ಹಾಸನದ ಬಾನು ಮುಷ್ತಾಕ್ ಅವರ ಹೃದಯ ದೀಪ ಕಥಾ ಸಂಕಲನಕ್ಕೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವುದು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದೆ. ಮುಸ್ಲಿಂ ಮಹಿಳೆ ಸಂಪ್ರದಾಯಗಳ ಸಂಕೋಲೆಯನ್ನು ಮುರಿದು ಮುಂದಕ್ಕೆ ಬರಲು ಎಷ್ಟು ಕಷ್ಟ ಪಡುತ್ತಾಳೆ ಎಂಬುದಕ್ಕೆ ಬಾನು ಮುಷ್ತಾಕ್ ಅವರ ಜೀವನವೇ ಸಾಕ್ಷಿ. ಅವರ ಪುಸ್ತಕಗಳು ನಿಜಕ್ಕೂ ಹೊಸ ಬೆಳಕನ್ನು ನೀಡುವುದರಲ್ಲಿ ಸಂದೇಹವಿಲ್ಲ. ಸಂಸಾರದ ಜಂಜಾಟದಲ್ಲಿ ಸಿಲುಕಿ ಹತಾಶರಾಗಿ ಕೊನೆಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಹಂತಕ್ಕೆ ಹೋಗಿ ಹಿಂತಿರುಗಿ ಬಂದು ಈಗ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಪಡೆಯುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಬಾನು ಅವರ ಮಾತು ಮತ್ತು ಬರಹ ನಿಜಕ್ಕೂ ಅಪ್ಪಟ ಚಿನ್ನ. ಅದರಲ್ಲಿ ತಳಕು ಬಳುಕು ಇಲ್ಲವೆ ಇಲ್ಲ. ಬದುಕು ಬಹಳ ದೊಡ್ಡ ಪಾಠವನ್ನು ಹೇಳಿಕೊಡುತ್ತದೆ. ಅದನ್ನು ಅರಗಿಸಿಕೊಂಡು ಸಾಹಿತ್ಯಲೋಕಕ್ಕೆ ಕೊಡುವುದು ನಿಜಕ್ಕೂ ಕಷ್ಟದ ಕೆಲಸ. ಲಂಕೇಶ ಪತ್ರಿಕೆ ಆ ಕಾಲದಲ್ಲಿ ಹೊಸ ಲೇಖಕರನ್ನು ಹುಟ್ಟು ಹಾಕಿತು. ಅದರಲ್ಲಿ ಬಾನು ಒಬ್ಬರು ಎಂಬುದು ಸಂತಸದ ಸಂಗತಿ. ಬಂಡಾಯ ಸಾಹಿತಿಯಾಗಿ, ವಕೀಲರಾಗಿ ಲೇಖಕಿಯಾಗಿ ಅವರು ಸಲ್ಲಿಸುತ್ತಿರುವ ಸೇವೆ ಅನುಪಮ. ಮುಸ್ಲಿಂ ಮಹಿಳೆ ಕನ್ನಡದಲ್ಲಿ ಬರೆದು ಸೈ ಎನಿಸಿಕೊಳ್ಳುವುದು ಕಷ್ಟ. ಬಾನು ಎಲ್ಲ ಸೋಲುಗಳನ್ನು ಎದುರಿಸಿ ಈಗ ಎಲ್ಲರಿಂದ ಸೈ ಎನಿಸಿಕೊಂಡಿರುವುದು ನಿಜಕ್ಕೂ ಗಮನಾರ್ಹ. ಜೀವನದ ಏರುಪೇರುಗಳು ಎಲ್ಲರ ಬದುಕಿನಲ್ಲಿ ಬಂದು ಹೋಗುವುದು ಸಹಜ. ಆದರೆ ಅದಕ್ಕೆ ಸಾಹಿತ್ಯದ ರೂಪ ಕೊಡಬೇಕು ಎಂದರೆ ಆ ಅನುಭವದಿಂದ ದೂರ ನಿಂತು ನೋಡಬೇಕು. ಅದನ್ನು ಸಾಹಿತಿಗಳು ಮಾತ್ರ ಕೈಗೊಳ್ಳಲು ಸಾಧ್ಯ. ನಾವು ಸಾಮಾನ್ಯವಾಗಿ ನಮ್ಮ ಕಷ್ಟಗಳಿಗೆ ಇವರು ಕಾರಣ, ಅವರು ಕಾರಣ ಎಂದು ದೂಷಿಸುವುದು ಸುಲಭ. ಅದರೆ ಬಾನು ಅದಕ್ಕೆ ಇಡೀ ವ್ಯವಸ್ಥೆಯಲ್ಲಿರುವ ದೋಷಗಳನ್ನು ಹುಡುಕಿ ಜನರ ಮುಂದಿಟ್ಟಿದ್ದಾರೆ. ಅದರಿಂದಲೇ ಅವರ ಜೀವನದ ನೋವು ಎಲ್ಲರ ಹೃದಯವನ್ನು ತಟ್ಟಲು ಸಾಧ್ಯವಾಗಿದೆ. ಮನುಷ್ಯನ ನೋವುಗಳಿಗೆ ಭಾಷೆಯ ಬೇಲಿ ಇರುವುದಿಲ್ಲ ಎಂಬುದನ್ನು ಬಾನು ತೋರಿಸಿಕೊಟ್ಟಿದ್ದಾರೆ. ಕನ್ನಡದಲ್ಲಿ ಬರೆದ ಅವರ ಕತೆಗಳನ್ನು ಇಂಗ್ಲಿಷಿಗೆ ದೀಪ ಬಸ್ತಿ ಅನುವಾದಿಸಿ ಜಗತ್ತಿನ ಎಲ್ಲ ಜನ ಓದಿ ಅರ್ಥ ಮಾಡಿಕೊಳ್ಳುವಂತೆ ಮಾಡಿದರು. ಅದರಿಂದ ಬಾನು ಬರವಣಿಗೆಗೆ ಈಗ ಅಂತಾರಾಷ್ಟ್ರೀಯ ಮನ್ನಣೆ ದೊರಕುವಂತಾಗಿದೆ. ಬಾನು ಮುಷ್ತಾಕ್ ತನ್ನ ಸಾಂಸಾರಿಕ ಜಂಜಾಟದಲ್ಲೇ ಮುಳುಗಿ ಹೋಗಿದ್ದರೆ ಯಾರಿಗೂ ತಿಳಿಯುತ್ತಲೇ ಇರಲಿಲ್ಲ. ಅವರು ಅದಕ್ಕೆ ಅಕ್ಷರ ರೂಪ ಕೊಟ್ಟಿದ್ದು ಇಂದು ಇಡೀ ಮನುಕುಲ ಅವರ ನೋವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಗಿದೆ. ಅಲ್ಪಸಂಖ್ಯಾತರ ಮಹಿಳೆ ಮುಖ್ಯವಾಹಿನಿಗೆ ಬಂದು ಎಲ್ಲರ ಹಾಗೆ ತನ್ನ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬೇಕು ಎಂದರೆ ಎಷ್ಟು ಕಷ್ಟಪಡಬೇಕು ಎಂಬುದನ್ನು ಬಾನು ಮುಚ್ಚುಮರೆ ಇಲ್ಲದೆ ಹೇಳಿಕೊಂಡಿದ್ದಾರೆ. ಜೀವನದ ಹೋರಾಟದಲ್ಲಿ ವ್ಯಕ್ತಿಗಳು ಪ್ರಮುಖರಾಗುವುದಿಲ್ಲ. ವ್ಯವಸ್ಥೆಯ ಬದಲಾವಣೆಗೆ ಎಷ್ಟು ಜನರ ನೆರವು ಬೇಕಾಗುತ್ತದೆ ಎಂಬುದನ್ನು ಅವರು ನಿಸ್ಸಂಕೋಚವಾಗಿ ಗುರುತಿಸಿದ್ದಾರೆ. ಇದು ಅವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ. ಜೀವನದಲ್ಲಿ ಪೆಟ್ಟುಗಳ ಪೆಟ್ಟು ಬಿದ್ದರೂ ಕಲ್ಲು ಒಡೆಯುವುದಿಲ್ಲ. ಅದು ಸುಂದರ ಮೂರ್ತಿಯಾಗಿ ಮೂಡುತ್ತದೆ ಎಂಬುದಕ್ಕೆ ಇವರ ಬದುಕೇ ಸಾಕ್ಷಿ. ಇವರ ಬರವಣಿಗೆಯಿಂದ ಮುಸ್ಲಿಂ ಮಹಿಳೆಯರ ಬದುಕಿನಲ್ಲಿ ಸ್ವಲ್ಪವಾದರೂ ಬದಲಾವಣೆ ಬಂದಲ್ಲಿ ಬಾನು ಮುಷ್ತಾಕ್ ಅವರ ಪ್ರಯತ್ನ ಸಾರ್ಥಕ.
ಈ ಪ್ರಶಸ್ತಿಯಿಂದ ಅವರಿಗೆ ಇನ್ನು ಹೆಚ್ಚು ಸ್ಫೂರ್ತಿ ಲಭಿಸಿ ಇನ್ನೂ ಉತ್ತಮ ಕೃತಿಗಳನ್ನು ನೀಡುವ ಅವಕಾಶಗಳಿವೆ. ಅವರ ಬರಹ ಇನ್ನೂ ಹೆಚ್ಚಿನ ವಿಸ್ತಾರವನ್ನು ಪಡೆಯಲಿದೆ. ಮಹಿಳೆಯರ ಸಬಲೀಕರಣ ಸರ್ಕಾರದಿಂದ ಮಾತ್ರ ಎಂದು ಭಾವಿಸುವುದು ಒಂದು ಹಂತಕ್ಕೆ ಮಾತ್ರ. ನಿಜವಾದ ಕ್ರಾಂತಿಕಾರಿ ಬದಲಾವಣೆ ಬಾನು ಮುಷ್ತಾಕ್ ಅಂಥವರಿಂದ ಬರಬೇಕು. ಏಕೆಂದರೆ ಅದಕ್ಕೆ ಮಾನವೀಯ ಮುಖ ಇರುತ್ತದೆ. ಅಲ್ಲದೆ ಯಾವುದೂ ಕಷ್ಟಸಾಧ್ಯ ಎಂಬ ಮಾತೇ ಇಲ್ಲ ಎಂಬುದನ್ನು ಬಾನು ಅವರ ಬದುಕು ಮತ್ತು ಬರಹ ತೋರಿಸಿಕೊಟ್ಟಿದೆ. ಅವರು ನಿಜವಾಗಿಯೂ ಹೃದಯದ ದೀಪ ಹಿಡಿದವರು. ಹಿಂದೆ ಇವರನ್ನು ಸಾರ್ವಜನಿಕ ವೇದಿಕೆಗಳಲ್ಲಿ ನೋಡುವುದು ಕಷ್ಟವಾಗಿತ್ತು. ಈಗ ಬಹುತೇಕ ಸಾಹಿತ್ಯ ವೇದಿಕೆಗಳಲ್ಲಿ ಇವರು ಇದ್ದೇ ಇರುತ್ತಾರೆ. ಜನಸಾಮಾನ್ಯರು ಇವರ ಮಾತು ಮತ್ತು ಬರಹಕ್ಕೆ ಮಾರುಹೋಗಿರುವುದಂತೂ ನಿಜ. ಅದರಲ್ಲೂ ಕನ್ನಡದಲ್ಲಿ ಇವರು ಬರೆಯುವ ರೀತಿ ಆಕರ್ಷಕವಾಗಿದೆ. ಒಂದು ಕಾಲದಲ್ಲಿ ಸಮಾಜ ಮಹಿಳೆಯನ್ನು ಕಡೆಗಣಿಸಿತ್ತು. ಅದರಲ್ಲೂ ಮುಸ್ಲಿಂ ಮಹಿಳೆಯರ ಬಗ್ಗೆ ಚಿಂತಿಸುವವರೇ ಇರಲಿಲ್ಲ. ಅಂಥ ಕಾಲದಲ್ಲಿ ಎಲ್ಲರ ಮುಂದೆ ನಿಂತು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯಾಗಿ ಬದುಕುವುದು ಎಷ್ಟು ಕಷ್ಟ ಎಂಬುದನ್ನು ಕತೆ ಹೇಳುವ ಮೂಲಕ ಎಲ್ಲರ ಗಮನ ಸೆಳೆದರು. ದೇವರನ್ನೇ ಹೆಣ್ಣಾಗಿ ಹುಟ್ಟಿ ಬಾ ಎಂದು ಕೇಳಿ ಹೆಣ್ಣಿನ ನೋವಿಗೆ ಆಧ್ಯಾತ್ಮಿಕ ಸ್ವರೂಪ ನೀಡಿದವರು. ಇವರ ಕತೆಯನ್ನು ಜಿ.ಎಂ. ಶಿರಹಟ್ಟಿಯವರು ಆಕಾಶವಾಣಿಯಲ್ಲಿ ನಾಟಕ ಸ್ವರೂಪ ನೀಡಿದ್ದರು. ಗಿರೀಶ್ ಕಾಸರವಳ್ಳಿ ಇವರ ಕತೆಗೆ ಸಿನಿಮಾ ರೂಪ ಕೊಟ್ಟು ಹಸೀನಾ ಚಿತ್ರ ರೂಪಿಸಿದ್ದರು. ಈಗ ಇವರ ಪುಸ್ತಕ ಇಂಗ್ಲೀಷ್ ರೂಪ ಪಡೆದು ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ. ಅನುಭವ ನೈಜವಾಗಿದ್ದು, ಗಾಢವಾಗಿದ್ದರೆ ಅದಕ್ಕೆ ಎಲ್ಲ ಜನ ಸ್ಪಂದಿಸುತ್ತಾರೆ ಎಂಬುದಕ್ಕೆ ಇವರ ಹೃದಯ ದೀಪ ಸಾಕ್ಷಿ. ಸ್ಥಳೀಯ ಭಾಷೆಯಲ್ಲಿ ಅನುಭವದ ಗಣಿಯೇ ಇರುತ್ತದೆ ಎಂದು ಬೂಕರ್ ಪ್ರಶಸ್ತಿ ಪ್ರತಿಷ್ಠಾನ ಗುರುತಿಸಿರುವುದೇ ದೊಡ್ಡ ಪರಿವರ್ತನೆ. ಪ್ರಾಂತೀಯ ಭಾಷೆಯಲ್ಲಿ ಬರೆದದ್ದು ಅಲ್ಲೇ ಕಮರಿ ಹೋಗಬಾರದು. ಅದನ್ನು ಅರ್ಥಮಾಡಿಕೊಂಡು ಇಂಗ್ಲಿಷ್ ಭಾಷೆಗೆ ತಂದಾಗ ದೊರೆಯುವ ಅನಂದವೇ ಬೇರೆ ಎಂಬುದನ್ನು ಬಾನು ಮುಷ್ತಾಕ್ ನಮಗೆ ತೋರಿಸಿಕೊಟ್ಟಿದ್ದಾರೆ. ಅವರ ಬರಹ ನಿರಂತರ ಮುಂದುವರಿಯಬೇಕು. ಅದಕ್ಕೆ ಬೇಕಾದ ವಾತಾವರಣವನ್ನು ಸ್ಥಳೀಯ ಜನ ಕಲ್ಪಿಸಿಕೊಡಬೇಕು. ಪ್ರತಿಭೆ ಎಲ್ಲೇ ಇದ್ದರೂ ಅದನ್ನು ಗುರುತಿಸಿಕೊಂಡು ಬರುವ ಮನೋಭಾವ ಸಮಾಜದಲ್ಲಿ ಇರುವವರೆಗೆ ಲಂಡನ್‌ಗೆ ಹಾಸನ ದೂರವೇನಲ್ಲ. ಹಾಸನ ಕಲೆ, ಸಾಹಿತ್ಯ, ಸಂಸ್ಕೃತಿಗಳ ತವರೂರು ಎಂಬುದರಲ್ಲಿ ಸಂದೇಹವಿಲ್ಲ.