಡು ಬಡತನದಿಂದ ಹೊರಬಂದಿದ್ದಾರೆ ಎಂದು ಹೇಳಿದೆ. ನೀತಿ ಆಯೋಗ ಇದನ್ನು ನಿರಾಕರಿಸಿ ಕೇವಲ ೫ ವರ್ಷಗಳಲ್ಲಿ ೧೩.೫ ಕೋಟಿ ಜನ ಎಲ್ಲ ರೀತಿಯ ಬಡತನದಿಂದ ಹೊರಬಂದಿದ್ದಾರೆ ಎನ್ನುತ್ತಿದೆ. ಬಡತನಕ್ಕೂ ಕಡು ಬಡತನಕ್ಕೂ ವ್ಯತ್ಯಾಸವಿದೆ. ಕಡು ಬಡತನದಿಂದ ಹೊರಬಂದವರು ಬಡತನದಲ್ಲಿ ಇರುತ್ತಾರೆ. ಆದರೆ ನೀತಿ ಆಯೋಗದ ಪ್ರಕಾರ ೧೩.೫ ಕೋಟಿ ಜನ ಸಂಪೂರ್ಣವಾಗಿ ಬಡತನದಿಂದ ಹೊರಬಂದಿದ್ದಾರೆ.
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳು ಯಾವುದೇ ಸಮೀಕ್ಷೆ ನಡೆಸಲಿ ಅನ್ವಯಿಸುವ ಮಾನದಂಡಗಳು ನಿಜಾಂಶವನ್ನು ತೋರಿಸುವುದಕ್ಕಿಂತ ಹೆಚ್ಚಾಗಿ ಭಾರತದ ಬಗ್ಗೆ ಅಸಮಧಾನ ಮೂಡುವ ಹಾಗೆ ಅಭಿಪ್ರಾಯ ಮೂಡಿಸುವ ಹವಣಿಕೆ ಇದೆ ಎಂಬ ಅನುಮಾನ ಬರುವಂತಾಗಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳು ಸಮೀಕ್ಷೆ ನಡೆಸುವಾಗ ನಮ್ಮ ದೇಶದ ಜನಸಂಖ್ಯೆ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಪರಿಗಣಿಸುವುದಿಲ್ಲ. ಚಿಕ್ಕ ಚಿಕ್ಕದೇಶಗಳಲ್ಲಿ ನಮ್ಮ ದೇಶದಲ್ಲಿರುವ ಸಮಸ್ಯೆ ಇರುವುದಿಲ್ಲ. ಅದರಿಂದ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಡತನ ಕಡಿಮೆಯಾದಂತೆ ಕಂಡು ಬರುವುದು ಸಹಜ. ಬಹುತೇಕ ದೇಶಗಳ ಜನಸಂಖ್ಯೆ ನಮ್ಮ ಒಂದು ರಾಜ್ಯಕ್ಕಿಂತ ಕಡಿಮೆ ಇರುತ್ತದೆ. ಅಲ್ಲದೆ ನಮ್ಮ ದೇಶ ದಾಸ್ಯದಿಂದ ಹೊರಬಂದು ೭೦ ವರ್ಷಗಳು ಮಾತ್ರ ಕಳೆದಿದೆ ಎಂಬುದನ್ನು ಗಮನಿಸುವುದಿಲ್ಲ. ನಮ್ಮದು ಪ್ರಜಾಪ್ರಭುತ್ವ ಪದ್ಧತಿ. ಇಲ್ಲಿ ಪ್ರತಿಯೊಂದು ತೀರ್ಮಾನವೂ ಜನಪ್ರತಿನಿಧಿಗಳ ಸರ್ವಾನುಮತ ನಿರ್ಣಯದಿಂದ ಮೂಡಿಬರಬೇಕು. ಇದೆಲ್ಲವನ್ನೂ ನಮ್ಮ ನೀತಿ ಆಯೋಗ ಪರಿಗಣಿಸಿ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡುತ್ತದೆ. ಹೀಗಾಗಿ ವಿಶ್ವ ಬ್ಯಾಂಕ್ ವರದಿಗೂ ನೀತಿ ಆಯೋಗದ ವರದಿಗೂ ವ್ಯತ್ಯಾಸ ಕಂಡು ಬರುವುದು ಸಹಜ. ವಿಶ್ವ ಬ್ಯಾಂಕ್ ವರದಿಯಲ್ಲಿ ೧೧೧ ದೇಶಗಳಲ್ಲಿ ೬೧೦ ಕೋಟಿ ಜನರ ಪರಿಸ್ಥಿತಿಯನ್ನು ಪರಿಗಣಿಸಲಾಗಿದೆ. ಪ್ರತಿಯೊಬ್ಬರ ವೆಚ್ಚದ ಆಧಾರದ ಮೇಲೆ ಬಡತನ ನಿರ್ಧರಿಸಲಾಗಿದೆ. ಆದರೆ ಕೊರೊನಾ ನಂತರ ಭಾರತದಲ್ಲಿ ಬಡತನ ಕಡಿಮೆಯಾಗಿದ್ದರೂ ವಿಶ್ವಬ್ಯಾಂಕ್ ಪರಿಗಣಿಸಿಲ್ಲ. ಇದಕ್ಕೆ ಕಾರಣ ಬೇರೆ ದೇಶಗಳಲ್ಲಿ ಕೊರೊನಾ ನಂತರದ ಪರಿಸ್ಥಿತಿಯ ಬಗ್ಗೆ ಅಂಕಿಅಂಶಗಳು ಲಭ್ಯವಿಲ್ಲ. ದೇಶದ ಗ್ರಾಮೀಣ ಪ್ರದೇಶದಲ್ಲಿ ಬಡತನ ಶೇಕಡ ೩೨.೫೯ ರಿಂದ ಶೇ.೧೯.೨೮ಕ್ಕೆ ಕುಸಿದಿದೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ರಾಜಾಸ್ತಾನ, ದೆಹಲಿ, ಕೇರಳ, ಗೋವಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬಡತನ ಒಟ್ಟಾರೆ ಇಳಿಮುಖಗೊಂಡಿದೆ. ಆದರೂ ಬಡವರ ಸಂಖ್ಯೆ ಸಂಪೂರ್ಣ ಇಳಿಮುಖಗೊಂಡಿಲ್ಲ. ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟವನ್ನು ಮಾನದಂಡವಾಗಿ ಪರಿಗಣಿಸಲಾಗಿದೆ. ಕರ್ನಾಟಕದಲ್ಲೂ ಬಡತನ ಇಳಿಮುಖಗೊಂಡಿದೆ ಎಂಬುದನ್ನು ವರದಿ ತಿಳಿಸಿದೆ. ವಿಶ್ವ ಬ್ಯಾಂಕ್ ವರದಿ ಸಾಕ್ಷಾತ್ ಚಿತ್ರಣ ಕೊಡುವುದಿಲ್ಲ ಎಂಬುದು ನೀತಿ ಆಯೋಗ ವಾದ. ಬಡತನ ಎಂಬುದು ನಿಂತ ನೀರಲ್ಲ. ವಿವಿಧ ಹಂತಗಳಲ್ಲಿ ಬಡತನವನ್ನು ಗುರುತಿಸಬಹುದು. ನಮ್ಮಲ್ಲಿ ಸಾಮಾನ್ಯವಾಗಿ ಒಂದು ಹೊತ್ತು ಊಟವೂ ಇಲ್ಲ ಎಂದರೆ ಅವರನ್ನು ಕಡು ಬಡವರು ಎಂದು ಕರೆಯುತ್ತೇವೆ. ಬಡತನ ರೇಖೆಯನ್ನು ತೆಂಡೂಲ್ಕರ್ ವರದಿಯ ಆಧಾರದ ಮೇಲೆ ಈಗಲೂ ತೀರ್ಮಾನಿಸಲಾಗುವುದು. ಕೇಂದ್ರ ಸರ್ಕಾರ ಬಡತನರೇಖೆಯಿಂದ ಕೆಳಗಿರುವವರನ್ನು ಗುರುತಿಸಲು ಬಳಸುವ ಮಾನದಂಡವೇ ಬೇರೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಹೆಚ್ಚು ಉದಾರ ನಿಲುವು ತಳೆಯುವುದರಿಂದ ಬಿಪಿಎಲ್ ಕಾರ್ಡ್ದಾರರ ಸಂಖ್ಯೆ ಅಧಿಕಗೊಳ್ಳುತ್ತದೆ. ಚುನಾವಣೆ ಕಾಲದಲ್ಲಿ ಬಡತನ ನಿವಾರಣೆ ಕಾರ್ಯಕ್ರಮ ಅತಿ ಹೆಚ್ಚಿನ ಮಹತ್ವ ಪಡೆಯುತ್ತದೆ. ಸರ್ಕಾರ ಬಡಜನರ ನಿಜವಾದ ಅಂಕಿಅಂಶಗಳನ್ನು ಬಹಿರಂಗ ಪಡಿಸಲು ಬಯಸುವುದಿಲ್ಲ.
