ಬೆಂಡೆತ್ತುವ ಹಾರಾಟ-ಗುಂಡಿಕ್ಕಲು ತಡಕಾಟ

ವೈರಿ ರಾಷ್ಟ್ರದ ಯುದ್ಧವನ್ನು ಎಂತಹ ಸಂದರ್ಭದಲ್ಲಿಯಾದರೂ ಎದುರಿಸಿ ನಿಲ್ಲಬಹುದು; ಆದರೆ, ಗೆರಿಲ್ಲಾ ಮಾದರಿಯ ಯುದ್ಧವನ್ನು ಎದುರಿಸುವುದು ಕಷ್ಟ. ಏಕೆಂದರೆ, ಇದೊಂದು ಯುದ್ಧವಲ್ಲದ ಯುದ್ಧ. ವೈರಿ ರಾಷ್ಟ್ರವು ಬಾಡಿಗೆ ಬಂಟರ ಮೂಲಕ ಅಮಾಯಕರ ಮೇಲೆ ದೌರ್ಜನ್ಯವೆಸಗಿ ರಕ್ತಪಾತವನ್ನು ಹರಿಸಿದಾಗ ಸಂತ್ರಸ್ತ ರಾಷ್ಟ್ರದ ದ್ವೇಷ ಸಹಜವಾಗಿಯೇ ವೈರಿ ರಾಷ್ಟ್ರದ ಮೇಲೆ ಭುಗಿಲೇಳುವುದು ಸ್ವಾಭಾವಿಕ. ಆದರೆ, ಪ್ರಶ್ನೆ ಎಂದರೆ ಬಾಡಿಗೆ ಬಂಟರನ್ನು ತದುಕಿ ಪಾಠ ಕಲಿಸದೆ ವೈರಿ ರಾಷ್ಟ್ರದ ಮೇಲೆ ಮುಗಿಬೀಳುವುದು ಎಂದರೆ ಜಗತ್ತಿನ ರಾಜಕಾರಣ ಒಪ್ಪುವುದೋ ಇಲ್ಲವೋ ಎಂಬ ಶಂಕೆ. ಇಂತಹ ದಿಕ್ಕೆಟ್ಟ ಸ್ಥಿತಿಯಲ್ಲಿ ಸಂತ್ರಸ್ತ ದೇಶ ಸ್ವಾಭಾವಿಕವಾಗಿ ಮಾತಿನ ಸಮರದ ನಾನಾ ಮಗ್ಗಲುಗಳನ್ನು ಪ್ರಯೋಗಿಸಿ ಏಕಕಾಲದಲ್ಲಿ ಬಾಡಿಗೆ ಬಂಟರು ಹಾಗೂ ವೈರಿ ರಾಷ್ಟ್ರದ ವಿರುದ್ಧ ವ್ಯೂಹ ರಚಿಸಲು ರಣತಂತ್ರಜ್ಞರ ಮಾರ್ಗದರ್ಶನವನ್ನು ಪಡೆದು ರಾಜಕೀಯ ದೃಷ್ಟಿಕೋನದ ಕಾರ್ಯಾಚರಣೆ ಆರಂಭಿಸುವ ವೇಳೆಗೆ ಹಲವಾರು ಸಂದರ್ಭಗಳಲ್ಲಿ ಪರಿಸ್ಥಿತಿಯೇ ಬೇರೆಯೇ ತಿರುವನ್ನು ಪಡೆಯುವ ಸಾಧ್ಯತೆಗಳು ಬಹಳಷ್ಟು. ಕಾಶ್ಮೀರ ಕಣಿವೆಯಲ್ಲಿ ಅಮಾಯಕ ಭಾರತೀಯ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುರುತು ಮಾಡಿ ಗುಂಡಿಕ್ಕಿರುವ ಪ್ರಕರಣ ಕಂಡಾಗ ರೌರವ ಕೋಪ ತಾಪಗಳು ಉಕ್ಕುವುದು ಸಹಜವೇ. ಹೀಗಾಗಿಯೆ ಭಾರತ ಈಗ ಕೋಪದಿಂದ ಕುದಿಯುತ್ತಿರುವ ಕೊಪ್ಪರಿಗೆ. ಇಂತಹ ಕೊಪ್ಪರಿಗೆಯ ಮುಂದೆ ಸಾವಧಾನ, ಸಂಯಮ ಮೊದಲಾದ ಶಬ್ದಗಳು ಚಲಾವಣೆ ಇಲ್ಲದ ನಾಣ್ಯಗಳು. ಏಕೆಂದರೆ, ಭಯೋತ್ಪಾದಕರ ಗುಂಡೇಟಿಗೆ ಜೀವ ಕೊಟ್ಟಿರುವುದು ಅಮಾಯಕ ಜನ. ದೇಶದ ಮೇಲಿನ ಯುದ್ಧ ಬೇರೆ. ಆದರೆ, ನಾಗರಿಕರ ಮೇಲೆ ಶಸ್ತ್ರ ಪ್ರಯೋಗಿಸಿ ರುಂಡ ಮುಂಡಗಳನ್ನು ಬೇರ್ಪಡಿಸುವುದು ಬೇರೆ. ಎಂತಹ ಸಂಯಮದ ಮೂರ್ತಿಯಾದರೂ ಇಂತಹ ಗತ್ಯಂತರ ಸಂದರ್ಭದಲ್ಲಿ ಸೇಡಿಗೆ ಸೇಡು ಎಂದು ಅವುಡು ಕಚ್ಚಿ ನಿಲ್ಲುವುದು ಸಹಜವೇ. ಹಾಗೆ ನೋಡಿದರೆ, ಈಗ ಭಾರತೀಯರ ಮನಸ್ಥಿತಿ ಸೇಡಿಗೆ ಸೇಡು. ಜಾಗತಿಕ ರಾಜಕಾರಣವನ್ನು ದೂರವಿಟ್ಟು ಎಂತಹ ಬಲಿಷ್ಠ ದೇಶವಾದರೂ ನಿರ್ದಾಕ್ಷಿಣ್ಯ ಕ್ರಮವನ್ನು ಜರುಗಿಸುವುದು ಕಷ್ಟವೇ. ಅಷ್ಟೇ ಏಕೆ, ಮನಸುಖರಾಯನಂತೆ ಮಾತನಾಡಿ ಚಪಲ ಚೆನ್ನಿಗರಾಯನಂತೆ ನಿರ್ಧಾರಗಳನ್ನು ಜಾರಿಗೆ ತರುವ ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡಾ ಮಾತನಾಡಿದ ನಂತರ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ತಲೆ ಕೆರೆದುಕೊಂಡು ವೀರಾವೇಶದ ಘೋಷಣೆಗಳನ್ನು ನನೆಗುದಿಗೆ ಬೀಳಿಸುವ ಕಾರ್ಯತಂತ್ರಗಳು ನಮ್ಮೆದುರಿಗೇ ಇವೆ. ಇದು ಜಾಗತಿಕ ರಾಜಕಾರಣದ ಅನಿವಾರ್ಯತೆ. ಭಾರತ ಕೂಡಾ ಇದರಿಂದ ಹೊರತಾಗಲಾರದು. ಭಾರತ ಸರ್ಕಾರ ಹಾಗೂ ಇಡೀ ಭಾರತೀಯರ ಒಕ್ಕೊರಲ ಆಕ್ರೋಶ ಇರುವುದು ದಾಯಾದಿ ರಾಷ್ಟ್ರ ಪಾಕಿಸ್ತಾನದ ಮೇಲೆ. ಬಂದದ್ದೆಲ್ಲಾ ಬರಲಿ, ಪಾಕಿಸ್ತಾನದ ಮೇಲೆ ನುಗ್ಗಿ ಬಿಲಗಳಲ್ಲಿ ಅಡಗಿರುವ ಭಯೋತ್ಪಾದಕರ ಹುಟ್ಟಡಗಿಸುವ ಜೊತೆಗೆ ನಾಜೂಕಯ್ಯರಂತೆ ಅಲ್ಲಿನ ಮಿಲಿಟರಿ ಆಳ್ವಿಕೆಗೆ ಡೊಗ್ಗು ಸಲಾಮು ಹೊಡೆಯುತ್ತಿರುವ ಪ್ರಧಾನಿ ಹಾಗೂ ಮತ್ತಿತರ ರಾಜಕೀಯ ನಾಯಕತ್ವಕ್ಕೆ ಪಾಠ ಕಲಿಸುವ ಮೂಲಕ ಇನ್ನೊಮ್ಮೆ ಯಾವುದೇ ಕಾರಣಕ್ಕೆ ಭಾರತದ ತಂಟೆಗೆ ಕೈಹಾಕಬಾರದು ಎಂಬ ಸಂದೇಶ ರವಾನಿಸಲೇಬೇಕು ಎಂಬುದು ಈಗಿನ ಗೋಡೆಯ ಬರಹ. ಪ್ರತಿಪಕ್ಷಗಳ ಘೋಷಿತ ನಿಲುವು ಕೂಡಾ ಬಹುತೇಕ ಅದೇ. ಆಂತರಿಕ ರಾಜಕಾರಣದಲ್ಲಿ ಟೀಕೆ ಟಿಪ್ಪಣಿಗಳನ್ನು ಮಾಡಿದರೂ ಕೂಡಾ ಪಾಕಿಸ್ತಾನದ ವಿರುದ್ಧ ದ್ವೇಷ ತೀರಿಸಿಕೊಳ್ಳುವ ವಿಚಾರದಲ್ಲಿ ಎಲ್ಲರದೂ ಸಹಮತ. ವಸ್ತುಸ್ಥಿತಿ ಹೀಗಿರುವಾಗ ಯುದ್ಧವನ್ನು ಸಾರಲು ಇಲ್ಲವೇ ಯುದ್ಧ ಸಾರದೆ ಪಾಕಿಸ್ತಾನದೊಳಗೆ ನುಗ್ಗಿ ಆ ಭಯೋತ್ಪಾದಕರ ಹೆಡೆಮುರಿ ಕಟ್ಟಲು ಇರುವ ಅಡ್ಡಿಯಾದರೂ ಏನು ಎಂಬುದು ಪ್ರಶ್ನೆ. ಯುದ್ಧ ಎಂಬುದು ಘೋಷಣೆಯಲ್ಲೇ ಮುಗಿಯುವುದಾದರೆ ಅದರ ಪ್ರಶ್ನೆ ಬೇರೆ. ಪಾಕಿಸ್ತಾನ ಈಗಿರುವಂತೆ ಅತ್ಯಂತ ದುರ್ಬಲ. ಆಹಾರ ಧಾನ್ಯಗಳಿಂದ ಹಿಡಿದು ಪ್ರತಿಯೊಂದು ಪದಾರ್ಥವೂ ತುಟ್ಟಿ. ಖರೀದಿಸಲು ಹಣವಿಲ್ಲ. ಜಗತ್ತಿನ ಎಲ್ಲಾ ರಾಷ್ಟ್ರಗಳಿಂದ ಪಡೆದ ಸಾಲವನ್ನು ಹಿಂತಿರುಗಿಸದೆ ಸುಸ್ತಿ ದೇಶವಾಗಿರುವ ಪಾಕಿಸ್ತಾನ ಈಗ ನಿಜವಾದ ಅರ್ಥದಲ್ಲಿ ದಿವಾಳಿ. ಆದರೆ, ಪಾಕಿಸ್ತಾನಕ್ಕೆ ಬೇರೆ ಬೇರೆ ಕಾರಣಗಳಿಂದ ಅರಬ್ ರಾಷ್ಟ್ರಗಳಿಂದ ಹಿಡಿದು ಐರೋಪ್ಯ ರಾಷ್ಟ್ರಗಳ ಬೆಂಬಲವನ್ನು ನಿರ್ಲಕ್ಷಿಸುವಂತಿಲ್ಲ. ಅನುಕೂಲಕ್ಕೊಬ್ಬ ಅಣ್ಣ ಎನ್ನುವಂತಿರುವ ನೆರೆಯ ಚೀನಾ ದೇಶದ ನರಿ ಬುದ್ಧಿಯನ್ನು ಗಮನಿಸದಿದ್ದರೆ ಮುಂದೆ ಕಾದಿದೆ ಮಾರಿ ಹಬ್ಬ. ಟ್ರಂಪ್ ಸಾಹೇಬರ ಅಮೆರಿಕ ನಿಲುವು `ಇಬ್ಬರ ಜಗಳ ಮೂರನೆಯವನಿಗೆ ಲಾಭ’ ಎಂಬಂತಿರುವುದಕ್ಕೆ ಉಕ್ರೇನ್ ರಷ್ಯಾ ಯುದ್ಧ ಒಂದು ನಿದರ್ಶನ. ಹೀಗಿರುವಾಗ ಒಟ್ಟಾರೆ ಪರಿಸ್ಥಿತಿಯನ್ನು ಅಳೆದು ಸುರಿದು ನಿರ್ಧಾರವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಭಾರತದ್ದು. ಪ್ರಧಾನಿ ಯಾರಾಗಿದ್ದಾರೆ ಅಥವಾ ಸರ್ಕಾರ ಯಾವ ಪಕ್ಷದ್ದಾಗಿದೆ ಎಂಬುದು ಇಂತಹ ಸಂದರ್ಭದಲ್ಲಿ ಮುಖ್ಯವಲ್ಲ. ಈಗ ಆದ್ಯತೆಯ ಮೇಲೆ ಆಗಬೇಕಾದದ್ದು ಜಗತ್ತಿಗೆ ಪಾಕಿಸ್ತಾನದ ಗುಳ್ಳೆ ನರಿಯ ಬುದ್ಧಿಯನ್ನು ಮನವರಿಕೆ ಮಾಡಿಕೊಡುವ ಕೆಲಸ. ಇದೂ ಕೂಡಾ ಯುದ್ಧದ ಮೊದಲ ಹೆಜ್ಜೆ. ಇದಾದ ನಂತರ ವೈರಿ ರಾಷ್ಟ್ರದ ಆಯಕಟ್ಟಿನ ಜಾಗವನ್ನು ಗುರುತಿಸಿ ನಿಖರವಾಗಿ ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಕಾರ್ಯಾಚರಣೆ ಮಾಡಿದರಷ್ಟೆ ಭಾರತದ ಘನತೆ ಹಾಗೂ ಕಾರ್ಯಕ್ಷಮತೆ ಜಗತ್ತಿಗೆ ಪರಿಚಯ. ಇದರ ನಡುವೆ ನೂರು ಬಾಯಿಯ ವಿಶ್ವಸಂಸ್ಥೆಯಲ್ಲಿ ಹೊರಡುವ ನಾನಾ ರೀತಿಯ ಸ್ವರ ಅಪಸ್ವರಗಳನ್ನು ಆಲಿಸಬೇಕಾದದ್ದೂ ಕೂಡಾ ಜಾಗತಿಕ ರಾಜಧರ್ಮವೆ. ಇದೆಲ್ಲವೂ ಮುಗಿಯಲು ಕಾಲ ಬೇಕು. ಆತುರದಲ್ಲಿ ಕೈಗೊಳ್ಳುವ ನಿರ್ಧಾರ ಮತ್ತಷ್ಟು ಕಾತರಗಳನ್ನು ಸೃಷ್ಟಿಸುವಂತೆ ಆಗಬಾರದು.
ಇದಕ್ಕೆ ಸಮಾನಾಂತರವಾಗಿ ಪಾಕಿಸ್ತಾನದ ಮುಟ್ಟಿನೋಡಿಕೊಳ್ಳುವಂತಹ ಸಮರವನ್ನು ತಡಮಾಡದೆ ಆರಂಭಿಸಬೇಕು ಎಂಬ ವೀರಾವೇಶದ ಮಾತುಗಳು ಎಲ್ಲೆಡೆ ಮಾರ್ದನಿಗೊಳ್ಳುತ್ತಿದೆ. ಇದೊಂದು ಸ್ವಾಭಾವಿಕವಾಗಿ ಸಾರ್ವಜನಿಕರಿಂದ ಹೊರಹೊಮ್ಮುತ್ತಿರುವ ಆಕ್ರೋಶದ ಭಾವನೆ. ಆದರೆ, ಆಡಳಿತಗಾರರಿಗಿರುವ ಸಂಕಷ್ಟವೇ ಬೇರೆ. ಸಮರ ಸಾರಿದರೆ ಅದರಿಂದ ದೇಶದ ಮೇಲಾಗುವ ದುಷ್ಪರಿಣಾಮ, ಜನರ ಬದುಕಿನ ಮೇಲೆ ಬೀಳುವ ಹೆಚ್ಚಿನ ಆರ್ಥಿಕ ಹೊರೆ, ಅಭಿವೃದ್ಧಿಯ ಹಾದಿಯಲ್ಲಿರುವ ದೇಶ ಮತ್ತೆ ಹಿಮ್ಮುಖ ಚಲನೆಗೆ ಒಳಗಾದರೆ ಮುಂದಿನ ಗತಿ ಏನೆಂಬ ವಿಷಯ ಸಾಮಾನ್ಯವಲ್ಲ. ಇದಕ್ಕೆ ಪುಟವಿಟ್ಟಂತೆ ರಾಜಕಾರಣದ ಧ್ರುವೀಕರಣ ಶಕ್ತಿಕೇಂದ್ರಗಳು ಹೊಸದಾಗಿ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಎಚ್ಚರದ ಕಣ್ಣು ಇರಲೇಬೇಕಾದದ್ದು ಸ್ವಾಭಾವಿಕ. ಸಮ್ಮಿಶ್ರ ರಾಜಕಾರಣದ ಶೆಕೆಯಲ್ಲಿರುವ ಭಾರತ ಪಾಕಿಸ್ತಾನದಲ್ಲಿರುವಂತೆ ಏಕಾಏಕಿ ನಿರ್ಧಾರಗಳನ್ನು ಕೈಗೊಂಡರೆ ಮುಂದಿನ ಸ್ಥಿತಿ ಎದುರಿಸುವ ಸನ್ನಿವೇಶ ಒಂದು ರೀತಿಯ ಬಯಲುದಾರಿಗೆ ತಿರುಗುವುದನ್ನು ನಿರಾಕರಿಸುವಂತಿಲ್ಲ.
ಹೌದು. ಇದಿಷ್ಟೂ ದೇಶ ಹಾಗೂ ಜಗತ್ತಿನ ಕಣ್ಣಿನಲ್ಲಿ ಕಾಶ್ಮೀರ ಕಣಿವೆಯಲ್ಲಿ ಜರುಗಿಹೋದ ಭೀಕರ ಹತ್ಯಾಕಾಂಡ ನಂತರದ ಬೆಳವಣಿಗೆಗಳ ದೃಷ್ಟಿಕೋನ. ಆದರೆ, ಕರ್ನಾಟಕದ ಶಿವಮೊಗ್ಗದ ಮಂಜುನಾಥ ರಾವ್, ಬೆಂಗಳೂರಿನ ಭರತ್ ಭೂಷಣ್ ಕುಟುಂಬಗಳು ಕಣ್ಣೀರಿನ ಕೋಡಿಯಲ್ಲಿ ಬದುಕನ್ನು ಸವೆಸುತ್ತಿರುವ ರೀತಿಯಲ್ಲಿಯೇ ಭಾರತದ ನಾನಾ ಮೂಲೆಗಳಿಂದ ಒಟ್ಟು 27 ಮಂದಿ ಅಮಾಯಕರು ಬಾಡಿಗೆ ಬಂಟರ ದುಸ್ಸಾಹಸಕ್ಕೆ ಬಲಿಯಾಗಿರುವುದನ್ನು ನೋಡಿಕೊಂಡು ತೆಪ್ಪಗಿರುವುದು ಕ್ಷಾತ್ರಧರ್ಮವಂತೂ ಖಂಡಿತ ಅಲ್ಲ-ಯುಗ ಧರ್ಮವಂತೂ ಆಗಲಾರದು. ಯಾವ ದೃಷ್ಟಿಕೋನದಿಂದ ನೋಡಿದರೂ ಇದನ್ನು ರಾಜಧರ್ಮ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ, ಬದಲಾದ ನಿಘಂಟಿನಲ್ಲಿ ರಾಜಕೀಯಕ್ಕೆ ಇಂತಹ ಧರ್ಮ ಏನಾದರೂ ಗಂಟುಬಿದ್ದಿದ್ದರೆ ದೇಶವನ್ನು ಹಾಗೂ ದೇಶವಾಸಿಗಳನ್ನು ಸರ್ವಶಕ್ತ ಹಾಗೂ ಸರ್ವಾಂತರ್ಯಾಮಿಯಾದ ಆ ದೇವರೇ ರಕ್ಷಿಸಬೇಕು.