ಬಿಯಾಂಡ್ ಬೆಂಗಳೂರು’ ಎಷ್ಟು ಒತ್ತು ಪಡೆಯಲಿದೆ? ಯಾವ ಹೊಸ ಕಾಯ್ದೆಗಳು ಬರಲಿವೆ?
- ಬಿ.ಅರವಿಂದ
ಹುಬ್ಬಳ್ಳಿ: ಪ್ರಸಕ್ತ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪ್ರಕಟವಾಗಲಿರುವ ರಾಜ್ಯದ ನೂತನ ಕೈಗಾರಿಕಾ ನೀತಿಯ ಬಗ್ಗೆ ಬೆಂಗಳೂರು ಹೊರತಾದ ಕರ್ನಾಟಕ ಅಪಾರ ನಿರೀಕ್ಷೆಗಳನ್ನು ಹೊತ್ತು ಕಾಯುತ್ತಿದೆ.
೨೦೨೫ ರಿಂದ ೨೦೩೦ ರವರೆಗಿನ ಐದು ವರ್ಷಗಳ ಹೊಸ ನೀತಿಯಲ್ಲಿ `ಬಿಯಾಂಡ್ ಬೆಂಗಳೂರು’ ಎಷ್ಟು ಒತ್ತು ಪಡೆಯಲಿದೆ? ಯಾವ ಹೊಸ ಕಾಯ್ದೆಗಳು ಬರಲಿವೆ? ಬೆಂಗಳೂರಿನ ಹೊರಗೆ ಮಾತ್ರ ಇನ್ನು ಮುಂದಿನ ಹೂಡಿಕೆ ಎಂಬ ಕನವರಿಕೆ ಕಾಯ್ದೆಬದ್ಧಗೊಳ್ಳುವುದೇ? ಇವು ನಾಡಿನ ಪ್ರಶ್ನೆಗಳು.
ಬೆಂಗಳೂರು ಹೊರತುಪಡಿಸಿ ರಾಜ್ಯದ ಬೇರೆ ನಗರಗಳಲ್ಲಿ ಉದ್ಯಮ ಅರಳಿಸುವ (ಬಿಯಾಂಡ್ ಬೆಂಗಳೂರು) ಕನಸು ಇಂದು ನೆನ್ನೆಯದ್ದೇನಲ್ಲ. ದೊಡ್ಡ ಉದ್ಯಮಗಳು ಚಿತ್ರದುರ್ಗ- ದಾವಣಗೆರೆ, ಹುಬ್ಬಳ್ಳಿ-ಧಾರವಾಡ-ಬೆಳಗಾವಿ, ವಿಜಯಪುರ-ಬಾಗಲಕೋಟೆ, ಬಳ್ಳಾರಿ- ಕೊಪ್ಪಳ-ಗಂಗಾವತಿ-ರಾಯಚೂರು, ಕಲಬುರ್ಗಿ-ಬೀದರ್, ಚಾಮರಾಜನಗರ-ಮಂಗಳೂರು- ಉಡುಪಿ ಇವೇ ಮೊದಲಾದ ನಗರಗಳಲ್ಲಿ ತಮ್ಮ ಉತ್ಪಾದನೆ ಆರಂಭಿಸಬೇಕು ಎಂಬ ದೃಢ ಸಂಕಲ್ಪವನ್ನು ಬಿಎಸ್‌ವೈ ನೇತೃತ್ವದ ೨೦೨೦ರ ಬಿಜೆಪಿ ಸರ್ಕಾರ ಮಾಡಿತ್ತು.
ಆಗ ಕೈಗಾರಿಕಾ ಸಚಿವರಾಗಿದ್ದ, ಈಗಿನ ಸಂಸದ ಮತ್ತು ಮಾಜಿ ಸಿಎಂ ಜಗದೀಶ ಶೆಟ್ಟರ, ೨೦೨೦-೨೫ರ ಕೈಗಾರಿಕಾ ನೀತಿ' ಪ್ರಕಟಿಸಿದ್ದಾಗ ಸರ್ಕಾರದ ನಿರ್ಧಾರ ಅಧಿಕೃತಗೊಂಡಿತ್ತು. ತಮ್ಮ ನೀತಿಗೆ ಪೂರಕವಾಗಿ
ವಿಶೇಷ ಹೂಡಿಕೆ ಕಾಯ್ದೆ’ಯನ್ನು (ಎಸ್‌ಐಆರ್) ಶೆಟ್ಟರ ತಂದು ಹಲವಾರು ರಿಯಾಯ್ತಿಗಳನ್ನು ಉದ್ಯಮ ವಲಯಕ್ಕೆ ಘೋಷಿಸಿದ್ದರು.
ನಂತರದ ಬಸವರಾಜ ಬೊಮ್ಮಾಯಿ ಸರ್ಕಾರ ಶೆಟ್ಟರ ನೀತಿಯನ್ನು ಜಾರಿಗೊಳಿಸಲು ಶತಾಯ ಗತಾಯ ಪ್ರಯತ್ನಗಳನ್ನು ಮಾಡಿತ್ತು. ಮೊದಲ ಯತ್ನವಾಗಿ ರಾಜ್ಯದ ಎಫ್‌ಎಂಸಿಜಿ (ತ್ವರಿತವಾಗಿ ಗ್ರಾಹಕರನ್ನು ತಲುಪುವ ಉತ್ಪನ್ನಗಳ ಉದ್ಯಮ) ಕ್ಲಸ್ಟರ್‌ಅನ್ನು ಹುಬ್ಬಳ್ಳಿ-ಧಾರವಾಡಕ್ಕೆ ಘೋಷಿಸಲಾಯಿತು. ಅಲ್ಲದೇ ಇನ್ನೂ ಹತ್ತಾರು ರಿಯಾಯ್ತಿಗಳನ್ನು ಉದ್ಯಮಿಗಳಿಗೆ ನೀಡಲಾಯಿತು. ಈ ಎಲ್ಲ ಯತ್ನಗಳು ವಿಫಲವಾದವು.
ಸಿದ್ದರಾಮಯ್ಯ ೨.೦ ಸರ್ಕಾರದ ಉದ್ಯಮ ನೀತಿಯೂ ಬಿಯಾಂಡ್ ಬೆಂಗಳೂರಿಗೇ ಒತ್ತು ನೀಡಿ, ಕಳೆದ ವರ್ಷದ ಜಿಮ್‌ನಲ್ಲಿ ಉದ್ಯಮಿಗಳ ಮನವೊಲಿಸುವ ಯತ್ನಗಳನ್ನು ನಡೆಸಿದೆ. ಆದರೆ ಪ್ರಯೋಜನವಾಗಿಲ್ಲ. `ಬಿಯಾಂಡ್ ಬೆಂಗಳೂರು’ ಮಾತಲ್ಲೇ ಉಳಿದು ಹೋಗಿದೆ.
ಇಂತಹ ಸಂದಿಗ್ಧ ಸಮಯದಲ್ಲಿ ಉದ್ಯಮ ಸಚಿವ ಎಂ.ಬಿ.ಪಾಟೀಲ ಹೊಸ ನೀತಿಯನ್ನು ಪ್ರಕಟಿಸಲಿದ್ದಾರೆ. ಎಫ್‌ಎಂಸಿಜಿ, ಸೆಮಿ ಕಂಡಕ್ಟರ್ ಘಟಕ, ಜವಳಿ ಕ್ಷೇತ್ರ, ಫೌಂಡ್ರಿ, ತೋಟಗಾರಿಕಾ ಪಾರ್ಕ್, ರೇಷ್ಮೆ ಪಾರ್ಕ್, ಒಣ ದ್ರಾಕ್ಷಿ ಸಂಸ್ಕರಣ ಮತ್ತು ರಫ್ತು ಘಟಕ, ಫುಡ್ ಪಾರ್ಕ್ ಹೀಗೆ ವೈವಿಧ್ಯಮಯ ಉತ್ಪಾದನೆಗಳಿಗೆ ರಾಜ್ಯದ ಎರಡು ಮತ್ತು ಮೂರನೇ ಸ್ತರದ ನಗರಗಳಲ್ಲಿ ಹೇರಳ ಅವಕಾಶಗಳಿವೆ.
ಈ ಅಂಶವನ್ನು ಸಾಕಾರಗೊಳಿಸುವ ಹೆಜ್ಜೆಗಳನ್ನು ಹೊಸ ನೀತಿಯಲ್ಲಿ ಯಾವ ರೀತಿ ನಿರ್ವಹಿಸಲಾಗುತ್ತದೆ? ಉದ್ಯಮಿಗಳ ಬೆಂಗಳೂರು ಮೋಹವನ್ನು ಹೇಗೆ ಕೊನೆಗಾಣಿಸಲಾಗುತ್ತದೆ? ಇದಕ್ಕೆ ಪ್ರಸಕ್ತ ಬಾರಿಯ ಜಾಗತಿಕ ಹೂಡಿಕೆದಾರರ ಮೇಳ ಎಷ್ಟು ಸಕಾರಾತ್ಮವಾಗಿ ಸ್ಪಂದಿಸುತ್ತದೆ? ಕಾದು ನೋಡಬೇಕು.
ಏನು ಕಾರಣ…? : ದೇಶದವರಿರಲಿ, ಬೇರೆ ದೇಶಗಳಿಗೆ ಸೇರಿದವರಾಗಿರಲಿ. ಮಧ್ಯಮ ಮತ್ತು ಬೃಹತ್ ಗಾತ್ರದ ಉದ್ಯಮಿಗಳು ಬೆಂಗಳೂರಿನಿಂದ ಹೊರಗೆ ಹೂಡಿಕೆ ಮಾಡದಿರಲು ಕಾರಣ ನಮ್ಮ ರಾಜ್ಯದಲ್ಲಿರುವ ಮೂಲ ಸೌಕರ್ಯಗಳ ಅಸಡ್ಡೆ. ವಿಮಾನಯಾನ- ರೈಲು ಮತ್ತು ಹೆದ್ದಾರಿ ಜಾಲಗಳು ತುಂಬ ಚೆನ್ನಾಗಿರುವ ಕರ್ನಾಟಕದ ಬಹುತೇಕ ನಗರಗಳಲ್ಲಿ ರಸ್ತೆಗಳೇ ಇಲ್ಲ. ಒಳಚರಂಡಿ, ಕುಡಿಯುವ ನೀರು, ಉದ್ಯಮಗಳಿಗೆ ನೀರಿನ ಸೌಲಭ್ಯ ಹಾಗೂ ಅತ್ಯಗತ್ಯವಾಗಿರುವ ಸೇವಾ ಕ್ಷೇತ್ರದ ಲೋಪಗಳು ಢಾಳಾಗಿ ಮುಖಕ್ಕೆ ರಾಚುತ್ತವೆ. ವಿದ್ಯುತ್ ಸಮಸ್ಯೆ ಇಲ್ಲ ಎಂಬುದನ್ನು ಹೊರತುಪಡಿಸಿದರೆ, ಇನ್ನಿತರ ಮೂಲ ಸವಲತ್ತುಗಳು ಅತ್ಯಂತ ಕಳಪೆ. ಏಕೈಕ ತ್ರಿವಳಿ ಮಹಾನಗರ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಸೇರಿದಂತೆ ಯಾವುದೇ ಎರಡನೇ ಸ್ತರದ ನಗರದ (ಮೈಸೂರು ಹೊರತುಪಡಿಸಿ) ಬಾಹ್ಯ ಸೌಂದರ್ಯ ಚೆನ್ನಾಗಿಲ್ಲ. ಈ ಬಗ್ಗೆ ಸರ್ಕಾರ ಆಲೋಚನೆ ಮಾಡದ ಹೊರತು ಹೊಸ ಕೈಗಾರಿಕಾ ನೀತಿ, ಜಿಮ್ ಯಾವುವೂ ಉದ್ಯಮಿಗಳನ್ನು ಇತ್ತ ಸೆಳೆಯಲಾರವು.
ಬೆಂಗಳೂರು ಭಾರ: ರಾಜಧಾನಿ ಬೆಂಗಳೂರು ತುಂಬ ಭಾರವಾಗಿದೆ ಮತ್ತು ಹೂಡಿಕೆಯ ಧಾರಣಾ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಎರಡು ಮತ್ತು ಮೂರನೇ ಸ್ತರದ ನಗರಗಳಿಗೆ ಹೂಡಿಕೆ ತರುವುದೊಂದೇ ಉಳಿದಿರುವ ದಾರಿ.
:ಜಗದೀಶ ಶೆಟ್ಟರ, ಮಾಜಿ ಸಿಎಂ, ಸಂಸದ.