ಭಾರತಕ್ಕೆ ಟ್ರಂಪ್ ಸಿಹಿ ಸ್ವಾಗತಾರ್ಹ ಬೆಳವಣಿಗೆ

ಟ್ರಂಪ್ ತಂಡ ಮೊದಲ ದ್ವಿಪಕ್ಷೀಯ ಮಾತುಕತೆಯನ್ನು ಭಾರತದ ಜೊತೆ ನಡೆಸುವುದರ ಮೂಲಕ ಜಗತ್ತಿಗೆ ಹೊಸಸಂದೇಶ ರವಾನಿಸಿದೆ. ಎಚ್೧ಬಿ ವೀಸಾ ನಿಲ್ಲಿಸುವುದಿಲ್ಲ ಎಂದು ಟ್ರಂಪ್ ಸ್ವತಃ ಹೇಳಿಕೆ ನೀಡಿ ಆತಂಕ ನಿವಾರಿಸಿದ್ದಾರೆ. ಇದರ ದೊಡ್ಡ ಫಲಾನುಭವಿಗಳು ಭಾರತೀಯರು. ವ್ಯಾವಹಾರಿಕ ಲಾಭವನ್ನು ಮನದಟ್ಟು ಮಾಡಿಸಿ ಅಮೆರಿಕದಿಂದ ಗರಿಷ್ಠ ಲಾಭಪಡೆದುಕೊಳ್ಳುವ ಹೊಣೆ ಈಗ ಭಾರತದ ರಾಜತಾಂತ್ರಿಕರ ನೀತಿ ನಿರೂಪಕರ ಮೇಲಿದೆ. ಟ್ರಂಪ್ ಪ್ರಮಾಣ ವಚನ ಸಮಾರಂಭದಲ್ಲಿ ಭಾರತದ ವಿದೇಶಾಂಗ ಸಚಿವರಿಗೆ ಮೊದಲ ಸಾಲಿನಲ್ಲೇ ಆಸನ ವ್ಯವಸ್ಥೆ ಮಾಡಿದ್ದು ಟ್ರಂಪ್ ಸರ್ಕಾರದ ಉದ್ದೇಶ ಏನು ಎಂಬುದು ಸ್ಪಷ್ಟ. ಕ್ವಾಡ್ ಶೃಂಗ ಸಭೆಯಲ್ಲಿ ಅಮೆರಿಕದೊಂದಿಗೆ ಭಾರತವೂ ಸದಸ್ಯರ ರಾಷ್ಟ್ರವಾಗಿದೆ. ಚೀನಾದೊಂದಿಗೆ ಪೈಪೊಟಿ ನಡೆಸಬೇಕಾದರೆ ಭಾರತದ ಬೆಂಬಲ ಬೇಕೇ ಬೇಕು ಎಂಬುದು ಟ್ರಂಪ್‌ಗೆ ಗೊತ್ತಿದೆ. ಟ್ರಂಪ್ ಮೂಲತಃ ಉದ್ಯಮಿ, ಕೊಡು-ಕೊಡುಗೆ ಇಲ್ಲದೆ ಮಾತುಕತೆ ನಡೆಸುವುದಿಲ್ಲ. ಅವರ ನೀತಿ-ಧೋರಣೆ ಬಹಿರಂಗ. ಯಾವುದೂ ಮುಚ್ಚುಮರೆ ಇಲ್ಲ. ಹೀಗಾಗಿ ವ್ಯಾಪಾರ ವ್ಯವಹಾರ ನಡೆಸುವುದು ಸುಲಭ. ಇಂಡೋ ಪೆಸಿಫಿಕ್, ಕ್ವಾಡ್, ಜಿ-೨೦, ಜಿ-೭ ಸಭೆಗಳಲ್ಲಿ ಭಾರತ ಪಾತ್ರವಹಿಸುತ್ತಿದೆ. ಇದಲ್ಲದೆ ಭಾರತ-ಭಾರತ ಸೇನಾ ಪಡೆಗಳು ಹಲವು ಬಾರಿ ಒಟ್ಟಿಗೆ ಸಮರಾಭ್ಯಾಸ ನಡೆಸಿದೆ. ಭಾರತದ ಮೂರು ಸೇನೆಗಳಿಗೆ ಬೇಕಾದ ಯಂತ್ರೋಪಕರಣಗಳನ್ನು ಅಮೆರಿಕದ ಕಂಪನಿಗಳು ಸರಬರಾಜು ಮಾಡುತ್ತಿವೆ. ಅಲ್ಲದೆ ಅಮೆರಿಕದ ಕಂಪನಿಗಳು ಭಾರತದ ನೆಲದಲ್ಲಿ ಹಲವು ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ಸಾಹ ತೋರಿವೆ. ಅಮೆರಿಕಕ್ಕೆ ಭಾರತ ೧೧೮.೨ ಬಿಲಿಯನ್ ವಸ್ತುಗಳನ್ನು ರಫ್ತು ಮಾಡುತ್ತಿವೆ. ಇದು ಭಾರತದ ಒಟ್ಟು ರಫ್ತಿನಲ್ಲಿ ೧೭ ರಷ್ಟಾಗಿದೆ. ರಫ್ತು ಪ್ರಮಾಣ ಅಧಿಕಗೊಳ್ಳಬೇಕು ಎಂದರೆ ಭಾರತ ತನ್ನ ತೆರಿಗೆ ಪ್ರಮಾಣ ಕಡಿಮೆ ಮಾಡಬೇಕು. ೨೦೩೦ಕ್ಕೆ ಭಾರತದ ಅತಿ ವೇಗದ ಆರ್ಥಿಕ ಬೆಳವಣಿಗೆ ಕಾಣಬೇಕು ಎಂದರೆ ಅಮೆರಿಕದೊಂದಿಗೆ ಉತ್ತಮ ವ್ಯಾಪಾರ ಸಂಬಂಧ ಹೊಂದಬೇಕು. ಹಿಂದೆ ಇರಾನ್‌ನಿಂದ ಭಾರತಕ್ಕೆ ಇಂಧನ ತೈಲ ಬರುತ್ತಿತ್ತು. ಟ್ರಂಪ್ ಕಾಲದಲ್ಲಿ ಅದು ನಿಂತು ಅಮೆರಿಕದ ನೈಸರ್ಗಿಕ ಅನಿಲ ಮತ್ತು ಇಂಧನ ತೈಲ ಬರಲು ಆರಂಭವಾಯಿತು.
ವೈರ್‌ಲೆಸ್ ಸಂಪರ್ಕ, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್ ತಯಾರಿಕೆ, ಶಿಕ್ಷಣ, ಸ್ಟಾರ್ಟ್ಅಪ್‌ಗಳಲ್ಲಿ ಹೆಚ್ಚಿನ ವ್ಯಾಪಾರ ವ್ಯವಹಾರ ನಡೆಯಲಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಅಮೆರಿಕದಲ್ಲಿ ೪೦ ಲಕ್ಷ ಭಾರತೀಯ ಸಂಜಾತರು ಇದ್ದಾರೆ. ಹಿಂದೆ ಮೋದಿ ಅಲ್ಲಿಗೆ ಹೋಗಿದ್ದಾಗ ಭಾರತೀಯ ಸಂಜಾತರ ಬೃಹತ್ ಜನಸ್ತೋಮವನ್ನು ನೋಡಿ ಟ್ರಂಪ್ ಆಶ್ಚರ್ಯಚಕಿತರಾಗಿದ್ದು ನಿಜ. ಅದೇರೀತಿ ಅಹಮದಾಬಾದ್‌ಗೆ ಟ್ರಂಪ್ ಬಂದಾಗ ೧೨೫೦೦೦ ಜನ ನಮಸ್ತೆ ಟ್ರಂಪ್' ಕಾರ್ಯಕ್ರಮಕ್ಕೆ ಬಂದಿದ್ದು ಟ್ರಂಪ್ ಮರೆಯಲಾಗದ ಘಟನೆ. ಇದರಿಂದ ಟ್ರಂಪ್-ಮೋದಿ ನಡುವೆ ಉತ್ತಮ ಸಂಬಂಧ ಬೆಳೆಯಲು ಕಾರಣವಾಗಿದೆ. ಅಮೆರಿಕದಲ್ಲಿರುವ ಅಕ್ರಮ ವಲಸಿಗರ ಬಗ್ಗೆ ಅಲ್ಲಿಯ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಅದಕ್ಕೆ ಸಚಿವ ಜೈಶಂಕರ್ ಅಕ್ರಮವಲಸೆಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಎರಡೂ ದೇಶಗಳ ನಡುವೆ ಇರುವ ಮಧುರ ಬಾಂದವ್ಯಕ್ಕೆ ಧಕ್ಕೆ ಒದಗಿಬರುವುದಿಲ್ಲ ಎಂಬುದು ಸ್ಪಷ್ಟ. ಐಟಿ ಬಿಟಿ ಸೇರಿದಂತೆ ಜ್ಞಾನಾಧರಿತ ಉದ್ಯಮಗಳಿಗೆ ಅಮೆರಿಕ ಭಾರತವನ್ನು ಅವಲಂಬಿಸಿರುವುದು ಇಂದು ನಿನ್ನೆಯ ಸಂಗತಿಯಲ್ಲ. ಅದೇರೀತಿ ಭಾರತೀಯ ಬಾಹ್ಯಾಕಾಶ ಸಂಶೋಧನೆಯಲ್ಲೂ ನಾಸಾ-ಇಸ್ರೋ ನಡುವೆ ಕೊಡು-ಕೊಡುಗೆ ಅನಿವಾರ್ಯ. ಇವುಗಳು ರಾಜತಾಂತ್ರಿಕ ಸಂಬಂಧಗಳಿಗೆ ಹೊರತಾಗಿರುವುದರಿಂದ ನಿರಂತರ ನಡೆಯುತ್ತದೆ. ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದು, ಆಗ ಎರಡೂ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ಇಸ್ರೇಲ್ ಸೇರಿದಂತೆ ಹಲವು ದೇಶಗಳ ಯುದ್ಧಗಳ ಬಗ್ಗೆ ಭಾರತದ ನಿಲುವನ್ನು ಅಮೆರಿಕ ಸ್ವಾಗತಿಸಿದೆ. ಹೀಗಾಗಿ ಕಹಿ ಮನಸ್ಸಿಗೆ ಅವಕಾಶವಿಲ್ಲ. ಟ್ರಂಪ್ ಮೂಲ ಧ್ಯೇಯಅಮೆರಿಕ ಮೊದಲು’. ಅದಕ್ಕೆ ಭಾರತ ಎಂದೂ ವಿರೋಧಿಸಿಲ್ಲ. ಪ್ರತಿ ದೇಶದ ಪ್ರಜೆಗಳು ತಮ್ಮ ದೇಶದ ಬಗ್ಗೆ ಸ್ವಾಭಿಮಾನ ಹೊಂದಿರಬೇಕು ಎಂಬುದೇ ಭಾರತದ ನಿಲುವು. ಹೀಗಾಗಿ ಟ್ರಂಪ್ ಕೈಗೊಳ್ಳುವ ಕ್ರಮಗಳು ಅಮೆರಿಕದ ಪರ ಇರಬೇಕೆಂಬ ತತ್ವಕ್ಕೆ ಭಾರತದ ಬೆಂಬಲ ಇದ್ದೇ ಇರುತ್ತದೆ. ಟ್ರಂಪ್ ಮತ್ತೆ ಆಯ್ಕೆಯಾಗಿ ಬಂದಾಗ ಭಾರತದ ವಿರೋಧ ನಿಲುವು ತಳೆಯಬಹುದು ಎಂಬ ಆತಂಕ ಮನೆಮಾಡಿತ್ತು. ಆದರೆ ಪ್ರಮಾಣವಚನ ಸ್ವೀಕರಿಸಿದ ಮೇಲೆ ಟ್ರಂಪ್ ವರ್ತನೆ ನೋಡಿದರೆ ಎಲ್ಲ ಆತಂಕಗಳು ದೂರವಾಗಿದೆ. ಆದರೂ ನಮ್ಮ ರಾಜತಾಂತ್ರಿಕ ವರ್ಗದವರು ತಮ್ಮ ದೇಶದ ನಿಲುವನ್ನು ಸಮರ್ಪಕವಾಗಿ ಪ್ರತಿಬಿಂಬಿಸುವುದು ಅಗತ್ಯ. ಇದುವರೆಗೆ ನಮ್ಮ ವಿದೇಶಾಂಗ ಸಚಿವಾಲಯ ಉತ್ತಮ ಕೆಲಸ ಮಾಡುತ್ತ ಬಂದಿದೆ. ನಮ್ಮ ನಿಜವಾದ ರಾಯಭಾರಿಗಳು ಎಂದರೆ ಪ್ರತಿಭಾವಂತ ಯುವಪಡೆ ಎಂಬುದನ್ನು ಮರೆಯುವ ಹಾಗಿಲ್ಲ.