ಬೇಲಿ-ಹೊಲದ ನಡುವೆ ಪೊಲೀಸರಲ್ಲೊಬ್ಬ ಕೀಚಕ

0
29

ಸಾರ್ವಜನಿಕರ ಮಾನ ಪ್ರಾಣ ರಕ್ಷಣೆ ಹೊಣೆ ಹೊತ್ತಿರುವ ಪೊಲೀಸರೆಂದರೆ ಸಮಾಜದಲ್ಲಿ ಭಯಮಿಶ್ರಿತ ಗೌರವ: ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ಅಮಾಯಕ ಮಹಿಳೆಯ ಮೇಲೆ ಜರುಗಿರುವ ಲೈಂಗಿಕ ದಬ್ಬಾಳಿಕೆಯ ವರದಿಗಳ ಪರಿಣಾಮವಾಗಿ ಪೊಲೀಸರೆಂದರೆ ಗೌರವದ ಬದಲು ಭಯ ಮಾತ್ರ ಕಂಡುಬಂದರೆ ಅದು ವಾಸ್ತವ. ಏಕೆಂದರೆ, ಡಿವೈಎಸ್‌ಪಿ ಮಟ್ಟದ ಅಧಿಕಾರಿಯೊಬ್ಬ ನ್ಯಾಯ ಬಯಸಿ ಬಂದ ಮಹಿಳೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯಕ್ಕೆ ಕಚೇರಿಯಲ್ಲೇ ಗುರಿಪಡಿಸಿರುವ ಘಟನೆ ಪುರಾಣದ ಕೀಚಕನೂ ಕೂಡಾ ನಾಚುವಂತಿದೆ. ನಾಗರಿಕ ಸಮಾಜಕ್ಕೆ ಅಟ್ಟಹಾಸದಂತೆ ಕಂಡುಬರುವ ಈ ಬೆಳವಣಿಗೆ ಸಾರ್ವಜನಿಕರಿಗಷ್ಟೇ ಅಲ್ಲ ಇಡೀ ಆಡಳಿತ ವ್ಯವಸ್ಥೆಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.
ಇಂತಹ ಹೀನಕೃತ್ಯ ಜರುಗಿ ಹತ್ತು ದಿನಗಳು ಉರುಳಿದ್ದರೂ ಸಾರ್ವಜನಿಕ ವಲಯದಲ್ಲಿ ಆವರಿಸಿರುವ ಮಹಾಮೌನ ಸಾಮಾಜಿಕ ವ್ಯವಸ್ಥೆ ಯಾವ ದಾರಿಯತ್ತ ಸಾಗುತ್ತಿದೆ ಎಂಬುದರ ದಿಕ್ಸೂಚಿಯಂತಿದೆ. ಇಂತಹ ದುರ್ಘಟನೆಯನ್ನು ಖಂಡಿಸುವ ಮನೋಧರ್ಮ ಮಾಯವಾಗಿ ಹೋಗಿರುವುದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ಘಟನೆ ಜರುಗಿದ ನಂತರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ನಂತರ ಎಚ್ಚೆತ್ತ ಪೊಲೀಸರು ಆರೋಪಿ ಅಧಿಕಾರಿಯನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿದ್ದು ಕಾನೂನಿನ ಕ್ರಮವೇನೋ ಸರಿ. ಆದರೆ, ಒಂದು ಕಂದಾಯ ವಿಭಾಗದ ಕಾನೂನು ಹಾಗೂ ಸುವ್ಯವಸ್ಥೆ ಪರಿಸ್ಥಿತಿಯ ನಿಭಾಯಿಸುವ ಜಾಗದಲ್ಲಿದ್ದ ಅಧಿಕಾರಿ ಇಂತಹ ಹೀನಕೃತ್ಯದಲ್ಲಿ ಪಾಲ್ಗೊಂಡದ್ದು ಬಯಲಾದ ಮೇಲೂ ಆಡಳಿತ ವ್ಯವಸ್ಥೆಯ ಆಮೆ ನಡಿಗೆಯ ಧೋರಣೆ ಅರ್ಥವಾಗದ ಸಂಗತಿ. ಮಧುಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಐವತ್ತು ವರ್ಷಗಳ ಹಿಂದೆ ಇದೇ ಊರಿನ ಠಾಣೆಯಲ್ಲಿ ಕಬ್ಬು ಬೆಳೆಗಾರ ರೈತರು ಹಾಗೂ ಮಹಿಳೆಯರಿಗೆ ಕಿರುಕುಳ ಕೊಟ್ಟ ವರದಿ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಸಾತ್ವಿಕ ರೋಷ ಪ್ರದರ್ಶನಗೊಂಡ ಘಟನಾವಳಿಯನ್ನು ಮರೆಯುವಂತಿಲ್ಲ. ಅದೇ ಊರಿನಲ್ಲಿ ಈಗ ಪೊಲೀಸ್ ಅಧಿಕಾರಿಯೊಬ್ಬ ಕೀಚಕನಂತೆ ಮಹಿಳೆಯ ಮಾನಭಂಗಕ್ಕೆ ಇಳಿದದ್ದು ಯಾವ ಸೀಮೆಯ ನ್ಯಾಯವೋ ಗೊತ್ತಿಲ್ಲ. ಯುವ ಜನರಂತೂ ಈ ಅಧಿಕಾರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಕೂಡಲೇ ಸೇವೆಯಿಂದ ಕಿತ್ತೆಸೆಯುವಂತೆ ಪಟ್ಟು ಹಿಡಿದಿದ್ದಾರೆ. ಜನತಂತ್ರ ಪದ್ಧತಿಯ ದೇಶಗಳಲ್ಲಿ ಎಂತಹ ಆರೋಪಿಯನ್ನಾದರೂ ತನಿಖೆ ಹಾಗೂ ವಿಚಾರಣೆ ಇಲ್ಲದೆ ಶಿಕ್ಷೆಗೆ ಗುರಿಪಡಿಸುವಂತಿಲ್ಲ. ಈಗಿನ ಮಟ್ಟಿಗೆ ಈ ಅಧಿಕಾರಿಗೆ ಅದೇ ಒಂದು ರಕ್ಷಣೆ.
ಅಂದ ಹಾಗೆ, ಈ ಅಧಿಕಾರಿಯ ವಿರುದ್ಧ ಈ ಹಿಂದೆಯೂ ಕೂಡಾ ಇಂತಹುದೇ ಆರೋಪಗಳು ಮಾರ್ದನಿಗೊಂಡಿದ್ದ ವಿಚಾರ ತಡವಾಗಿ ಬೆಳಕಿಗೆ ಬರುತ್ತಿದೆ. ಸಾಕ್ಷಾಧಾರಗಳಿಲ್ಲದ ಪ್ರಯುಕ್ತ ಈ ಅಧಿಕಾರಿ ಆರೋಪ ಮುಕ್ತನಾದದ್ದು ಇನ್ನೊಂದು ಕಥೆ. ಅದೇನೇ ಇರಲಿ, ಇಂತಹ ದುಷ್ಟ ಬುದ್ಧಿಯ ಅಧಿಕಾರಿಗಳಿಗೆ ಯಾವುದೇ ರೀತಿಯ ಕನಿಕರ ತೋರುವುದು ಮನುಷ್ಯತ್ವಕ್ಕೆ ಎಸಗುವ ಘೋರ ಅಪಚಾರ. ಇಲಾಖಾ ವಿಚಾರಣೆ ನಡೆಯುವುದು ನಂತರ ನ್ಯಾಯಾಲಯದಲ್ಲಿ ವಾದ ವಿವಾದಗಳ ವಿಚಾರಣೆಯ ನಂತರ ತೀರ್ಪು ನೀಡುವುದು ಬೇರೆ ಸಂಗತಿ. ಆದರೆ, ಸಾಮಾಜಿಕವಾಗಿ ಜನ ನಿರೀಕ್ಷಿಸುವುದೇನೆಂದರೆ, ಪೊಲೀಸ್ ಠಾಣೆಗಳಿಗೆ ಹೋಗುವುದು ಅಂದುಕೊಂಡಷ್ಟು ಸುಲಭವೇ ಹಾಗೂ ಸುರಕ್ಷಿತವೇ ಎಂಬುದಕ್ಕೆ ಖಾತರಿ. ಬೇಲಿಯಂತಿರುವ ಠಾಣಾಧಿಕಾರಿಯೇ ಹೊಲ ಮೇಯಲು ಹೊರಟಾಗ ಇದಕ್ಕೆ ಖಾತರಿ ಕೊಡುವವರಾರು ಹಾಗೂ ಪಡೆಯುವವರಾರು ಎಂಬುದು ಇತ್ಯರ್ಥಬೇಕಾದ ಸಂಗತಿ.
ಇಂತಹ ಅಸಹನೀಯ ಬೆಳವಣಿಗೆಗಳನ್ನು ಸರ್ಕಾರ ಯಾವುದೇ ಅಧಿಕಾರದಲ್ಲಿದ್ದರೂ ಅದಕ್ಕೆ ಥಳುಕು ಹಾಕುವುದು ಸರ್ವಥಾ ಸರಿಯಲ್ಲ. ಏಕೆಂದರೆ, ಸರ್ಕಾರ ಯಾವತ್ತಿಗೂ ಎಲ್ಲರಿಗೂ ರಕ್ಷಕ. ದೋಷವಿರುವುದು ಅಧಿಕಾರ ಚಲಾಯಿಸುವ ಅಧಿಕಾರಿಗಳಲ್ಲಿ ಇರುವ ಕೆಲವು ಕಪ್ಪು ಕುರಿಗಳ ಕೈಚಳಕ. ಹೀಗಾಗಿ ಇಂತಹ ಕಪ್ಪು ಕುರಿಗಳನ್ನು ಮಟ್ಟ ಹಾಕುವುದು ಸರ್ಕಾರಗಳ ಆದ್ಯ ಕರ್ತವ್ಯವಾಗಿರಬೇಕು.
ಪ್ರತಿಯೊಂದು ಸರ್ಕಾರಕ್ಕೂ ಕೂಡಾ ಜನರ ಯೋಗಕ್ಷೇಮವೇ ಆದ್ಯತೆ. ಇದರ ಬಗ್ಗೆ ಎರಡನೆಯ ಮಾತಿಲ್ಲ. ಆದರೆ, ನಸುಗುನ್ನಿಯಂತಹ ಅಧಿಕಾರಿಗಳು ವ್ಯವಸ್ಥೆಯ ಒಳಗೆ ತೂರಿಕೊಂಡು ತಮ್ಮ ಕೈಚಳಕವನ್ನು ಪ್ರದರ್ಶಿಸಲು ಹೊರಟಾಗ ಅದಕ್ಕೆ ಪ್ರತಿಯಾಗಿ ನಿಗ್ರಹಕಾರಕ ವ್ಯವಸ್ಥೆಯೊಂದು ಇರಬೇಕು ಎಂಬುದು ಸಾರ್ವಜನಿಕರ ಅಪೇಕ್ಷೆ. ಪೊಲೀಸ್ ವ್ಯವಸ್ಥೆ ಒಂದು ಶಿಸ್ತಿನ ವ್ಯವಸ್ಥೆ. ಇಂತಹ ಶಿಸ್ತಿನ ವ್ಯವಸ್ಥೆಯಲ್ಲಿಯೇ ಅನಾಚಾರ ಅತ್ಯಾಚಾರಗಳು ನಡೆಯುತ್ತಾ ಹೋದಾಗ ಜನರ ಕೂಗು ಕೇಳುವವರಾದರೂ ಯಾರು ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗಬಾರದು. ಗೃಹ ಇಲಾಖೆಯಲ್ಲಿ ಇಂತಹ ಹದ್ದುಮೀರಿದ ಅಧಿಕಾರಿಗಳ ನಿಗ್ರಹಕ್ಕೆ ಪರ್ಯಾಯ ವ್ಯವಸ್ಥೆ ರೂಪಿಸಿದರೆ ಮಾತ್ರ ಜನರ ವಿಶ್ವಾಸ ಉಳಿಸಿಕೊಳ್ಳುವುದು ಸಾಧ್ಯ.
ಈ ಹಿಂದೆ ಇಂತಹುದೇ ಒಂದು ಪ್ರಕರಣ ಬೆಂಗಳೂರಿನ ಕಾಟನ್‌ಪೇಟೆಯಲ್ಲಿ ಜರುಗಿತ್ತು. ಆಗಿನ ಠಾಣಾಧಿಕಾರಿಯ ವಿರುದ್ಧ ಮೊಕದ್ದಮೆ ದಾಖಲಾಗಿ ಗೃಹ ಸಚಿವರು ಖುದ್ದು ಆಸಕ್ತಿ ವಹಿಸಿದ ಪರಿಣಾಮವಾಗಿ ಆ ಠಾಣಾಧಿಕಾರಿಯನ್ನು ಕೆಲಸದಿಂದ ಕಿತ್ತೆಸೆಯುವ ನಿರ್ಣಾಯಕ ಕ್ರಮ ಕಾರ್ಯರೂಪಕ್ಕೆ ಬರುವುದು ಸುಲಭವಾಯಿತು. ಈಗಲೂ ಕೂಡಾ ಅದೇ ದಾರಿಯಲ್ಲಿ ಸಾಗಿದರಷ್ಟೆ ಸಾರ್ವಜನಿಕರಿಗೆ ನ್ಯಾಯ ಒದಗಿಸಿದಂತೆ ಆಗುತ್ತದೆ.
ತಾಲೂಕು ಕಚೇರಿಗಳು ಹಾಗೂ ಪೊಲೀಸ್ ಠಾಣೆಗಳು ಪಾರದರ್ಶಕವಾಗಿ ಹಾಗೂ ಜನಸ್ನೇಹಿಯಾಗಿ ರೂಪುಗೊಂಡು ಕಾರ್ಯ ನಿರ್ವಹಿಸಿದರೆ ಮಾತ್ರ ಸರ್ಕಾರದ ಆಡಳಿತದ ಸ್ವರೂಪ ಏನೆಂಬುದು ಜನರ ಅನುಭವಕ್ಕೆ ನೇರವಾಗಿ ಬರುತ್ತದೆ. ಕೋಟ್ಯಂತರ ರೂಪಾಯಿಯ ಯೋಜನೆಗಳು ಇಲ್ಲವೇ ಅಂಗೈನಲ್ಲಿ ಅರಮನೆಯಂತಹ ಪ್ರಸ್ತಾಪಗಳನ್ನು ಕಂಡು ಜನ ನೋಡಿ ರೋಮಾಂಚನಗೊಳ್ಳಬಹುದು. ಆದರೆ, ತೃಪ್ತರಂತೂ ಆಗುವುದಿಲ್ಲ. ಏಕೆಂದರೆ, ಅನುಭವ ಬೇರೆ ಭಾವನೆ ಬೇರೆ. ಆದ್ಯತೆಯ ಮೇಲೆ ಪೊಲೀಸ್ ಠಾಣೆಗಳು ಹಾಗೂ ತಾಲೂಕು ಕಚೇರಿಗಳ ಕಾರ್ಯ ನಿರ್ವಹಣೆಯನ್ನು ಪಾರದರ್ಶಕಗೊಳಿಸುವುದು ಈಗಿನ ಅಗತ್ಯವೆಂಬುದು ಮಧುಗರಿ ಪ್ರಕರಣದಿಂದ ಮತ್ತೊಮ್ಮೆ ಸರ್ಕಾರಕ್ಕೆ ಮನವರಿಕೆಯಾಗಬೇಕಾಗಿದೆ.

Previous articleನಮ್ ಸಾಹೇಬ್ರೇ ಗ್ರೇಟು ನೀವೆಲ್ಲ ಗಿಲೀಟು
Next articleಪ್ರಸನ್ನತೆಗಾಗಿ ಪ್ರಸಾದ ಸೇವನೆ