ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮನ್ನಣೆ ನೀಡಲು ಇನ್ನೂ ತೀರ್ಮಾನಿಸಿಲ್ಲ. ಫೆಬ್ರವರಿ ೨೦೨೨ ರಲ್ಲೇ ಬಸವರಾಜ ಬೊಮ್ಮಯಿ ಅವರೇ ಇದಕ್ಕೆ ರಾಷ್ಟ್ರೀಯ ಮನ್ನಣೆ ಸಿಗುತ್ತದೆ ಎಂದು ಭರವಸೆ ನೀಡಿದ್ದರು. ಈಗ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಕೂಡ ಶತಾಯುಗತಾಯ ಈ ಯೋಜನೆಗೆ ಮೋಕ್ಷ ಸಿಗುವಂತೆ ಮಾಡಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಒಂದು ಹುಲ್ಲುಕಡ್ಡಿಯೂ ಅಲುಗಾಡಿಲ್ಲ. ರಾಜಕೀಯ ಕಾರಣಗಳಿಗೆ ನೀರಾವರಿ ಯೋಜನೆಗಳನ್ನು ಅರ್ಧಕ್ಕೆ ಕೈಬಿಡುವುದು ಸರಿಯಲ್ಲ. ಇದರಿಂದ ಈ ಭಾಗದ ಜನರಿಗೆ ಆರ್ಥಿಕವಾಗಿ ನಷ್ಟಕ್ಕೆ ಕಾರಣವಾಗುತ್ತದೆ. ಈ ಯೋಜನೆಯಿಂದ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ದಾವಣಗೆರೆ ಜಿಲ್ಲೆಗಳಿಗೆ ಲಾಭವಾಗಲಿದೆ. ಈ ಪ್ರದೇಶ ಬಹುತೇಕ ಬರಪೀಡಿತ. ಇದಕ್ಕೆ ನೀರು ದೊರಕಿದಲ್ಲಿ ಬೆಳವಣಿಗೆ ಕಂಡು ಬರುವುದು ಖಚಿತ. ಒಟ್ಟು೨.೨೫ ಲಕ್ಷ ಹೆಕ್ಟೇರ್‌ಗೆ ನೀರು ಲಭಿಸಲಿದೆ. ಅಲ್ಲದೆ ೩೬೭ ಕೆರೆಗಳನ್ನು ತುಂಬಿಸಬಹುದು. ಒಟ್ಟು ೧೬೧೨೫ ಕೋಟಿ ರೂ. ವೆಚ್ಚದ ಯೋಜನೆಗೆ ಕೇಂದ್ರದ ನೆರವು ೧೨೫೦೦ ಕೋಟಿ ರೂ. ಬರಬೇಕು. ಅದರಲ್ಲಿ ೫೩೦೦ ಕೋಟಿ ರೂ. ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಅದನ್ನೂ ನೆರವೇರಿಸಿಲ್ಲ. ಎಲ್ಲ ಕಾಮಗಾರಿ ಎಲ್ಲಿತ್ತೋ ಅಲ್ಲೇ ನಿಂತಿದೆ. ಇದಕ್ಕೆ ಯಾರು ಹೊಣೆ ಎಂದು ಹೇಳುವುದು ಕಷ್ಟ. ಕೇಂದ್ರ ಸರ್ಕಾರ ಒಮ್ಮೆ ಭರವಸೆ ನೀಡಿದ ಮೇಲೆ ಅದರಂತೆ ನಡೆದುಕೊಳ್ಳಬೇಕು. ತುಂಗಾದಿಂದ ಭದ್ರಾಗೆ ನೀರನ್ನು ಪಂಪ್‌ಮಾಡಬೇಕು. ಅಜ್ಜಂಪುರ ಸುರಂಗದ ಮೂಲಕ ನೀರು ಹರಿಯಬೇಕಿತ್ತು. ಭದ್ರಾ ಮೇಲ್ದಂಡೆ ಯೋಜನೆ ರೀತಿಯಲ್ಲೇ ಹಲವು ಯೋಜನೆಗಳು ನನೆಗುದಿಗೆ ಬಿದ್ದಿರುವುದಂತೂ ನಿಜ. ಇದರಿಂದ ಕೋಟ್ಯಂತರ ರೂ ಪೋಲಾಗಿದೆ. ಇದನ್ನು ತಪ್ಪಿಸುವುದು ಆಡಳಿತದಲ್ಲಿರುವವರ ಕೈಯಲ್ಲಿದೆ. ಅದರಲ್ಲೂ ದೆಹಲಿಯಲ್ಲಿ ಕುಳಿತವರಿಗೆ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಜನರ ಕಷ್ಟ ಅರಿವಾಗುವುದು ಕಷ್ಟ. ನಮ್ಮಲ್ಲಿ ಶೇ. ೮೦ ರಷ್ಟು ಕೃಷಿ ಅವಲಂಬಿಸಿದ್ದಾರೆ. ನೀರಾವರಿ ಯೋಜನೆಗಳು ಸಕಾಲದಲ್ಲಿ ಮುಕ್ತಾಯಗೊಂಡಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಬಹುದು. ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳು ಅನಕ್ಷರಸ್ತರಿಗೆ ಉದ್ಯೋಗ ಒದಗಿಸುವುದು ಕಷ್ಟ. ಅದರಿಂದಲೇ ಆರ್ಥಿಕ ತಜ್ಞರು ಕೃಷಿಗೆ ಮೊದಲಿನಿಂದಲೂ ಆದ್ಯತೆ ನೀಡುತ್ತ ಬಂದಿದ್ದಾರೆ. ರಾಜಸ್ತಾನ ಹೊರತುಪಡಿಸಿದರೆ ಚಿತ್ರದುರ್ಗದಲ್ಲೇ ಅತಿ ಹೆಚ್ಚು ಒಣಭೂಮಿ ಇದೆ. ಅದರಿಂದ ಇಲ್ಲಿಯ ಜನರಿಗೆ ಕುಡಿಯುವ ನೀರು ಒದಗಿಸುವುದು ಬಹಳ ಮುಖ್ಯ. ಅದರಲ್ಲೂ ಅಂತರ್ಜಲ ಮಟ್ಟ ಅಧಿಕಗೊಂಡಲ್ಲಿ ಸಣ್ಣ ರೈತರು ತಮ್ಮ ಹೊಲದ ಬಾವಿಗಳನ್ನು ಅವಲಂಬಿಸಿ ನೀರಾವರಿ ಕೈಗೊಳ್ಳಬಹುದು. ರಾಜಕೀಯ ಪಕ್ಷಗಳು ರಾಜಕೀಯ ಲಾಭವಿಲ್ಲದೆ ಯಾವ ಕೆಲಸವನ್ನೂ ಮಾಡುವುದಿಲ್ಲ. ಭದ್ರ ಮೇಲ್ದಂಡೆ ಯೋಜನೆಯಿಂದ ರಾಜಕೀಯ ಲಾಭ ಇಲ್ಲ ಎಂಬ ತೀರ್ಮಾನಕ್ಕೆ ರಾಜಕಾರಣಿಗಳು ಬಂದಂತೆ ಇದೆ. ಅದರಿಂದ ಹಲವು ವರ್ಷಗಳಿಂದ ಈ ಯೋಜನೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಈ ದೀರ್ಘಕಾಲಿಕ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ಕ್ಷುಲ್ಲಕ ವಿಚಾರಗಳು ಗಣನೆಗೆ ಬರಬಾರದು. ಇದು ಎಲ್ಲ ರಾಜಕೀಯ ಪಕ್ಷಗಳಿಗೆ ಅನ್ವಯಿಸುವ ಮಾತು. ರಾಜಕೀಯ ಕಾರಣಗಳಿಂದ ರಾಜ್ಯ-ಕೇಂದ್ರಗಳಲ್ಲಿ ಆಡಳಿತಕ್ಕೆ ಬೇರೆ ಬೇರೆ ರಾಜಕೀಯ ಪಕ್ಷಗಳು ಬರುವುದು ಸಹಜ.
ಆದರೆ ಪಕ್ಷಗಳು ಬದಲಾದಂತೆ ಯೋಜನೆಗಳು ನಿಲ್ಲಬಾರದು. ಇವುಗಳಿಗೆ ತೆರಿಗೆದಾರರ ಹಣ ವಿನಿಯೋಗವಾಗಿರುವುದರಿಂದ ಅದನ್ನು ಅರ್ಧಕ್ಕೆ ನಿಲ್ಲಿಸಲು ಬರುವುದಿಲ್ಲ. ಅಲ್ಲದೆ ಲಕ್ಷಾಂತರ ರೈತರು ತಮ್ಮ ಜಮೀನಿಗೆ ಇಂದಿಲ್ಲ ನಾಳೆ ನೀರು ಹರಿದು ಬರುತ್ತದೆ ಎಂಬ ಆಶಯದೊಂದಿಗೆ ಬದುಕಿರುತ್ತಾರೆ. ಅವರಿಗೆ ನಿರಾಸೆ ಮೂಡಿಸುವುದು ಸರಿಯಲ್ಲ. ಕೈಗಾರಿಕೆಗಳನ್ನು ಸ್ಥಳಾಂತರಗೊಳಿಸಬಹುದು. ನೀರಾವರಿ ಯೋಜನೆಗಳನ್ನು ಆ ರೀತಿ ಎತ್ತಂಗಡಿ ಮಾಡಲು ಬರುವುದಿಲ್ಲ. ಯೋಜನೆ ಕೈಗೊಳ್ಳುವಾಗಲೇ ಎಲ್ಲ ಸಾಧಕ ಬಾದಕಗಳನ್ನು ಪರಿಶೀಲಿಸಿಯೇ ತೀರ್ಮಾನ ಕೈಗೊಂಡಿರುತ್ತಾರೆ. ಈಗ ಯೋಜನೆಯ ಪರಿಶೀಲನೆ ಮಾಡುವುದು ಸರಿಯಾದ ಕ್ರಮವಲ್ಲ. ಯೋಜನೆ ಏತಕ್ಕೆ ನಿಂತಿದೆ ಎಂಬುದೇ ಸ್ಪಷ್ಟಗೊಂಡಿಲ್ಲ. ಹಣದ ಕೊರತೆಯಾದರೆ ಇದು ಕೇಂದ್ರ ಸರ್ಕಾರ ದೊಡ್ಡ ಹೊರೆಯ ಯೋಜನೆಯೂ ಅಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದವರಿಗೆ ಬಡವರ ಕಷ್ಟ-ನೋವಿನ ಅರಿವು ಇರುತ್ತದೆ ಎಂದು ಭಾವಿಸಿರುತ್ತೇವೆ. ಆದರೆ ನಿರ್ಲಕ್ಷತೆಯ ತೋರಿದರೆ ಜನಸಾಮಾನ್ಯರಿಗೆ ಅನ್ಯ ಮಾರ್ಗ ಇರುವುದಿಲ್ಲ. ಚುನಾವಣೆಯೇ ಎಲ್ಲದಕ್ಕೂ ಪರಿಹಾರ ಎಂಬ ಭಾವನೆ ಮೂಡಬಾರದು. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ನೀರಾವರಿ ಯೋಜನೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂಬುದನ್ನು ವಿವರಿಸಿ ಹೇಳುವ ಅಗತ್ಯವಿಲ್ಲ. ಕರ್ನಾಟಕದ ಮಧ್ಯಭಾಗದಲ್ಲಿರುವ ಈ ಪ್ರದೇಶದ ಜನ ರಾಜಕೀಯವಾಗಿ ಬಹಳ ಜಾಗೃತಗೊಂಡವರು. ಅವರಿಗೆ ಎಲ್ಲ ರಾಜಕೀಯ ಪಕ್ಷಗಳ ಆಳ ಅಗಲ ತಿಳಿದಿದೆ. ಜನರ ತಾಳ್ಮೆಯನ್ನು ಪರೀಕ್ಷಿಸುವ ಕೆಲಸಕ್ಕೆ ಸರ್ಕಾರ ಕೈಹಾಕಬಾರದು. ದುಡಿಯುವ ಕೈಗಳಿಗೆ ಎಲ್ಲ ಸವಲತ್ತುಗಳನ್ನು ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯವೂ ಹೌದು. ಭದ್ರಾ ಮೇಲ್ದಂಡೆ ಯೋಜನೆ ಈಗ ಕೇಂದ್ರದ ಕೃಪೆಗಾಗಿ ಕಾದಿದೆ.