ಸರ್ಕಾರಗಳು ಬದಲಾಗಬಹುದು. ಬೋಗಸ್ ಬಿಪಿಎಲ್ ಕಾರ್ಡ್ ಇದ್ದೇ ಇರುತ್ತದೆ. ಹಿಂದೆ ಬೋಗಸ್ ಕಾರ್ಡ್ ವಿರುದ್ಧ ಯುದ್ಧ ಸಾರಿದವರೆಲ್ಲ ಸೋತು ಹೋಗಿದ್ದಾರೆಯೇ ಹೊರತು ಕಾರ್ಡ್ಗೆ ಏನೂ ಆಗಿಲ್ಲ. ಬೋಗಸ್ ಕಾರ್ಡ್ ಕೊಡುವ ಒಂದು ವ್ಯವಸ್ಥಿತ ಜಾಲವೇ ಇದೆ. ಸರ್ಕಾರ ಕಡಿವಾಣ ಹಾಕಲು ಹೊರಟಾಗಲೆಲ್ಲ ಅವರಿಗೆ ಸಂತೋಷ. ಅವರ ಲಂಚದ ಪ್ರಮಾಣ ಹೆಚ್ಚುತ್ತದೆ. ಕಾರ್ಡ್ ವಿತರಣೆ ಪ್ರಮಾಣ ಕಡಿಮೆಯಾಗಬಹುದೇ ಹೊರತು ನಿಲ್ಲುವುದಿಲ್ಲ. ನೆಮ್ಮದಿ ಕೇಂದ್ರದಿಂದ ಇದು ಆರಂಭ. ಗ್ರಾಮ್-೧, ಕರ್ನಾಟಕ -೧ ರಲ್ಲಿ ಬೋಗಸ್ ಕಾರ್ಡ್ ಹುಟ್ಟುತ್ತದೆ. ಹಳ್ಳಿಗಳಲ್ಲಿ ಬೋಗಸ್ ಕಾರ್ಡ್ ಪಡೆಯುವುದು ಕಷ್ಟ. ಅದರಲ್ಲೂ ಜನಪ್ರಿಯ ಶಾಸಕರು ಇರುವಕಡೆ ಬೋಗಸ್ ಹೆಚ್ಚು. ಅವರ ಜನಪ್ರಿಯತೆಗೆ ಮಾನದಂಡ ಎಷ್ಟು ಜನರಿಗೆ ರೇಷನ್ ಕಾರ್ಡ್ ಕೊಡಿಸಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆ ಬೋಗಸ್ ಕಾರ್ಡ್ಗಳ ತಯಾರಿಕೆ ಆರಂಭವಾಗುತ್ತದೆ. ಎಷ್ಟೋ ಕಟ್ಟುನಿಟ್ಟಿನ ಅಧಿಕಾರಿಗಳು ಇದಕ್ಕೆ ಕೈಹಾಕಿ ಕೈಸುಟ್ಟುಕೊಂಡು ನೆಮ್ಮದಿಯಾಗಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಎಲ್ಲಿಯುವರಿಗೆ ರೇಷನ್ ಕಾರ್ಡ್ ರಾಜಕೀಯ ಅಸ್ತçವಾಗಿರುತ್ತದೊ ಅಲ್ಲಿಯವರಿಗೆ ಬೋಗಸ್ ಇದ್ದೇ ಇರುತ್ತದೆ. ಈಗ ಬಿಪಿಎಲ್ ಕಾರ್ಡ್ ಪಡೆಯಲು ಕುಟುಂಬದ ಒಟ್ಟು ಆದಾಯ ವಾರ್ಷಿಕ ೧.೨೦ ಲಕ್ಷರೂ. ಈ ಮಿತಿಯಲ್ಲಿರುವವರು ಬಹಳ ಕಡಿಮೆ. ನಾಲ್ಕು ಚಕ್ರದ ವಾಹನ ಇರಬಾರದು, ಸ್ವಂತ ಭೂಮಿ ಇರಬಾರದು. ಸರ್ಕಾರಿ ನೌಕರಿ ಇರಬಾರದು. ಆದಾಯ ತೆರಿಗೆ ಸಲ್ಲಿಸುತ್ತಿದ್ದರೆ ಕಾರ್ಡ್ ನೀಡಬಾರದು ಎಂದಿದೆ. ಇದನ್ನು ಪರಿಶೀಲಿಸುವವರು ಯಾರು? ನಿಯಮಗಳು ಹೆಚ್ಚಾದಂತೆ ಲಂಚದ ಪ್ರಮಾಣ ಅಧಿಕಗೊಳ್ಳುತ್ತದೆ.
ವಿಶ್ವಬ್ಯಾಂಕ್ ಇತ್ತೀಚೆಗೆ ನೀಡಿದ ವರದಿಯಲ್ಲಿ ಭಾರತದ ಕಡು ಬಡತನ ಕಡಿಮೆಯಾಗಿದೆ. ಶೇ.೨೭.೧ ಇದ್ದದ್ದು ಈಗ ಶೇ.೫.೩ಕ್ಕೆ ಇಳಿದಿದೆ. ಇದಕ್ಕೆ ಸರಿಸಮಾನವಾಗಿ ಕರ್ನಾಟಕದಲ್ಲೂ ಕಡು ಬಡತನ ಕಡಿಮೆಯಾಗಿರಲೇಬೇಕು. ೧೯೯೪ ರಿಂದ ಕರ್ನಾಟಕದಲ್ಲಿ ಬಡತನ ಇಳಿಮುಖಗೊಂಡಿದೆ. ಒಂದು ಕಡೆ ನಮ್ಮದು ಸಂಪದ್ಭರಿತ ರಾಜ್ಯ ಎಂದು ಹೇಳಿಕೊಳ್ಳುತ್ತೇವೆ. ಐಟಿಬಿಟಿಯಲ್ಲಿ ನಾವೇ ನಂಬರ್ ಒನ್ ಎಂದು ಹೇಳುತ್ತೇವೆ. ಆದರೆ ಬಿಪಿಎಲ್ ಕಾರ್ಡ್ ಮಾತ್ರ ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಒಟ್ಟು ೪೪ ಲಕ್ಷ ಬೋಗಸ್ ಕಾರ್ಡ್ ಇದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಇವುಗಳಲ್ಲಿ ಕೆಲವನ್ನು ಎಪಿಎಲ್ ಕಾರ್ಡ್ಆಗಿ ಪರಿವರ್ತಿಸಲು ಸರ್ಕಾರವೇ ಸಿದ್ಧವಾಗಿದೆ. ಬೆಂಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಮೊದಲಿನಿಂದಲೂ ಹಾಗೆ ಮುಂದುವರಿದಿದೆ. ಯಾವ ಜನಪ್ರತಿನಿಧಿಯೂ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಹೊಣೆ ಹೊರಲು ಸಿದ್ಧರಿಲ್ಲ. ಅಧಿಕಾರಿಗಳು ಅದರಿಂದ ಮೌನವಹಿಸಿದ್ದಾರೆ.
ಅಗತ್ಯ ಸೇವಾ ಕಾಯ್ದೆಯಲ್ಲಿ ಬೋಗಸ್ ಕಾರ್ಡ್ ಹೊಂದಿದವರಿಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಒಬ್ಬರಿಗೂ ಇದುವರೆಗೆ ಶಿಕ್ಷೆ ಅಗಿಲ್ಲ. ೨೦೨೧ರಿಂದ ೨೦೨೩ ವರೆಗೆ ೧೩.೫೧ ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ೨೧೩ ಎಫ್‌ಐಆರ್ ಆಗಿದೆ. ೨೩೮ ಜನರ ಮೇಲೆ ಮೊಕದ್ದಮೆ ಹೂಡಲಾಗಿದೆ. ಒಬ್ಬರಿಗೂ ಜೈಲು ಆಗಿಲ್ಲ.
ಅಲ್ಲದೆ ಪ್ರಮುಖ ಸಮಸ್ಯೆ ಸರ್ಕಾರವೇ ಬಿಪಿಎಲ್ ಕಾರ್ಡ್ ಗುರುತಿನ ಚೀಟಿಯಾಗಿ ಪರಿವರ್ತಿಸಿರುವುದು. ಬಹುತೇಕ ಜನರಿಗೆ ಉಚಿತ ರೇಷನ್ ಅಕ್ಕಿ ಬೇಕಿಲ್ಲ. ಅವರಿಗೆ ರೇಷನ್ ಕಾರ್ಡ್ನಿಂದ ಶಾಲೆ, ಆಸ್ಪತ್ರೆ, ಗೃಹ ಲಕ್ಷಿö್ಮ, ಕಾರ್ಮಿಕರ ನಿಧಿ ಸೇರಿದಂತೆ ಹಲವು ಸವಲತ್ತುಗಳನ್ನು ಪಡೆಯಲು ಬೇಕು. ನಮ್ಮಲ್ಲಿ ಬಿಪಿಎಲ್ ಎಂದು ಗುರುತಿಸಲು ರೇಷನ್ ಕಾರ್ಡ್ ಬಿಟ್ಟು ಬೇರೆ ಇಲ್ಲ. ಅದರಿಂದ ಕಾರು, ಬಂಗಲೆ ಇರುವವರೂ ಬಿಪಿಎಲ್ ಕಾರ್ಡ್ ಪಡೆಯಲು ಬಯಸುತ್ತಿದ್ದಾರೆ. ಇದಕ್ಕೆ ಮಂಡ್ಯ ದಂಥ ಸಂಪದ್ಭರಿತ ಜಿಲ್ಲೆಯೇ ಉದಾಹರಣೆ. ಅತಿ ಹೆಚ್ಚು ಬಡತನ ಇರುವುದು ಕಲ್ಬುರ್ಗಿ, ಯಾದಗಿರಿ, ಕೊಪ್ಪಳ. ಅಲ್ಲಿ ಬಿಪಿಎಲ್ ಕಾರ್ಡ್ ಕಡಿಮೆ ಇದೆ. ರಾಜ್ಯ ಸರ್ಕಾರಕ್ಕೆ ಈಗ ತಲೆನೋವಾಗಿರುವುದು ಬಿಪಿಎಲ್ ಕಾರ್ಡ್ದಾರರಿಗೆ ನೀಡುವ ಅಕ್ಕಿ, ರಾಗಿ, ಜೋಳ ಅಲ್ಲ. ಈ ಬಿಪಿಎಲ್ ಕಾರ್ಡ್ ಮೇಲೆ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿರುವ ಬೋಗಸ್ ಕಾರ್ಡ್ದಾರರು. ಇವರಿಂದ ೧೫೦೦ ಕೋಟಿ ರೂ. ನಷ್ಟ ಸರ್ಕಾರಕ್ಕೆ ಸಂಭವಿಸುತ್ತಿದೆ. ಕಡು ಬಡವರ ಹೆಸರಿನಲ್ಲಿ ಇವರು ಸರ್ಕಾರದ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈಗ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ಮೂಲಕವೇ ಸವಲತ್ತು ನೀಡಬೇಕಾಗಿ ಬಂದಿದೆ. ಕಾರ್ಮಿಕರು ಬಿಪಿಎಲ್ ಕಾರ್ಡ್ ಪಡೆಯುವುದು ಅನಿವಾರ್ಯವಾಗಿದೆ. ಅದೇರೀತಿ ಜಯದೇವ ಆಸ್ಪತ್ರೆ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಇದ್ದರೆ ಉಚಿತ ಸೇವೆ ಲಭ್ಯ. ಅದರಿಂದ ಉಳಿದವರೂ ಲಂಚ ಕೊಟ್ಟಾದರೂ ಬಿಪಿಎಲ್ ಕಾರ್ಡ್ ಪಡೆಯಲು ಬಯಸುವುದು ಸಹಜ.ಪರಿಸ್ಥಿತಿ ಹೀಗಿರುವಾಗ ಬೋಗಸ್ ಪಿಪಿಎಲ್ ಕಾರ್ಡ್ ತೆಗೆಯಲು ಸಾಧ್ಯವೇ ಎಂಬುದನ್ನು ಸರ್ಕಾರ ಪ್ರಾಂಜಲ ಮನಸ್ಸಿನಿಂದ ಒಮ್ಮೆ ಪರಿಶೀಲಿಸುವುದು ಒಳಿತು. ರೇಷನ್ ಕಾರ್ಡ್ ಈಗ ಪಡಿತರಕ್ಕೆ ಸೀಮಿತಗೊಂಡಿಲ್ಲ. ಅದು ಸರ್ಕಾರಿ ಸವಲತ್ತು ಪಡೆಯಲು ರಹದಾರಿಯಾಗಿದೆ. ಇದು ಬದಲಾಗದೆ ಬೋಗಸ್ ರೇಷನ್ ಕಾರ್ಡ್ ಬ್ರಹ್ಮರಾಕ್ಷಸದಂತೆ ಬೆಳೆಯುವುದು ಸಹಜ. ಈಗಲೂ ಲಂಚ ಕೊಟ್ಟರೆ ೨೪ ಗಂಟೆಯಲ್ಲಿ ಬೋಗಸ್ ಕಾರ್ಡ್ ಲಭ್ಯ.