ಬಾಂಬ್ ಬೆದರಿಕೆ: ಕಚೇರಿ ಪ್ರವೇಶಕ್ಕೆ ಸಿಬ್ಬಂದಿ ಹಿಂದೇಟು

0
23

ಮೈಸೂರು: ಮೈಸೂರಿನ ವಿವಿಧ ಸ್ಥಳಗಳು ಹಾಗೂ ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಆತಂಕದ ಪರಿಸ್ಥಿತಿ ಉಂಟಾಗಿತ್ತು. ಕಚೇರಿ ಪ್ರವೇಶಿಸಲು ಸಿಬ್ಬಂದಿ ಹಿಂದೇಟು ಹಾಕಿದರೆ ಸಾರ್ವಜನಿಕರು ಹೊರಗೆ ಓಡಬೇಕಾಯಿತು.
ನಗರದ ಪೊಲೀಸ್ ಆಯುಕ್ತರ ಅಧಿಕೃತ ಇ ಮೇಲ್ ಐಡಿಗೆ ಮಧ್ಯರಾತ್ರಿ ೧.೩೦ರ ವೇಳೆಗೆ ಇಂತಹ ಸಂದೇಶ ಬಂದಿದ್ದು, ನಗರದ ವಿವಿಧ ಸ್ಥಳಗಳಲ್ಲಿ ಬಾಂಬ್ ಇರಿಸಲಾಗಿದೆ. ೨೪ ಗಂಟೆಗಳೊಳಗಾಗಿ ಸ್ಫೋಟಿಸಲಾಗುವುದು ಎಂದು ಎಚ್ಚರಿಸಲಾಗಿತ್ತು.
ಹೀಗಾಗಿ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಪೊಲೀಸ್ ಅಧಿಕಾರಿಗಳ ತುರ್ತು ಸಭೆ ಕರೆದರಲ್ಲದೆ, ನಗರದ ಎಲ್ಲಾ ಕಡೆಗಳಲ್ಲಿಯೂ ಕೂಡಲೇ ತಪಾಸಣೆ ನಡೆಸಿ, ಯಾವುದೇ ಅನಾಹುತ ಸಂಭವಿಸುವುದನ್ನು ತಡೆಗಟ್ಟಬೇಕೆಂದು ಸೂಚಿಸಿದರು.
ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಅರಮನೆ, ಪ್ರಮುಖ ದೇವಾಲಯಗಳು, ಲಾಡ್ಜ್, ಹೋಟೆಲ್, ಸಾರ್ವಜನಿಕ ಸ್ಥಳಗಳ ಜೊತೆಗೆ, ಇನ್ನಿತರೆಡೆಯೂ ಬಾಂಬ್ ಪತ್ತೆ, ನಿಷ್ಕ್ರೀಯ ದಳ, ಶ್ವಾನ ದಳಗಳು ತಪಾಸಣೆ ನಡೆಸಿದವು. ಆದರೆ ತಪಾಸಣೆ ಬಳಿಕ ಇದು ಕೇವಲ ಹುಸಿ ಎಂಬುದು ಗೊತ್ತಾಯಿತು. ಈ ಕುರಿತು ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬೆದರಿಕೆ ಹಾಕಿದವರ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.

Previous articleಪತ್ನಿ, ಪ್ರಿಯಕರನನ್ನು ಕೊಲೆ ಮಾಡಿ ಪೊಲೀಸ್ ಠಾಣೆಗೆ ಶರಣಾದ ಪತಿ
Next articleಯತ್ನಾಳರ ಕುರಿತು ಅವಾಚ್ಯವಾಗಿ ಮಾತನಾಡಿರುವುದು ಸರಿಯಲ್ಲ