ಸರ್ಕಾರವೇ ಹನಿಟ್ರ್ಯಾಪ್ ಸಿಡಿಗಳನ್ನು ಇಟ್ಟುಕೊಂಡಿದೆ
ದಾವಣಗೆರೆ: ಬಿಜೆಪಿ ಶಾಸಕರನ್ನು ಅಮಾನತುಗೊಳಿಸುವ ಮೂಲಕ ವಿಧಾನಸಭಾ ಸಭಾಪತಿ ಯು.ಟಿ.ಖಾದರ್ ಒಂದು ಪಕ್ಷದ ಮುಖವಾಣಿಯಂತೆ ನಡೆದುಕೊಂಡಿದ್ದಾರೆ ಎಂದು ಲೋಕಸಭಾ ಸಚೇತಕ ಹಾಗೂ ಚಿಕ್ಕಮಗಳೂರು- ಉಡುಪಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಬೇಸರ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವೇ ಹನಿಟ್ರ್ಯಾಪ್ ಸಿಡಿಗಳನ್ನು ಇಟ್ಟುಕೊಂಡಿದೆ ಎಂದು ವಿಪಕ್ಷ ಶಾಸಕರು ಸದನದಲ್ಲಿ ಗಂಭೀರ ಆರೋಪ ಮಾಡಿ ಚರ್ಚೆಗೆ ಒಳಪಡಿಸಿ ಎಂದು ಒತ್ತಾಯ ಮಾಡಿದ ಒಂದೇ ವಿಷಯಕ್ಕೆ ವಿಧಾನಸಭಾ ಸಭಾಪತಿ ಯು.ಟಿ.ಖಾದರ್ ವಿಪಕ್ಷದ 18 ಶಾಸಕರನ್ನು ಅಮಾನತುಗೊಳಿಸಿದ ಪ್ರಕ್ರಿಯೆ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಎಂದರು.
ಆಡಳಿತ ಪಕ್ಷದ ಹಿರಿಯ ಸಚಿವರೊಬ್ಬರು ಇದೇ ಸರ್ಕಾರದ ವಿರುದ್ದ ಹನಿಟ್ರ್ಯಾಪ್ ಆಗಿದೆ. ಇದರ ಬಗ್ಗೆ ತನಿಖೆ ಮಾಡಲು ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದಿದ್ದು ವಿಪರ್ಯಾಸದ ಸಂಗತಿ. ಸರ್ಕಾರದ ಬಳಿ ಸಿಡಿ ಫ್ಯಾಕ್ಟರಿ ಇದೆ ಎಂದು ಬಿಜೆಪಿ ಶಾಸಕರು ಆರೋಪಿದ್ರೆ ಅವರನ್ನು ಆರು ತಿಂಗಳ ಕಾಲ ಅಮಾನತ್ತು ಮಾಡಲಾಗಿದೆ ಎಂದು ತಿಳಿಸಿದರು.
ವಿಧಾನಸಭಾ ಸ್ಪೀಕರ್ ಹುದ್ದೆ ಪವಿತ್ರವಾದದ್ದು. ಆಡಳಿತ ಹಾಗೂ ಪ್ರತಿ ಪಕ್ಷದ ಸದಸ್ಯರನ್ನು ಒಂದಾಗಿ ತೆಗೆದುಕೊಂಡು ಹೋಗಬೇಕಾಗಿರುವುದು ಒಂದು ಪವಿತ್ರವಾದ ಹುದ್ದೆ. ಅದು ಬಿಟ್ಟು ಅಮಾನತು ಮಾಡಿದ್ದು ಸರಿಯಾದ ಕ್ರಮವಲ್ಲ ಎಂದು ಸ್ಪೀಕರ್ ತೆಗೆದುಕೊಂಡ ನಿರ್ಧಾರವನ್ನು ಖಂಡಿಸಿದರು.
ಇದೇ ರೀತಿ ಸಂವಿಧಾನ ವಿರೋಧಿಯಾಗಿ ಮುಸ್ಲಿಂ ಸಮಾಜಕ್ಕೆ ಕಾಮಗಾರಿಯಲ್ಲಿ ಮೀಸಲಾತಿ ನೀಡಲಾಗಿದೆ. ಧರ್ಮಾಧರಿತವಾಗಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿದೆ. ಹೀಗಾಗಿ ಎಸ್ಸಿ- ಎಸ್ಟಿ ಹಾಗೂ ಓಬಿಸಿಗಳಿಗೆ ಮೀಸಲಾತಿ ನೀಡಲಾಗಿದೆ. ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದರು.
ಯತ್ನಾಳ್ – ವಿಜಯೇಂದ್ರ ಸಂಘರ್ಷ ಮುಕ್ತಾಯ: ಮಳೆ ಬರುವ ಮೊದಲು ಗುಡುಗು ಸಿಡಿಲು ಸಹಜ. ಅದೇ ರೀತಿ ಪಕ್ಷದಲ್ಲಿ ಇಷ್ಟು ದಿನ ಗುಡುಗು, ಸಿಡಿಲು ಆಗಿದೆ. ಈಗ ಮಳೆ ಬಂದಿದೆ. ಸಂಘರ್ಷ ಮುಕ್ತಾಯವಾಗಿದೆ. ರಾಜ್ಯದಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಬಿಜೆಪಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟುಗೂಡಿ ಸರ್ಕಾರದ ಲೋಪದೋಷಗಳನ್ನು ಜನರ ಬಳಿ ಕೊಂಡೊಯ್ಯುವ ಮೂಲಕ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ ಎಂದರು.























