ಬಾಹ್ಯಾಕಾಶದಲ್ಲಿ ೨೮೬ ದಿನ ಕಳೆದು ಕೊನೆಗೂ ಸುರಕ್ಷಿತವಾಗಿ ಇಳಿದು ಬಂದ ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವರು ಹೋಗಿದ್ದ ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಅಲ್ಲೇ ಇರಬೇಕಾಗಿ ಬಂದಿತು. ಆದರೂ ಧೃತಿಗೆಡದೆ ಸಹೋದ್ಯೋಗಿಯೊಂದಿಗೆ ಎಲ್ಲ ಪ್ರಯೋಗಗಳನ್ನು ನಡೆಸಿ ಹೊಸ ಅನುಭವವನ್ನು ಹೊತ್ತು ತಂದಿದ್ದಾರೆ. ಭೂಮಿಯ ಸುತ್ತ ೪೫೭೬ ಬಾರಿ ಸುತ್ತು ಹೊಡೆದಿರುವುದಲ್ಲದೆ, ಒಟ್ಟು ೧೨೧ ದಶಲಕ್ಷ ಕಿಮೀ ಪ್ರಯಾಣ ಮಾಡಿದ್ದಾರೆ. ೬೨ ಗಂಟೆ ಬಾಹ್ಯಾಕಾಶ ನೌಕೆಯಿಂದ ಹೊರ ಬಂದು ನಡೆದು ಇತಿಹಾಸ ಸ್ಥಾಪಿಸಿದ್ದಾರೆ. ಅವರಿದ್ದ ನೌಕೆ ಹಿಂದಕ್ಕೆ ಬರುವ ಸ್ಥಿತಿಯಲ್ಲಿದ್ದರಿಂದ ಅವರಿಗೆ ತ್ರಿಶಂಕು ಪರಿಸ್ಥಿತಿ ಅನಿವಾರ್ಯವಾಗಿತ್ತು. ಭೂಮಿಯಲ್ಲಿ ಗುರುತ್ವಾಕರ್ಷಣೆ ಇರುವ ಹಾಗೆ ಅಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಅತಿ ಕಡಿಮೆ ಇರುತ್ತದೆ. ಅದರಿಂದ ಎಲ್ಲ ವಸ್ತುಗಳು ತೇಲುತ್ತಿರುವಂತೆ ಭಾಸವಾಗುತ್ತದೆ. ಭೂಮಿಯ ಮೇಲೆ ೨೫೦ ಮೈಲಿ ಹೋದರೆ ಸಾಕು ನಿಮ್ಮ ದೇಹದ ಭಾರ ಕಡಿಮೆಯಾಗುತ್ತದೆ. ಭೂಮಿಯ ಮೇಲೆ ೧೦೦ ಕೆಜಿ ಇರುವವರು ಅಲ್ಲಿ ೯೦ ಕೆಜಿ ಭಾರ ಇರುತ್ತಾರೆ. ಇದರಿಂದ ಅವರು ನೇರವಾಗಿ ನಿಲ್ಲಲು ಸಾಧ್ಯವಾಗುವುದಿಲ್ಲ. ಅಂತರಿಕ್ಷದಲ್ಲಿ ಇರುವುದು ಎಂದರೆ ಅದೊಂದು ಬೇರೆ ಲೋಕ. ಕೂದಲು ನೇರವಾಗಿ ಮೇಲಕ್ಕೆ ನಿಂತಿರುತ್ತದೆ. ಮಾಂಸಖಂಡಗಳು ದುರ್ಬಲಗೊಳ್ಳುತ್ತವೆ. ಮೂಳೆಗಳಲ್ಲಿ ಶಕ್ತಿ ಇರುವುದಿಲ್ಲ. ಹಲ್ಲುಜ್ಜಿದರೆ ಟೂತ್ ಪೇಸ್ಟ್ ಉಗುಳಲು ಬರುವುದಿಲ್ಲ. ಅವುಗಳನ್ನು ನುಂಗಬೇಕು ಇಲ್ಲವೆ ಟವೆಲ್‌ನಲ್ಲಿ ಒರೆಸಿಕೊಳ್ಳಬೇಕು. ಭೂಮಿಯ ಮೇಲೆ ಭಾರವಾದ ವಸ್ತುಗಳು ಅಲ್ಲಿ ಹಗುರ. ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿದ ರೀತಿ ಕಿರುಬೆರಳಲ್ಲಿ ಭಾರವಾದ ವಸ್ತುಗಳನ್ನು ತಳ್ಳಬಹುದು. ಮಂಪರಿನಲ್ಲಿ ಮಲಗಿದರೆ ಕೊಚ್ಚಿ ಹೋಗುವ ಅಪಾಯ ಇದೆ. ಅದಕ್ಕಾಗಿ ನಿದ್ದೆಯ ಬ್ಯಾಗ್‌ನಲ್ಲಿ ಮಲಗಬೇಕು. ರೋಗ ನಿರೋಧಕ ಶಕ್ತಿ ಇರುವುದಿಲ್ಲ. ಹೃದಯ ಹೆಚ್ಚು ಕೆಲಸ ಮಾಡುವ ಅಗತ್ಯವಿಲ್ಲ. ಅದರಿಂದ ರಕ್ತ ಮೆದುಳು ಮತ್ತು ಮುಖದತ್ತ ನುಗ್ಗುತ್ತದೆ. ಕಣ್ಣುಗಳಿಗೆ ಹೆಚ್ಚಿನ ರಕ್ತ ಹೋಗಿ ಅದು ಅಗಲವಾಗುವುದು ಸಹಜ. ಇಂಥ ಪರಿಸ್ಥಿತಿಯಲ್ಲಿ ಸುನೀತಾ ಯಾವ ರೀತಿ ಬದುಕಿದರು ಎಂಬುದೇ ಆಶ್ಚರ್ಯದ ಸಂಗತಿ. ಈಗ ಆಕೆ ಮಗುವಿನ ಹಾಗೆ ಪುಟ್ಟ ಹೆಜ್ಜೆಗಳನ್ನು ಇಡುತ್ತ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಬೇಕಿದೆ. ಕಾಲು ಸ್ನಾಯುಗಳು ದುರ್ಬಲಗೊಂಡಿರುತ್ತವೆ. ಈ ಎಲ್ಲ ಕಷ್ಟಗಳನ್ನು ಎದುರಿಸಿ ಬಂದಿರುವ ಸುನೀತಾ ಅವರಿಗೆ ಉತ್ತಮ ಆರೋಗ್ಯ ಬಯಸಿ ಗುಜರಾತ್ ಜನ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾಸಾ ವಿಜ್ಞಾನಿಗಳು ಸುನೀತಾ ಮತ್ತು ಅವರ ಸಹೋದ್ಯೋಗಿ ನೀಡುವ ಅನುಭವದ ಮಾತುಗಳು ಮುಂದಿನ ಸಂಶೋಧನೆಗೆ ದಾರಿ ಮಾಡಿಕೊಡಲಿದೆ. ಮುಂದಿನ ದಿನಗಳಲ್ಲಿ ನಾಗರಿಕರು ಬಾಹ್ಯಕಾಶಕ್ಕೆ ಹೋಗಿ ಅಲ್ಲೇ ಕೆಲವು ದಿನಗಳು ವಾಸಿಸುವ ಅವಕಾಶ ಸಿಗಲಿದೆ. ಅದರ ಮೊದಲ ಪ್ರಯತ್ನವೇ ಇದು. ಇದು ವಿಫಲ ಎಂದೇ ಭಾವಿಸಲಾಗಿತ್ತು. ಸುನೀತಾ ಮರಳಿ ಬರುವುದು ಕಷ್ಟ ಎಂದೇ ಭಾವಿಸಲಾಗಿತ್ತು. ಕಲ್ಪನಾ ಚಾವ್ಲಾ ರೀತಿ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಾಹ್ಯಾಕಾಶ ವಿಜ್ಞಾನಿಗಳು ತಮ್ಮ ಪ್ರಯತ್ನ ವನ್ನು ಕೈಬಿಡಲಿಲ್ಲ. ಅದರ ಫಲವಾಗಿ ಇಂದು ಸುನೀತಾ ಧರೆಗೆ ಇಳಿದು ಬರಲು ಸಾಧ್ಯವಾಗಿದೆ. ವಿಜ್ಞಾನಿಗಳು ತಮ್ಮ ಪಾರಮ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಮನುಷ್ಯ ಕೇವಲ ಭೂಮಿಯ ಮೇಲಲ್ಲ ಎಲ್ಲ ಕಡೆ ಜೀವಿಸಬಲ್ಲ ಎಂಬುದನ್ನು ಸುನೀತಾ ತೋರಿಸಿಕೊಟ್ಟಿದ್ದಾರೆ. ಅವರ ಸಾಧನೆ ಇಂದಿನ ಯುವಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗುವುದರಲ್ಲಿ ಸಂದೇಹವಿಲ್ಲ. ಮುಂದಿನ ದಿನಗಳಲ್ಲಿ ಮಕ್ಕಳ ಶಾಲಾ ಪಠ್ಯಪುಸ್ತಕಗಳಲ್ಲಿ ಸುನೀತಾ ವೀರಗಾಥೆ ಸ್ಥಾನ ಪಡೆಯವುದರಲ್ಲಿ ಸಂದೇಹವಿಲ್ಲ. ಅದರಲ್ಲೂ ಭಾರತೀಯ ಸಂಜಾತೆ ಈ ವಿಕ್ರಮ ಸಾಧಿಸಿರುವುದು ಮತ್ತೊಂದು ವಿಶೇಷ. ಸುನೀತಾ ತಂದೆ ನೌಕಾಪಡೆಯಲ್ಲಿ ಕೆಲಸ ಮಾಡಿದವರು. ಅದರಿಂದ ಸಹಜವಾಗೇ ಸುನೀತಾಗೆ ಸಮುದ್ರ, ಹೆಲಿಕಾಪ್ಟರ್ ಹಾರಾಟ ಸೇರಿದಂತೆ ಎಲ್ಲವೂ ದಿನನಿತ್ಯದ ನೋಟಗಳು. ಹೀಗಾಗಿ `ನಾಸಾ’ ಸಂಸ್ಥೆ ಅವರನ್ನು ಆಯ್ಕೆ ಮಾಡಿದ್ದರಲ್ಲಿ ಸಂದೇಹವೇನೂ ಇಲ್ಲ. ಇಸ್ರೋ ಹಾಗೆ ನಾಸಾದಲ್ಲೂ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಸ್ರೋ ಕೂಡ ಗಗನಯಾತ್ರಿಗಳನ್ನು ಕಳುಹಿಸಿಕೊಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸುನೀತಾ ಆಗಮನ ಎಲ್ಲ ವಿಜ್ಞಾನಗಳಿಗೆ ಹಲವು ಪಾಠಗಳನ್ನು ಕಲಿಸಿದೆ. ಗಗನಯಾನಿಗಳಿಗೆ ಈಗ ಭಾರತದ ಯೋಗಾಭ್ಯಾಸ ತರಬೇತಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಬಾಹ್ಯಾಕಾಶದಲ್ಲಿ ದೇಹದ ತೂಕ ಕಳೆದುಕೊಂಡು ತೇಲಾಡುವಾಗ ಯೋಗಾಭ್ಯಾಸ ದೇಹದ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಅಂತರಿಕ್ಷದಲ್ಲಿ ತಲೆಗೆ ಹೆಚ್ಚಿನ ರಕ್ತ ಒತ್ತಡ ಉಂಟಾದಾಗ ಅದನ್ನು ನಿಯಂತ್ರಿಸಲು ಯಾವುದೇ ಔಷಧ ಕೆಲಸಕ್ಕೆ ಬರುವುದಿಲ್ಲ. ಯೋಗ ಮತ್ತು ಪ್ರಾಣಾಯಾಮ ಸಹಕಾರಿ ಎಂಬುದು ಸಾಬೀತಾಗಿದೆ. ಅದರಿಂದ ಈಗ ಯೋಗ ತರಬೇತಿ ನಾಸಾದಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿದೆ.